Aamir Khan: ಸೌರವ್ ಗಂಗೂಲಿ ಮನೆಯ ಗಾರ್ಡ್​ಗಳು ಆಮೀರ್ ಖಾನ್​ರನ್ನು ಒಳ ಬಿಡದೇ ಹೊರ ಕಳಿಸಿದ ಕತೆ ನಿಮಗೆ ಗೊತ್ತಾ?

2009ರಲ್ಲಿ ಆಮೀರ್ ಖಾನ್ 3 ಈಡಿಯಟ್ಸ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಪ್ರಾಂಕ್ ಮಾಡುವುದಕ್ಕೆಂದೇ ದಾದಾ ಸೌರವ್ ಮನೆಗೆ ತೆರಳಿದ್ದಾರೆ. ಆಗ ಅಲ್ಲಿನ ಗಾರ್ಡ್​ಗಳು ಅವರಿಗೆ ಹೇಗೆ ಪ್ರತಿಕ್ರಿಯಿಸಿದರು? ಕೊನೆಗೆ ಏನಾಯಿತು? ಕುತೂಹಲಕರ ಘಟನೆಯ ಮಾಹಿತಿ ಇಲ್ಲಿದೆ.

Aamir Khan: ಸೌರವ್ ಗಂಗೂಲಿ ಮನೆಯ ಗಾರ್ಡ್​ಗಳು ಆಮೀರ್ ಖಾನ್​ರನ್ನು ಒಳ ಬಿಡದೇ ಹೊರ ಕಳಿಸಿದ ಕತೆ ನಿಮಗೆ ಗೊತ್ತಾ?
ಸೌರವ್ ಗಂಗೂಲಿ ಮತ್ತು ಆಮೀರ್ ಖಾನ್
Follow us
TV9 Web
| Updated By: shivaprasad.hs

Updated on:Jul 10, 2021 | 11:32 AM

ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ಆಮೀರ್ ಖಾನ್ ತಮ್ಮ ಚಿತ್ರಗಳನ್ನು ವಿಭಿನ್ನ ರೀತಿಯಿಂದ ಪ್ರಮೋಟ್ ಮಾಡುವುದಕ್ಕೆ ಪ್ರಸಿದ್ಧರು. ಅನಾಮಿಕನಂತೆಯೋ, ವಿಭಿನ್ನ ವೇಷಭೂಷಣಗಳನ್ನು ಧರಿಸಿಯೋ ಅಥವಾ ಪ್ರಸಿದ್ಧ ವ್ಯಕ್ತಿಗಳನ್ನು ಅನುಕರಿಸಿಯೋ ಅವರು ಭಿನ್ನವಾಗಿ ತಮ್ಮ ಚಿತ್ರಗಳನ್ನು ಪ್ರಮೋಟ್ ಮಾಡುತ್ತಾರೆ ಮತ್ತು ಬಹುತೇಕ ಅದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಒಮ್ಮೆ ಅವರ ಪ್ರಾಂಕ್ ಯಶಸ್ವಿಯಾಗದ ಕತೆ ನಿಮಗೆ ತಿಳಿದಿದೆಯೇ? ಅದರ ವಿಡಿಯೋವಂತೂ ಮಜವಾಗಿದೆ. ಏನಿದು ಕತೆ ಎಂದು ತಿಳಿಯಲು ಮುಂದೆ ಓದಿ.

2009ರಲ್ಲಿ ಆಮೀರ್ ಖಾನ್ ತಮ್ಮ 3 ಈಡಿಯಟ್ಸ್ ಚಿತ್ರವನ್ನು ಪ್ರಮೋಟ್ ಮಾಡುತ್ತಿದ್ದ ಸಂದರ್ಭ. ಅವರು ಕ್ರಿಕೆಟ್​ನ ದಾದಾ ಸೌರವ್ ಗಂಗೂಲಿಯವರ ಬಂಗಾಳದ ನಿವಾಸಕ್ಕೆ ಹೋಗಿದ್ದಾರೆ. ಆಗ ಅಲ್ಲಿನ ಗಾರ್ಡ್​ಗಳು, ದಾದಾ ಇಲ್ಲಿಲ್ಲ, ಹೋಗು ಎಂದು ಹೊರ ಕಳಿಸಿದ್ದಾರೆ. ಈ ವಿಡಿಯೋ ಸದ್ಯ ಆನ್​ಲೈನ್​ನಲ್ಲಿ ಮತ್ತೆ ಟ್ರೆಂಡ್ ಆಗುತ್ತಿದ್ದು, ಅಭಿಮಾನಿಗಳು ಅಂತಹ ದೊಡ್ಡ ನಟ ಆಮೀರ್​ ಖಾನ್​ಗೇ ದಾದಾ ಮನೆಗೆ ಪ್ರವೇಶ ಸಿಗಲಿಲ್ಲವೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಹಾ, ಇಲ್ಲೊಂದು ಟ್ವಿಸ್ಟ್ ಇದೆ. ನೀವೆಲ್ಲಾ ಅಂದುಕೊಂಡಂತೆ ಆಮೀರ್ ಖಾನ್ ತಮ್ಮ ನಿಜ ವೇಷವನ್ನು ಧರಿಸಿ ದಾದಾ ಮನೆಗೆ ಹೋದದ್ದಲ್ಲ. ಬದಲಾಗಿ ಅವರು ಅನಾಮಿಕನಂತೆ, ಒಬ್ಬ ಸಾಮಾನ್ಯನ ವೇಷ ಧರಿಸಿ ಹೋಗಿದ್ದಾರೆ. ಅಲ್ಲಿನ ಗಾರ್ಡ್​ಗಳಿಗೆ ತಾನೊಬ್ಬ ಫ್ಯಾನ್ ಎಂದೂ, ದಾದಾ ಇಲ್ಲಿಲ್ಲವೇ? ನಾನು ಅವರೊಂದಿಗೆ ಚಿತ್ರ ತೆಗೆದುಕೊಳ್ಳಬೇಕಿತ್ತು ಎಂದು ಕೇಳುತ್ತಾರೆ. ಇವನ್ಯಾರೋ ಮತ್ತೊಬ್ಬ ಅಭಿಮಾನಿಯಿರಬೇಕು ಎಂದು ಭಾವಿಸಿದ ಅಲ್ಲಿನ ಗಾರ್ಡ್​ಗಳು ದಾದಾ ಇಲ್ಲಿಲ್ಲ, ರಣಜಿ ಆಡಲು ಹೋಗಿದ್ದಾರೆ ಎಂದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಆಮೀರ್ ದಾದಾರನ್ನು ಭೇಟಿಯಾಗಲೇ ಬೇಕು ಎಂದು ದುಂಬಾಲು ಬಿದ್ದಿದ್ದಾರೆ. ಅಷ್ಟಾದರೂ ಯಾರೂ ಸಮ್ಮತಿಸುವುದಿಲ್ಲ. ಪಕ್ಕದ ಮನೆಯವರೊಂದಿಗೆ, ದಾದಾ ಇಲ್ಲವೇ ಎಂದು ಮತ್ತೊಮ್ಮೆ ಕೇಳಿ ತಿಳಿದ ಆಮೀರ್ ಅಲ್ಲಿಂದ ಮರಳುತ್ತಾರೆ. ತಮಾಷೆಯ ಸಂಗತಿಯೆಂದರೆ ಇಷ್ಟೆಲ್ಲಾ ನಾಟಕ ನಡೆದರೂ ಅಲ್ಲಿದ್ದ ಯಾರಿಗೂ ಬಂದಿರುವುದು ಆಮೀರ್ ಎಂದು ತಿಳಿಯುವುದೇ ಇಲ್ಲ!

