Women’s T20 World Cup: ಅತಿ ಹೆಚ್ಚು ಬಾರಿ ಫೈನಲ್ ಆಡಿದ ತಂಡ ಯಾವುದು ಗೊತ್ತಾ?
Women's T20 World Cup 2026: 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸಮೀಪಿಸುತ್ತಿದೆ. ಈ ಪ್ರತಿಷ್ಠಿತ ಟೂರ್ನಿ ಆರಂಭಕ್ಕೂ ಮುನ್ನ, ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಫೈನಲ್‌ಗಳನ್ನು ಆಡಿದ ತಂಡಗಳ ಬಗ್ಗೆ ತಿಳಿಯೋಣ. ಆಸ್ಟ್ರೇಲಿಯಾ ದಾಖಲೆಯ 7 ಬಾರಿ ಫೈನಲ್ ತಲುಪಿ 6 ಪ್ರಶಸ್ತಿ ಗೆದ್ದಿದ್ದರೆ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಭಾರತದಂತಹ ತಂಡಗಳ ಫೈನಲ್ ಸಾಧನೆ ಹಾಗೂ 2026ರ ವಿಶ್ವಕಪ್ ಗುರಿಯನ್ನು ಈ ಲೇಖನ ವಿವರಿಸುತ್ತದೆ.

2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026) ಇದೇ ಜೂನ್ 12 ರಿಂದ ಅದ್ಧೂರಿಯಾಗಿ ಆರಂಭವಾಗಲಿದೆ. 24 ದಿನಗಳ ಈ ಪಂದ್ಯಾವಳಿಯಲ್ಲಿ ಹನ್ನೆರಡು ತಂಡಗಳು ಭಾಗವಹಿಸಲಿದ್ದು, ಒಟ್ಟು 33 ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಉದ್ಘಾಟನಾ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ಭಾರತ ಜೂನ್ 14 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇನ್ನು ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಈ ಪ್ರತಿಷ್ಠಿತ ಮೆಗಾ ಈವೆಂಟ್‌ನಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದ್ದರೆ, ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ಬಲಿಷ್ಠ ತಂಡಗಳು ಕಪ್ ಗೆಲ್ಲುವ ಗುರಿಯೊಂದಿಗೆ ಕಣಕ್ಕೆ ಇಳಿಯುತ್ತಿವೆ. ಆದರೆ ಅದಕ್ಕೂ ಮುನ್ನ ಈ ಟೂರ್ನಮೆಂಟ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಫೈನಲ್‌ಗಳನ್ನು ಆಡಿದ ತಂಡಗಳು ಯಾವುವು ಎಂಬುದನ್ನು ನೋಡೋಣ.
ಅಗ್ರಸ್ಥಾನದಲ್ಲಿ ಆಸ್ಟ್ರೇಲಿಯಾ
ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಅತಿ ಹೆಚ್ಚು ಫೈನಲ್‌ಗಳನ್ನು ಆಡಿದ ದಾಖಲೆಯನ್ನು ಹೊಂದಿದೆ. ಇಲ್ಲಿಯವರೆಗೆ ನಡೆದ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ 7 ಬಾರಿ ಫೈನಲ್ ತಲುಪಿ ದಾಖಲೆ ನಿರ್ಮಿಸಿದೆ. ಈ ಪೈಕಿ ಆರು ಬಾರಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟ್ರೋಫಿಯನ್ನು ಎತ್ತಿ ಹಿಡಿದಿದೆ. 2016 ರಲ್ಲಿ ಮಾತ್ರ ವೆಸ್ಟ್ ಇಂಡೀಸ್ ತಂಡವು ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ಈ ಬಾರಿಯೂ ಕಾಂಗರೂ ತಂಡವು ಪ್ರಶಸ್ತಿ ಫೇವರಿಟ್ ಆಗಿ ಕಣಕ್ಕೆ ಇಳಿಯುತ್ತಿದೆ.
ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್
ಆಸ್ಟ್ರೇಲಿಯಾ ನಂತರ ಅತಿ ಹೆಚ್ಚು ಬಾರಿ ಫೈನಲ್ ತಲುಪಿದ ತಂಡ ಇಂಗ್ಲೆಂಡ್. ಇಂಗ್ಲೆಂಡ್ ತಂಡ ಒಟ್ಟು ನಾಲ್ಕು ಬಾರಿ ಫೈನಲ್‌ನಲ್ಲಿ ಆಡಿದೆ. ಆದರೆ ಮೂರು ಬಾರಿ ಫೈನಲ್‌ನಲ್ಲಿ ಸೋತಿರುವ ಇಂಗ್ಲೆಂಡ್ 2009 ರಲ್ಲಿ ಮಾತ್ರ ಚಾಂಪಿಯನ್ ಆಗಿದೆ. ಉಳಿದಂತೆ 2012, 2014 ಮತ್ತು 2018 ರ ಫೈನಲ್‌ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಹೀನಾಯವಾಗಿ ಸೋತಿದೆ.
3ನೇ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್
ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಇದುವರೆಗೆ ಮೂರು ಬಾರಿ ಫೈನಲ್ ತಲುಪಿದೆ. ಕಿವೀಸ್ ಪಡೆ 2009 ಮತ್ತು 2010 ರಲ್ಲಿ ಫೈನಲ್ ತಲುಪಿದೆಯಾದರೂ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆದರೆ 2024 ರ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮೊದಲ ಬಾರಿಗೆ ಚಾಂಪಿಯನ್ ಆಗಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತಂಡವು ಕಳೆದ ಎರಡು ಆವೃತ್ತಿಗಳಲ್ಲಿ (2023 ಮತ್ತು 2024) ಫೈನಲ್‌ನಲ್ಲಿ ಆಡಿದೆಯಾದರೂ ದುರದೃಷ್ಟವಶಾತ್ ಎರಡೂ ಬಾರಿಯೂ ರನ್ನರ್ ಅಪ್ ಆಗಿಯೇ ಉಳಿದಿದೆ.
Womens T20 World Cup 2026: ಮಹಿಳಾ ಟಿ20 ವಿಶ್ವಕಪ್ಗೆ ಟೀಂ ಇಂಡಿಯಾ ಪ್ರಕಟ
ಒಮ್ಮೆ ಫೈನಲ್ ತಲುಪಿರುವ ಭಾರತ
ಟೀಮ್ ಇಂಡಿಯಾ ವಿಷಯಕ್ಕೆ ಬಂದರೆ, 2020 ರಲ್ಲಿ ಭಾರತೀಯ ಮಹಿಳಾ ತಂಡ ಇಲ್ಲಿಯವರೆಗೆ ಒಮ್ಮೆ ಮಾತ್ರ ಫೈನಲ್ ತಲುಪಿದೆ. ಆದರೆ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನು ಎದುರಿಸಬೇಕಾಯಿತು. ಆದಾಗ್ಯೂ, ಈ ಬಾರಿ, ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ, ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಅಖಾಡಕ್ಕಿಳಿದಿದೆ. ಇನ್ನು ವೆಸ್ಟ್ ಇಂಡೀಸ್ ತಂಡವು 2016 ರಲ್ಲಿ ಒಮ್ಮೆ ಮಾತ್ರ ಫೈನಲ್ ತಲುಪಿದ್ದು, ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತ್ತು.




