ಎಸ್ಸೆಮ್ಮೆಸ್ ವಂಚಕರ ಹೆಡೆಮುರಿ ಕಟ್ಟಲು ಸಂಚಾರ್ ಸಾಥಿ ಚಕ್ಷು; ಬೆಂಗಳೂರಿನ ಅದಿತಿ ಚೋಪ್ರಾ ಕಥೆ ಕೇಳಿ

|

Updated on: May 07, 2024 | 5:28 PM

Aditi Chopra and DoT: ಬೆಂಗಳೂರಿನ ಉದ್ಯಮಿ ಅದಿತಿ ಚೋಪ್ರಾ ಕಳೆದ ವಾರ ತಮ್ಮನ್ನು ಎಸ್ಸೆಮ್ಮೆಸ್ ಮೂಲಕ ವಂಚಿಸಲು ಯತ್ನಿಸಿದ ಘಟನೆಯನ್ನು ಎಕ್ಸ್ ಪೋಸ್ಟ್​ನಲ್ಲಿ ವಿವರಿಸಿದ್ದರು. ಹೆಚ್ಚು ಹಣ ಕಳುಹಿಸಿದ್ದೇವೆ ಎಂದು ನಕಲಿ ಮೆಸೇಜ್ ಕಳುಹಿಸಿ, ಬಾಕಿ ಹಣ ವಾಪಸ್ ಮಾಡುವಂತೆ ಬಲವಂತ ಪಡಿಸಿದ ಪ್ರಕರಣ ಅದು. ಅದಿತಿ ಚೋಪ್ರಾ ಆ ವ್ಯಕ್ತಿಯ ನಂಬರ್ ಅನ್ನು ತಮ್ಮ ಪೋಸ್ಟ್​ನಲ್ಲಿ ಶೇರ್ ಮಾಡಿದ್ದರು. ಅದಕ್ಕೆ ಸ್ಪಂದಿಸಿರುವ ದೂರ ಸಂಪರ್ಕ ಇಲಾಖೆ, ಆ ನಂಬರ್ ಹಾಗೂ ಸಂಬಂಧಿತ 20 ಹ್ಯಾಂಡ್​ಸೆಟ್​​ಗಳನ್ನು ಡಿಸೇಬಲ್ ಮಾಡಿರುವುದಾಗಿ ರಿಪ್ಲೈ ಮಾಡಿದೆ.

ಎಸ್ಸೆಮ್ಮೆಸ್ ವಂಚಕರ ಹೆಡೆಮುರಿ ಕಟ್ಟಲು ಸಂಚಾರ್ ಸಾಥಿ ಚಕ್ಷು; ಬೆಂಗಳೂರಿನ ಅದಿತಿ ಚೋಪ್ರಾ ಕಥೆ ಕೇಳಿ
ಅದಿತಿ ಚೋಪ್ರಾ
Follow us on

ಬೆಂಗಳೂರು, ಮೇ 7: ವೆಬ್3 ಮತ್ತು ಕ್ರಿಪ್ಟೋ ಕ್ಷೇತ್ರದ ಉದ್ಯಮಿ ಅದಿತಿ ಚೋಪ್ರಾ (Aditi Chopra) ಕಳೆದ ವಾರ ತಮ್ಮ ಮೇಲೆ ನಡೆಸಲು ಪ್ರಯತ್ನಿಸಲಾಗಿದ್ದ ಎಸ್ಸೆಮ್ಮೆಸ್ ವಂಚನೆ (SMS fraud) ಪ್ರಕರಣದ ಬಗ್ಗೆ ಎಕ್ಸ್ ಪೋಸ್ಟ್ ಹಾಕಿದ್ದರು. ದೇಶಾದ್ಯಂತ ಅದು ಸುದ್ದಿ ಆಯಿತು. ಇವತ್ತು ಅವರನ್ನು ಎಸ್ಸೆಮ್ಮೆಸ್ ಮೂಲಕ ವಂಚಿಸಿದವರ ಮೇಲೆ ದೂರ ಸಂಪರ್ಕ ಇಲಾಖೆ ಕ್ರಮ ಕೈಗೊಂಡಿದೆ. ಎಸ್ಸೆಮ್ಮೆಸ್ ಕಳುಹಿಸಿದ ನಂಬರ್ ಅನ್ನು ಡಿಸ್​ಕನೆಕ್ಟ್ ಮಾಡಲಾಗಿದೆ. ಸಂಬಂಧಿತ 20 ಮೊಬೈಲ್ ಹ್ಯಾಂಡ್​ಸೆಟ್​ಗಳನ್ನು ಬ್ಲಾಕ್ ಮಾಡಲಾಗಿದೆ. ಮೇ 2ರಂದು ಅದಿತಿ ರಾವ್ ಮಾಡಿದ್ದ ಪೋಸ್ಟ್​ಗೆ ರಿಪ್ಲೈ ಮಾಡಿರುವ ದೂರ ಸಂಪರ್ಕ ಇಲಾಖೆ ಈ ಮಾಹಿತಿ ನೀಡಿದೆ. ಹಾಗೆಯೇ, ಇಂಥ ಘಟನೆ ಕಂಡು ಬಂದರೆ ಕೂಡಲೇ ಸಂಚಾರ್ ಸಾಥಿ ವೆಬ್​ಸೈಟ್​ನಲ್ಲಿರುವ ಚಕ್ಷು ವಿಭಾಗದ ಗಮನಕ್ಕೆ ತನ್ನಿ ಎಂದು ಹೇಳಿದೆ.

