1992… ಸ್ಪೇನ್ನ ರಾಜಧಾನಿ ಬಾರ್ಸಿಲೋನಾ ವಿಶ್ವ ಕ್ರೀಡಾಕೂಟಕ್ಕೆ ಅಣಿಯಾಗಿತ್ತು. ಆದರೆ 1988ರ ಸಿಯೋಲ್ ಒಲಿಂಪಿಕ್ಸ್ ಮುಗಿದ ಬಳಿಕ ವಿಶ್ವದಲ್ಲಿ ಹಲವು ಬದಲಾವಣೆಗಳಾಗಿದ್ದವು. ಸೌತ್ ಆಫ್ರಿಕಾದಲ್ಲಿ ವರ್ಣಭೇದ ನೀತಿ ಕೊನೆಗೊಂಡಿತ್ತು. ಬರ್ಲಿನ್ ಗೋಡೆಯ ಪತನದೊಂದಿಗೆ ಪಶ್ಚಿಮ ಮತ್ತು ಪೂರ್ವ ಜರ್ಮನಿಗಳು ಒಂದಾದವು. ಹಾಗೆಯೇ ಉತ್ತರ ಮತ್ತು ದಕ್ಷಿಣ ಯೆಮೆನ್ ಜೊತೆಯಾದವು. ಮತ್ತೊಂದೆಡೆ ಸೋವಿಯತ್ ಒಕ್ಕೂಟ 15 ದೇಶಗಳಾಗಿ ವಿಭಜನೆಯಾಯಿತು. ಹೀಗೆ 4 ವರ್ಷಗಳಲ್ಲಿ ಕಂಡು ಬಂದ ಹಲವು ಬದಲಾವಣೆಗಳೊಂದಿಗೆ 1992ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್ ರಂಗೇರಿತು.
ಬಾರ್ಸಿಲೋನಾದಲ್ಲಿ ನಡೆದ ಈ ಒಲಿಂಪಿಕ್ ಕ್ರೀಡಾಕೂಟದಲ್ಲಿ ವಿಶ್ವದ 169 ದೇಶಗಳು ಭಾಗವಹಿಸಿದ್ದವು. ಅದರಲ್ಲಿ ಭಾರತವೂ ಒಂದು. 1988 ರ ಸಿಯೋಲ್ ಒಲಿಂಪಿಕ್ಸ್ನಲ್ಲಿ ಖಾಲಿ ಕೈಯಲ್ಲಿ ಹಿಂತಿರುಗಿದ್ದ ಭಾರತೀಯರು ಈ ಬಾರಿ ಹೊಸ ಭರವಸೆ ಮೂಡಿಸಿದ್ದರು.
ಭಾರತದ 46 ಪುರುಷ ಮತ್ತು 6 ಮಹಿಳಾ ಸ್ಪರ್ಧಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಪದಕ ಮಾತ್ರ ದೊರೆತಿರಲಿಲ್ಲ. ಅಲ್ಲದೆ ಸಿಯೋಲ್ ಒಲಿಂಪಿಕ್ಸ್ನಂತೆ ಈ ಬಾರಿ ಕೂಡ ಭಾರತೀಯರು ಖಾಲಿ ಕೈಯಲ್ಲೇ ಹಿಂತಿರುಗಬೇಕಾಯಿತು.
ಬಾರ್ಸಿಲೋನಾ ಒಲಿಂಪಿಕ್ಸ್ ಅನೇಕ ಹೊಸ ಕ್ರೀಡೆಗಳ ಸೇರ್ಪಡೆಯಾಗಿತ್ತು. ಇದರಲ್ಲಿ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಬೇಸ್ ಬಾಲ್ ಮತ್ತು ಮಹಿಳಾ ಜೂಡೋ ಪ್ರಮುಖವಾಗಿದ್ದವು. ಅತ್ತ ಅದಾಗಲೇ ಬಾಸ್ಕೆಟ್ಬಾಲ್ನಲ್ಲಿ ಪಾರುಪತ್ಯ ಹೊಂದಿದ್ದ ಅಮೆರಿಕವು ಸೂಪರ್ ಸ್ಟಾರ್ ಆಟಗಾರರಾದ ಮೈಕೆಲ್ ಜೋರ್ಡಾನ್ ಮತ್ತು ಲ್ಯಾರಿ ಬರ್ಡ್ ಅವರನ್ನೊಳಗೊಂಡ ತಂಡವನ್ನು ಕಣಕ್ಕಿಳಿಸಿ ಚಿನ್ನದ ಪದಕ ಗೆದ್ದುಕೊಂಡಿತು.
ಬಾರ್ಸಿಲೋನಾ ಒಲಿಂಪಿಕ್ಸ್ನ ಅತ್ಯಂತ ಕುತೂಹಲಕಾರಿ ವಿಷಯ ಎಂದರೆ ಜರ್ಮನಿ ಪುರುಷರ ಹಾಕಿ ತಂಡ ಚಿನ್ನದ ಪದಕ ಗೆದ್ದಿದ್ದು. ಇದರಲ್ಲೇನು ವಿಶೇಷ ಅಂದರೆ ಈ ತಂಡದಲ್ಲಿ ಆಂಡ್ರಿಯಾಸ್ ಕೆಲ್ಲರ್ ಇದ್ದರು.
ಇತ್ತ ಜರ್ಮನಿ ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಒಲಿಂಪಿಕ್ಸ್ನಲ್ಲಿ ಬಂಗಾರದ ಪದಕ ಗೆದ್ದ ಒಂದೇ ಕುಟುಂಬದ ಮೂರನೇ ತಲೆಮಾರು ಎಂಬ ಹಿರಿಮೆಗೆ ಆಂಡ್ರಿಯಾಸ್ ಕೆಲ್ಲರ್ ಪಾತ್ರರಾದರು. ಇದಕ್ಕೂ ಮುನ್ನ ಅವರ ತಂದೆ ಕಾರ್ಸ್ಟನ್ 1972 ರ ಒಲಿಂಪಿಕ್ಸ್ನಲ್ಲಿ ಹಾಕಿಯಲ್ಲಿ ಚಿನ್ನವನ್ನು ಗೆದ್ದಿದ್ದರು. ಅವರ ಅಜ್ಜ ಇರ್ವಿನ್ 1936 ರಲ್ಲಿ ಹಾಕಿಯಲ್ಲಿ ಪದಕ ಗೆದ್ದ ಕುಟುಂಬದಿಂದ ಮೊದಲಿಗರು. ಈ ಮೂಲಕ ಒಲಿಂಪಿಕ್ಸ್ನಲ್ಲಿ ಒಂದೇ ಕುಟುಂಬದ ಮೂವರು ಹಾಕಿಯಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದರು.
ಬಾರ್ಸಿಲೋನಾ ಒಲಿಂಪಿಕ್ಸ್ನ ಪರುಷರ ರೋಯಿಂಗ್ನ ಫೈನಲ್ ಪಂದ್ಯದ ಫಲಿತಾಂಶ ಮೂಡಿಬಂದಿದ್ದು 30 ಸೆಂಟಿ ಮೀಟರ್ ಅಂತರಗಳ ಮೂಲಕ ಎಂಬುದು ವಿಶೇಷ. ಅಂದರೆ ಅಂತಿಮ ಸುತ್ತಿನಲ್ಲಿ ರೊಮೇನಿಯಾ ಪುರುಷ ರೋಯಿಂಗ್ ತಂಡವನ್ನು 30 ಸೆಂಟಿ ಮೀಟರ್ಗಳ ಅಂತರದಲ್ಲಿ ಹಿಂದಿಕ್ಕಿ ಕೆನಡಾ ತಂಡ ಚಿನ್ನದ ಪದಕ ಗೆದ್ದುಕೊಂಡಿತು.
ಬಾರ್ಸಿಲೋನಾ ಒಲಿಂಪಿಕ್ಸ್ನಲ್ಲಿ ಅತ್ಯಧಿಕ ಪದಕ ಗೆದ್ದಿದ್ದು ಏಕೀಕೃತ ತಂಡ. ಸೋವಿಯತ್ ಕ್ರಾಂತಿಯ ಕಾರಣ ಹಲವು ದೇಶಗಳ ಆಟಗಾರರು ಒಲಿಂಪಿಕ್ಸ್ ಒಕ್ಕೂಟದ ಯುನೈಫೈಡ್ ಟೀಮ್ ಅಡಿಯಲ್ಲಿ ಕಣಕ್ಕಿಳಿದಿದ್ದರು. ಅದರಂತೆ ಏಕೀಕೃತ ತಂಡವು 45 ಚಿನ್ನ, 38 ಬೆಳ್ಳಿ ಮತ್ತು 29 ಕಂಚಿನೊಂದಿಗೆ ಒಟ್ಟು 112 ಪದಕಗಳನ್ನು ಗೆದ್ದುಕೊಂಡಿತು.
ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತೀಯರ ವೇಳಾಪಟ್ಟಿ ಇಲ್ಲಿದೆ
ಇನ್ನು 37 ಚಿನ್ನ, 34 ಬೆಳ್ಳಿ ಮತ್ತು 34 ಕಂಚಿನೊಂದಿಗೆ108 ಪದಕಗಳನ್ನು ಗೆದ್ದ ಅಮೆರಿಕ ಎರಡನೇ ಸ್ಥಾನ ಅಲಂಕರಿಸಿತು. ಹಾಗೆಯೇ ಜರ್ಮನಿ, ಚೀನಾ ಮತ್ತು ಕ್ಯೂಬಾ ಟಾಪ್ 5 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದವು.