ಗಾಯದ ಸಮಸ್ಯೆ… ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ!
Hardik Pandya: ಟೀಮ್ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಕಾಲಿನ ಸ್ನಾಯು ಸೆಳೆತದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರದಲ್ಲೇ ಹೆಚ್ಚಿನ ಸಮಯ ಕಳೆದಿದ್ದಾರೆ. ಹೀಗಾಗಿಯೇ ಇದೀಗ ಹಾರ್ದಿಕ್ ಪಾಂಡ್ಯ ಬೆಂಗಳೂರಿನಲ್ಲೇ ನೆಲೆಸಲು ನಿರ್ಧರಿಸಿದ್ದಾರೆ.

ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯ ಕಾರಣ ಇದೀಗ ತಮ್ಮ ವೃತ್ತಿಜೀವನದ ಅತ್ಯಂತ ದೊಡ್ಡ ಮತ್ತು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಈ ನಿರ್ಧಾರದಂತೆ ಇದೀಗ ಹಾರ್ದಿಕ್ ಪಾಂಡ್ಯ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ.
ಬಲ್ಲ ಮೂಲಗಳ ಮಾಹಿತಿ ಪ್ರಕಾರ, ಹಾರ್ದಿಕ್ ಪಾಂಡ್ಯ ಬೆಂಗಳೂರಿನ ಹೊರವಲಯದಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ (CoE) ತರಬೇತಿ ಕೇಂದ್ರದ ಹತ್ತಿರವೇ ಮನೆಯೊಂದನ್ನು ಬಾಡಿಗೆಗೆ ಪಡೆದು ಈಗಾಗಲೇ ವಾಸ್ತವ್ಯ ಹೂಡಿದ್ದಾರೆ.
- ಹಾರ್ದಿಕ್ ಪಾಂಡ್ಯ ಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
- ಈ ಸಮಸ್ಯೆಯ ಕಾರಣ ಇಂಗ್ಲೆಂಡ್ ವಿರುದ್ಧದ ಸರಣಿಗಳಿಂದ ಹೊರಗುಳಿದಿದ್ದಾರೆ.
ಬೆಂಗಳೂರಿಗೆ ಬರಲು ಕಾರಣವೇನು?
ಕಳೆದ ಒಂದು ದಶಕದಿಂದ ಮುಂಬೈನ ಲೋವರ್ ಪರೇಲ್ನಲ್ಲಿ ವಾಸವಿದ್ದ ಹಾರ್ದಿಕ್ ಪಾಂಡ್ಯ, ತರಬೇತಿಗಾಗಿ ಘಾನ್ಸೋಲಿಯಲ್ಲಿರುವ ಮುಂಬೈ ಇಂಡಿಯನ್ಸ್ ಫಿಸಿಲಿಟಿ ಸೆಂಟರ್ಗೆ ಹೋಗಬೇಕಿತ್ತು. ಆದರೆ ಮುಂಬೈನ ಟ್ರಾಫಿಕ್ ಹಾಗೂ ಸುದೀರ್ಘ ಪ್ರಯಾಣದಿಂದಾಗಿ ಅವರ ಅಮೂಲ್ಯ ಸಮಯ ಮತ್ತು ಶಕ್ತಿ ಪೋಲಾಗುತ್ತಿತ್ತು. ಅಲ್ಲದೆ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ದಿನನಿತ್ಯದ ಪ್ರಯಾಣದ ಆಯಾಸ ದೊಡ್ಡ ಅಡ್ಡಿಯಾಗಿತ್ತು.
ಈ ಪ್ರಯಾಣದ ದಣಿವನ್ನು ಸಂಪೂರ್ಣವಾಗಿ ನಿವಾರಿಸಲು, ಅವರು ಬೆಂಗಳೂರಿನ ಹೊರವಲಯದಲ್ಲಿರುವ CoE ತರಬೇತಿ ಕೇಂದ್ರದ ಅತ್ಯಂತ ಸಮೀಪದಲ್ಲೇ ಮನೆಯೊಂದನ್ನು ಬಾಡಿಗೆಗೆ ಪಡೆದು ಶಿಫ್ಟ್ ಆಗಿದ್ದಾರೆ.