ಹಣ ಕ್ರೆಡಿಟ್ ಆಯಿತೆಂದು ಅದಿತಿ ಚೋಪ್ರಾಗೆ ಬಂದಿತ್ತು ಮೆಸೇಜ್….

ಅದಿತಿ ಚೋಪ್ರಾ ಬೆಂಗಳೂರಿನಲ್ಲಿ ಕಾಯಿನ್​ಡಿಸಿಎಕ್ಸ್ ಎಂಬ ಕ್ರಿಪ್ಟೋ ಮತ್ತು ವೆಬ್​3 ಕಂಪನಿಯ ಕಮ್ಯೂನಿಟಿ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ. ಇವರು ಮೇ 2ರಂದು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ವಂಚನೆಯ ಘಟನೆಯ ವಿವರ ನೀಡಿದ್ದಾರೆ.

ಇದನ್ನೂ ಓದಿ: ಡ್ಯುಯಲ್ ಸಿಮ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್: ಏನದು ನೋಡಿ

ಅದಿತಿ ಆಫೀಸ್ ಕಾಲ್​ನಲ್ಲಿದ್ದಾಗ ವ್ಯಕ್ತಿಯೊಬ್ಬರು ಕರೆ ಮಾಡಿ, ತಮ್ಮ ತಂದೆಗೆ ಹಣ ಕಳುಹಿಸುವುದಿತ್ತು. ಆದರೆ, ಅವರ ಅಕೌಂಟ್​ಗೆ ಹಣ ಹೋಗುತ್ತಿಲ್ಲ. ತಮಗೆ ಹಣ ಕಳುಹಿಸಲು ಹೇಳಿದ್ದಾರೆ. ತಮ್ಮ ನಂಬರ್ ಇದೇನಾ ನೋಡಮ್ಮ ಎಂದು ಆ ವ್ಯಕ್ತಿ ಕೇಳಿದ್ದಾನೆ. ಅದಿತಿ ನಂಬರ್ ತಿಳಿಸಿದ್ದಾರೆ. ಇನ್ನೂ ಮಾತನಾಡುತ್ತಿರುವಂತೆಯೇ ಹಣ ಕ್ರೆಡಿಟ್ ಆಗಿರುವ ಮೆಸೇಜ್​ಗಳ ಎರಡು ಎಸ್ಸೆಮ್ಮೆಸ್​ಗಳು ಬಂದಿವೆ.

ಒಂದರಲ್ಲಿ 10,000 ರೂ ಕ್ರೆಡಿಟ್ ಆಗಿದೆ ಎಂದಿತ್ತು. ಮತ್ತೊಂದು 30,000 ರೂನದ್ದು ಸಂದೇಶ. ಆ ವ್ಯಕ್ತಿ ಕೂಡಲೇ, ಮಗಳೇ ನಿನಗೆ 3,000 ರೂ ಮಾತ್ರವೇ ಕಳುಹಿಸಬೇಕಿತ್ತು. ತಪ್ಪಾಗಿ 30,000 ರೂ ಹಾಕಿಬಿಟ್ಟಿದ್ದೇನೆ. ಬಾಕಿ ಹಣ ದಯವಿಟ್ಟು ವಾಪಸ್ ಮಾಡಮ್ಮ. ಈಗ ನಾನು ಡಾಕ್ಟರ್ ಬಳಿ ಇದ್ದೇನೆ. ಅವರಿಗೆ ಹಣ ಕೊಡಬೇಕು ಎಂದು ಆತುರಪಡಿಸಿದ್ದಾನೆ ಆ ವ್ಯಕ್ತಿ.

