ಆರ್ಸಿಬಿಗೆ ಬಂತು ಆನೆ ಬಲ; 8 ಸಿಕ್ಸರ್, 7 ಬೌಂಡರಿ ಸಹಿತ 92 ರನ್ ಚಚ್ಚಿದ ವಿಲ್ ಜ್ಯಾಕ್ಸ್..!
ತಮ್ಮ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಅವರು 8 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಬಾರಿಸಿದರು. ಈ ಇನ್ನಿಂಗ್ಸ್‌ನ ಪರಿಣಾಮವಾಗಿ ಪ್ರಿಟೋರಿಯಾ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 216 ರನ್ ಗಳಿಸಿತು.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 ಲೀಗ್ನ (South Africa T20) ಚೊಚ್ಚಲ ಆವೃತ್ತಿ ದಿನದಿಂದ ದಿನಕ್ಕೆ ಅಚ್ಚರಿಯ ಫಲಿತಾಂಶಗಳನ್ನು ಕಾಣುವುದರೊಂದಿಗೆ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡುತ್ತಿದೆ. ಅದರಲ್ಲೂ ಇಡೀ ಟೂರ್ನಿಯಲ್ಲಿ ಯುವ ಪ್ರತಿಭೆಗಳು ತಮ್ಮ ಪರಾಕ್ರಮ ತೋರುತ್ತಿರುವುದು ಇಲ್ಲಿ ಮತ್ತೊಂದು ವಿಶೇಷವಾಗಿದೆ. ಅದಕ್ಕೆ ಪೂರಕವೆಂಬಂತೆ ಎಸ್ಎ20 (SA20) ಲೀಗ್ನಲ್ಲಿ 24ರ ಹರೆಯದ ಬ್ಯಾಟ್ಸ್‌ಮನ್ ಏಕಾಂಗಿಯಾಗಿ ಬೌಲರ್ಗಳನ್ನು ಸದೆಬಡಿಯುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟಿದ್ದಾನೆ. ಇದರೊಂದಿಗೆ ಆರ್ಸಿಬಿ ಅಭಿಮಾನಿಗಳಿಗೂ ಈ ಭಾರಿ ಕಪ್ ಗೆಲ್ಲುವ ಭರವಸೆಯನ್ನು ನೀಡಿದ್ದಾನೆ. ಅಷ್ಟಕ್ಕೂ ಈ SA20 ನಲ್ಲಿ ಭಯ ಹುಟ್ಟಿಸಿದ ಈ ಬ್ಯಾಟ್ಸ್‌ಮನ್ ಹೆಸರು ವಿಲ್ ಜ್ಯಾಕ್ಸ್ (Will Jacks). ಇಂಗ್ಲೆಂಡ್‌ನ ಈ ಸುನಾಮಿ ಬ್ಯಾಟ್ಸ್ಮನ್ನ ಹೆಸರು ಐಪಿಎಲ್ 2023 (IPL 2023) ರಲ್ಲೂ ಪ್ರತಿಧ್ವನಿಸಲಿದ್ದು, ಈ ಸ್ಫೋಟಕ ಬ್ಯಾಟ್ಸ್‌ಮನ್ ಈ ಬಾರಿ ಆರ್ಸಿಬಿ (RCB) ಪರ ಕಣಕ್ಕಿಳಿಯುವುದನ್ನು ನಾವು ಕಾಣಬಹುದಾಗಿದೆ.
ವಾಸ್ತವವಾಗಿ, ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ವಿಲ್ ಜ್ಯಾಕ್ಸ್ 1.50 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಎಂಟ್ರಿಕೊಟ್ಟಿದ್ದರು. ಅವರನ್ನು ಖರೀದಿಸಲು ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಬಾರಿ ಪೈಪೋಟಿ ನಡೆದಿತ್ತು. ಅಂತಿಮವಾಗಿ, ಆರ್ಸಿಬಿ 3.20 ಕೋಟಿಗೆ ಬಿಡ್ ಮಾಡುವ ಮೂಲಕ ಅವರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಐಪಿಎಲ್ ಆರಂಭಕ್ಕೂ ಮುನ್ನವೆ ತನ್ನ ಬ್ಯಾಟಿಂಗ್ ಪರಾಕ್ರಮ ತೋರಿರುವ ವಿಲ್ ಜ್ಯಾಕ್ಸ್ SA20 ಲೀಗ್ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ.
