Virat Kohli: ರೋಹಿತ್ ಮೇಲೆ ಶಾಂಪೇನ್ ಚಿಮ್ಮಿಸಿದ ಕೊಹ್ಲಿ: ಹಿಟ್​ಮ್ಯಾನ್ ಏನು ಮಾಡಿದ್ರು ಗೊತ್ತೇ?

Rohit Sharma, IND vs ENG 3rd ODI: ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದು ಟ್ರೋಫಿ ಸ್ವೀಕರಿಸುವ ವೇಳೆ ಭಾರತೀಯ ಆಟಗಾರರು ಕುಣಿದುಕುಪ್ಪಳಿಸಿದರು. ಅದರಲ್ಲೂ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಶಾಂಪೇನ್ ಬಾಟಲ್ ಹಿಡಿದು ಆಟಗಾರರ ಮೇಲೆ ಚಿಮ್ಮಿಸಿದರು.

Virat Kohli: ರೋಹಿತ್ ಮೇಲೆ ಶಾಂಪೇನ್ ಚಿಮ್ಮಿಸಿದ ಕೊಹ್ಲಿ: ಹಿಟ್​ಮ್ಯಾನ್ ಏನು ಮಾಡಿದ್ರು ಗೊತ್ತೇ?
Virat Kohli Rohit Sharma IND vs ENG 3rd ODI
TV9kannada Web Team

| Edited By: Vinay Bhat

Jul 18, 2022 | 11:02 AM

ಇಂಗ್ಲೆಂಡ್​ಗೆ ತವರಿನಲ್ಲೇ ಟಿ20 ಮತ್ತು ಏಕದಿನ ಸರಣಿ ಸೋಲಿನ ರುಚಿ ತೋರಿಸಿರುವ ಭಾರತ (India vs England) ವಿಶೇಷ ಸಾಧನೆ ಮಾಡಿದೆ. ನಿರ್ಣಾಯಕವಾಗಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ತೋರಿದ ಟೀಮ್ ಇಂಡಿಯಾ 5 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿದೆ. ರಿಷಭ್ ಪಂತ್ (Rishabh Pant) ಹಾಗೂ ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಬ್ಯಾಟಿಂಗ್​ಗೆ ತಬ್ಬಿಬ್ಬಾದ ಆಂಗ್ಲರು ಸೋಲು ಕಂಡು ಭಾರೀ ಮುಖಭಂಗಕ್ಕೆ ಒಳಗಾಗಿದೆ. ವಿಶ್ವ ಕ್ರಿಕೆಟ್​ನಲ್ಲಿ ಅತ್ಯಂತ ಬಲಿಷ್ಠ ತಂಡವಾದ ಇಂಗ್ಲೆಂಡ್ ಅನ್ನು ಅವರದ್ದೇ ನೆಲಕ್ಕೆ ಹೋಗಿ ಸರಣಿ ಗೆಲುವು ಸಾಧಿಸುವುದು ಸುಲಭವಲ್ಲ. ಹೀಗಿರುವಾಗ ಭಾರತ ಇಂಥಹ ಅಪರೂಪದ ಸಾಧನೆ ಮಾಡಿದೆ. ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ಈ ಬಗ್ಗೆ ತಂಡದ ಆಟಗಾರರ ಪರಿಶ್ರಮದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ಆಟಗಾರರ ಖುಷಿಗೆ ಪಾರವೇ ಇರಲಿಲ್ಲ.

ಹೌದು, ಟ್ರೋಫಿ ಸ್ವೀಕರಿಸುವ ವೇಳೆ ಭಾರತೀಯ ಆಟಗಾರರು ಕುಣಿದುಕುಪ್ಪಳಿಸಿದರು. ಅದರಲ್ಲೂ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಶಾಂಪೇನ್ ಬಾಟಲ್ ಹಿಡಿದು ಆಟಗಾರರ ಮೇಲೆ ಚಿಮ್ಮಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ರೋಹಿತ್ ಶರ್ಮಾ ಮೇಲೂ ಶಾಂಪೇನ್ ಚಿಮ್ಮಿಸಲಾಗಿದ್ದು ಈ ಸಂದರ್ಭ ಹಿಟ್​ಮ್ಯಾನ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ನಂತರ ನಗುತ್ತಾ ಎಲ್ಲ ಆಟಗಾರರ ಜೊತೆ ಟ್ರೋಫಿಯನ್ನು ಹಂಚಿಕೊಂಡು ಫೋಟೋಕ್ಕೆ ಪೋಸ್ ನೀಡಿದ್ದಾರೆ.

