AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Purnima 2024: ಕ್ರೀಡಾ ಕ್ಷೇತ್ರದಲ್ಲಿ ಮೋಡಿ ಮಾಡಿದ ಪ್ರಸಿದ್ಧ ಗುರು-ಶಿಷ್ಯ ಜೋಡಿ

Inspiring Guru-Shishya Pairs: ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಆಗಲೇ ನಾವು ಏನಾದರೂ ಸಾಧಿಸಲು ಸಾಧ್ಯ ಎಂಬ ಮಾತಿದೆ. ಈ ಮಾತು ಅಕ್ಷರಶಃ ನಿಜ. ತಮ್ಮ ಗುರುಗಳ ಆಶೀರ್ವಾದ, ಬೆಂಬಲ, ಪ್ರೋತ್ಸಾಹದಿಂದ ಅತ್ಯದ್ಭುತ ಸಾಧನೆಗೈದ ಸಾಧಕರು ನಮ್ಮಲ್ಲಿದ್ದಾರೆ. ಇಂದು ನಾವು ಕ್ರೀಡಾಕ್ಷೇತ್ರದಲ್ಲಿ ಮೋಡಿ ಮಾಡಿದ ಗುರು-ಶಿಷ್ಯ ಜೋಡಿಗಳ ಬಗ್ಗೆ ತಿಳಿಯೋಣ.

Guru Purnima 2024: ಕ್ರೀಡಾ ಕ್ಷೇತ್ರದಲ್ಲಿ ಮೋಡಿ ಮಾಡಿದ ಪ್ರಸಿದ್ಧ ಗುರು-ಶಿಷ್ಯ ಜೋಡಿ
ರಮಾಕಾಂತ್‌ ಅಚ್ರೇಕರ್ – ಸಚಿನ್‌ ತೆಂಡೂಲ್ಕರ್ ಮತ್ತು ಸತ್ಪಾಲ್‌ - ಸುಶೀಲ್‌ ಕುಮಾರ್
ಮಾಲಾಶ್ರೀ ಅಂಚನ್​
| Edited By: |

Updated on: Jul 20, 2024 | 10:44 AM

Share

ಗುರು-ಶಿಷ್ಯರ ಪರಂಪರೆ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದಿಂದಲೂ ಗುರು ಶಿಷ್ಯರ ಸಂಬಂಧ ನಮ್ಮಲ್ಲಿ ಮಾದರಿ ಎನ್ನುವಂತೆಯೇ ಇದೆ. ಗುರು ಕರುಣೆಗಾಗಿ ಶಿಷ್ಯರು ಪಟ್ಟ ಪಾಡುಗಳು, ಗುರುವಿನ ಆಶೀರ್ವಾದದಿಂದ ಶಿಷ್ಯಂದಿರು ಸಂಕಷ್ಟಗಳನ್ನು ಸುಲಭವಾಗಿ ಜಯಿಸಿದ ಅನೇಕ ಪುರಾಣದ ಕಥೆಗಳು ನಮ್ಮಲ್ಲಿವೆ. ಅಂತೆಯೇ ಆಧುನಿಕ ಕಾಲಘಟ್ಟದಲ್ಲಿಯು ಗುರುಗಳ ಬೆಂಬಲದಿಂದ ಸಾಧನೆಗೈದ ಹಲವು ಸಾಧಕರು ನಮ್ಮಲ್ಲಿದ್ದಾರೆ. ಈ ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗುರುಗಳ ಆಶೀರ್ವಾದ, ಬೆಂಬಲದಿಂದ ಮಹೋನ್ನತ ಸಾಧನೆ ಮಾಡಿದ ಕ್ರೀಡಾಪಟುಗಳ ಬಗ್ಗೆ ತಿಳಿದುಕೊಳ್ಳೋಣ.