ಪ್ರಾಂಕ್ ಫೇಲಾದದ್ದು ನಿಜ. ಆದರೂ ಅಭಿಮಾನಿಗಳು ಕಣ್ತುಂಬಿಕೊಳ್ಳುವ ಮತ್ತೊಂದು ವಿಡಿಯೋವು ಇದೆ. ಅದರಲ್ಲಿ, ಸೌರವ್ ಅವರ ಬಂಗಾಳದ ನಿವಾಸದೊಳಗೆ ಆಮೀರ್ ತಮ್ಮ ಪತ್ನಿಯಾಗಿದ್ದ ಕಿರಣ್ ರಾವ್ ​ಅವರೊಂದಿಗೆ, ಸೌರವ್ ದಂಪತಿ ಔತಣ ಕೂಟದಲ್ಲಿ ಭಾಗಿಯಾಗುವ ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಎಲ್ಲರೂ ಆಮೀರ್ ಖಾನ್​ರ ಪ್ರಾಂಕ್ ಫೇಲಾದ ಕತೆಯನ್ನು ಕೇಳಿ ನಗುತ್ತಾರೆ. ಔತಣ ಕೂಟದ ನಂತರ ಆಮೀರ್ ದಾದಾಗೆ ಗೆಳೆತನದ ಸಂಕೇತವಾಗಿ ಒಂದು ರಿಂಗ್ ಅನ್ನು ನೀಡಿ, 3 ಈಡಿಯಟ್ಸ್ ಚಿತ್ರದ ಪ್ರೀಮಿಯರ್​ಗೆ ಸ್ವಾಗತಿಸುತ್ತಾರೆ.

ಆ ಎರಡೂ ವಿಡಿಯೋ ಇಲ್ಲಿ ಲಭ್ಯವಿದೆ:

ಇತ್ತೀಚೆಗಷ್ಟೇ ಆಮೀರ್ ಖಾನ್ ಮತ್ತು ಕಿರಣ್ ರಾವ್ ಬೇರೆಯಾಗುವ ಸುದ್ದಿಯನ್ನು ಅವರು ಹಂಚಿಕಕೊಂಡಿದ್ದರು. ಹೀಗಿದ್ದೂ ಪುತ್ರ ಆಜಾದ್​ನನ್ನು ಜೊತೆಯಾಗಿ ಬೆಳೆಸುವ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ.

ಇದನ್ನೂ ಓದಿ: ಸಚಿನ್- ಗಂಗೂಲಿಯೊಂದಿಗೆ ಕ್ರಿಕೆಟ್​ ಆಡುತ್ತಿದ್ದ ಕ್ರಿಕೆಟಿಗ ಈಗ ಜೀವನ ನಿರ್ವಾಹಣೆಗಾಗಿ ರಸ್ತೆ ಬದಿಯಲ್ಲಿ ಟೀ ಮಾರುತ್ತಿದ್ದಾನೆ! ಯಾರವನು?

ಇದನ್ನೂ ಓದಿ: ಸಿಕ್ಸ್ ಲೈನ್ ಬಳಿ ಸೂಪರ್ ಮ್ಯಾನ್​ನಂತೆ ಹಾರಿದ ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ: ರೋಚಕ ವಿಡಿಯೋ ಇಲ್ಲಿದೆ

(Guards threw Aamir khan from Sourav Ganguly’s Bengal’s house when his prank was failed)

Published On - 10:35 am, Sat, 10 July 21