National Games 2022: 36 ಸ್ಪರ್ಧೆ, 7 ಸಾವಿರ ಕ್ರೀಡಾಪಟುಗಳು; ನ್ಯಾಷನಲ್ ಗೇಮ್ಸ್​ಗೆ ಇಂದು ಪ್ರಧಾನಿ ಮೋದಿ ಚಾಲನೆ

National Games 2022: ಈ ಬಾರಿ 7 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಎಲ್ಲಾ 36 ಕ್ರೀಡೆಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಒಲಿಂಪಿಯನ್‌ಗಳು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

National Games 2022: 36 ಸ್ಪರ್ಧೆ, 7 ಸಾವಿರ ಕ್ರೀಡಾಪಟುಗಳು; ನ್ಯಾಷನಲ್ ಗೇಮ್ಸ್​ಗೆ ಇಂದು ಪ್ರಧಾನಿ ಮೋದಿ ಚಾಲನೆ
Updated By: ಪೃಥ್ವಿಶಂಕರ

Updated on: Sep 29, 2022 | 3:15 PM

ಇನ್ನು ಕೆಲವೇ ಗಂಟೆಗಳಲ್ಲಿ ದೇಶದಲ್ಲಿ ಮತ್ತೊಂದು ಮೆಗಾ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ. 36ನೇ ರಾಷ್ಟ್ರೀಯ ಕ್ರೀಡಾಕೂಟ (36th National Games) ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಈ ಕ್ರೀಡಾ ಸ್ಪರ್ಧೆಗಳನ್ನು ಗುಜರಾತ್‌ನ ಅಹಮದಾಬಾದ್, ಗಾಂಧಿನಗರ, ಸೂರತ್, ವಡೋದರಾ, ರಾಜ್‌ಕೋಟ್ ಮತ್ತು ಭಾವನಗರ ನಗರಗಳಲ್ಲಿ ಆಯೋಜಿಸಲಾಗುತ್ತದೆ. ಸೈಕ್ಲಿಂಗ್ ಸ್ಪರ್ಧೆಗಳು ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯಲಿವೆ. ಈ ಸ್ಪರ್ಧೆಗಳು ಸುಮಾರು ಏಳು ವರ್ಷಗಳ ನಂತರ ನಡೆಯುತ್ತಿದ್ದು, 2015ರಲ್ಲಿ ಕೇರಳದಲ್ಲಿ ಕೊನೆಯ ಬಾರಿಗೆ ಈ ಕ್ರೀಡಾಕೂಟ ನಡೆದಿತ್ತು.

ಈ ಬಾರಿ 7 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಎಲ್ಲಾ 36 ಕ್ರೀಡೆಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಒಲಿಂಪಿಯನ್‌ಗಳು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಗುಜರಾತ್ ಸರ್ಕಾರವು ಮೊದಲ ಬಾರಿಗೆ ಈ ಮೆಗಾ ಈವೆಂಟ್ ಅನ್ನು ಆಯೋಜಿಸುತ್ತಿರುವುದರಿಂದ ಭಾರಿ ವ್ಯವಸ್ಥೆಗಳನ್ನು ಮಾಡಿದೆ.

ಕೊರೊನಾದಿಂದಾಗಿ ರಾಷ್ಟ್ರೀಯ ಕ್ರೀಡಾಕೂಟ ರದ್ದಾಗಿತ್ತು

2015 ರ ನಂತರ, ಗೋವಾದಲ್ಲಿ ಅಕ್ಟೋಬರ್ 20 ರಿಂದ ನವೆಂಬರ್ 4, 2020 ರವರೆಗೆ ರಾಷ್ಟ್ರೀಯ ಕ್ರೀಡಾಕೂಟಗಳು ನಡೆಯಬೇಕಿತ್ತು. ಆದರೆ ಮೇ 2020 ರಂದು ಕೋವಿಡ್ ಕಾರಣ, ಅದನ್ನು ಮೊದಲು ಮುಂದೂಡಲಾಯಿತು, ನಂತರ ಅದನ್ನು ರದ್ದುಗೊಳಿಸಲಾಯಿತು. 2015 ರಂದು ಕೇರಳದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಸರ್ವಿಸಸ್ ತಂಡ ಅಗ್ರಸ್ಥಾನ ಪಡೆದುಕೊಂಡಿತ್ತು. ಸರ್ವಿಸಸ್ ತಂಎ 91 ಚಿನ್ನ, 33 ಬೆಳ್ಳಿ ಮತ್ತು 35 ಕಂಚು ಸೇರಿದಂತೆ ಒಟ್ಟು 159 ಪದಕಗಳನ್ನು ಗೆದ್ದರೆ, ಆತಿಥೇಯ ಕೇರಳ 54 ಚಿನ್ನ, 48 ಬೆಳ್ಳಿ ಮತ್ತು 60 ಕಂಚುಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿತ್ತು.