Virat Kohli: ‘ನಯಾ ಶೇರ್’ ರ್‍ಯಾಪ್ ಸಾಂಗ್ನಲ್ಲಿ ಕಿಂಗ್ ಕೊಹ್ಲಿ ಡಾನ್ಸ್! ಟೀಸರ್ ಬಿಡುಗಡೆ ಮಾಡಿದ ಆರ್ಸಿಬಿ
200ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್
ಎಸ್ಎ20 ಲೀಗ್ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಈಸ್ಟರ್ನ್ ಕ್ಯಾಪ್ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 216 ರನ್ ಗಳಿಸಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿಲ್ ಜ್ಯಾಕ್ಸ್ 200 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ ತಮ್ಮ ಎರಡನೇ ಟಿ0 ಶತಕವನ್ನು ಕೇವಲ 8 ರನ್‌ಗಳಿಂದ ಕಳೆದುಕೊಂಡರು.
THEN THERE ARE 3‼️ Centurion has come to play as we have our 3rd #Betway Catch a Million entrant!!!#PCvSEC #Betway #SA20 | @Betway_India pic.twitter.com/hUP2g8hosc
— Betway SA20 (@SA20_League) January 14, 2023
ಅಬ್ಬರದ 92 ರನ್ ಚಚ್ಚಿದ ವಿಲ್ ಜ್ಯಾಕ್ಸ್
ಐಪಿಎಲ್ ಮಿನಿ ಹರಾಜಿನಲ್ಲಿ ಆರ್‌ಸಿಬಿಯಿಂದ ಮಿಲಿಯನೇರ್ ಆಗಿರುವ ವಿಲ್ ಜ್ಯಾಕ್ಸ್, ಈ ಪಂದ್ಯದಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕ್ಯಾಪ್ ಬೌಲರ್‌ಗಳ ಮೇಲೆ ದಾಳಿ ಮಾಡುವ ಮೂಲಕ ಸಂಚಲನ ಮೂಡಿಸಿದರು. ಈ ಬಲಗೈ ಬ್ಯಾಟ್ಸ್‌ಮನ್ ಕೇವಲ 46 ಎಸೆತಗಳಲ್ಲಿ 92 ರನ್ ಗಳಿಸಿದರು. ತಮ್ಮ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಅವರು 8 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಬಾರಿಸಿದರು. ಈ ಇನ್ನಿಂಗ್ಸ್‌ನ ಪರಿಣಾಮವಾಗಿ ಪ್ರಿಟೋರಿಯಾ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 216 ರನ್ ಗಳಿಸಿತು.
ವಿಲ್ ಜ್ಯಾಕ್ಸ್ ಪರಾಕ್ರಮ, 37 ರನ್‌ಗಳ ಜಯ
217 ರನ್‌ಗಳ ಗುರಿ ಪಡೆದ ಸನ್‌ರೈಸರ್ಸ್ ಈಸ್ಟರ್ನ್ ಕ್ಯಾಪ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 179 ರನ್ ಗಳಿಸಲಷ್ಟೇ ಶಕ್ತವಾಗಿ 37 ರನ್ಗಳು ಸೋಲು ಅನುಭವಿಸಿತು. ಪ್ರಿಟೋರಿಯಾ ಕ್ಯಾಪಿಟಲ್ಸ್ ಪರ ವೇಯ್ನ್ ಪರ್ನೆಲ್ ಮತ್ತು ಆದಿಲ್ ರಶೀದ್ ತಲಾ 2 ವಿಕೆಟ್ ಪಡೆದರು.
ಟೂರ್ನಿಯಲ್ಲಿ ಆಡಿದ 2 ಪಂದ್ಯಗಳಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಕ್ಕೆ ಇದು ಸತತ ಎರಡನೇ ಗೆಲುವು. ಈ ಪಂದ್ಯದಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿದ ವಿಲ್ ಜ್ಯಾಕ್ಸ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಒಲಿಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:52 am, Sun, 15 January 23