ಅಂದರೆ ಮುಂಬೈ ತೊರೆದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಖಾಯಂ ಆಗಿ ವಾಸ್ತವ್ಯ ಬದಲಾಯಿಸಿರುವ ಅವರು, ಬಿಸಿಸಿಐನ ಅತ್ಯಾಧುನಿಕ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಕೇಂದ್ರವನ್ನು ತಮ್ಮ ಖಾಯಂ ತರಬೇತಿ ನೆಲೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ಮೂಲಕ ಫಿಟ್ನೆಸ್ ಕಡೆಗೆ ಹೆಚ್ಚಿನ ಸಮಯ ನೀಡಲು ಮುಂದಾಗಿದ್ದಾರೆ.
ಈ ನಿರ್ಧಾರದ ಹಿಂದಿರುವ ಗುರಿಯೇನು?
ಸಾಮಾನ್ಯವಾಗಿ ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿರುವ ಆಟಗಾರರು ಕೇವಲ ಗಾಯಗೊಂಡಾಗ ಚಿಕಿತ್ಸೆಗಾಗಿ ಅಥವಾ ರಾಷ್ಟ್ರೀಯ ಶಿಬಿರಗಳು ಇದ್ದಾಗ ಮಾತ್ರ ಬೆಂಗಳೂರಿನ ತರಬೇತಿ ಕೇಂದ್ರಕ್ಕೆ ಬರುತ್ತಾರೆ. ಆದರೆ ಇಲ್ಲೇ ಉಳಿದು ತರಬೇತಿ ಪಡೆಯಲು ನಿರ್ಧರಿಸಿದ ಟೀಮ್ ಇಂಡಿಯಾದ ಮೊದಲ ಆಟಗಾರ ಹಾರ್ದಿಕ್ ಪಾಂಡ್ಯ.
32 ವರ್ಷದ ಹಾರ್ದಿಕ್ ಪಾಂಡ್ಯ ಮುಂದಿನ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಫಿಟ್ನೆಸ್ನತ್ತ ಸಂಪೂರ್ಣ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ.
ಅಲ್ಲದೆ ಮುಂದಿನ 5 ರಿಂದ 6 ವರ್ಷಗಳ ಕಾಲ ಯಾವುದೇ ದೊಡ್ಡ ಗಾಯಗಳಿಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಕ್ರಿಯವಾಗಿ ಆಡುವುದು ಅವರ ಗುರಿಯಾಗಿದೆ.
ಇದಕ್ಕಾಗಿ ಅವರು ಬಿಸಿಸಿಐನ ತಜ್ಞರ ಜೊತೆಗೆ, ತಮ್ಮದೇ ಆದ ವೈಯಕ್ತಿಕ ಫಿಸಿಯೋಥೆರಪಿಸ್ಟ್ ಮತ್ತು ಸ್ಟ್ರೆಂತ್ ಆಂಡ್ ಕಂಡೀಷನಿಂಗ್ ಕೋಚ್ ಅನ್ನು ಸಹ ನೇಮಿಸಿಕೊಂಡಿದ್ದಾರೆ.
ಇದನ್ನೂ ಓದಿ: ವೈಭವ್ನ ಆಡಿಸ್ತೀರಾ? ಎಲ್ಲರೂ ರನ್ಗಳಿಸಿಯೇ ಬಂದಿದ್ದಾರೆ: ಶ್ರೇಯಸ್ ಖಡಕ್ ಉತ್ತರ
ಒಟ್ಟಾರೆಯಾಗಿ, ಹಾರ್ದಿಕ್ ಪಾಂಡ್ಯ ಅವರ ಈ ನಿರ್ಧಾರವು ಕೇವಲ ಅವರ ವೈಯಕ್ತಿಕ ವೃತ್ತಿಜೀವನಕ್ಕೆ ಮಾತ್ರವಲ್ಲದೆ, ಇಡೀ ಭಾರತೀಯ ಕ್ರಿಕೆಟ್ಗೆ ಒಂದು ಹೊಸ ದಿಕ್ಸೂಚಿಯಾಗಿದೆ. ಈ ದಿಕ್ಸೂಚಿಯೊಂದಿಗೆ ಪಾಂಡ್ಯ ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವುದನ್ನು ಎದುರು ನೋಡಬಹುದು.
Published On - 9:01 am, Wed, 1 July 26