ರಾಷ್ಟ್ರೀಯ ಕ್ರೀಡಾಕೂಟ ಗುರುವಾರ ಅಧಿಕೃತವಾಗಿ ಆರಂಭವಾಗಲಿದ್ದರೂ, ಕೆಲವು ಈವೆಂಟ್​ಗಳಲ್ಲಿ ಈಗಾಗಲೇ ಸ್ಪರ್ಧೆಗಳು ಪ್ರಾರಂಭವಾಗಿವೆ. ಇದೇ ತಿಂಗಳ 30 ರಂದು ಚೀನಾದಲ್ಲಿ ಟೇಬಲ್ ಟೆನಿಸ್ ವಿಶ್ವ ಚಾಂಪಿಯನ್ ಷಿಪ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಬಾರಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೊದಲೇ ಸ್ಪರ್ಧೆಗಳು ಆರಂಭವಾಗಿವೆ. ಅಲ್ಲದೆ ಇದೇ 20ರಂದು ಆರಂಭವಾದ ಟೇಬಲ್ ಟೆನ್ನಿಸ್ ಸ್ಪರ್ಧೆಗಳು 24ರಂದು ಈಗಾಗಲೇ ಮುಕ್ತಾಯಗೊಂಡಿವೆ. ಜೊತೆಗೆ ಕಬಡ್ಡಿ, ಲಾನ್ ಬೌಲ್, ನೆಟ್‌ಬಾಲ್, ರಗ್ಬಿ ಮತ್ತಿತರ ಸ್ಪರ್ಧೆಗಳಲ್ಲೂ ಸಹ ಈಗಾಗಲೇ ಆರಂಭವಾಗಿವೆ. ಈ ಬಾರಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತೀಯ ಸಾಂಪ್ರದಾಯಿಕ ಕ್ರೀಡೆಗಳಾದ ಖೋಖೋ, ಯೋಗಾಸನ, ಮಲ್ಲಕಂಬ ಸ್ಪರ್ಧೆಗಳು ಪಾದಾರ್ಪಣೆ ಮಾಡುತ್ತಿವೆ. ಇಂದಿನಿಂದ ಆರಂಭವಾಗಲಿರುವ ಈ ಕ್ರೀಡಾ ಸ್ಪರ್ಧೆಗಳು ಮುಂದಿನ ತಿಂಗಳು 12ರವರೆಗೆ ನಡೆಯಲಿವೆ.

ನೀರಜ್, ಸಿಂಧು ಮತ್ತು ಬಜರಂಗ್ ಪುನಿಯಾ ಗೈರು

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಮತ್ತು ಬಾಕ್ಸರ್ ಲವ್ಲಿನಾ ಈ ಗೇಮ್‌ಗಳಲ್ಲಿ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಈಜುಪಟು ಶ್ರೀಹರಿ ನಟರಾಜನ್ ಜತೆಗೆ ದ್ಯುತಿಚಂದ್, ಹಿಮಾದಾಸ್, ಮುರಳಿಶಂಕರ್, ಅಣ್ಣೂರಾಣಿ, ಲಕ್ಷ್ಯಸೇನ್, ಎಚ್.ಎಸ್.ಪ್ರಣಯ್ ಅವರ ಮೇಲೂ ಎಲ್ಲರ ಕಣ್ಣು ನೆಟ್ಟಿದೆ. ಆದಾಗ್ಯೂ, ಒಲಿಂಪಿಯನ್‌ಗಳಾದ ನೀರಜ್ ಚೋಪ್ರಾ, ಪಿವಿ ಸಿಂಧು ಮತ್ತು ಬಜರಂಗ್ ಪುನಿಯಾ ಅವರು ಗಾಯದಿಂದ ಚೇತರಿಸಿಕೊಳ್ಳದ ಕಾರಣ ಈ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ.

ಈ ಪಂದ್ಯಗಳನ್ನು ಎಲ್ಲಿ ವೀಕ್ಷಿಸಬಹುದು

ಇಂದು ಪ್ರಧಾನಿ ಮೋದಿಯವರು ಸಂಜೆ 4.30 ಕ್ಕೆ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಿದ್ದು, ಡಿಡಿ ಸ್ಪೋರ್ಟ್ಸ್ ರಾಷ್ಟ್ರೀಯ ಕ್ರೀಡೆಗಳನ್ನು ನೇರ ಪ್ರಸಾರ ಮಾಡುತ್ತದೆ. ಜೊತೆಗೆ ಪ್ರಸಾರ ಭಾರತಿ ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮತ್ತು ಮುಖ್ಯಾಂಶಗಳನ್ನು ಪ್ರಸಾರ ಮಾಡಲಾಗುತ್ತದೆ.

Published On - 3:08 pm, Thu, 29 September 22