Wimbledon 2022 Prize Money: ಫೈನಲ್ನಲ್ಲಿ ಸೋತವರಿಗೆ 10 ಕೋಟಿ! ವಿಂಬಲ್ಡನ್ ಗೆದ್ದವರ ಕಥೆಯೇ ಬೇರೆ
Wimbledon 2022 Prize Money: ಮಹಿಳಾ ಮತ್ತು ಪುರುಷರ ಸಿಂಗಲ್ಸ್ ವಿಜೇತರು 2 ಮಿಲಿಯನ್ ಬ್ರಿಟಿಷ್ ಪೌಂಡ್ (ಸುಮಾರು 19.23 ಕೋಟಿ ರೂ.) ಪಡೆಯುತ್ತಾರೆ. ಎರಡೂ ಫೈನಲ್‌ಗಳ ರನ್ನರ್‌ಅಪ್‌ಗೆ 1.05 ಮಿಲಿಯನ್ ಪೌಂಡ್‌ಗಳು ಅಂದರೆ ಸುಮಾರು 10.09 ಕೋಟಿ ರೂ. ಬಹುಮಾನ ಸಿಗುತ್ತದೆ.
ಟೆನಿಸ್ ಅಭಿಮಾನಿಗಳ, ವರ್ಷದ ರೋಚಕ ಮತ್ತು ನಿರೀಕ್ಷಿತ ಪಂದ್ಯಾವಳಿ ಪ್ರಾರಂಭವಾಗಿದೆ. ವಿಂಬಲ್ಡನ್ 2022 (Wimbledon 2022), ವರ್ಷದ ಮೂರನೇ ಮತ್ತು ಅತ್ಯಂತ ಪ್ರತಿಷ್ಠಿತ ಗ್ರಾಸ್ ಕೋರ್ಟ್ ಗ್ರ್ಯಾಂಡ್ಸ್ಲಾಮ್ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಪ್ರಾರಂಭವಾಗಿದೆ. ವಿಶ್ವದ ಅನೇಕ ಶ್ರೇಷ್ಠ ಆಟಗಾರರು ಈ ಅದ್ಭುತ ಪ್ರಶಸ್ತಿಯನ್ನು ಗೆಲ್ಲಲು ಸ್ಪರ್ಧಿಸುತ್ತಿದ್ದಾರೆ. ಈ ಬಾರಿಯ ಪಂದ್ಯಾವಳಿಯು ಹಲವು ವಿಧಗಳಲ್ಲಿ ಮಹತ್ವದ್ದಾಗಿದೆ ಏಕೆಂದರೆ ಈ ಬಾರಿ ರಷ್ಯಾ ಮತ್ತು ಬೆಲಾರಸ್ ಆಟಗಾರರನ್ನು ನಿಷೇಧಿಸಲಾಗಿದೆ. ಆದರೆ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರಾದ ಸೆರೆನಾ ವಿಲಿಯಮ್ಸ್ ಮತ್ತೆ ಕೋರ್ಟ್ಗೆ ಮರಳುತ್ತಿದ್ದಾರೆ. ಇದೆಲ್ಲದರ ಜೊತೆಗೆ ಈ ಬಾರಿ ವಿಜೇತರಿಗೆ ನೀಡುವ ಬಹುಮಾನದ ಹಣದಲ್ಲೂ (Wimbledon 2022 Prize Money) ಗಣನೀಯ ಏರಿಕೆಯಾಗಿದೆ.
