
ಕೊಲಂಬೊದಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವು ಭಾರತ ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಮೊದಲ ಪಂದ್ಯದಲ್ಲಿ 165 ರನ್‌ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದಿರುವ ಶುಭ್ಗಿಲ್ ನೇತೃತ್ವದ ಭಾರತೀಯ ಪಡೆಗೆ ಈಗ ಸರಣಿ ವಶಪಡಿಸಿಕೊಳ್ಳುವ ಸುವರ್ಣ ಅವಕಾಶವಿದೆ. ಕೇವಲ ಎರಡು ಪಂದ್ಯಗಳ ಈ ಸರಣಿಯಲ್ಲಿ ಭಾರತ ಈ ಪಂದ್ಯವನ್ನು ಏಕೆ ಗೆಲ್ಲಲೇಬೇಕು ಎಂಬುದಕ್ಕೆ 4 ಮುಖ್ಯ ಕಾರಣಗಳು ಇಲ್ಲಿವೆ…
1. ಸರಣಿ ‘ಕ್ಲೀನ್ ಸ್ವೀಪ್’ ಮಾಡುವ ಅವಕಾಶ: ಇದು ಕೇವಲ ಎರಡು ಪಂದ್ಯಗಳ ಕಿರು ಟೆಸ್ಟ್ ಸರಣಿಯಾಗಿದೆ. ಮೊದಲ ಪಂದ್ಯ ಗೆದ್ದಿರುವ ಭಾರತಕ್ಕೆ ಸರಣಿ ಸೋಲುವ ಭೀತಿ ಇಲ್ಲದಿದ್ದರೂ, 2-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದು ಮುಖ್ಯ ಗುರಿಯಾಗಿದೆ. ಶ್ರೀಲಂಕಾ ನೆಲದಲ್ಲಿ ಸಂಪೂರ್ಣ ಸರಣಿ ಜಯಿಸುವುದು ತಂಡದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ. 2017 ರಲ್ಲಿ ಶ್ರೀಲಂಕಾದಲ್ಲಿ ಕೊನೆಯ ಬಾರಿ ಟೆಸ್ಟ್ ಸರಣಿ ಗೆದ್ದಿದ್ದ ಟೀಮ್ ಇಂಡಿಯಾಗೆ ಇದೀಗ 9 ವರ್ಷಗಳ ಬಳಿಕ ಮತ್ತೆ ಸರಣಿ ಗೆಲ್ಲುವ ಸುವರ್ಣಾವಕಾಶವಿದೆ.
2. WTC ಅಂಕಗಳ ಅನಿವಾರ್ಯತೆ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ಪ್ರತಿ ಪಂದ್ಯದ ಗೆಲುವೂ ಮುಖ್ಯ. ಲಂಡನ್ ನಲ್ಲಿ ನಡೆಯಲಿರುವ ಫೈನಲ್ ತಲುಪಲು ಭಾರತ ತಂಡ ತನ್ನ ಗೆಲುವಿನ ಶೇಕಡಾವಾರು ಪ್ರಮಾಣವನ್ನು (PCT) ಉತ್ತಮ ಪಡಿಸಿಕೊಳ್ಳಬೇಕಿದೆ. ಮೊದಲ ಟೆಸ್ಟ್ ಗೆದ್ದ ನಂತರ ಭಾರತದ PCT 53.33% ಆಗಿದ್ದು, ಈಗ ಎರಡನೇ ಟೆಸ್ಟ್ ಪಂದ್ಯವನ್ನೂ ಗೆದ್ದರೆ, ಭಾರತದ ಒಟ್ಟು ಗೆಲುವಿನ ಶೇಕಡಾವಾರು ಪ್ರಮಾಣ 57.58% ಗೆ ಏರಿಕೆಯಾಗಲಿದೆ. ಇದು ಭಾರತ ತಂಡವು WTC ಫೈನಲ್ ರೇಸ್‌ನಲ್ಲಿ ಮುನ್ನಡೆಯಲು ದೊಡ್ಡ ಬಲ ನೀಡುತ್ತದೆ
