ಕಿಂಗ್ ರಿಚರ್ಡ್ಸ್ ಟೆಸ್ಟ್ ಪಂದ್ಯದಲ್ಲಿ 56 ಬಾಲ್ಗಳಲ್ಲಿ ಬಾರಿಸಿದ್ದ ಮೊದಲ ಕ್ಷಿಪ್ರ ಸೆಂಚುರಿ ನೆನಪಿಸಿಕೊಂಡ ಐಸಿಸಿ! ವಿಶೇಷ ಏನು ಗೊತ್ತಾ?
ವಿವಿಯನ್ ರಿಚರ್ಡ್ಸ್ ದ್ವಿತೀಯ ಪಾಳಿಯಲ್ಲಿ 58 ಬಾಲಿನಲ್ಲಿಯೇ 110 ರನ್ ಬಾರಿಸಿ ನಾಟೌಟ್ ಆಗಿದ್ದರು. ಆಗ ವಿಂಡೀಸ್ ತನ್ನ ಎರಡನೆಯ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಕುತೂಹಲದ ಸಂಗತಿಯೆಂದರೆ ರಿಚರ್ಡ್ಸ್ ಅತ್ಯುತ್ತಮ ಫಾರಂನಲ್ಲಿ ಬ್ಯಾಟ್ ಬೀಸುತ್ತಿದ್ದರೂ ತಂಡದ ಶ್ರೇಯಸ್ಸನ್ನು ಗಮನದಲ್ಲಿಟ್ಟುಕೊಂಡು ಸ್ವತಃ ಅವರೇ ಕ್ಯಾಪ್ಟನ್ ಆಗಿ ತಂಡದ ಮೊತ್ತವನ್ನು ಡಿಕ್ಲೇರ್ ಮಾಡಿಕೊಂಡು ಭರ್ಜರಿ ಸವಾಲೊಡ್ಡಿದ್ದರು.
ವಿಂಡೀಸ್ ದ್ವೀಪ ಪ್ರದೇಶದಲ್ಲಿ ಜನಿಸಿದ 69 ವರ್ಷದ ಸರ್ ಐಸಾಕ್ ವಿವಿಯನ್ ಅಲೆಕ್ಸಾಂಡರ್ ರಿಚರ್ಡ್ಸ್ ಎಂಬ ದೈತ್ಯ ಪ್ರತಿಭೆ, ಬ್ಯಾಟ್ಸ್ಮನ್ ಆಗಿ.. ಸರಿಯಾಗಿ ಇದೇ ದಿನ 1986ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಅಮೋಘ ಸಾಧನೆಯೊಂದನ್ನು ಮಾಡಿದ್ದರು. ಹೌದು ಟೆಸ್ಟ್ ಪಂದ್ಯವೊಂದರಲ್ಲಿ ಕೇವಲ 56 ಬಾಲ್ಗಳಲ್ಲಿ ಮೊದಲ ಬಾರಿಗೆ ಕ್ಷಿಪ್ರ ಸೆಂಚುರಿ ಬಾರಿಸಿದ್ದ ಸಾಧನೆ ಮಾಡಿದ್ದು ಇದೇ ವಿವ್ ರಿಚರ್ಡ್ಸ್ ಎಂಬ ವಿಂಡೀಸ್ ದೈತ್ಯ ಎಂದು ಐಸಿಸಿ ಟ್ವೀಟ್ ಮಾಡಿ, ಆ ಸಾಧನೆಯನ್ನು ಸ್ಮರಿಸಿದೆ. ಅದಾದಮೇಲೆ ಕೇವಲ 54 ಬಾಲ್ಗಳಲ್ಲಿಯೇ ದಾಯಾದಿ ರಾಷ್ಟ್ರವಾದ ಆಸ್ಟ್ರೇಲಿಯಾದ ವಿರುದ್ಧ ನ್ಯೂಜಿಲ್ಯಾಂಡ್ನ ಓಪನಿಂಗ್ ಬ್ಯಾಟ್ಸ್ಮನ್ ಬ್ರಾಂಡನ್ ಮೆಕಲಂ ಕ್ರೈಸ್ಟ್ಚರ್ಚ್ನಲ್ಲಿ ಅದಕ್ಕಿಂತ ವೇಗವಾದ ಶತಕ ಬಾರಿಸಿ, ದಾಖಲೆಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದರು ಎಂಬುದೂ ಇಲ್ಲಿ ದಾಖಲಾರ್ಹ. ಅದಕ್ಕೂ ಮುನ್ನ, ಜೊಹಾನ್ಸ್ಬರ್ಗ್ನಲ್ಲಿ 1921-22ರಲ್ಲಿ ಜಾಕ್ ಗ್ರಗೊರಿ 67 ಬಾಲ್ನಲ್ಲಿ ಬಾರಿಸಿದ್ದ ಶತಕವೇ ಅತ್ಯಂತ ವೇಗದ ಶತಕವಾಗಿತ್ತು.
ಇಂದಿನ ಐಪಿಎಲ್ ಯುಗದಲ್ಲಿ ಅಂದಿನ 56 ಬಾಲ್ ಸೆಂಚುರಿಯನ್ನು ಮೆಲುಕು ಹಾಕುವುದಾದರೆ! ಕಿಂಗ್ ವಿವ್ ರಿಚರ್ಡ್ಸ್ ಕೇವಲ 56 ಬಾಲ್ಗಳಲ್ಲಿ ಬಾರಿಸಿದ್ದ ಮೊದಲ ಕ್ಷಿಪ್ರ ಸೆಂಚುರಿ ಬಗ್ಗೆ ಹೇಳುವುದಾದರೆ ಅದೇ ಟೆಸ್ಟ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ರಿಚರ್ಡ್ಸ್ ಕೇವಲ 26 ರನ್ ಗಳಿಸಿ ಔಟ್ ಆಗಿದ್ದರು. ಆದರೆ ದ್ವಿತೀಯ ಪಾಳಿಯಲ್ಲಿ 58 ಬಾಲಿನಲ್ಲಿಯೇ 110 ರನ್ ಬಾರಿಸಿ ನಾಟೌಟ್ ಆಗಿದ್ದರು. ವಿಂಡೀಸ್ನ ಆಂಟಿಗುವಾದ ಸೆಂಟ್ ಜಾನ್ಸ್ನಲ್ಲಿ ನಡೆದ ಆ ಕೊನೆಯ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ತಂಡ 2 ವಿಕೆಟ್ ಕಳೆದುಕೊಂಡು 246 ರನ್ ಗಳಿಸಿತ್ತು.
ಆಗ ವಿಂಡೀಸ್ ತನ್ನ ಎರಡನೆಯ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಕುತೂಹಲದ ಸಂಗತಿಯೆಂದರೆ ರಿಚರ್ಡ್ಸ್ ಅತ್ಯುತ್ತಮ ಫಾರಂನಲ್ಲಿ ಬ್ಯಾಟ್ ಬೀಸುತ್ತಿದ್ದರೂ ತಂಡದ ಶ್ರೇಯಸ್ಸನ್ನು ಗಮನದಲ್ಲಿಟ್ಟುಕೊಂಡು ಸ್ವತಃ ಅವರೇ ಕ್ಯಾಪ್ಟನ್ ಆಗಿ ತಂಡದ ಮೊತ್ತವನ್ನು ಡಿಕ್ಲೇರ್ ಮಾಡಿಕೊಂಡು ಭರ್ಜರಿ ಸವಾಲೊಡ್ಡಿದ್ದರು. ಅಂದಹಾಗೆ, ಅದು ರಿಚರ್ಡ್ಸ್ ಅವರ ಹೋಮ್ ಪಿಚ್ ಆಗಿತ್ತು. ಕ್ಲೈವ್ ಲಾಯ್ಡ್ ಎಂಬ ಮತ್ತೊಬ್ಬ ದೈತ್ಯ ಬ್ಯಾಟ್ಸ್ಮನ್ ಕಾಲ ಮುಗಿಯುತ್ತಾ ಬಂದು, ಆತನಿಂದ ವಿಂಡೀಸ್ ತಂಡದ ಚುಕ್ಕಾಣಿ ರಿಚರ್ಡ್ಸ್ ಕೈಗೆ ಆಗಷ್ಟೇ ಹಸ್ತಾಂತರವಾಗಿತ್ತು.
ಇಂಗ್ಲೆಂಡ್ ಸ್ಪಿನ್ನರ್ ಜಾನ್ ಎಂಬುರಿ ಎಸೆದ ಚೆಂಡನ್ನು ರಿಚರ್ಡ್ಸ್ ಎಲ್ಲಿಗೆ ಬಾರಿಸಿದ್ದರು ಗೊತ್ತಾ? ಆ ಸಿಕ್ಸರ್ ಬಾಲ್ ಸೀದಾ ಪಕ್ಕದ ಜೈಲುಕೋಣೆಯ ಮೇಲೆ ಬಿದ್ದಿತ್ತು. ಅಂದಹಾಗೆ ರಿಚರ್ಡ್ಸ್ ಅವರ ಅಪ್ಪ ಅದೇ ಜೈಲಿನ ವಾರ್ಡನ್ ಆಗಿ ಸೇವೆ ಸಲ್ಲಿಸಿದ್ದರು.