ಮುಖ್ಯವಾಗಿ ರೋಹಿತ್ ಕೈಗೆ ಟ್ರೋಫಿ ಸಿಗುತ್ತಿದ್ದಂತೆ ಅವರು ಅರ್ಶ್​​ದೀಪ್ ಸಿಂಗ್ ಅವರನ್ನು ಕರೆದು ನೀವು ಈ ಟ್ರೋಫಿ ಹಿಡಿದುಕೊಳ್ಳಿ ಎಂದು ಕೊಟ್ಟರು. ರೋಹಿತ್ ಅವರ ಈ ನಡೆ ಎಲ್ಲರ ಗಮನ ಸೆಳೆಯಿತು. ಅರ್ಶ್​​​ದೀಪ್ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದರು. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಕಣಕ್ಕಿಳಿದಿದ್ದರು. ಏಕದಿನ ಸರಣಿಗೆ ಆಯ್ಕೆಯಾಗಿದ್ದರೂ ಆಡಲು ಅವಕಾಶ ಸಿಕ್ಕಿರಲಿಲ್ಲ.

ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿಯಿತು. ನಾಯಕ ಜೋಸ್ ಬಟ್ಲರ್ ಅರ್ಧಶತಕ ಗಳಿಸಿ 60 ರನ್ ಬಾರಿಸಿದ್ದು ಬಿಟ್ಟರೆ ಜೇಸನ್ ರಾಯ್ 41 ರನ್ ಗಳಿಸಿದ್ದೇ ಹೆಚ್ಚು. ಉಳಿದ ಬ್ಯಾಟರ್​ಗಳು ವೈಫಲ್ಯ ಅನುಭವಿಸಿದರು. ಪರಿಣಾಮ ಇಂಗ್ಲೆಂಡ್ 259 ರನ್​ಗೆ ಆಲೌಟ್ ಆಯಿತು. ಭಾರತ ಪರ ಹಾರ್ದಿಕ್ 4 ವಿಕೆಟ್ ಕಿತ್ತರೆ ಚಹಲ್ 3 ವಿಕೆಟ್ ಪಡೆದರು. 260 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ಮುಖ್ಯ ವಿಕೆಟ್​ಗಳನ್ನು ಕಳೆದುಕೊಂಡಿತು. ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಿಲಿಲ್ಲ.

ಇದನ್ನೂ ಓದಿ

ಈ ಸಂದರ್ಭ ಪಂದ್ಯದ ಗತಿಯನ್ನೇ ಬದಲಾಯಿಸಿದ್ದು ರಿಷಭ್ ಪಂತ್ ಹಾಗೂ ಇವರಿಗೆ ಸಾಥ್ ನೀಡಿದ್ದು ಹಾರ್ದಿಕ್ ಪಾಂಡ್ಯ. ಟಾಪ್ ಆರ್ಡರ್​ ಬ್ಯಾಟರ್​ಗಳನ್ನು ಕೆಡವಿ ಸಂಭ್ರಮದಲ್ಲಿದ್ದ ಇಂಗ್ಲೆಂಡ್​ಗೆ ಪಂತ್ ಪಂಚ್ ಮೇಲೆ ಪಂಚ್ ಕೊಟ್ಟರು. ಪಂತ್-ಹಾರ್ದಿಕ್ ಕಡೆಯಿಂದ ಮೂಡಿಬಂದಿದ್ದು ಬರೋಬ್ಬರಿ 133 ರನ್​ಗಳ ಜೊತೆಯಾಟ. ತಂಡದ ಗೆಲುವು ಖಚಿತವಾಗುತ್ತಿದ್ದಂತೆ ಹಾರ್ದಿಕ್ ನಿರ್ಗಮಿಸಿದರು. 55 ಎಸೆತಗಳಲ್ಲಿ 10 ಫೋರ್ ಬಾರಿಸಿ 71 ರನ್​ಗೆ ಔಟಾದರು. ಬಳಿಕ ಪಂತ್ ಸ್ಫೋಟಕ ಆಟವಾಡಿದ 42.1 ಓವರ್​ನಲ್ಲೇ 261 ರನ್ ಗಳಿಸಿ ಗೆಲುವು ಸಾಧಿಸುವಂತೆ ಮಾಡಿದರು. ರಿಷಭ್ 113 ಎಸೆತಗಳನ್ನು 16 ಫೋರ್ ಹಾಗೂ 2 ಸಿಕ್ಸರ್​​ ಬಾರಿಸಿ ಅಜೇಯ 125 ರನ್ ಗಳಿಸಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada