WTC ಫೈನಲ್ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?
ICC World Test Championship 2025 final: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಒಟ್ಟು 9 ತಂಡಗಳಿವೆ. 2023 ರಿಂದ 2025 ರವರೆಗೆ ಆಡಿದ ಟೆಸ್ಟ್ ಪಂದ್ಯಗಳಿಗೆ ಅನುಗುಣವಾಗಿ ಇಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಈ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಡೇಟ್ ಫಿಕ್ಸ್ ಆಗಿದೆ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ಜೂನ್ 11 ರಿಂದ ಶುರುವಾಗಲಿರುವ ಈ ಪಂದ್ಯಕ್ಕಾಗಿ ಇನ್ನೂ ಕೂಡ ತಂಡಗಳು ಫೈನಲ್ ಆಗಿಲ್ಲ. ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿರುವ ಅಗ್ರ 5 ತಂಡಗಳಿಗೂ ಫೈನಲ್ಗೆ ಪ್ರವೇಶಿಸಲು ಉತ್ತಮ ಅವಕಾಶವಿದೆ. ಅದರಲ್ಲೂ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾ ಫೈನಲ್ಗೇರುವ ಸಾಧ್ಯತೆ ಹೆಚ್ಚಿದೆ. ಇಲ್ಲಿ ಯಾವ ತಂಡ ಎಷ್ಟು ಪಂದ್ಯಗಳನ್ನು ಗೆದ್ದರೆ ಫೈನಲ್ಗೆ ಪ್ರವೇಶಿಸಬಹುದು ಎಂದು ನೋಡುವುದಾದರೆ…
ಭಾರತ: ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ 9 ಪಂದ್ಯಗಳಲ್ಲಿ 6 ಮ್ಯಾಚ್ ಗೆದ್ದಿದೆ. ಇನ್ನು 1 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಈ ಮೂಲಕ ಒಟ್ಟು 68.52% ಗೆಲುವಿನ ಶೇಕಡಾವಾರು ಹೊಂದಿರುವ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನುಳಿದ 10 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವು ಎಲ್ಲಾ ಪಂದ್ಯಗಳನ್ನು ಗೆದ್ದರೆ ಗರಿಷ್ಠ 85.08 ಅಂಕಗಳನ್ನು ಪಡೆಯಲಿದೆ. ಈ ಮೂಲಕ ನೇರವಾಗಿ ಫೈನಲ್ಗೆ ಪ್ರವೇಶಿಸಬಹುದು. ಒಂದು ವೇಳೆ ಬಾಂಗ್ಲಾದೇಶ್ ಹಾಗೂ ನ್ಯೂಝಿಲೆಂಡ್ ವಿರುದ್ಧದ ಸರಣಿಗಳನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡರೆ ಫೈನಲ್ ಆಡುವುದು ಬಹುತೇಕ ಖಚಿತವಾಗಲಿದೆ.
ಆಸ್ಟ್ರೇಲಿಯಾ: ಆಸೀಸ್ ಪಡೆಯು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಈವರೆಗೆ 12 ಪಂದ್ಯಗಳನ್ನಾಡಿದ್ದು, ಈ ವೇಳೆ 8 ಜಯ ಹಾಗೂ 1 ಡ್ರಾನೊಂದಿಗೆ 62.5% ಗೆಲುವಿನ ಶೇಕಡಾವಾರು ಹೊಂದಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಮತ್ತು ನ್ಯೂಝಿಲೆಂಡ್ ವಿರುದ್ಧದ ಸರಣಿಗಳು ನಿರ್ಣಾಯಕ. ಈ ಸರಣಿಗಳಲ್ಲಿ ಭಾರೀ ಅಂತರದಿಂದ ಗೆದ್ದರೆ ಆಸ್ಟ್ರೇಲಿಯಾ ಕೂಡ ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ.
