Paris Olympics: 7 ತಿಂಗಳ ಗರ್ಭಿಣಿಯ ಸಾಹಸಗಾಥೆ; ಒಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಈಜಿಪ್ಟ್ ಫೆನ್ಸರ್ ನಾಡಾ ಹಫೀಜ್
Fencer Nada Hafez: ತಾಯ್ತನವೆಂಬುದು ಸವಾಲಿನ ಸಂಗತಿಯಲ್ಲ, ಅದೊಂದು ಸಹಜ ಪ್ರಕ್ರಿಯೆ ಎಂದು ಸಾಬೀತುಪಡಿಸಿರುವ ಈಜಿಪ್ಟ್ನ ಫೆನ್ಸರ್ ನಾಡಾ ಹಫೀಜ್ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 7 ತಿಂಗಳ ಗರ್ಭವನ್ನು ಹೊತ್ತು ಸ್ಪರ್ಧಿಸಿದ್ದಾರೆ. ಹೀಗಾಗಿ, 3ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ನಾಡಾ ಹಫೀಜ್ ಅವರಿಗೆ ಈ ಬಾರಿಯ ಸ್ಪರ್ಧೆ ಬಹಳ ವಿಶೇಷವಾದುದು.
ಒಲಿಂಪಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಬೇಕೆಂಬುದು ಎಲ್ಲ ಕ್ರೀಡಾಪಟುಗಳ ಕನಸು. ಆ ಒಂದು ಅವಕಾಶಕ್ಕಾಗಿ ತಪಸ್ಸಿನಂತೆ ಅಭ್ಯಾಸ ಮಾಡುವವರಿದ್ದಾರೆ. ಆದರೆ, ಈಜಿಪ್ಟ್ನ ಫೆನ್ಸರ್ ನಾಡಾ ಹಫೀಜ್ ಗರ್ಭಿಣಿಯಾಗಿದ್ದರಿಂದ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕರೂ ತನ್ನಿಂದ ಅದು ಸಾಧ್ಯವೇ? ಎಂಬ ಗೊಂದಲದಲ್ಲಿದ್ದರು. ಆದರೆ, ಒಲಿಂಪಿಕ್ಸ್ ವೇದಿಕೆಯಲ್ಲೇ ತಾಯ್ತನವನ್ನು ಸಂಭ್ರಮಿಸಬೇಕು, ಈ ಮೂಲಕ ಎಲ್ಲ ಮಹಿಳೆಯರಿಗೆ ಒಂದು ಸಂದೇಶ ನೀಡಬೇಕೆಂದು ಅವರು 7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ, 16ನೇ ಸುತ್ತಿನಲ್ಲಿ ಸೋಲನ್ನು ಕಂಡಿದ್ದಾರೆ. ಈ ಮೂಲಕ ಪ್ರೆಗ್ನೆನ್ಸಿ ಅಥವಾ ಬಾಣಂತನವೆಂಬುದು ಹೆಣ್ಣಿನ ಸಾಧನೆಗೆ ಯಾವ ಅಡ್ಡಿಯನ್ನೂ ಉಂಟುಮಾಡದು ಎಂಬುದನ್ನು ಅವರು ಸಾಧಿಸಿ ತೋರಿಸಿದ್ದಾರೆ.
ವಿಶೇಷವೆಂದರೆ, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಾಡಾ ಹಫೀಜ್ ತಾನು 7 ತಿಂಗಳ ಗರ್ಭಿಣಿಯಾಗಿದ್ದುಕೊಂಡೇ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿಕೊಳ್ಳುವವರೆಗೂ ಬಹಳಷ್ಟು ಜನರಿಗೆ ಈ ವಿಷಯವೇ ಗೊತ್ತಿರಲಿಲ್ಲ. ಆಕೆಯ ಧೈರ್ಯಕ್ಕೆ ಹಾಗೂ ಬದ್ಧತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈಜಿಪ್ಟಿನ ಫೆನ್ಸರ್ ನಡಾ ಹಫೀಜ್ ಅವರು 7 ತಿಂಗಳ ಗರ್ಭಿಣಿಯಾಗಿದ್ದಾಗ ಸ್ಪರ್ಧಿಸುವ ಮೂಲಕ ಪ್ಯಾರಿಸ್ 2024 ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 26ನೇ ವಯಸ್ಸಿನ ನಾಡಾ ಹಫೀಜ್ ತನ್ನ ಮೂರನೇ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ವೈಯಕ್ತಿಕ ಸೇಬರ್ ಸ್ಪರ್ಧೆಯಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದಿದ್ದರು. 26 ವರ್ಷದ ಹಫೀಜ್ ಅವರು ಮಹಿಳೆಯರ ವೈಯಕ್ತಿಕ ಫೆನ್ಸಿಂಗ್ ಸ್ಪರ್ಧೆಯಲ್ಲಿ USAಯ ಎಲಿಜಬೆತ್ ಟಾರ್ಟಕೋವ್ಸ್ಕಿ ವಿರುದ್ಧ ತಮ್ಮ ಮೊದಲ ಪಂದ್ಯವನ್ನು 15-13 ರಲ್ಲಿ ಗೆದ್ದರು. ನಂತರ ಅವರು 16ನೇ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಜಿಯೋನ್ ಹಯಾಂಗ್ ಅವರನ್ನು ಎದುರಿಸಿದರು. ಆದರೆ ಅಂತಿಮವಾಗಿ ಸೋಲನ್ನು ಅನುಭವಿಸಿದರು.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್: ಭಾರತದ ಆಟಗಾರರಿಗೆ ಮನೆ ಊಟ ಹೊತ್ತೊಯ್ದ ಚಿರಂಜೀವಿ ಕುಟುಂಬ
