ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್; ದಾಖಲೆಯ 24 ಪದಕ ಗೆದ್ದ ಭಾರತಕ್ಕೆ 2ನೇ ಸ್ಥಾನ
Asian Athletics Championships 2025: ದಕ್ಷಿಣ ಕೊರಿಯಾದ ಗುಮಿಯಲ್ಲಿ ನಡೆದ 26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದೆ. 8 ಚಿನ್ನ, 10 ಬೆಳ್ಳಿ ಮತ್ತು 6 ಕಂಚಿನ ಪದಕಗಳೊಂದಿಗೆ ಒಟ್ಟು 24 ಪದಕಗಳನ್ನು ಗೆದ್ದು 2017ರ ನಂತರದ ಅತ್ಯುತ್ತಮ ಸಾಧನೆ ಮಾಡಿದೆ. ಗುಲ್ವೀರ್ ಸಿಂಗ್, ಅವಿನಾಶ್ ಸೇಬಲ್, ಜ್ಯೋತಿ ಯಾರಜಿ ಮುಂತಾದ ಆಟಗಾರರ ಅದ್ಭುತ ಪ್ರದರ್ಶನ ಭಾರತವನ್ನು ಪದಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿಸಿದೆ.

ದಕ್ಷಿಣ ಕೊರಿಯಾದಲ್ಲಿ ನಡೆದ 26 ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (Asian Athletics Championships 2025) ಭಾರತ ಉತ್ತಮ ಪ್ರದರ್ಶನ ನೀಡಿದೆ. ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಒಟ್ಟು 24 ಪದಕಗಳನ್ನು ಗೆದ್ದಿದ್ದು, ಇದು 2017 ರ ನಂತರದ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಆಟಗಾರರು 8 ಚಿನ್ನ, 10 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗೆದ್ದಿದ್ದು, ಪದಕಗಳ ಪಟ್ಟಿಯಲ್ಲಿ ಭಾರತವು ಚೀನಾದ ನಂತರ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಚೀನಾ 19 ಚಿನ್ನದ ಪದಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಭಾರತದ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಎಲ್ಲಾ ಆಟಗಾರರನ್ನು ಅಭಿನಂದಿಸಿದ್ದಾರೆ.
ಅಭಿನಂದಿಸಿದ ಪ್ರಧಾನಿ ಮೋದಿ
ಪ್ರಧಾನಿಯವರು ಟ್ವೀಟ್ ಮಾಡುವ ಮೂಲಕ ಎಲ್ಲಾ ಆಟಗಾರರನ್ನು ಅಭಿನಂದಿಸಿದರು. ‘ದಕ್ಷಿಣ ಕೊರಿಯಾದಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಟಗಾರರ ಅತ್ಯುತ್ತಮ ಪ್ರದರ್ಶನದ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ಚಾಂಪಿಯನ್‌ಶಿಪ್‌ನಾದ್ಯಂತ ಪ್ರತಿಯೊಬ್ಬ ಕ್ರೀಡಾಪಟುವಿನ ಕಠಿಣ ಪರಿಶ್ರಮ ಸ್ಪಷ್ಟವಾಗಿ ಗೋಚರಿಸಿತು. ಕ್ರೀಡಾಪಟುಗಳ ಭವಿಷ್ಯಕ್ಕಾಗಿ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.
India is proud of our contingent for their stupendous performance at the recently held 2025 Asian Athletics Championships in South Korea. The hardwork and determination of every athlete were clearly visible throughout the tournament. Best wishes to the athletes for their future… pic.twitter.com/VB8VXIFy7L
— Narendra Modi (@narendramodi) June 2, 2025
ಭಾರತದ ಪ್ರದರ್ಶನ ಹೇಗಿತ್ತು?
ಜೂನ್ 1 ರಂದು ಗುಮಿಯಲ್ಲಿ ಮುಕ್ತಾಯಗೊಂಡ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಇದರಲ್ಲಿ ಗುಲ್ವೀರ್ ಸಿಂಗ್ ಪುರುಷರ 5,000 ಮೀಟರ್ ಮತ್ತು 10,000 ಮೀಟರ್ ಓಟದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದರು. ಇದಲ್ಲದೆ, ಅವರು 5,000 ಮೀಟರ್ ಓಟದಲ್ಲಿ ಹೊಸ ದಾಖಲೆಯನ್ನು ಮಾಡಿದರು. ಅವಿನಾಶ್ ಸೇಬಲ್ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಚಿನ್ನದ ಪದಕ ಗೆದ್ದರೆ, ಜ್ಯೋತಿ ಯಾರಜಿ 100 ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದರು.