ಕ್ರೀಡಾ ಕ್ಷೇತ್ರದ ಗುರು-ಶಿಷ್ಯಂದಿರು:

ರಮಾಕಾಂತ್‌ ಅಚ್ರೇಕರ್ – ಸಚಿನ್‌ ತೆಂಡೂಲ್ಕರ್:‌

ಕ್ರಿಕೆಟ್‌ ದಂತಕಥೆ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಯಶಸ್ಸಿಗೆ ಅವರ ಬಾಲ್ಯದ ಗುರುಗಳಾದ ರಮಾಕಾಂತ್‌ ಅಚ್ರೇಕರ್‌ ಪ್ರಮುಖ ಕಾರಣ ಅಂತಾನೇ ಹೇಳಬಹುದು. ಹೌದು ಸಚಿನ್‌ ಕ್ರಿಕೆಟ್‌ ಕೆರಿಯರ್‌ಗೆ ಅಡಿಪಾಯ ಒದಗಿಸಿದವರಲ್ಲಿ ಅಚ್ರೇಕರ್‌ ಮೊದಲಿಗರಾಗಿದ್ದಾರೆ. ಬಾಲ್ಯದಿಂದಲೇ ಸಚಿನ್‌ ಅವರ ಪ್ರತಿಭೆಯನ್ನು ಗುರುತಿಸಿದ್ದ ಅಚ್ರೇಕರ್‌ ಸಚಿನ್‌ರನ್ನು ಉತ್ತಮ ಬ್ಯಾಟ್ಸ್‌ಮನ್‌ ಆಗಿ ರೂಪಿಸಿದ್ದರು. ಅಚ್ರೇಕರ್‌ ಗರಡಿಯಲ್ಲಿ ಬೆಳೆದ ಸಚಿನ್‌ ತೆಂಡೂಲ್ಕರ್‌ ಇಂದು ಕ್ರಿಕೆಟ್‌ ಇತಿಹಾಸದಲ್ಲಿ ದಿಗ್ಗಜರ ಸಾಲಿನಲ್ಲಿ ನಿಂತಿದ್ದಾರೆ. ಈ ಗುರು-ಶಿಷ್ಯರ ಜೋಡಿ ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿ.

ಪುಲ್ಲೇಲ ಗೋಪಿಚಂದ್‌ – ಪಿವಿ ಸಿಂಧು, ಸೈನಾ ನೆಹ್ವಾಲ್:

ಪುಲ್ಲೇಲ ಗೋಪಿಚಂದ್‌ ಯಾರಿಗೆ ಗೊತ್ತಿಲ್ಲ ಹೇಳಿ. ಕಳೆದ ಹಲವು ವರ್ಷಗಳಿಂದ ಭಾರತೀಯ ಬ್ಯಾಡ್ಮಿಂಟನ್‌ನಲ್ಲಿ ಮಾರ್ಗದರ್ಶಕರಾಗಿದ್ದಾರೆ. ಅಷ್ಟೇ ಅಲ್ಲದೆ ಇವರು ಬ್ಯಾಡ್ಮಿಂಟನ್‌ ತಾರೆ ಪಿ.ವಿ ಸಿಂಧೂ‌ ಮತ್ತು ಸೈನಾ ನೆಹ್ವಾಲ್‌ ಅವರ ಗುರುಗಳು. ಗೋಪಿ ಚಂದ್‌ ಗರಡಿಯಲ್ಲಿ ದೀರ್ಘಕಾಲ ತರಬೇತಿ ಪಡೆದ ಈ ಇಬ್ಬರು ಬ್ಯಾಡ್ಮಿಂಟನ್‌ ತಾರೆಗಳು ಕ್ರೀಡಾ ಕ್ಷೇತ್ರದಲ್ಲಿ ದೇಶವೇ ಹೆಮ್ಮೆ ಪಡುವಂತ ಅಭೂತಪೂರ್ವ ಸಾಧನೆಯನ್ನು ಮಾಡಿದ್ದಾರೆ. ಸಿಂಧೂ ಹಾಗೂ ಸೈನಾ ಅವವ ಯಶಸ್ಸಿಗೆ ಅವರ ಗುರುಗಳಾದ ಗೋಪಿ ಚಂದ್‌ ಪ್ರಮುಖ ಕಾರಣ ಅಂತಾನೇ ಹೇಳಬಹುದು.

