Hockey World Cup 2023: ಹಾಲಿ ಚಾಂಪಿಯನ್ನರಿಗೆ ಸೋಲುಣಿಸಿ ಹಾಕಿ ವಿಶ್ವಕಪ್ ಗೆದ್ದ ಜರ್ಮನಿ
Germany vs Belgium: 48ನೇ ನಿಮಿಷದಲ್ಲಿ ಮ್ಯಾಟ್ ಅದ್ಭುತ ಪಾಸ್ವೊಂದನ್ನು ಗೋಲಾಗಿ ಪರಿವರ್ತಿಸಿ ಜರ್ಮನಿಗೆ ಮುನ್ನಡೆ ತಂದುಕೊಟ್ಟರು. ಆದರೆ ಅಂತಿಮ ಕ್ಷಣಗಳಲ್ಲಿ ತೀವ್ರ ಪೈಪೋಟಿ ತೋರಿದ ಬೆಲ್ಜಿಯಂ ಪರ 59ನೇ ನಿಮಿಷದಲ್ಲಿ ಟಾಮ್ ಬೂನ್ ಗೋಲುಗಳಿಸಿದರು.
Hockey World Cup 2023: ಭುವನೇಶ್ವರ್ನಲ್ಲಿ ನಡೆದ ಹಾಕಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡಕ್ಕೆ (Germany vs Belgium) ಸೋಲುಣಿಸಿ ಜರ್ಮನಿ ಹೊಸ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಅಂತಿಮ ಹಣಾಹಣಿಯು ನಿಗದಿತ ಸಮಯದಲ್ಲಿ 3-3 ಅಂತರದಿಂದ ಸಮಬಲಗೊಂಡಿತ್ತು. ಹೀಗಾಗಿ ಚಾಂಪಿಯನ್ ತಂಡವನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್ ನೀಡಲಾಯಿತು. ಇದಕ್ಕೂ ಮುನ್ನ ನಡೆದ ಪೂರ್ಣ ಪಂದ್ಯದ 10ನೇ ನಿಮಿಷದಲ್ಲಿ ಬೆಲ್ಜಿಯಂ ತಂಡದ ಔಬೆಲ್ ಮೊದಲ ಗೋಲುಗಳಿಸಿದ್ದರು. ಇದರ ಬೆನ್ನಲ್ಲೇ ತಂಗೈ ಕೌಸಿನ್ಸ್ 11ನೇ ನಿಮಿಷದಲ್ಲಿ 2ನೇ ಗೋಲು ದಾಖಲಿಸಿದರು.
ಇತ್ತ 2-0 ಅಂತರದಿಂದ ಹಿಂದುಳಿದ ಜರ್ಮನಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಪರಿಣಾಮ 29ನೇ ನಿಮಿಷದಲ್ಲಿ ನಿಕ್ಲಾಸ್ ಸ್ಟಿಕ್ನಿಂದ ಮೊದಲು ಗೋಲು ದಾಖಲಾಯಿತು. ಇದಾದ ಬಳಿಕ 41ನೇ ನಿಮಿಷದಲ್ಲಿ ಗೊಂಝಲೊ 2ನೇ ಗೋಲು ಬಾರಿಸಿದರು. 2-2 ರಿಂದ ಸಮಬಲ ಸಾಧಿಸಿದ ಬಳಿಕ ಉಭಯ ತಂಡಗಳಿಂದ ಉತ್ತಮ ಪೈಪೋಟಿ ಕಂಡು ಬಂತು.
48ನೇ ನಿಮಿಷದಲ್ಲಿ ಮ್ಯಾಟ್ ಅದ್ಭುತ ಪಾಸ್ವೊಂದನ್ನು ಗೋಲಾಗಿ ಪರಿವರ್ತಿಸಿ ಜರ್ಮನಿಗೆ ಮುನ್ನಡೆ ತಂದುಕೊಟ್ಟರು. ಆದರೆ ಅಂತಿಮ ಕ್ಷಣಗಳಲ್ಲಿ ತೀವ್ರ ಪೈಪೋಟಿ ತೋರಿದ ಬೆಲ್ಜಿಯಂ ಪರ 59ನೇ ನಿಮಿಷದಲ್ಲಿ ಟಾಮ್ ಬೂನ್ ಗೋಲುಗಳಿಸಿದರು. ಇದರೊಂದಿಗೆ ಪಂದ್ಯವು ಟೈನಲ್ಲಿ ಅಂತ್ಯಗೊಂಡಿತು. ಹೀಗಾಗಿ ಪಂದ್ಯವು ಪೆನಾಲ್ಟಿ ಶೂಟೌಟ್ನತ್ತ ಸಾಗಿತು.
ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
ಪೆನಾಲ್ಟಿ ಶೂಟೌಟ್ನಲ್ಲಿ ಮೊದಲ 5 ಅವಕಾಶದಲ್ಲೂ ಉಭಯ ತಂಡಗಳು 3-3 ಗೋಲುಗಳಿಸಿ ಸಮಬಲ ಸಾಧಿಸಿತು. ಹೀಗಾಗಿ ಸಡನ್ ಡೆತ್ ಶೂಟೌಟ್ ಮೊರೆ ಹೋಗಲಾಯಿತು. ಈ ಶೂಟೌಟ್ನಲ್ಲಿ ಬೆಲ್ಜಿಯಂ ಗೋಲುಗಳಿಸಿತು. ಇತ್ತ ಜರ್ಮನಿ ಕೂಡ ಗೋಲು ಬಾರಿಸಿತು. ಆದರೆ 2ನೇ ಅವಕಾಶದಲ್ಲಿ ಬೆಲ್ಜಿಯಂ ಅವಕಾಶ ಕೈಚೆಲ್ಲಿದರೆ, ಜರ್ಮನಿ ಗೋಲಿಸಿ ದಾಖಲಿಸಿತು. ಈ ಮೂಲಕ ಹಾಲಿ ಚಾಂಪಿಯನ್ ಬೆಲ್ಜಿಯಂ ಅನ್ನು 5-4 ಅಂತರದಿಂದ ಸೋಲಿಸಿ ಜರ್ಮನಿ ತಂಡವು ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತು.
They did it!
The COMEBACK KINGS of #HWC2023 are crowned WORLD CHAMPIONS ?
Insane scenes after the win #HockeyInvites #HockeyEquals #Germany #WorldCup @DHB_hockey pic.twitter.com/TSD1RGPkKo
— International Hockey Federation (@FIH_Hockey) January 29, 2023
2006 ರಲ್ಲಿ ಹಾಕಿ ವಿಶ್ವಕಪ್ ಗೆದ್ದಿದ್ದ ಜರ್ಮನಿ ತಂಡವು ಇದೀಗ ಬರೋಬ್ಬರಿ 17 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಇನ್ನು ರನ್ನರ್ ಅಪ್ ಪ್ರಶಸ್ತಿಯು ಬೆಲ್ಜಿಯಂ ಪಾಲಾದರೆ, ಮೂರನೇ ಸ್ಥಾನವನ್ನು ನೆದರ್ಲ್ಯಾಂಡ್ಸ್ ತಂಡ ಪಡೆದುಕೊಂಡಿದೆ. ಹಾಗೆಯೇ ಭಾರತ ತಂಡವು 9ನೇ ಸ್ಥಾನದೊಂದಿಗೆ ಈ ಬಾರಿ ಹಾಕಿ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿತ್ತು.