ತಮ್ಮ ಇನ್ಸ್ಟಾಗ್ರಾಂ ಪೇಜಿನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಾಡಾ ಹಫೀಜ್, ಪ್ಯಾರಿಸ್ 2024 ಕ್ರೀಡಾ ತಾಯಂದಿರ ಸಾಧನೆಗಳನ್ನು ಎತ್ತಿ ತೋರಿಸಿದೆ. ಮಕ್ಕಳೊಂದಿಗೆ ಹೆಚ್ಚಿನ ಮಹಿಳೆಯರು ಹಿಂದೆಂದಿಗಿಂತಲೂ ಹೆಚ್ಚು ಭಾಗವಹಿಸುತ್ತಿದ್ದಾರೆ ಮತ್ತು ಒಲಿಂಪಿಕ್ ಗ್ರಾಮದಲ್ಲಿ ನರ್ಸರಿಯನ್ನು ಹೊಂದಿದ್ದಾರೆ. ಏಳು ತಿಂಗಳ ಗರ್ಭಿಣಿಯಾಗಿದ್ದಾಗ ಪ್ಯಾರಿಸ್ 2024 ಒಲಿಂಪಿಕ್ಸ್‌ನಲ್ಲಿ ಈವೆಂಟ್‌ನ 16ನೇ ಸುತ್ತಿನಲ್ಲಿ ಆಡಿದ್ದೇನೆ ಎಂದು ಈಜಿಪ್ಟಿನ ಫೆನ್ಸರ್ ನಾಡಾ ಹಫೀಜ್ ಇನ್ಸ್ಟಾಗ್ರಾಂ ಮೂಲಕ ಘೋಷಿಸಿದ್ದಾರೆ.
View this post on Instagram
ನಾಡಾ ಹಫೀಜ್ ಭಾವುಕ ಪೋಸ್ಟ್:
“ಒಲಿಂಪಿಕ್ಸ್ ಸ್ಟೇಜ್ ಮೇಲೆ ಇಬ್ಬರು ಆಟಗಾರರು ಎದುರಾಳಿಯಾಗಿ ಆಡುತ್ತಿದ್ದಾರೆ ಎಂದು ನಿಮಗೆ ಕಾಣಿಸಬಹುದು. ಆದರೆ, ನಿಜವಾಗಿ ನಾವು ಮೂವರಿದ್ದೇವೆ! ಅದು ನಾನು, ನನ್ನ ಪ್ರತಿಸ್ಪರ್ಧಿ ಮತ್ತು ನಾನು ನಮ್ಮ ಜಗತ್ತಿಗೆ ಇನ್ನೂ ಕಾಲಿಡಬೇಕಿರುವ ನನ್ನ ಪುಟ್ಟ ಮಗು! ನಾನೀಗ 7 ತಿಂಗಳ ಗರ್ಭಿಣಿ. ನನ್ನ ಮಗು ಮತ್ತು ನಾನು ದೈಹಿಕ ಮತ್ತು ಭಾವನಾತ್ಮಕ ಎರಡೂ ರೀತಿಯಲ್ಲಿ ಎಲ್ಲವನ್ನೂ ಶೇರ್ ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ, ಈ ಬಾರಿಯ ಸ್ಪರ್ಧೆ ನನಗೆ ಬಹಳ ವಿಶೇಷವಾದುದು. ನಾನು ಈ ಬಾರಿ ಪುಟ್ಟ ಒಲಿಂಪಿಯನ್ನನ್ನು ನನ್ನೊಳಗೆ ಹೊತ್ತು ವೇದಿಕೆ ಏರುತ್ತಿದ್ದೇನೆ” ಎಂದು ನಾಡಾ ಹಫೀಜ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Manu Bhaker: ಒಲಿಂಪಿಕ್ಸ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮನು ಭಾಕರ್
ಈಗಾಗಲೇ ಮೂರು ಬಾರಿ ಒಲಿಂಪಿಯನ್ ಆಗಿರುವ ಮತ್ತು 2016ರ ರಿಯೊ ಒಲಿಂಪಿಕ್ಸ್ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈಜಿಪ್ಟ್ ಭಾಗವಾಗಿರುವ ನಾಡಾ ಹಫೀಜ್‌ಗೆ ಪ್ಯಾರಿಸ್ ಒಲಿಂಪಿಕ್ಸ್ ಗೇಮ್ಸ್ ಎಂದಿಗಿಂತಲೂ ಹೆಚ್ಚು ವಿಶೇಷವಾಗಿರುವುದೇ ಈ ಕಾರಣಕ್ಕೆ.
ನಾಡಾ ಹಫೀಜ್ 2016ರಲ್ಲಿ ರಿಯೊ ಒಲಿಂಪಿಕ್ಸ್ ಮತ್ತು 2021ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಮೂರು ಬಾರಿ ಒಲಿಂಪಿಯನ್ ಮತ್ತು ವೈದ್ಯಕೀಯದಲ್ಲಿ ಪದವಿ ಹೊಂದಿರುವ ಮಾಜಿ ಜಿಮ್ನಾಸ್ಟ್ ಹಫೀಜ್, 2019ರ ಆಫ್ರಿಕನ್ ಗೇಮ್ಸ್‌ನಲ್ಲಿ ವೈಯಕ್ತಿಕ ಮತ್ತು ತಂಡದ ಸೇಬರ್ ಸ್ಪರ್ಧೆಗಳಲ್ಲಿ ಚಿನ್ನವನ್ನು ಪಡೆದಿದ್ದರು. ಈ ಬಾರಿ ಅಂತಿಮ ಸುತ್ತಿನಲ್ಲಿ ಅವರು ಸೋತಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Wed, 31 July 24