AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VHT 2025-26: ಶತಕದ ಬಳಿಕ ಸೊನ್ನೆ; ಎರಡನೇ ಪಂದ್ಯದಲ್ಲಿ ಮುಗ್ಗರಿಸಿದ ರೋಹಿತ್ ಶರ್ಮಾ

Rohit Sharma's Vijay Hazare Trophy: ವಿಜಯ್ ಹಜಾರೆ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಅದ್ಭುತ ಆರಂಭ ಕಂಡರು. ಮೊದಲ ಪಂದ್ಯದಲ್ಲಿ 155 ರನ್ ಗಳಿಸಿ ತಂಡಕ್ಕೆ ಆಧಾರವಾದರು. ಆದರೆ, ಎರಡನೇ ಪಂದ್ಯದಲ್ಲಿ ಉತ್ತರಾಖಂಡ್ ವಿರುದ್ಧ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆಗಿ ನಿರಾಸೆ ಮೂಡಿಸಿದರು. ಅಭಿಮಾನಿಗಳು ಅವರ ಅಬ್ಬರದ ಬ್ಯಾಟಿಂಗ್ ನೋಡಲು ಕಾದು ಕುಳಿತಿದ್ದರೂ, ರೋಹಿತ್ ಶರ್ಮಾ ಖಾತೆ ತೆರೆಯದೆ ನಿರ್ಗಮಿಸಿದರು. ಆದರೂ ಮುಂಬೈ ತಂಡ 331 ರನ್ ಗಳಿಸಿತ್ತು.

VHT 2025-26: ಶತಕದ ಬಳಿಕ ಸೊನ್ನೆ; ಎರಡನೇ ಪಂದ್ಯದಲ್ಲಿ ಮುಗ್ಗರಿಸಿದ ರೋಹಿತ್ ಶರ್ಮಾ
Rohit Sharma
ಪೃಥ್ವಿಶಂಕರ
|

Updated on:Dec 26, 2025 | 4:26 PM

Share

7 ವರ್ಷಗಳ ಬಳಿಕ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಕಣಕ್ಕಿಳಿದಿರುವ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿದ್ದರು. ಸಿಕ್ಕಿಂ ವಿರುದ್ಧದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ರೋಹಿತ್ 155 ರನ್ ಬಾರಿಸಿದ್ದರು. ಪರಿಣಾಮವಾಗಿ, ಎರಡನೇ ಪಂದ್ಯದಲ್ಲಿ ರೋಹಿತ್ ಅವರಿಂದ ಇದೇ ರೀತಿಯ ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಆದರೆ ಎರಡನೇ ಪಂದ್ಯದಲ್ಲಿ ನಿರಾಸೆ ಮೂಡಿಸಿದ ರೋಹಿತ್, ಉತ್ತರಾಖಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಔಟಾದರು. ಅಂದರೆ ಈ ಪಂದ್ಯದಲ್ಲಿ ರೋಹಿತ್​ ಖಾತೆ ತೆರೆಯದೆಯೇ ಮೊದಲ ಎಸೆತದಲ್ಲೇ ಔಟಾದರು.

ಡಿಸೆಂಬರ್ 24 ರಂದು ಜೈಪುರದಲ್ಲಿ ಪ್ರಾರಂಭವಾದ ಈ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 62 ಎಸೆತಗಳಲ್ಲಿ ಶತಕ ಸಿಡಿಸಿ, 94 ಎಸೆತಗಳಲ್ಲಿ 155 ರನ್ ಸಿಡಿಸಿದ್ದರು. ರೋಹಿತ್ ತಮ್ಮ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳನ್ನು ಬಾರಿಸಿದ್ದರು. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವನ್ನು ಸುಮಾರು 20,000 ಪ್ರೇಕ್ಷಕರು ವೀಕ್ಷಿಸಿದ್ದರು.

ಸೊನ್ನೆ ಸುತ್ತಿದ ರೋಹಿತ್ ಶರ್ಮಾ

ಹೀಗಾಗಿ ಎರಡನೇ ಪಂದ್ಯದಲ್ಲಿಯೂ ರೋಹಿತ್ ಅಬ್ಬರಿಸುವುದನ್ನು ನೋಡಲು ಸಾವಿರಾರು ಅಭಿಮಾನಿಗಳು ಸವಾಯಿ ಮಾನ್ಸಿಂಗ್ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಅದರಂತೆ ಮುಂಬೈ ತಂಡ ಕೂಡ ಮೊದಲು ಬ್ಯಾಟಿಂಗ್ ಆರಂಭಿಸಿತು. ಆದರೆ ರೋಹಿತ್ ಬ್ಯಾಟಿಂಗ್‌ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳ ಸಂತೋಷ ಕೇವಲ ಆರು ಎಸೆತಗಳಲ್ಲಿ ಮಾಯವಾಯಿತು. ಇನ್ನಿಂಗ್ಸ್‌ನ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಸ್ಟ್ರೈಕ್‌ಗೆ ಬಂದ ರೋಹಿತ್ ಶರ್ಮಾ, ತಮ್ಮ ಮೊದಲ ಎಸೆತದಲ್ಲೇ ಖಾತೆ ತೆರೆಯದೆಯೇ ವಿಕೆಟ್ ಒಪ್ಪಿಸಿದರು. ಉತ್ತರಾಖಂಡ ವೇಗಿ ದೇವೇಂದ್ರ ಬೋರಾ ಅವರ ಎಸೆತದಲ್ಲಿ ರೋಹಿತ್ ಕ್ಯಾಚಿತ್ತು ನಿರ್ಗಮಿಸಿದರು.

ರೋಹಿತ್, ಕೊಹ್ಲಿಯ ಶತಕಗಳ ಅಬ್ಬರ; ಬಿಸಿಸಿಐ ವಿರುದ್ಧ ಸಿಡಿದೆದ್ದ ಅಭಿಮಾನಿಗಳು

331 ರನ್ ಕಲೆಹಾಕಿದ ಮುಂಬೈ

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಫಲರಾದರೂ, ತಂಡದ ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಇದರ ಪರಿಣಾಮದಿಂದಾಗಿ ಮುಂಬೈ ತಂಡ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 331 ರನ್ ಕಲೆಹಾಕಿತು. ತಂಡದ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹಾರ್ದಿಕ್ ತಮೋರೆ 93 ರನ್​ಗಳ ಇನ್ನಿಂಗ್ಸ್ ಆಡಿದರೆ, ಸಹೋದರರಾದ ಸರ್ಫರಾಜ್ ಖಾನ್ ಹಾಗೂ ಮುಶೀರ್ ಖಾನ್ ತಲಾ 55 ರನ್​​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಶಮ್ಸ್ ಮುಲಾನಿ ಕೂಡ 48 ರನ್​ಗಳ ಕಾಣಿಕೆ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Fri, 26 December 25