3. ಟೀಮ್ ಇಂಡಿಯಾದ ಆತ್ಮ ವಿಶ್ವಾಸ ಹೆಚ್ಚಳ: ತವರಿನ ಪಿಚ್‌ಗಳಲ್ಲಿ ಶ್ರೀಲಂಕಾ ಯಾವಾಗಲೂ ಅಪಾಯಕಾರಿ ತಂಡ. ಒಂದು ವೇಳೆ ಭಾರತ ಈ ಪಂದ್ಯದಲ್ಲಿ ಮೈಮರೆತರೆ ಲಂಕಾ ಪಡೆ ಸರಣಿಯನ್ನು 1-1 ರಿಂದ ಸಮಬಲಗೊಳಿಸುವ ಅವಕಾಶ ಇರುತ್ತದೆ. ಕಿರು ಸರಣಿಗಳಲ್ಲಿ ಕಮ್‌ಬ್ಯಾಕ್ ಮಾಡಲು ಮೂರನೇ ಪಂದ್ಯದ ಅವಕಾಶ ಇರುವುದಿಲ್ಲ. ಹಾಗಾಗಿ ಕೋಚ್ ಗೌತಮ್ ಗಂಭೀರ್ ಪಡೆ ಆರಂಭದಿಂದಲೇ ಸರಣಿ ಮೇಲೆ ಹಿಡಿತ ಸಾಧಿಸಲು ಗೆಲುವನ್ನೇ ಗುರಿಯಾಗಿಸಿದೆ. ಈ ಸರಣಿ ಗೆಲುವು ಮುಂಬರುವ ಸರಣಿಗೂ ಮುನ್ನ ಟೀಮ್ ಇಂಡಿಯಾದ ಆತ್ಮ ವಿಶ್ವಾಸ ಹೆಚ್ಚಿಸಲಿದೆ.
4. ಹೊಸ ಯುಗಾರಂಭಕ್ಕೆ ನಾಂದಿ: ಈ ಪಂದ್ಯದ ಮೂಲಕ ದೇವದತ್ ಪಡಿಕ್ಕಲ್, ಮಾನವ್ ಸುತಾರ್, ಧ್ರುವ್ ಜುರೆಲ್, ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯರಾಗುವುದನ್ನು ಎದುರು ನೋಡಬಹುದು. ಅಲ್ಲದೆ ಶುಭಮನ್ ಗಿಲ್ ನಾಯಕತ್ವದ ಈ ಯುವ ತಂಡ ವಿದೇಶಿ ಮಣ್ಣಿನಲ್ಲಿ ಸರಣಿ ಗೆದ್ದರೆ, ಅದು ಭಾರತೀಯ ಟೆಸ್ಟ್ ಕ್ರಿಕೆಟ್‌ನ ಹೊಸ ಯುಗಕ್ಕೆ ಬಲವಾದ ನಾಂದಿ ಹಾಡಲಿದೆ.
ಇದನ್ನೂ ಓದಿ: ಸೋತರೂ ಟೀಮ್ ಇಂಡಿಯಾದ ಸೆಮಿಫೈನಲ್ ಆಸೆ ಜೀವಂತ!
ಒಟ್ಟಾರೆಯಾಗಿ ಹೇಳುವುದಾದರೆ, ಕೊಲಂಬೊ ಟೆಸ್ಟ್ ಕೇವಲ ಒಂದು ಪಂದ್ಯವಲ್ಲ. ಇದು ಭಾರತದ ಯುವ ಶಕ್ತಿ ಮತ್ತು ಡಬ್ಲ್ಯುಟಿಸಿ (WTC) ಫೈನಲ್ ಕನಸಿನ ನಿರ್ಣಾಯಕ ಹೆಜ್ಜೆಯಾಗಿದೆ. ಹೀಗಾಗಿಯೇ, ಸರಣಿ ಶ್ರೇಷ್ಠತೆ ಕಾಯ್ದುಕೊಳ್ಳಲು ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಗೆಲುವು ಅತ್ಯಂತ ಅನಿವಾರ್ಯವಾಗಿದೆ.