Virat Kohli: ಐಪಿಎಲ್ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಕಾದಿದೆ ಬಿಗ್ ಶಾಕ್: ಈ ಆಟಗಾರ ಇರಲ್ಲ
IND vs SA T20I Series: ಐಪಿಎಲ್ 2022 (IPL 2022) ಮೇ. 29 ಕ್ಕೆ ಮುಕ್ತಾಯಗೊಳ್ಳಲಿದ್ದು, ಇದಾದ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯನ್ನು ಆಡಲಿದೆ. ಈ ಸರಣಿಗೆ ವಿರಾಟ್ ಕೊಹ್ಲಿ (Virat Kohli) ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಟೀಮ್ ಇಂಡಿಯಾದ (Team India) ಬಹುತೇಕ ಆಟಗಾರರು ಸದ್ಯ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬ್ಯುಸಿಯಾಗಿದ್ದಾರೆ. ಐಪಿಎಲ್ 2022 (IPL 2022) ಮೇ. 29 ಕ್ಕೆ ಮುಕ್ತಾಯಗೊಳ್ಳಲಿದ್ದು, ಇದಾದ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯನ್ನು ಆಡಲಿದೆ. ಇದು ಜೂನ್ 9 ರಿಂದ 19ರವರೆಗೆ ನಡೆಯಲಿದೆ. ದಿಲ್ಲಿ, ಕಟಕ್, ವಿಶಾಖಪಟ್ಟಣ, ರಾಜ್‌ಕೋಟ್ ಮತ್ತು ಬೆಂಗಳೂರಿನಲ್ಲಿ ಈ ಪಂದ್ಯಗಳು ನಡೆಯಲಿದ್ದು, ಆಬಳಿಕ ಜೂನ್-ಜುಲೈಯಲ್ಲಿ ಭಾರತ ತಂಡ ಇಂಗ್ಲೆಂಡಿಗೆ ಪ್ರಯಾಣಿಸಲಿದೆ. ಆದರೆ, ದ. ಆಫ್ರಿಕಾ ವಿರುದ್ಧದ ಮಹತ್ವದ ಟಿ20 ಸರಣಿಗೂ ಮುನ್ನ ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ ಕಾದಿದೆ. ಕಳೆದ ಕೆಲ ವರ್ಷಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಆಫ್ರಿಕಾ ಸರಣಿಯಿಂದ ಹೊರಗುಳಿದು, ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಹೌದು, ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಬೆನ್ನೆಲುಬಾಗಿದ್ದ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಹೀಗಾಗಿ ಐಪಿಎಲ್ ಮುಗಿದ ಬೆನ್ನಲ್ಲೇ ಇವರು ವಿಶ್ರಾಂತಿಯ ಮೊರೆ ಹೋಗಲಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಕೂಡ ಇವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚನೆ ನೀಡುವ ಸಾಧ್ಯತೆ ಇದೆಯಂತೆ. “ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಸಿಗುವುದು ಬಹುತೇಕ ಖಚಿತ. ಅವರು ಸತತವಾಗಿ ಟೂರ್ನಿಗಳಲ್ಲಿ ಆಡಿದ್ಧಾರೆ. ಅಲ್ಲದೇ ಬಯೋಬಬಲ್‌ನಲ್ಲಿ ಬಹಳಷ್ಟು ಸಮಯ ಕಳೆದಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಯ ನಂತರ ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಅಲ್ಲಿ ಐರ್ಲೆಂಡ್ ವಿರುದ್ಧ ಟಿ20 ಸರಣಿ, ಇಂಗ್ಲೆಂಡ್ ಎದುರು ಒಂದು ಟೆಸ್ಟ್ ಮತ್ತು ಆರು ಏಕದಿನ ಪಂದ್ಯಗಳನ್ನು ಆಡಲಿದೆ. ಆ ಪ್ರವಾಸಕ್ಕೆ ವಿರಾಟ್ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯವಾಗಿದೆ,” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಶತಕ ವಂಚಿತರಾಗಿರುವ ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ನಲ್ಲೂ ಕಳಪೆ ಫಾರ್ಮ್ ಮುಂದುವರೆಸಿದ್ದು, ಮೂರು ಸಲ ಗೋಲ್ಡನ್ ಡಕೌಟ್ ಆಗಿದ್ದಾರೆ. ಈ ಋತುವಿನಲ್ಲಿ 12 ಪಂದ್ಯಗಳನ್ನು ಆಡಿರುವ ಕೊಹ್ಲಿ ಕೇವಲ 216 ರನ್ ಗಳಿಸಿದ್ದಾರೆ. ಹೀಗಾಗಿ, ಅವರಿಗೆ ವಿಶ್ರಾಂತಿ ನೀಡಬೇಕೆಂದು ಅನೇಕ ಕ್ರಿಕೆಟರ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಬಿಸಿಸಿಐ ಕೂಡ ಇದನ್ನ ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ದ. ಆಫ್ರಿಕಾ ವಿರುದ್ಧದ ಸರಣಿಯ ಸಂಪೂರ್ಣ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಉದ್ಯಾನ ನಗರಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ಜೂನ್ 19ರಂದು ಜರುಗಲಿದ್ದು, ಉಳಿದ ಪಂದ್ಯಗಳಿಗೆ ಡೆಲ್ಲಿ, ಕಟಕ್, ವೈಝಾಗ್ ಮತ್ತು ರಾಜ್‌ಕೋಟ್ ನಗರಗಳು ಆತಿಥ್ಯ ವಹಿಸಿವೆ.
ಇನ್ನು ಐಪಿಎಲ್ 2022 ಪ್ಲೇ ಆಫ್ ರೇಸ್ನಿಂದ ಮುಂಬೈ ಇಂಡಿಯನ್ಸ್ ಹೊರಬಿದ್ದಿರುವ ಹಿನ್ನೆಲೆ ಮೇ 22 ರಂದು ರೋಹಿತ್ ಶರ್ಮಾ ಬಬಲ್ ತೊರೆಯಲಿದ್ದಾರೆ. ಬಳಿಕ ಮೇ 23ರಂದು ಸೆಲೆಕ್ಷನ್ ಕಮಿಟಿ ಸದಸ್ಯರ ಜೊತೆಗೆ ಸಭೆ ನಡೆಸಲಿದ್ದಾರೆ. ಇಲ್ಲಿ ಇಂಜುರಿಗೊಳಗಾದ ಆಟಗಾರರ ಜೊತೆಗೆ ವಿರಾಟ್ ಕೊಹ್ಲಿಗೆ ರೆಸ್ಟ್ ನೀಡುವ ಕುರಿತು ಚರ್ಚೆ ನಡೆಯಲಿದ್ದು, ಮೇ 25 ರಂದು ತಂಡ ಪ್ರಕಟವಾಗುವ ಸಾಧ್ಯತೆ ಇದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:04 pm, Thu, 12 May 22