ಭಾರತೀಯ ಕುಸ್ತಿ ಫೆಡರೇಶನ್ (wrestling federation of india) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಶೋಷಣೆ ಆರೋಪ ಹೊರಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಎರಡು ದಿನಗಳಿಂದ ಧರಣಿ ಕುಳಿತಿದ್ದ ಭಾರತದ ಖ್ಯಾತ ಕುಸ್ತಿಪಟುಗಳು ಧರಣಿಯನ್ನು ಅಂತ್ಯಗೊಳಿಸಿದ್ದಾರೆ. ತಮ್ಮ ಕುಂದುಕೊರತೆಗಳನ್ನು ಪರಿಹರಿಸುವ ಭರವಸೆ ದೊರೆತ ನಂತರ ಕುಸ್ತಿಪಟುಗಳು ಧರಣಿಯನ್ನು ಹಿಂಪಡೆದಿದ್ದಾರೆ. ಅದೇ ಸಮಯದಲ್ಲಿ, ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಕೂಡ ಮೇಲ್ವಿಚಾರಣಾ ಸಮಿತಿಯಿಂದ ತನಿಖೆಯಾಗುವವರೆಗೆ ಅಧ್ಯಕ್ಷ ಹುದ್ದೆಯ ಜವಾಬ್ದಾರಿಯಿಂದ ಹಿಂದೆ ಸರಿಯಲಿದ್ದಾರೆ. ಧರಣಿಯನ್ನು ಹಿಂಪಡೆದಿರುವ ಬಗ್ಗೆ ಮಾತನಾಡಿದ ಕುಸ್ತಿಪಟು ಬಜರಂಗ್ ಪುನಿಯಾ (Bajrang Punia), ‘ಕೇಂದ್ರ ಕ್ರೀಡಾ ಸಚಿವರು ನಮ್ಮ ಬೇಡಿಕೆಗಳನ್ನು ಆಲಿಸಿ ಸೂಕ್ತ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ನ್ಯಾಯಯುತ ತನಿಖೆ ನಡೆಯುತ್ತದೆ ಎಂದು ನಾವು ಭಾವಿಸುತ್ತೇವೆ, ಆದ್ದರಿಂದ ನಾವು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.
ವಾಸ್ತವವಾಗಿ ಕಳೆದೆರಡು ದಿನಗಳಿಂದ ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಅನೇಕ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಧರಣಿ ಕುಳಿತ್ತಿದ್ದರು.
ಲೈಂಗಿಕ ದೌರ್ಜನ್ಯ ಆರೋಪ; ಕುಸ್ತಿ ಫೆಡರೇಷನ್ ಅಧ್ಯಕ್ಷರ ತಲೆದಂಡ ಸಾಧ್ಯತೆ
ಇದೀಗ ಕುಸ್ತಿಪಟುಗಳ ಆರೋಪದ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ನಿವಾಸದಲ್ಲಿ ಸಭೆ ನಡೆಸಲಾಗಿದ್ದು, ಸಚಿವರ ಅಭಯ ಹಸ್ತದ ನಂತರ ಧರಣಿಯನ್ನು ಹಿಂತೆಗೆದುಕೊಳ್ಳಲಾಗಿದೆ. ಸಭೆಯ ಬಳಿಕ ಮಾತನಾಡಿದ ಅನುರಾಗ್ ಠಾಕೂರ್, ‘ ಆಟಗಾರರೊಂದಿಗೆ ನಿರಂತರ ಚರ್ಚೆ ನಡೆಸಲಾಗಿದೆ. ಎಲ್ಲರೂ ಭಾರತದ ರೆಸ್ಲಿಂಗ್ ಫೆಡರೇಶನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದೀಗ ಆರೋಪಗಳ ಬಗ್ಗೆ ತನಿಖೆ ನಡೆಸಲು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಗುವುದು. ಇದು ಮುಂದಿನ 4 ವಾರಗಳಲ್ಲಿ ತನ್ನ ತನಿಖೆಯನ್ನು ಪೂರ್ಣಗೊಳಿಸುತ್ತದೆ. ತನಿಖೆ ಪೂರ್ಣಗೊಳ್ಳುವವರೆಗೂ ಸಮಿತಿಯೊಂದು ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳಲಿದೆ. ಅಲ್ಲಿಯವರೆಗೆ ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯಲ್ಲಿದ್ದು, ತನಿಖೆಗೆ ಸಹಕರಿಸಲಿದ್ದಾರೆ ಎಂದಿದ್ದಾರೆ.
ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಂಸಿ ಮೇರಿ ಕೋಮ್ ಮತ್ತು ಯೋಗೇಶ್ವರ್ ದತ್ ಅವರಂತಹ ಕುಸ್ತಿಪಟುಗಳು ಸೇರಿದಂತೆ ಸ್ಟಾರ್ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಗಳನ್ನು ತನಿಖೆ ಮಾಡಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಶುಕ್ರವಾರ ಏಳು ಸದಸ್ಯರ ಸಮಿತಿಯನ್ನು ರಚಿಸಿದೆ. ಬಾಕ್ಸರ್ ಮೇರಿ ಕೋಮ್ ಮತ್ತು ಕುಸ್ತಿಪಟು ಯೋಗೇಶ್ವರ್ ಅವರಲ್ಲದೆ, ಆರ್ಚರ್ ಡೋಲಾ ಬ್ಯಾನರ್ಜಿ ಮತ್ತು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ಅಧ್ಯಕ್ಷ ಸಹದೇವ್ ಯಾದವ್ ಕೂಡ ಇದ್ದಾರೆ. ಐಒಎಯ ಎಕ್ಸಿಕ್ಯೂಟಿವ್ ಕೌನ್ಸಿಲ್‌ನ ತುರ್ತು ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಐಒಎ ಅಧ್ಯಕ್ಷೆ ಪಿಟಿ ಉಷಾ ಮತ್ತು ಜಂಟಿ ಕಾರ್ಯದರ್ಶಿ ಕಲ್ಯಾಣ್ ಚೌಬೆ ಅವರಲ್ಲದೆ, ಅಭಿನವ್ ಬಿಂದ್ರಾ ಮತ್ತು ಯೋಗೇಶ್ವರ್ ಅವರಂತಹ ಆಟಗಾರರು ಈ ಸಭೆಯಲ್ಲಿ ಭಾಗವಹಿಸಿದ್ದರು. ಶಿವ ಕೇಶವನ್ ವಿಶೇಷ ಆಹ್ವಾನಿತರಾಗಿ ಸಭೆಯಲ್ಲಿ ಭಾಗವಹಿಸಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