ಗಿಲ್ ಶತಕ ಬಾರಿಸಿದಾಗಲೆಲ್ಲಾ ನನ್ನನ್ನು ಟ್ರೋಲ್ ಮಾಡ್ತಾರೆ! ಅಭಿಮಾನಿಗಳ ವಿರುದ್ಧ ವೆಂಕಟೇಶ್ ಅಯ್ಯರ್ ಬೇಸರ

2026ರ ಐಪಿಎಲ್​ಗೂ ಮುನ್ನ ಕೆಕೆಆರ್​ ತನ್ನನ್ನು ಕೈಬಿಟ್ಟ ನಿರ್ಧಾರ ಮತ್ತು ಶುಭ್‌ಮನ್ ಗಿಲ್ ಶತಕ ಸಿಡಿಸಿದಾಗ ಅಭಿಮಾನಿಗಳ ಟ್ರೋಲ್‌ ಬಗ್ಗೆ ವೆಂಕಟೇಶ್ ಅಯ್ಯರ್ ಮಾತನಾಡಿದ್ದಾರೆ. ಕೆಕೆಆರ್‌ನಿಂದ ಬಿಡುಗಡೆಯಾದ ಬಳಿಕ RCB ಸೇರಿದ್ದು, ಬೆಂಗಳೂರು ಅಭಿಮಾನಿಗಳ ಅನನ್ಯ ಪ್ರೀತಿಗೆ ಅವರು ಮನಸೋತಿದ್ದಾರೆ. ಹೊಸ ತಂಡದಲ್ಲಿ ಸಿಕ್ಕ ಬೆಂಬಲ ಮತ್ತು ಇತ್ತೀಚಿನ ಪಂದ್ಯಗಳಲ್ಲಿ ಇಂಪ್ಯಾಕ್ಟ್ ಸಬ್ ಆಗಿ ನೀಡಿದ ಉತ್ತಮ ಪ್ರದರ್ಶನದ ಬಗ್ಗೆಯೂ ಅವರು ಹೇಳಿದ್ದಾರೆ.

ಗಿಲ್ ಶತಕ ಬಾರಿಸಿದಾಗಲೆಲ್ಲಾ ನನ್ನನ್ನು ಟ್ರೋಲ್ ಮಾಡ್ತಾರೆ! ಅಭಿಮಾನಿಗಳ ವಿರುದ್ಧ ವೆಂಕಟೇಶ್ ಅಯ್ಯರ್ ಬೇಸರ
ಶುಭ್​ಮನ್ ಗಿಲ್, ವೆಂಕಟೇಶ್ ಅಯ್ಯರ್

Updated on: Nov 06, 2026 | 7:59 PM

2022ರ ಐಪಿಎಲ್‌ಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಆಟಗಾರರನ್ನು ಉಳಿಸಿಕೊಳ್ಳುವ ವೇಳೆ ಶುಭ್‌ಮನ್ ಗಿಲ್ ಅವರನ್ನು ಕೈಬಿಟ್ಟು ವೆಂಕಟೇಶ್ ಅಯ್ಯರ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿತ್ತು. ಫ್ರಾಂಚೈಸಿಯ ಈ ನಿರ್ಧಾರಕ್ಕೆ ಕೆಕೆಆರ್ ಅಭಿಮಾನಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ವಿಚಾರದ ಬಗ್ಗೆ ಆರ್‌ಸಿಬಿ ಬ್ಯಾಟರ್ ವೆಂಕಟೇಶ್ ಅಯ್ಯರ್ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಇಷ್ಟು ವರ್ಷಗಳಾದರೂ ಕೆಕೆಆರ್ ಅಭಿಮಾನಿಗಳ ಟೀಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್‌ಗಳು ನಿಂತಿಲ್ಲ ಎಂದು ಅವರು ಹೇಳಿದ್ದಾರೆ.

2022ರ ಐಪಿಎಲ್‌ಗೂ ಮುನ್ನ ಕೆಕೆಆರ್ ತಂಡ ಶುಭ್‌ಮನ್ ಗಿಲ್ ಅವರನ್ನು ಬಿಡುಗಡೆ ಮಾಡಿತ್ತು. ಬಳಿಕ ಹೊಸದಾಗಿ ಆರಂಭವಾದ ಗುಜರಾತ್ ಟೈಟಾನ್ಸ್ ತಂಡ ಗಿಲ್ ಸೇರಿದಂತೆ ಹಾರ್ದಿಕ್ ಪಾಂಡ್ಯ ಮತ್ತು ರಶೀದ್ ಖಾನ್ ಅವರನ್ನು ತಲಾ 8 ಕೋಟಿ ರೂಪಾಯಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು.

Loading...

ಟೀಕೆಗಳನ್ನು ಎದುರಿಸುತ್ತಿದ್ದೇನೆ

ಆಕಾಶ್ ಚೋಪ್ರಾ ಅವರೊಂದಿಗೆ ನಡೆಸಿದ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ವೆಂಕಟೇಶ್ ಅಯ್ಯರ್, ಗಿಲ್ ಶತಕ ಸಿಡಿಸಿದಾಗಲೆಲ್ಲಾ ಕೆಕೆಆರ್ ಅಭಿಮಾನಿಗಳು ತಮ್ಮನ್ನು ಗುರಿಯಾಗಿಸಿಕೊಂಡು ಟೀಕಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. ‘ನಾನು ಬಹಳ ಸಮಯದಿಂದ ಸಾಕಷ್ಟು ದ್ವೇಷ ಮತ್ತು ಟೀಕೆಗಳನ್ನು ಎದುರಿಸುತ್ತಿದ್ದೇನೆ. ಇಂದಿಗೂ ಶುಭ್‌ಮನ್ ಗಿಲ್ ಶತಕ ಬಾರಿಸಿದಾಗ ಕೆಕೆಆರ್‌ನ ಸಾಮಾಜಿಕ ಜಾಲತಾಣಗಳ ಪುಟಕ್ಕೆ ಹೋದರೆ, ಅಭಿಮಾನಿಗಳು ‘ಚಿನ್ನದ ಹುಡುಕಾಟದಲ್ಲಿ ವಜ್ರವನ್ನೇ ಕಳೆದುಕೊಂಡೆವು’ ಎಂಬರ್ಥದ ಕಾಮೆಂಟ್‌ಗಳನ್ನು ಮಾಡುತ್ತಿರುತ್ತಾರೆ. ಇದೆಲ್ಲವನ್ನೂ ನಾನು ನೋಡುತ್ತಿದ್ದೇನೆ” ಎಂದು ವೆಂಕಟೇಶ್ ಹೇಳಿದ್ದಾರೆ.

ಐಪಿಎಲ್ 2026ರ ಹರಾಜಿಗೂ ಮುನ್ನ ಕೆಕೆಆರ್ ತಂಡದಿಂದ ಬಿಡುಗಡೆಯಾದ ವಿಚಾರದ ಬಗ್ಗೆಯೂ ಮಾತನಾಡಿರುವ ಅಯ್ಯರ್, ‘ತಂಡ ತನ್ನನ್ನು ಕೈಬಿಡುವ ನಿರ್ಧಾರ ಬದಲಿಸಬಹುದು ಎಂಬ ನಿರೀಕ್ಷೆಯಲ್ಲಿ ಫ್ರಾಂಚೈಸಿಯ ಸಹ ಮಾಲೀಕ ಶಾರುಖ್ ಖಾನ್ ಅವರನ್ನೂ ಭೇಟಿಯಾಗಿ ಮನವಿ ಮಾಡಿಕೊಂಡಿದ್ದೆ. ನಾನು ನನ್ನ ಕರವಸ್ತ್ರವನ್ನು ಪಕ್ಕದಲ್ಲಿಟ್ಟುಕೊಂಡಿದ್ದೆ. ಶಾರುಖ್ ಸರ್ ಅವರ ಬಳಿಯೂ ಈ ಬಗ್ಗೆ ಕೇಳಿಕೊಂಡಿದ್ದೆ’ ಎಂದು ವೆಂಕಟೇಶ್ ನೆನಪಿಸಿಕೊಂಡಿದ್ದಾರೆ.