ವಿಶ್ವದ ಅತ್ಯಂತ ಹಳೆಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್‌ಶಿಪ್ ಆದ ವಿಂಬಲ್ಡನ್ ಬಗ್ಗೆ ಪ್ರತಿ ವರ್ಷ ಟೆನಿಸ್ ಆಟಗಾರರು ಮತ್ತು ಅಭಿಮಾನಿಗಳ ಉತ್ಸಾಹವು ಸಂಪೂರ್ಣವಾಗಿ ವಿಭಿನ್ನ ಮಟ್ಟದಲ್ಲಿರುತ್ತದೆ. ವಿಂಬಲ್ಡನ್, ಟೆನಿಸ್‌ನ ನಾಲ್ಕು ಗ್ರ್ಯಾಂಡ್ ಸ್ಲಾಮ್‌ಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ಟೆನಿಸ್ ಆಟವನ್ನು ಮೂಲ ಸ್ವರೂಪದಲ್ಲಿ ಹುಲ್ಲು ಅಂಕಣದಲ್ಲಿ ಆಡಲಾಗುತ್ತದೆ. ಇದೇ ಕಾರಣಕ್ಕೆ ಟೆನಿಸ್ ಸಂಪ್ರದಾಯದಲ್ಲೂ ಈ ಗ್ರ್ಯಾಂಡ್ ಸ್ಲಾಮ್ಗೆ ವಿಶೇಷ ಸ್ಥಾನವಿದೆ. ಐತಿಹಾಸಿಕ ಪ್ರಾಮುಖ್ಯತೆಯ ಹೊರತಾಗಿ, ವಿಜೇತರು ಪಡೆಯುವ ಬಹುಮಾನದ ಹಣವೂ ಈ ಚಾಂಪಿಯನ್‌ಶಿಪ್ ಅನ್ನು ಬಹಳ ವಿಶೇಷವಾಗಿಸುತ್ತದೆ. ಹೀಗಿರುವಾಗ ಈ ಬಾರಿ ಚಾಂಪಿಯನ್ ಆಟಗಾರರ ಜೇಬಿಗೆ ಎಷ್ಟು ಹಣ ಬರಲಿದೆ ಎನ್ನುವುದೇ ಮುಖ್ಯ.
ವಿಜೇತರಿಗೆ ಸುಮಾರು 20 ಕೋಟಿ ರೂ. ಬಹುಮಾನ
ಜೂನ್ 27 ರಂದು ಸೋಮವಾರ ಆರಂಭವಾದ ವಿಂಬಲ್ಡನ್ ಜುಲೈ 10 ರಂದು ಪುರುಷರ ಸಿಂಗಲ್ಸ್ ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. ಈ ಸಮಯದಲ್ಲಿ, ಪ್ರತಿ ಸುತ್ತನ್ನು ತಲುಪುವ ಆಟಗಾರರಿಗೂ ಸಹ ಬಹುಮಾನದ ಹಣ ಸಿಗಲಿದೆ. ಆದರೆ ವಿಜೇತರು ಮಾತ್ರ ದೊಡ್ಡ ಚೆಕ್ ಅನ್ನು ಪಡೆಯುತ್ತಾರೆ. ಬ್ರಿಟಿಷ್ ಪತ್ರಿಕೆ ದಿ ಸನ್ ಪ್ರಕಾರ, 2007 ರಿಂದ ನಡೆಯುತ್ತಿರುವ ಸಂಪ್ರದಾಯದಂತೆ, ಈ ಬಾರಿಯೂ ಸಹ, ಮಹಿಳೆಯರು ಮತ್ತು ಪುರುಷರು ವಿಜೇತರು ಸಮಾನ ಮೊತ್ತವನ್ನು ಪಡೆಯುತ್ತಾರೆ.
ಇದರ ಪ್ರಕಾರ, ಮಹಿಳಾ ಮತ್ತು ಪುರುಷರ ಸಿಂಗಲ್ಸ್ ವಿಜೇತರು 2 ಮಿಲಿಯನ್ ಬ್ರಿಟಿಷ್ ಪೌಂಡ್ (ಸುಮಾರು 19.23 ಕೋಟಿ ರೂ.) ಪಡೆಯುತ್ತಾರೆ. ಎರಡೂ ಫೈನಲ್‌ಗಳ ರನ್ನರ್‌ಅಪ್‌ಗೆ 1.05 ಮಿಲಿಯನ್ ಪೌಂಡ್‌ಗಳು ಅಂದರೆ ಸುಮಾರು 10.09 ಕೋಟಿ ರೂ. ಬಹುಮಾನ ಸಿಗುತ್ತದೆ. ಈ ಬಾರಿ ವಿಜೇತರ ಬಹುಮಾನದ ಮೊತ್ತವನ್ನು 3 ಲಕ್ಷ ಪೌಂಡ್ (2.88 ಕೋಟಿ ರೂ.) ಹೆಚ್ಚಿಸಲಾಗಿದೆ.
