WPL 2024: RCB ಪ್ಲೇಆಫ್ ಪ್ರವೇಶಿಸಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು? ಹೀಗಿದೆ ಲೆಕ್ಕಾಚಾರ
WPL 2024: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇದುವರೆಗೆ 7 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 3 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಇನ್ನು ಆರ್ಸಿಬಿ ತಂಡಕ್ಕಿರುವುದು ಕೇವಲ 1 ಪಂದ್ಯ ಮಾತ್ರ. ಈ ಮ್ಯಾಚ್ನಲ್ಲಿ ಗೆಲ್ಲುವ ಮೂಲಕ ಆರ್ಸಿಬಿ ಪ್ಲೇಆಫ್ ಪ್ರವೇಶಿಸಬಹುದು. ಆದರೆ ಇಲ್ಲಿ ಉಳಿದ ತಂಡಗಳ ಫಲಿತಾಂಶವನ್ನು ಕೂಡ ಎದುರು ನೋಡಬೇಕಾಗುತ್ತದೆ.

ವುಮೆನ್ಸ್ ಪ್ರೀಮಿಯರ್ ಲೀಗ್ನ (WPL 2024) ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇಆಫ್ಸ್ಗೆ ಪ್ರವೇಶಿಸಿದೆ. ಇನ್ನು ಒಂದು ತಂಡಕ್ಕೆ ಮಾತ್ರ ಮುಂದಿನ ಹಂತಕ್ಕೇರಲು ಅವಕಾಶವಿದೆ. ಈ ಅವಕಾಶಕ್ಕಾಗಿ ಮೂರು ತಂಡಗಳು ಕೂಡ ಎದುರು ನೋಡುತ್ತಿರುವುದು ವಿಶೇಷ.
ಪ್ರಸ್ತುತ ಅಂಕ ಪಟ್ಟಿಯಲ್ಲಿ ಆರ್ಸಿಬಿ ತಂಡವು 3ನೇ ಸ್ಥಾನದಲ್ಲಿದೆ. ಆಡಿರುವ 7 ಪಂದ್ಯಗಳಲ್ಲಿ 3 ಜಯ ಹಾಗೂ 4 ಸೋಲುಗಳೊಂದಿಗೆ ಆರ್ಸಿಬಿ ಒಟ್ಟು 6 ಅಂಕಗಳನ್ನು ಪಡೆದುಕೊಂಡಿದೆ. ಅತ್ತ ಯುಪಿ ವಾರಿಯರ್ಸ್ ಕೂಡ 6 ಅಂಕಗಳನ್ನು ಹೊಂದಿದೆ.

WPL 2024 ಪಾಯಿಂಟ್ಸ್ ಟೇಬಲ್ (ಮಾ.11)
ಇದಾಗ್ಯೂ ಆರ್ಸಿಬಿ ತಂಡದ ನೆಟ್ ರನ್ ರೇಟ್ +0.027 ಇರುವ ಕಾರಣ ಮೂರನೇ ಸ್ಥಾನದಲ್ಲಿದೆ. ಅತ್ತ ನಾಲ್ಕನೇ ಸ್ಥಾನದಲ್ಲಿರುವ ಯುಪಿ ವಾರಿಯರ್ಸ್ ತಂಡವು -0.365 ನೆಟ್ ರನ್ ರೇಟ್ ಹೊಂದಿದೆ. ಇಲ್ಲಿ ಉಭಯ ತಂಡಗಳಿಗೂ ಇನ್ನೊಂದು ಪಂದ್ಯ ಇರುವುದರಿಂದ ಪ್ಲೇಆಫ್ ಪ್ರವೇಶಿಸಲು ಉತ್ತಮ ಅವಕಾಶವಿದೆ.
ಅಂದರೆ ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ತಂಡ ಭರ್ಜರಿ ಜಯ ಸಾಧಿಸಿದರೆ 8 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಳ್ಳಬಹುದು.
ಒಂದು ವೇಳೆ ಯುಪಿ ವಾರಿಯರ್ಸ್ ತನ್ನ ಮುಂದಿನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಸೋತರೆ, ಆರ್ಸಿಬಿ ತಂಡದ ಪ್ಲೇಆಫ್ ಹಾದಿ ಮತ್ತಷ್ಟು ಸುಗಮವಾಗಲಿದೆ. ಆದರೆ ಈ ಗೆಲುವಿನೊಂದಿಗೆ ಗುಜರಾತ್ ಜೈಂಟ್ಸ್ ಕೂಡ ಪ್ಲೇಆಫ್ ರೇಸ್ಗೆ ಬರಲಿದೆ.
ಈ 2 ಪಂದ್ಯಗಳಲ್ಲಿ ಗುಜರಾತ್ ಜೈಂಟ್ಸ್ ತಂಡವು ಬೃಹತ್ ಮೊತ್ತದ ಗೆಲುವು ದಾಖಲಿಸಿದರೆ ನೆಟ್ ರನ್ ರೇಟ್ನಲ್ಲಿ ಆರ್ಸಿಬಿ ತಂಡವನ್ನು ಹಿಂದಿಕ್ಕಿ ಪ್ಲೇಆಫ್ ಪ್ರವೇಶಿಸಬಹುದು. ಪ್ರಸ್ತುತ ಗುಜರಾತ್ ಜೈಂಟ್ಸ್ ತಂಡದ ನೆಟ್ ರನ್ ರೇಟ್ +1.111 ಇರುವುದರಿಂದ ಮುಂದಿನ 2 ಪಂದ್ಯಗಳಲ್ಲೂ ಭಾರೀ ಅಂತರದ ಗೆಲುವು ದಾಖಲಿಸಿಕೊಳ್ಳಬೇಕು.
ಆದರೆ ಇತ್ತ ಆರ್ಸಿಬಿ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಬೃಹತ್ ಅಂತರದಿಂದ ಜಯ ಸಾಧಿಸಿದರೆ 8 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವುದನ್ನು ಎದುರು ನೋಡಬಹುದು. ಇದೇ ವೇಳೆ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ ಸೋತರೆ, ಆರ್ಸಿಬಿ ತಂಡದ ಪ್ಲೇಆಫ್ ಪ್ರವೇಶ ಬಹುತೇಕ ಖಚಿತವಾಗಲಿದೆ.
ಇದನ್ನೂ ಓದಿ: IPL 2024: RCB… ಇದು ಕಿಂಗ್ ಕೊಹ್ಲಿಯ ಕಿಂಗ್ಡಮ್
ಹೀಗಾಗಿ ಇಂದು ನಡೆಯಲಿರುವ ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಣ ಪಂದ್ಯವನ್ನು ಆರ್ಸಿಬಿ ಎದುರು ನೋಡುತ್ತಿದೆ. ಈ ಫಲಿತಾಂಶದ ಬಳಿಕ ಪ್ಲೇಆಫ್ ಪ್ರವೇಶಿಸಲು ಆರ್ಸಿಬಿ ತಂಡಕ್ಕೆ ಬೇಕಿರುವ ನೆಟ್ ರನ್ ರೇಟ್ನ ಸ್ಪಷ್ಟ ಲೆಕ್ಕಾಚಾರ ಸಿಗಲಿದೆ.
RCB ಪ್ಲೇಆಫ್ ಪ್ರವೇಶಿಸಲು ಇರುವ ಸುಲಭ ಹಾದಿ:
- ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಬೇಕು.
- ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಗೆಲ್ಲಬೇಕು.
- ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಬೇಕು.