ಅದಿತಿ ಚೋಪ್ರಾ ಪ್ರಕಾರ ಈ ಸಂದರ್ಭವೇ ಅಮಾಯಕರು ಸೋತು ಹೋಗುವುದು. ಯೋಚಿಸಲು ಸಮಯಾವಕಾಶವನ್ನೂ ಕೊಡದೆ ಬಲವಂತ ಪಡಿಸಿದಾಗ ಹೆಚ್ಚಿನ ಜನರು ಹಣ ಮರಳಿಸಬಹುದು. ಆದರೆ, ಅದಿತಿಗೆ ತಮ್ಮ ತಂದೆಯ ಹಣದ ವ್ಯವಹಾರದ ಬಗ್ಗೆ ವಿಶ್ವಾಸ ಇತ್ತು. ಹೀಗಾಗಿ, ಅಷ್ಟು ಸುಲಭಕ್ಕೆ ಕರೆ ಮಾಡಿದವನ ಒತ್ತಡಕ್ಕೆ ಬೀಳಲಿಲ್ಲ.

ಇದನ್ನೂ ಓದಿ: ವಾಟ್ಸಾಪ್ ಹೋದ್ರೆ ಬೇರೆ ಆ್ಯಪ್​ಗಳು ಯಾವ್ಯಾವಿವೆ? ಈ ಪರ್ಯಾಯ ಮೆಸೇಜಿಂಗ್ ಅಪ್ಲಿಕೇಶನ್​ಗಳ ಬಗ್ಗೆ ಒಂದು ಪರಿಚಯ

ತನಗೆ ಬಂದ ಎಸ್ಸೆಮ್ಮೆಸ್ ಅನ್ನು ತೆರೆದು ನೋಡಿದಾಗ ಅವರಿಗೆ ವ್ಯತ್ಯಾಸ ಕಂಡಿದೆ. ಬ್ಯಾಂಕ್​ನಿಂದ ಹಣ ಕ್ರೆಡಿಟ್ ಆಗಿದ್ದರೆ ಆ ಬ್ಯಾಂಕ್ ಐಡಿ ಹೆಸರಿನಲ್ಲಿ ಮೆಸೇಜ್ ಬರಬೇಕಿತ್ತು. ಆದರೆ, ಮೊಬೈಲ್ ನಂಬರ್​ವೊಂದರಿಂದ ಆ ಮೆಸೇಜ್​ಗಳಿದ್ದವು. ಕಳುಹಿಸಿದ ಮತ್ತು ಸ್ವೀಕರಿಸಿದ ಅಕೌಂಟ್​ನ ವಿಪಿಎ ನಂಬರ್ ಒಂದೇ ಆಗಿತ್ತು. ರೆಫರೆನ್ಸ್ ನಂಬರ್ ಕೂಡ ಒಂದೇ ಇರುವುದನ್ನು ಕಾಣಬಹುದು.

ಅದಿತಿ ಚೋಪ್ರಾ ಮತ್ತೆ ಆ ನಂಬರ್​ಗೆ ಕರೆ ಮಾಡಿದಾಗ ಫೋನ್ ಬಂದ್ ಆಗಿತ್ತಂತೆ. ಬೆಂಗಳೂರಿನ ಈ ಮಹಿಳೆ ಈ ಮೇಲಿನ ಪ್ರಸಂಗವನ್ನು ತಮ್ಮ ಎಕ್ಸ್​ಪೋಸ್ಟ್​ನಲ್ಲಿ ಹಾಕಿ ಸೈಬರ್ ಸೆಲ್, ಸೈಬರ್ ಕ್ರೈಮ್ ಸಿಐಡಿ ಮೊದಲಾದ ಐಡಿಗಳನ್ನು ಟ್ಯಾಗ್ ಮಾಡಿದ್ದರು.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