ಇದನ್ನೂ ಓದಿ: ಪುರಾಣಗಳಲ್ಲಿನ ಈ ಗುರು-ಶಿಷ್ಯರ ಜೋಡಿ ನಿಜಕ್ಕೂ ಸ್ಫೂರ್ತಿ

ಎಲ್‌ ಇಬೊಮ್ಚಾ – ಮೇರಿ ಕೋಮ್‌:

ಬಾಕ್ಸಿಂಗ್‌ ಲೆಜೆಂಡ್‌ ಮೇರಿ ಕೋಮ್‌ ಅವರ ಸಾಧನೆ ಅಭೂತಪೂರ್ವ ಮತ್ತು ಸ್ಫೂರ್ತಿದಾಯಕ. ಅವರನ್ನು ನಿಜವಾದ ಭಾರತ ರತ್ನ ಎಂದು ಕರೆದರೂ ತಪ್ಪಾಗಲಾರದು. ಈ ಲೆಜೆಂಡರಿ ಮಹಿಳಾ ಬಾಕ್ಸರ್‌ಗೆ ತರಬೇತಿಯನ್ನು ನೀಡದವರು ಎಲ್‌. ಇಬೊಮ್ಚಾ. ಮಣಿಪುರದ ಬಾಕ್ಸಿಂಗ್‌ ಕೋಚ್‌ ಆಗಿದ್ದ ಇಬೊಮ್ಚಾ ಅವರ ಗರಡಿಯಲ್ಲಿ ಬೆಳೆದ ಮೇರಿ ಕೋಮ್‌ ಒಟ್ಟು ಆರು ಬಾರಿ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದವರು. ಮೇರಿ ಕೋಮ್‌ ಅವರ ಈ ಅಭೂತಪೂರ್ವ ಸಾಧನೆಯ ಹಿಂದೆ ಗುರುಗಳಾದ ಇಬೊಮ್ಚಾ ಅವರ ಶ್ರಮವು ಅಪಾರವಾದದ್ದು.

ಸತ್ಪಾಲ್‌ – ಸುಶೀಲ್‌ ಕುಮಾರ್:‌

ಮಾಜಿ ಕುಸ್ತಿ ಪಟು ಸತ್ಪಾಲ್‌ ಅವರು ಪ್ರಮುಖ ಕುಸ್ತಿ ತರಬೇತುದಾರ. ಹಲವು ಕುಸ್ತಪುಟುಗಳು ಇವರ ಗರಡಿಲ್ಲಿ ಬೆಳೆದಿದ್ದಾರೆ. ಅದರಲ್ಲಿ ಪ್ರಮುಖ ಕುಸ್ತಿಪಟು ಎಂದ್ರೆ ಅದು ಸುಶೀಲ್‌ ಕುಮಾರ್.‌ ಒಪಿಂಪಿಕ್‌ ಕ್ರೀಡಾಕೂಟದಲ್ಲಿ ಬೆಳ್ಳಿ, ಕಂಚಿನ ಪದಕವನ್ನು ಗೆದ್ದಿರುವ ಸುಶೀಲ್‌ ಕುಮಾರ್‌ ಅವರ ಸಾಧನೆಯಲ್ಲಿ ಗುರುಗಳಾದ ಸತ್ಪಾಲ್‌ ಅವರ ಪಾತ್ರವು ಇದೆ.

ಧರ್ಮೇಂದ್ರ ತಿವಾರಿ – ಡೋಲಾ ಬ್ಯಾನರ್ಜಿ:

ಧರ್ಮೇಂದ್ರ ತಿವಾರಿ ಅವರು ಅನೇಕ ಬಿಲ್ಲುಗಾರರಿಗೆ ಮಾರ್ಗದರ್ಶನವನ್ನು ನೀಡಿದವರು. ಅವರ ಗರಡಿಯಲ್ಲಿ ಬೆಳೆದ ಪ್ರಮುಖ ಕ್ರೀಡಾಪಟು ಡೋಲಾ ಬ್ಯಾನರ್ಜಿ. ತಮ್ಮ ಗುರುಗಳ ಮಾರ್ಗದರ್ಶನದಿಂದ ಡೋಲಾ ಬಿಲ್ಲುಗಾರಿಕೆಯಲ್ಲಿ ಅನೇಕ ಪದಕಗಳನ್ನು ಗೆದ್ದಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More