ಪ್ರವಾಸೀ ಇಂಗ್ಲೆಂಡ್ ತಂಡಕ್ಕೆ 401 ರನ್ಗಳ ಭಾರಿ ಸವಾಲನ್ನು ಒಡ್ಡಿತ್ತು. ಮಾಲ್ಕಂ ಮಾರ್ಷಲ್, ಜೋಯಲ್ ಗಾರ್ನರ್, ಮೈಕೇಲ್ ಹೋಲ್ಡಿಂಗ್ ಎಂಬ ದೈತ್ಯ ವೇಗಿಗಳು ಜೊತೆಗೆ, ರೋಜರ್ ಹಾರ್ಪರ್ ಎಂಬ ಆಫ್ ಸ್ಪಿನ್ನರ್ನನ್ನು ಎದುರಿಸುವುದು ಡೇವಿಡ್ ಗೋವರ್ ನಾಯಕತ್ವದ ಇಂಗ್ಲೆಂಡ್ ತಂಡಕ್ಕೆ ಭಾರೀ ಸವಾಲು ಆಗಿತ್ತು. ರೋಜರ್ ಹಾರ್ಪರ್ ಮೂರು ವಿಕೆಟ್ ಕಬಳಿಸಿದ್ದರೆ ಉಳಿದಿಬ್ಬರು ವೇಗಿಗಳು ತಲಾ ಎರಡು ವಿಕೆಟ್ ಪಡೆದುಕೊಂಡಿದ್ದರು. ಇಂಗ್ಲೆಂಡ್ ತಂಡ 79.1 ಓವರ್ನಲ್ಲಿ 170 ರನ್ಗೆ ಆಲೌಟ್ ಆಗಿತ್ತು. ಪ್ರವಾಸದ ಆ ಕೊನೆಯ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡ 240 ರನ್ಗಳ ಹೀನಾಯ ಸೋಲು ಕಂಡಿತ್ತು. 5-0 ಅಂತರದಲ್ಲಿ ವೆಸ್ಟ್ ಇಂಡೀಸ್ ಪಡೆ ಆ ಸರಣಿಯನ್ನು ತನ್ನದಾಗಿಸಿಕೊಂಡಿತ್ತು.
ಸರಣಿಯ ಆರಂಭದಲ್ಲಿ ಮೈಕ್ ಗ್ಯಾಟಿಂಗ್ ಮೂಗು ಅಪ್ಪಚ್ಚಿಯಾಗಿತ್ತು!
80ರ ದಶಕದ ಕ್ರಿಕೆಟ್ ಅದರಲ್ಲೂ ವಿಂಡೀಸ್ ಮತ್ತು ಇಂಗ್ಲೆಂಡ್ ತಂಡಗಳ ಆಟ ರಣರೋಚಕವಾಗಿತ್ತು. ಇದೇ 1985-86ನೇ ಸಾಲಿನ ಸರಣಿಯಲ್ಲಿ ಟೆಸ್ಟ್ಗೂ ಮುನ್ನ ಏಕದಿನ ಪಂದ್ಯಗಳಲ್ಲಿ ಮಾಲ್ಕಂ ಮಾರ್ಷಲ್ ಎಂಬ ಅಜಾನುಬಾಹು ಬೌಲರ್ ಎಸೆದ ಚೆಂಡೊಂದು ಇಂಗ್ಲೆಂಡ್ ತಂಡದ ಆಕರ್ಷಕ ಬ್ಯಾಟ್ಸ್ಮನ್ ಮೈಕ್ ಗ್ಯಾಟಿಂಗ್ ಮೂಗಿಗೆ ಬಡಿದು, ಆತನ ಮೂಗಿನಿಂದ ಲೊಳಲೊಳನೆ ಸುರಿದ ರಕ್ತ ಪಿಚ್ ಅನ್ನು ಒದ್ದೆ ಮಾಡಿತ್ತು! ಆ ಮೇಲೆ ಆತ ನಾಲ್ಕಾರು ಹೊಲಿಗೆ ಹಾಕಿಸಿಕೊಂಡಿದ್ದ.
ರಿಚರ್ಡ್ಸ್ ತಮ್ಮ ಟೆಸ್ಟ್ ಜೀವಿತಾವಧಿಯಲ್ಲಿ 121 ಪಂದ್ಯಗಳಲ್ಲಿ 8,540 ರನ್ ಕಲೆ ಹಾಕಿದ್ದರು. ಇನ್ನು ಏಕದಿನ ಪಂದ್ಯಗಳಲ್ಲಿ ಸರಾಸರಿ 47 ರನ್ನಂತೆ 6,721 ರನ್ ಬಾರಿಸಿದ್ದರು.
#OnThisDay in 1986, Viv Richards slammed a 56-ball hundred against England in St Johns ?
It was the fastest Test ? for almost 30 years, before Brendon McCullum broke the record in 2016.
Here are all the scoring shots from Richards’ record-breaking innings ⬇️ pic.twitter.com/Bjds16fXGN
— ICC (@ICC) April 15, 2020