ಇತಿಹಾಸ ಸೃಷ್ಟಿಸಿದ ರೂಪಾಲ್ ಚೌಧರಿ
ಮಿಶ್ರ ರಿಲೇ ಮತ್ತು ಮಹಿಳೆಯರ 4 × 400 ಮೀಟರ್ ಓಟದಲ್ಲಿ ಭಾರತ ಚಿನ್ನದ ಪದಕ ಗೆದ್ದುಕೊಂಡಿತು. ಇದೇ ವೇಳೆ ರೂಪಲ್ ಚೌಧರಿ ಮೂರು ಪದಕಗಳನ್ನು ಗೆಲ್ಲುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಅವರು ಮಹಿಳೆಯರ ರಿಲೇಯಲ್ಲಿ ಚಿನ್ನ, ಮಹಿಳೆಯರ 400 ಮೀಟರ್ ಓಟದಲ್ಲಿ ಬೆಳ್ಳಿ ಮತ್ತು ಮಿಶ್ರ ರಿಲೇಯಲ್ಲಿ ಕಂಚು ಗೆದ್ದರು.
ಫೀಲ್ಡ್ ಈವೆಂಟ್‌ಗಳಲ್ಲಿ ಪ್ರಾಬಲ್ಯ
ಫೀಲ್ಡ್ ಈವೆಂಟ್‌ನಲ್ಲಿ ಭಾರತದ ಪ್ರದರ್ಶನ ಅತ್ಯುತ್ತಮವಾಗಿತ್ತು. ಮಹಿಳೆಯರ ಹೈಜಂಪ್‌ನಲ್ಲಿ ಪೂಜಾ ಸಿಂಗ್ ಚಿನ್ನದ ಪದಕ ಗೆದ್ದರೆ, ನಂದಿನಿ ಅಗಸರ ಹೆಪ್ಟಾಥ್ಲಾನ್ನಲ್ಲಿ ಚಿನ್ನ ಗೆದ್ದರು. ಪುರುಷರ 200 ಮೀಟರ್ ಸ್ಪ್ರಿಂಟ್‌ನಲ್ಲಿ ಅನಿಮೇಶ್ ಕುಜುರ್ ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸುವ ಮೂಲಕ ಕಂಚಿನ ಪದಕ ಗೆದ್ದರೆ, ಮಹಿಳೆಯರ 3,000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್ ಚೌಧರಿ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಮೂಲಕ ಬೆಳ್ಳಿ ಪದಕ ಗೆದ್ದರು. ಇವರಲ್ಲದೆ, ಸಚಿನ್ ಯಾದವ್ (ಜಾವೆಲಿನ್ ಥ್ರೋ), ಪ್ರವೀಣ್ ಚಿತ್ರವೆಲ್ (ಟ್ರಿಪಲ್ ಜಂಪ್) ಮತ್ತು ತೇಜಸ್ವಿನ್ ಶಂಕರ್ (ಡೆಕಥ್ಲಾನ್) ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದರು.
ಜಪಾನ್ ಹಿಂದಿಕ್ಕಿದ ಭಾರತ
ಈ ಚಾಂಪಿಯನ್‌ಶಿಪ್‌ನಲ್ಲಿ, ಚೀನಾ ಒಟ್ಟು 32 ಪದಕಗಳಲ್ಲಿ 19 ಚಿನ್ನದ ಪದಕಗಳೊಂದಿಗೆ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡರೆ, ಭಾರತವು 8 ಚಿನ್ನದ ಪದಕಗಳೊಂದಿಗೆ ಜಪಾನ್ ಅನ್ನು ಹಿಂದಿಕ್ಕಿತು. ಜಪಾನ್ ಒಟ್ಟು 28 ಪದಕಗಳನ್ನು ಗೆದ್ದಿತ್ತಾದರೂ ಕೇವಲ 5 ಚಿನ್ನವನ್ನು ಗೆಲ್ಲಲು ಸಾಧ್ಯವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:05 pm, Mon, 2 June 25