ಮಾನಸಿಕವಾಗಿ ಕೆಕೆಆರ್‌ನಿಂದ ದೂರವಾಗಿದ್ದೆ

2025ರ ಐಪಿಎಲ್‌ಗೂ ಮುನ್ನ ನಡೆದ ಹರಾಜಿನಲ್ಲಿ ಕೆಕೆಆರ್ ತಂಡ ಬರೋಬ್ಬರಿ 23.75 ಕೋಟಿ ರೂಪಾಯಿ ನೀಡಿ ವೆಂಕಟೇಶ್ ಅವರನ್ನು ಮತ್ತೆ ಖರೀದಿಸಿತ್ತು. ಆದರೆ ನಂತರ ಅವರನ್ನು ತಂಡದಿಂದ ಬಿಡುಗಡೆ ಮಾಡಿತು. ಈ ನಿರ್ಧಾರದ ಬಳಿಕ ಮಾನಸಿಕವಾಗಿ ತಾನು ಕೆಕೆಆರ್‌ನಿಂದ ದೂರವಾಗಿದ್ದೆ. 2026ರ ಹರಾಜಿನಲ್ಲಿ ಮತ್ತೆ ಕೆಕೆಆರ್ ತಂಡಕ್ಕೆ ಸೇರುವ ಬಗ್ಗೆಯೂ ಯೋಚಿಸಿರಲಿಲ್ಲ. ನನಗೆ ಸಂಬಳ ಕಡಿಮೆಯಾಗುವ ಬಗ್ಗೆಯೂ ಯಾವುದೇ ಚಿಂತೆ ಇರಲಿಲ್ಲ. ನಾನು ಆಗಲೇ ಮನಸ್ಸಿನಲ್ಲಿ, ಸರಿ, ಇನ್ನು ಮುಂದೆ ನೇರಳೆ ಬಣ್ಣದ ಜೆರ್ಸಿ ಇರುವುದಿಲ್ಲ ಎಂದು ನಿರ್ಧರಿಸಿದ್ದೆ ಎಂದು ಅಯ್ಯರ್ ಹೇಳಿದ್ದಾರೆ.

IND vs SL: ಐಪಿಎಲ್‌ನಲ್ಲಿ ಆಡಿಸುವ ಆಮಿಷ; ವಿಕೆಟ್ ಕೈಚೆಲ್ಲಿದ ಲಂಕಾ ಬ್ಯಾಟರ್

ಆರ್‌ಸಿಬಿ ಜೆರ್ಸಿಯನ್ನು ಪೂಜೆ ಮಾಡುತ್ತಾರೆ

ಕೆಕೆಆರ್ ತಂಡದಿಂದ ಹೊರಬಂದ ವೆಂಕಟೇಶ್ ಅಯ್ಯರ್ ಅವರನ್ನು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತು. ಆ ಮೂಲಕ ಅವರಿಗೆ ಹೊಸ ತಂಡದ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲವನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ವಿಶೇಷವಾಗಿ ಬೆಂಗಳೂರಿನ ಅಭಿಮಾನಿಗಳ ಕ್ರಿಕೆಟ್ ಮೇಲಿನ ಅಭಿಮಾನ ಮತ್ತು ಆರ್‌ಸಿಬಿ ತಂಡದ ಮೇಲಿನ ಭಕ್ತಿಯನ್ನು ಕಂಡು ಅವರು ಅಚ್ಚರಿಗೊಂಡಿದ್ದಾರೆ.‘ನಾನು ಹೇಳಿದರೆ ನೀವು ನಂಬುವುದಿಲ್ಲ. ಪಂದ್ಯ ಆರಂಭಕ್ಕೂ ಮುನ್ನ ಕೆಲವರು ಆರ್‌ಸಿಬಿ ಜೆರ್ಸಿಯನ್ನು ಪೂಜೆ ಮಾಡುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಇದು ನನಗೆ ಸಂಪೂರ್ಣ ಹೊಸ ಅನುಭವ. ಅಭಿಮಾನ ಎನ್ನುವುದು ಮತ್ತೊಂದು ಹಂತದಲ್ಲಿದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Fri, 6 November 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us