ನ್ಯೂಝಿಲೆಂಡ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ನ್ಯೂಝಿಲೆಂಡ್ ತಂಡವು ಮೂರನೇ ಸ್ಥಾನದಲ್ಲಿದೆ. ಈವರೆಗೆ ಆಡಿರುವ 6 ಪಂದ್ಯಗಳಲ್ಲಿ 3 ಜಯದೊಂದಿಗೆ ನ್ಯೂಝಿಲೆಂಡ್ 50% ಗೆಲುವಿನ ಶೇಕಡಾವಾರು ಹೊಂದಿದೆ. ಇನ್ನು ಕಿವೀಸ್ ಪಡೆಯು ಶ್ರೀಲಂಕಾ, ಇಂಗ್ಲೆಂಡ್ ಹಾಗೂ ಭಾರತದ ವಿರುದ್ಧದ ಸರಣಿಗಳನ್ನು ಗೆದ್ದುಕೊಂಡರೆ ಫೈನಲ್ಗೆ ಪ್ರವೇಶಿಸಬಹುದು.
ಬಾಂಗ್ಲಾದೇಶ್: ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಸರಣಿ ಗೆಲುವಿನೊಂದಿಗೆ ಬಾಂಗ್ಲಾದೇಶ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಈವರೆಗೆ 6 ಪಂದ್ಯಗಳನ್ನಾಡಿರುವ ಬಾಂಗ್ಲಾದೇಶ್ ತಂಡವು 3 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ 45.83% ಗೆಲುವಿನ ಶೇಕಡಾವಾರು ಹೊಂದಿರುವ ಬಾಂಗ್ಲಾದೇಶ್ ತಂಡಕ್ಕೆ ಮುಂಬರುವ ಟೀಮ್ ಇಂಡಿಯಾ ವಿರುದ್ಧದ ಸರಣಿ ಬಹಳ ಮುಖ್ಯ. ಏಕೆಂದರೆ ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳಲ್ಲಿ ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಅವಕಾಶ ಬಾಂಗ್ಲಾದೇಶ್ ತಂಡದ ಮುಂದಿದೆ. ಈ ಮೂಲಕ ಫೈನಲ್ಗೆ ಅರ್ಹತೆಗಿಟ್ಟಿಸಿಕೊಳ್ಳಬಹುದು.
ಇದನ್ನೂ ಓದಿ: ಕೇವಲ 10 ರನ್ಗೆ ಆಲೌಟ್: 5 ಎಸೆತಗಳಲ್ಲಿ ಮುಗಿದ ಟಿ20 ಪಂದ್ಯ
ಇಂಗ್ಲೆಂಡ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಈಗಾಗಲೇ 15 ಪಂದ್ಯಗಳನ್ನಾಡಿರುವ ಇಂಗ್ಲೆಂಡ್ ತಂಡವು 8 ಜಯ ಹಾಗೂ 1 ಡ್ರಾ ಸಾಧಿಸಿದೆ. ಇದೀಗ 45.0% ಗೆಲುವಿನ ಶೇಕಡಾವಾರು ಹೊಂದಿರುವ ಇಂಗ್ಲೆಂಡ್ ತಂಡಕ್ಕೆ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ವಿರುದ್ಧದ ಸರಣಿಗಳು ನಿರ್ಣಾಯಕ. ಈ ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿಕೊಂಡರೆ ಫೈನಲ್ಗೇರುವ ಚಾನ್ಸ್ ಸಿಗಲಿದೆ. ಇಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡವು ಮುಂಬರುವ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಇಂಗ್ಲೆಂಡ್ ತಂಡವು ಫೈನಲ್ ರೇಸ್ನಿಂದ ಹೊರಬೀಳಲಿದೆ. ಹೀಗಾಗಿ ಇಂಗ್ಲೆಂಡ್ ಪಾಲಿಗೆ ಮುಂದಿನ ಪಂದ್ಯಗಳ ಜೊತೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಪ್ರದರ್ಶನ ಕೂಡ ನಿರ್ಣಾಯಕ.