Vijay Hazare Trophy 2021-22: ಮುಂಬೈ ವಿರುದ್ದ ‘ಸಮರ್ಥ’ ಬ್ಯಾಟಿಂಗ್: ಕರ್ನಾಟಕಕ್ಕೆ ಭರ್ಜರಿ ಜಯ
Vijay Hazare Trophy 2021: 209 ರನ್ಗಳ ಸಾಧಾರಣ ಗುರಿ ಪಡೆದ ಕರ್ನಾಟಕಕ್ಕೆ ಆರಂಭಿಕರಾದ ರವಿ ಕುಮಾರ್ ಸಮರ್ಥ್ ಹಾಗೂ ರೋಹನ್ ಕದಮ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ 25 ಓವರ್ಗಳಲ್ಲಿ 95 ರನ್ ಕಲೆಹಾಕಿದ ಈ ಜೋಡಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು.

ವಿಜಯ್ ಹಜಾರೆ ಟೂರ್ನಿಯ (Vijay Hazare Trophy 2021) ತನ್ನ ಮೂರನೇ ಪಂದ್ಯದಲ್ಲಿ ಕರ್ನಾಟಕ (Karnataka vs Mumbai) ತಂಡವು ಮುಂಬೈ ವಿರುದ್ದ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಪುದುಚೇರಿ ವಿರುದ್ದ ಗೆದ್ದಿದ್ದ ಕರ್ನಾಟಕ, 2ನೇ ಪಂದ್ಯದಲ್ಲಿ ತಮಿಳುನಾಡುವ ವಿರುದ್ದ ಸೋತಿತ್ತು. ಇದೀಗ ಬಲಿಷ್ಠ ಮುಂಬೈ ತಂಡವನ್ನು ಮಣಿಸುವ ಮೂಲಕ ಕರ್ನಾಟಕ ಜಯದ ಲಯಕ್ಕೆ ಮರಳಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ನಾಯಕ ಶಂಸ್ ಮುಲಾನಿ ಬ್ಯಾಟಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಮುಂಬೈಗೆ ಯಶಸ್ವಿ ಜೈಸ್ವಾಲ್ ಹಾಗೂ ಅರ್ಮಾನ್ ಜಾಫರ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 95 ರನ್ಗಳ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಉತ್ತಮ ಓಪನಿಂಗ್ ನೀಡಿದ್ದರು. ಈ ನಡುವೆ 43 ರನ್ಗಳಿಸಿದ್ದ ಅರ್ಮಾನ್ ಜಾಫರ್ ಮೊದಲಿಗರಾಗಿ ಹೊರನಡೆದರೆ, ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ (61) ಅರ್ಧಶತಕ ಬಾರಿಸಿ ಮಿಂಚಿದರು.
ಇನ್ನು ಸೂರ್ಯಕುಮಾರ್ ಯಾದವ್ (8) ಹಾಗೂ ಶಂಸ್ ಮುಲಾನಿ (9) ಅವರನ್ನು ಔಟ್ ಮಾಡುವ ಮೂಲಕ ಪ್ರವೀಣ್ ದುಬೆ ಕರ್ನಾಟಕಕ್ಕೆ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು. ಆ ಬಳಿಕ ಸಂಪೂರ್ಣ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕರ್ನಾಟಕ ಬೌಲರುಗಳು ರನ್ ಗತಿಯನ್ನು ನಿಯಂತ್ರಿಸಿದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ತಮೊರೆ ಅಜೇಯ 46 ರನ್ ಬಾರಿಸುವ ಮೂಲಕ ಮುಂಬೈ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿದರು. ಕರ್ನಾಟಕ ಪರ ಪ್ರವೀಣ್ ದುಬೆ 10 ಓವರ್ನಲ್ಲಿ ಕೇವಲ 29 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.
209 ರನ್ಗಳ ಸಾಧಾರಣ ಗುರಿ ಪಡೆದ ಕರ್ನಾಟಕಕ್ಕೆ ಆರಂಭಿಕರಾದ ರವಿ ಕುಮಾರ್ ಸಮರ್ಥ್ ಹಾಗೂ ರೋಹನ್ ಕದಮ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ 25 ಓವರ್ಗಳಲ್ಲಿ 95 ರನ್ ಕಲೆಹಾಕಿದ ಈ ಜೋಡಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಹಂತದಲ್ಲಿ ಕದಮ್ 44 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸಿದ್ಧಾರ್ಥ್ ಕೇವಲ 17 ರನ್ಗಳಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಮನೀಷ್ ಪಾಂಡೆ (5) ಕೂಡ ವಿಕೆಟ್ ಕೈಚೆಲ್ಲಿದರು. ಇದಾಗ್ಯೂ ಮತ್ತೊಂದೆಡೆ ರವಿ ಕುಮಾರ್ ಸಮರ್ಥ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಕರುಣ್ ನಾಯರ್ (39) ಜೊತೆಗೂಡಿ 77 ರನ್ಗಳ ಜೊತೆಯಾಟವಾಡಿದ ರವಿ ಕುಮಾರ್ ಸಮರ್ಥ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ 129 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ ಅಜೇಯ 96 ರನ್ ಬಾರಿಸಿದ ರವಿ ಕುಮಾರ್ ಸಮರ್ಥ್ 45.3 ಓವರ್ಗಳಲ್ಲಿ ತಂಡವನ್ನು ಗುರಿ ತಲುಪಿಸಿದರು. ಇದರೊಂದಿಗೆ 3 ವಿಕೆಟ್ ಕಳೆದುಕೊಂಡು 211 ರನ್ಗಳಿಸುವ ಮೂಲಕ ಕರ್ನಾಟಕ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಇದನ್ನೂ ಓದಿ: World Record: ಬರೋಬ್ಬರಿ 15 ಸಿಕ್ಸ್: ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕ
ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
ಇದನ್ನೂ ಓದಿ: Virat Kohli: ಭಾರತ ತಂಡ ಕಂಡ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ…ಆದರೂ
(Vijay Hazare Trophy 2021-22: Karnataka won over Mumbai)
Published On - 4:40 pm, Sat, 11 December 21
