
IPL 2026: ಇಂಡಿಯನ್ ಪ್ರೀಮಿಯರ್ ಲೀಗ್‌ನ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವನ್ನು ‘ಎಲ್ ಕ್ಲಾಸಿಕೋ’ ಮ್ಯಾಚ್ ಎಂದು ವರ್ಣಿಸಲಾಗುತ್ತಿದೆ. ಇಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವನ್ನೇ ಯಾಕೆ ‘ಎಲ್ ಕ್ಲಾಸಿಕೋ’ ಎಂದು ಕರೆಯಲಾಗುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…
‘ಎಲ್ ಕ್ಲಾಸಿಕೋ’ (El Clásico) ಎಂಬುದು ಮೂಲತಃ ಸ್ಪ್ಯಾನಿಷ್ ಭಾಷೆಯ ಪದ. ಇದರ ಅರ್ಥ “ದಿ ಕ್ಲಾಸಿಕ್” (The Classic) ಅಥವಾ “ಶ್ರೇಷ್ಠ” ಎಂದಾಗಿದೆ.
ಕ್ರೀಡಾ ಕ್ಷೇತ್ರದಲ್ಲಿ ಈ ಪದವನ್ನು ಬಳಸಲಾಗಿದ್ದು ಸ್ಪೇನ್ ಫುಟ್‌ಬಾಲ್ ಅಂಗಳದಲ್ಲಿ. ಅಂದರೆ ವಿಶ್ವದ ಅತ್ಯಂತ ಹಳೆಯ ಫುಟ್‌ಬಾಲ್ ಪೈಪೋಟಿಗಳಲ್ಲಿ ಒಂದಾದ ಸ್ಪೇನ್‌ನ ರಿಯಲ್ ಮ್ಯಾಡ್ರಿಡ್ (Real Madrid) ಮತ್ತು ಬಾರ್ಸಿಲೋನಾ (FC Barcelona) ಕ್ಲಬ್‌ಗಳ ನಡುವಿನ ಮುಖಾಮುಖಿಯನ್ನು ಎಲ್ ಕ್ಲಾಸಿಕೋ ಪಂದ್ಯ ಎಂದು ಬಣ್ಣಿಸಲಾಗುತ್ತದೆ.
ಅಂದರೆ ಇಲ್ಲಿ ಅತ್ಯುತ್ತಮ ಪೈಪೋಟಿಯ ಪಂದ್ಯವನ್ನು ದಿ ಕ್ಲಾಸಿಕ್ ಮ್ಯಾಚ್ ಅಥವಾ ಎಲ್ ಕ್ಲಾಸಿಕೋ ಪಂದ್ಯ ಎಂದು ಕರೆಯಲಾಗುತ್ತದೆ. ಅದರಂತೆ ಐಪಿಎಲ್ನಲ್ಲೂ ಈ ಪದವನ್ನು ಬಳಸಲಾಗುತ್ತಿದೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳೆಂದರೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್. ಉಭಯ ತಂಡಗಳು ತಲಾ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ. ಅಂದರೆ ಲೀಗ್‌ನ ಅರ್ಧಕ್ಕಿಂತ ಹೆಚ್ಚು ಟ್ರೋಫಿಗಳು ಈ ಎರಡು ತಂಡಗಳ ಬಳಿಯೇ ಇರುವುದು ವಿಶೇಷ.
ಹೀಗಾಗಿಯೇ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವನ್ನು’ಎಲ್ ಕ್ಲಾಸಿಕೋ’ ಮ್ಯಾಚ್ ಎಂದು ಕರೆಯಲಾಗುತ್ತದೆ. ಈ ಹೆಸರಿಗೆ ತಕ್ಕಂತೆ ಈ ಹಿಂದೆ ಉಭಯ ತಂಡಗಳು ಗೆಲುವಿಗಾಗಿ ಕೊನೆಯ ಕ್ಷಣದವರೆಗೆ ಭರ್ಜರಿ ಪೈಪೋಟಿ ನಡೆಸಿದ್ದರು.
ಉಭಯ ತಂಡಗಳ ದಾಖಲೆಯನ್ನು ನೋಡಿದರೆ ಮುಂಬೈ ಇಂಡಿಯನ್ಸ್ ಸ್ವಲ್ಪ ಮೇಲುಗೈ ಹೊಂದಿದೆ. ಆದರೆ, ಪ್ರತಿ ಬಾರಿ ಈ ತಂಡಗಳು ಮುಖಾಮುಖಿಯಾದಾಗಲೂ ಫಲಿತಾಂಶ ಕೊನೆಯ ಓವರ್‌ವರೆಗೂ ಕುತೂಹಲಕಾರಿಯಾಗಿರುತ್ತದೆ.
ಇದನ್ನೂ ಓದಿ: IPL 2026: CSK ಪರ ಆಸ್ಟ್ರೇಲಿಯನ್ ವೇಗಿ ಪಾದಾರ್ಪಣೆ..!
ಆದರೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಲ್ಲಿನ ಆಟಗಾರರ ಬದಲಾಗಿದ್ದಾರೆ. ಈ ಬದಲಾವಣೆಯ ಹೊರತಾಗಿಯೂ ಎಲ್ ಕ್ಲಾಸಿಕೋ ಕುತೂಹಲ ಹಾಗೆಯೇ ಉಳಿದಿದೆ. ಈ ಕುತೂಹಲಕ್ಕೆ ಕಿಚ್ಚು ಹಚ್ಚುವಂತಹ ಪ್ರದರ್ಶನವನ್ನು ಈ ಬಾರಿ ಕೂಡ ಉಭಯ ತಂಡಗಳು ನೀಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.