ಸೋತವರಿಗೂ ಬಹುಮಾನ
ಅದೇ ಸಮಯದಲ್ಲಿ, ಸೆಮಿಫೈನಲ್ ಹಾಗೂ ಕ್ವಾರ್ಟರ್ ಫೈನಲ್ ತಲುಪುವ ಆಟಗಾರರಿಗೂ ಬಹಮಾನ ಸಿಗಲಿದೆ. ಸೆಮಿಫೈನಲ್ ಆಡುವವರಿಗೆ 5 ಲಕ್ಷದ 35 ಸಾವಿರ ಪೌಂಡ್ (5.14 ಕೋಟಿ ರೂ.), ಕ್ವಾರ್ಟರ್ ಫೈನಲ್ ತಲುಪುವವರಿಗೆ 3.10 ಲಕ್ಷ ಪೌಂಡ್ (ರೂ. 2.98 ಕೋಟಿ) ಬಹುಮಾನ ಸಿಗುತ್ತದೆ. ಅದೇ ವೇಳೆ ನಾಲ್ಕನೇ ಸುತ್ತಿಗೆ ಎಂಟ್ರಿಕೊಡುವವರಿಗೆ 1.90 ಲಕ್ಷ ಪೌಂಡ್ (1.82 ಕೋಟಿ ರೂ.), ಮೂರನೇ ಸುತ್ತನ್ನಾಡುವವರಿಗೆ 1.20 ಲಕ್ಷ ಪೌಂಡ್ (1.15 ಕೋಟಿ ರೂ.), ಎರಡನೇ ಸುತ್ತನ್ನಾಡುವವರಿಗೆ 78 ಸಾವಿರ ಪೌಂಡ್ (75 ಲಕ್ಷ ರೂ.). ಬಹುಮಾನ ಸಿಗಲಿದೆ. ಅಷ್ಟೇ ಅಲ್ಲ, ಈಗಾಗಲೇ ಮೊದಲ ಸುತ್ತಿನಲ್ಲಿ ಔಟ್ ಆದ ಆಟಗಾರರು ಬರಿಗೈಯಲ್ಲಿ ಹಿಂತಿರುಗುವುದಿಲ್ಲ, ಬದಲಿಗೆ ಅವರ ಖಾತೆಗೆ 50 ಸಾವಿರ ಪೌಂಡ್‌ಗಳಿಗಿಂತ ಹೆಚ್ಚು ಅಂದರೆ 48 ಲಕ್ಷ ರೂಪಾಯಿ ಹಣ ಜಮಾವಣೆಯಾಗಲಿದೆ.
ಡಬಲ್ಸ್ ವಿಷಯಕ್ಕೆ ಬಂದರೆ ಇಲ್ಲಿಯೂ ವಿಜೇತರು ಉತ್ತಮ ಮೊತ್ತವನ್ನು ಪಡೆಯುತ್ತಾರೆ. ಪುರುಷರು, ಮಹಿಳೆಯರು ಮತ್ತು ಮಿಶ್ರ ಡಬಲ್ಸ್‌ನಲ್ಲಿ ವಿಜೇತ ಜೋಡಿಗಳು 5.40 ಲಕ್ಷ ಪೌಂಡ್‌ಗಳನ್ನು ಅಂದರೆ 5.19 ಕೋಟಿ ರೂಪಾಯಿಗಳನ್ನು ತಮ್ಮ ವಿಭಾಗಗಳಲ್ಲಿ ಪಡೆಯುತ್ತಾರೆ, ಇದನ್ನು ಇಬ್ಬರು ಆಟಗಾರರ ನಡುವೆ ಹಂಚಲಾಗುತ್ತದೆ.