
ದುಬೈನಲ್ಲಿ ನಡೆದ 2026ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್ನಲ್ಲಿ ಭಾರತ ತಂಡ, ಶ್ರೀಲಂಕಾವನ್ನು ಮಣಿಸಿ ದಾಖಲೆಯ 8ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ಹರ್ಮನ್ಪ್ರೀತ್ ಕೌರ್ ಪಡೆ ಶ್ರೀಲಂಕಾವನ್ನು ಸೋಲಿಸಿದ ಬಳಿಕ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಟೀಂ ಇಂಡಿಯಾ ಟ್ರೋಫಿ ಎತ್ತಿ ಹಿಡಿದು ಸಂಭ್ರಮವಿಸುವುದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಆದರೆ ಪಂದ್ಯ ಮುಗಿದು ಅರ್ಧ ಗಂಟೆಗೂ ಹೆಚ್ಚು ಸಮಯವಾದರೂ ಪ್ರಶಸ್ತಿ ಪ್ರಸ್ತುತಿ ಸಮಾರಂಭದಲ್ಲಿ ಟೀಂ ಇಂಡಿಯಾ ಆಟಗಾರ್ತಿಯರ ಸುಳಿವೇ ಇರಲಿಲ್ಲ. ಇತ್ತ ಏಷ್ಯಾಕಪ್ ಆಯೋಜಕರು ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸನ್ ನಖ್ವಿ, ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ಕಾದಿದ್ದೆ ಬಂದಿತ್ತಾರೂ ಚಾಂಪಿಯನ್ ಆಟಗಾರ್ತಿಯರು ಮಾತ್ರ ನಖ್ವಿ ಕೈನಿಂದ ಪ್ರಶಸ್ತಿ ಸ್ವೀಕರಿಸಲು ಸುತಾರಾಂ ಒಪ್ಪಲಿಲ್ಲ. ಹೀಗಾಗಿ ವರ್ಷದ ಬಳಿಕ ಮತ್ತೊಂದು ಮುಖಭಂಗದೊಂದಿಗೆ ಮೊಹ್ಸಿನ್ ನಖ್ವಿ ವೇದಿಕೆಯಿಂದ ಹೊರನಡೆಯಬೇಕಾಯಿತು.
ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನದೊಂದಿಗಿನ ಸಂಬಂಧಕ್ಕೆ ಭಾರತ ಪೂರ್ಣ ವಿರಾಮ ಹಾಕಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಹೀಗಾಗಿಯೇ ಕಳೆದ ವರ್ಷ ನಡೆದಿದ್ದ ಪುರುಷರ ಏಷ್ಯಾಕಪ್ನಲ್ಲೂ ಭಾರತ ತಂಡ ಚಾಂಪಿಯನ್ ಆದರೂ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಒಪ್ಪದೆ ಖಾಲಿ ಕೈಯಲ್ಲೇ ಸಂಭ್ರಮಾಚರಣೆ ನಡೆಸಿತ್ತು. ಇತ್ತ ಈ ಮುಜುಗರದಿಂದ ಕೆರಳಿದ್ದ ನಖ್ವಿ ಏಷ್ಯಾಕಪ್ ಟ್ರೋಫಿಯನ್ನು ತನ್ನೊಂದಿಗೆ ತೆಗೆದುಕೊಂಡು ವೇದಿಕೆಯಿಂದ ಹೊರನಡೆದಿದ್ದರು. ಅದಾದ ಬಳಿಕವೂ ನಖ್ವಿ ಟ್ರೋಫಿಯನ್ನು ತನ್ನ ಅನುಮತಿ ಇಲ್ಲದೆ ಯಾರಿಗೆ ನೀಡಬಾರದೆಂದು ಶರತ್ತು ಹಾಕಿ ಅದನ್ನು ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು. ಇದುವರೆಗೂ ಆ ಟ್ರೋಫಿ ಟೀಂ ಇಂಡಿಯಾದ ಕೈ ಸೇರಿಲ್ಲ.
ಇದೀಗ ಒಂದು ವರ್ಷದ ಬಳಿಕ ಮಹಿಳಾ ತಂಡವೂ ಪುರುಷ ತಂಡದ ನಡೆಯನ್ನೇ ಅನುಸರಿಸಿದೆ. ನಖ್ವಿ ಕೈನಿಂದ ಟ್ರೋಫಿ ಪಡೆಯಲು ಒಪ್ಪದ ಭಾರತ ಮಹಿಳಾ ತಂಡ ಪ್ರಶಸ್ತಿ ಪ್ರಧಾನ ಮಾಡುವ ವೇದಿಕೆಯ ಬಳಿ ಸುಳಿಯಲೇ ಇಲ್ಲ. ಹೀಗಾಗಿ ಒಂದಷ್ಟು ಸಮಯ ವೇದಿಕೆಯಲ್ಲೇ ಕಾದ ಮೊಹ್ಸಿನ್ ನಖ್ವಿ ಮುಜುಗರದಿಂದ ಹೊರನಡೆದರು. ಆದರೆ ಈ ಬಾರಿ ನಖ್ವಿ ವೇದಿಕೆಯಿಂದ ಹೊರನಡೆಯುವಾಗ ಭಾರತದ ಅಭಿಮಾನಿಗಳಿಂದ ಮತ್ತೊಂದು ಅವಮಾನಕ್ಕೆ ಒಳಗಾಗಬೇಕಾಯಿತು.
ನಖ್ವಿ ವೇದಿಕೆಯಲ್ಲಿರುವಾಗಲೇ ಭಾರತದ ಅಭಿಮಾನಿಗಳು ‘ಟ್ರೋಫಿ ಕಳ್ಳ, ಟ್ರೋಫಿ ಕಳ್ಳ’ (ಟ್ರೋಫಿ ಥೀಫ್) ಎಂಬ ಘೋಷಣೆಯನ್ನು ಜೋರಾಗಿ ಹೇಳಲಾರಂಭಿಸಿದರು. ಈ ಘೋಷಣೆ ಕ್ರೀಡಾಂಗಣದ ತುಂಬೆಲ್ಲ ಜೋರಾಗಿ ಮೊಳಗಿತು. ಇದನ್ನು ಕೇಳಿಯೂ ಕೇಳಿಸಿಕೊಳ್ಳದ ಹಾಗೆ ನಖ್ವಿ ಮೈದಾನದಿಂದ ಹೊರಹೋಗಬೇಕಾಯಿತು. ಇದೀಗ ನಖ್ವಿಯನ್ನು ಟೀಂ ಇಂಡಿಯಾ ಅಭಿಮಾನಿಗಳು ಈ ರೀತಿಯಾಗಿ ಗೇಲಿ ಮಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.