ವಿಶ್ವ ಚೆಸ್ ಚಾಂಪಿಯನ್‌ಶಿಪ್ ಚಾಲೆಂಜರ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಸಿಂಗಾಪುರದಲ್ಲಿ ನಡೆಯಲಿರುವ ಚದುರಂಗಾಟದಲ್ಲಿ ಭಾರತದ ಡಿ ಗುಕೇಶ್ ಹಾಗೂ ಚೀನಾದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಮುಖಾಮುಖಿಯಾಗಲಿದ್ದಾರೆ. ಟೊರೆಂಟೊದಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ ಚಾಂಪಿಯನ್ ಅಗಿ ಹೊರಹೊಮ್ಮಿದ್ದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಚೆಸ್ ಚತುರ ಎನಿಸಿಕೊಂಡಿದ್ದರು.
ಅಲ್ಲದೆ ಕ್ಯಾಂಡಿಡೇಟ್ ಚೆಸ್ ಸ್ಪರ್ಧೆಯನ್ನು ಗೆದ್ದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೂ ಗುಕೇಶ್ ಪಾತ್ರರಾಗಿದ್ದರು. ಇದಕ್ಕೂ ಮುನ್ನ 2014 ರಲ್ಲಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಈ ಸಾಧನೆ ಮಾಡಿದ್ದರು. ಈ ಸಾಧನೆಯನ್ನು ಸರಿಗಟ್ಟುವ ಮೂಲಕ ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಚಾಲೆಂಜರ್ ಪಂದ್ಯವಾಡಲು ಅವಕಾಶ ಪಡೆದಿದ್ದರು.
ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದರೆ ಈ ಪ್ರಶಸ್ತಿ ಪಡೆದ ವಿಶ್ವದ ಅತ್ಯಂತ ಕಿರಿಯ ಚೆಸ್ ಚತುರನೆಂಬ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಲಿದ್ದಾರೆ. ಸದ್ಯ ಈ ದಾಖಲೆ ರಷ್ಯಾದ ಚೆಸ್ ಚಾಣಕ್ಯ ಎನಿಸಿಕೊಂಡಿರುವ ಗ್ಯಾರಿ ಕಾಸ್ಪರೋವ್ ಹೆಸರಿನಲ್ಲಿದೆ.
1984 ರಲ್ಲಿ ವಿಶ್ವ ಚಾಂಪಿಯನ್ ಅನಾಟೊಲಿ ಕಾರ್ಪೋವ್ ವಿರುದ್ಧ ಗೆಲ್ಲುವ ಮೂಲಕ 22 ವಯಸ್ಸಿನ ಗ್ಯಾರಿ ಕಾಸ್ಪರೋವ್ ಈ ದಾಖಲೆ ನಿರ್ಮಿಸಿದ್ದರು. ಇದೀಗ 17ನೇ ವಯಸ್ಸಿನಲ್ಲೇ ವಿಶ್ವ ಚಾಂಪಿಯನ್ಗೆ ಸವಾಲೆಸೆಯುವ ಅವಕಾಶ ಪಡೆದಿರುವ ಡಿ ಗುಕೇಶ್ ಡಿಂಗ್ ಲಿರೆನ್ ವಿರುದ್ಧ ಗೆದ್ದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ.
ವಿಶ್ವ ಚೆಸ್ ಚಾಂಪಿಯನ್‌ಶಿಪ್ ನವೆಂಬರ್ 25 ರಿಂದ ಡಿಸೆಂಬರ್ 12 ರವರೆಗೆ ನಡೆಯಲಿದೆ. 14 ದಿನಗಳ ಕಾಲ ನಡೆಯಲಿರುವ ಈ ಚಾಂಪಿಯನ್ಶಿಪ್ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಎಲ್ಲಾ ಗೇಮ್ಗಳು ಸ್ಥಳೀಯ ಸಮಯ 17:00 ಕ್ಕೆ (2:30 pm IST) ಪ್ರಾರಂಭವಾಗುತ್ತವೆ.
ಇದನ್ನೂ ಓದಿ: ಟ್ರೋಫಿ ಗೆದ್ದು ರೋಹಿತ್ ಶರ್ಮಾ ಸ್ಟೈಲ್ನಲ್ಲಿ ಸಂಭ್ರಮಿಸಿದ ಭಾರತೀಯ ಚೆಸ್ ಚತುರರು
ಡಿ ಗುಕೇಶ್ ಮತ್ತು ಡಿಂಗ್ ಲಿರೆನ್ ನಡುವಿನ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯವನ್ನು FIDE ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಿಸಬಹುದು. ಹಾಗೆಯೇ twitch.tv ವೆಬ್ಸೈಟ್ನಲ್ಲೂ ಲೈವ್ ಸ್ಟೀಮಿಂಗ್ ಇರಲಿದೆ.