WPL 2023: 5 ಸಿಕ್ಸ್, 10 ಫೋರ್..ಸ್ಪೋಟಕ ಬ್ಯಾಟಿಂಗ್ನೊಂದಿಗೆ ದಾಖಲೆ ಬರೆದ ಶಫಾಲಿ ವರ್ಮಾ
Shafali Verma: 106 ರನ್ಗಳ ಸುಲಭ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೆಗ್ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ಸಿಡಿಲಬ್ಬರದ ಆರಂಭ ಒದಗಿಸಿದ್ದರು.
GG vs DC, WPL 2023: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 9ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಗುಜರಾತ್ ಜೈಂಟ್ಸ್ (Gujarat Gaints) ವಿರುದ್ಧ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ನೇಹ್ ರಾಣಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ್ದ ಗುಜರಾತ್ ಜೈಂಟ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಸೌತ್ ಆಫ್ರಿಕಾ ಆಟಗಾರ್ತಿ ಮರಿಝನ್ನೆ ಕಪ್ (Marizanne Kapp) ದಾಳಿಗೆ ನಲುಗಿದ ಗುಜರಾತ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಯಿತು.
ಕೇವಲ 9 ರನ್ಗೆ 3 ವಿಕೆಟ್ ಕಳೆದುಕೊಂಡ ಗುಜರಾತ್ ಜೈಂಟ್ಸ್ ವಿರುದ್ಧ ಆರಂಭದಲ್ಲೇ ಮೇಲುಗೈ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅತ್ಯುತ್ತಮ ದಾಳಿ ಸಂಘಟಿಸಿತು. ಪರಿಣಾಮ 7ನೇ ಓವರ್ ಮುಕ್ತಾಯದ ವೇಳೆಗೆ 4 ಓವರ್ ಪೂರ್ಣಗೊಳಿಸಿದ ಮರಿಝನ್ನೆ ಕಪ್ ಕೇವಲ 15 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಆ ಬಳಿಕ 32 ರನ್ಗಳ ಕಾಣಿಕೆ ನೀಡುವ ಮೂಲಕ ಕಿಮ್ ಗಾರ್ಥ್ ತಂಡಕ್ಕೆ ಆಸರೆಯಾದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಗುಜರಾತ್ ಜೈಂಟ್ಸ್ 105 ರನ್ ಕಲೆಹಾಕಿತು.
106 ರನ್ಗಳ ಸುಲಭ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೆಗ್ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಅದರಲ್ಲೂ ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಶಫಾಲಿ ಮೈದಾನದ ಮೂಲೆ ಮೂಲೆಗೆ ಸಿಕ್ಸ್ ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 19 ಎಸೆತಗಳಲ್ಲಿ ಶಫಾಲಿ ವರ್ಮಾ ಅರ್ಧಶತಕ ಪೂರೈಸಿದರು. ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯಂತ ವೇಗವಾಗಿ ಅರ್ಧಶತಕ ಬಾರಿಸಿದ ಭಾರತೀಯ ಆಟಗಾರ್ತಿ ಎನಿಸಿಕೊಂಡರು.
ಇನ್ನು ಅರ್ಧಶತಕದ ಬಳಿಕ ಅಬ್ಬರ ಮುಂದುವರೆಸಿದ ಶಫಾಲಿ ವರ್ಮಾ ಗುಜರಾತ್ ಜೈಂಟ್ಸ್ ಬೌಲರ್ಗಳ ಬೆಂಡೆತ್ತಿದರು. ಅಲ್ಲದೆ 28 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 10 ಫೋರ್ನೊಂದಿಗೆ ಅಜೇಯ 78 ರನ್ ಬಾರಿಸಿದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7.1 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಲಾರಾ ಹ್ಯಾರಿಸ್, ಮರಿಝನ್ನೆ ಕಪ್, ಜೆಮಿಮಾ ರೊಡ್ರಿಗಸ್, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ನಾಯಕಿ), ಮಿನ್ನು ಮಣಿ, ರಾಧಾ ಯಾದವ್, ಶಿಖಾ ಪಾಂಡೆ, ಟಾರಾ ನೋರಿಸ್.
ಇದನ್ನೂ ಓದಿ: Virat Kohli: ಫೀಲ್ಡಿಂಗ್ ಮೂಲಕವೇ ಹೊಸ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ
ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಲಾರಾ ವೊಲ್ವಾರ್ಡ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ಜಾರ್ಜಿಯಾ ವೇರ್ಹ್ಯಾಮ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ದಯಾಲನ್ ಹೇಮಲತಾ, ಸ್ನೇಹ್ ರಾಣಾ(ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್.
ವುಮೆನ್ಸ್ ಪ್ರೀಮಿಯರ್ ಲೀಗ್ ಬಿರುಸಿನ ಅರ್ಧಶತಕದ ದಾಖಲೆ:
- ಸೋಫಿಯಾ ಡಂಕ್ಲಿ (ಗುಜರಾತ್ ಜೈಂಟ್ಸ್): ಇಂಗ್ಲೆಂಡ್ ಆಟಗಾರ್ತಿ ಸೋಫಿಯಾ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
- ಶಫಾಲಿ ವರ್ಮಾ (ಡೆಲ್ಲಿ ಕ್ಯಾಪಿಟಲ್ಸ್): ಟೀಮ್ ಇಂಡಿಯಾದ ಯುವ ಬ್ಯಾಟರ್ ಶಫಾಲಿ ಗುಜರಾತ್ ಜೈಂಟ್ಸ್ ವಿರುದ್ಧ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯಂತ ವೇಗವಾಗಿ ಅರ್ಧಶತಕ ಬಾರಿಸಿದ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ.