Job Loss: ಆಟೋಮೆಷನ್ನಿಂದ 2022ರ ಹೊತ್ತಿಗೆ ಕೆಲಸ ಕಳೆದುಕೊಳ್ಳಲಿದ್ದಾರೆ 30 ಲಕ್ಷ ಮಂದಿ; ಏಕೆ ಹಾಗೂ ಹೇಗೆ ಗೊತ್ತಾ?
2022ರ ಹೊತ್ತಿಗೆ 30 ಲಕ್ಷ ಉದ್ಯೋಗ ನಷ್ಟ ಆಗಲಿದೆ ಎಂದು ವರದಿಯೊಂದು ಹೇಳುತ್ತಿದೆ. ಯಾವ ಕಾರಣಕ್ಕೆ, ಯಾವ ವಲಯದಲ್ಲಿ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.
ಅಂದುಕೊಳ್ಳುವುದಕ್ಕಿಂತ ಹೆಚ್ಚಿನ ವೇಗದಲ್ಲಿ ವಿವಿಧ ಕೈಗಾರಿಕೆಗಳಲ್ಲಿ ಆಟೋಮೆಷನ್ ನಡೆಯುತ್ತಿದೆ. ಅದರಲ್ಲೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರೀ ಹೊಡೆತ ಬೀಳಬಹುದು. ದೇಶೀಯ ಸಾಫ್ಟ್ವೇರ್ ಕಂಪೆನಿಗಳಲ್ಲಿ 1.60 ಕೋಟಿಗೂ ಹೆಚ್ಚು ಸಿಬ್ಬಂದಿ ಇದ್ದು, ಅದರಲ್ಲಿ 30 ಲಕ್ಷ ಮಂದಿಯನ್ನು 2022ರ ಹೊತ್ತಿಗೆ ಕೆಲಸದಿಂದ ತೆಗೆಯಲು ಸಿದ್ಧತೆ ನಡೆಸಿವೆ. ಹೀಗೆ ಮಾಡುವುದರಿಂದ ವಾರ್ಷಿಕವಾಗಿ 10,000 ಕೋಟಿ ಅಮೆರಿಕನ್ ಡಾಲರ್ ಅನ್ನು ವೇತನ ರೂಪದಲ್ಲಿ, ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 7.40 ಲಕ್ಷ ಕೋಟಿ ಉಳಿತಾಯ ಆಗುತ್ತದೆ ಎಂದು ವರದಿಗಳು ತಿಳಿಸಿವೆ. ದೇಶೀಯ ಮಾಹಿತಿ ತಂತ್ರಜ್ಞಾನ ವಲಯದಲ್ಲಿ 1.6 ಕೋಟಿಯಷ್ಟು ಮಂದಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಅದರಲ್ಲಿ 90 ಲಕ್ಷ ಮಂದಿ ಕಡಿಮೆ- ಕೌಶಲ ಸೇವೆಗಳು ಹಾಗೂ ಬಿಪಿಎ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ನಾಸ್ಕಾಂ ಹೇಳಿದೆ.
ಈ 90 ಲಕ್ಷ ಕಡಿಮೆ ಕೌಶಲ ಸೇವೆಯ ಮತ್ತು ಬಿಪಿಒ ಹುದ್ದೆಯಲ್ಲಿ ಶೇ 30ರಷ್ಟು ಅಥವಾ 30 ಲಕ್ಷದಷ್ಟು ಮಂದಿ 2022ರ ಹೊತ್ತಿಗೆ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ. ರೊಬೋಟ್ ಪ್ರೊಸೆಸ್ ಆಟೋಮೆಷನ್ ಅಥವಾ ಆರ್ಪಿಎ ಕಾರಣಕ್ಕೆ ಹೀಗಾಗಲಿದೆ. 7 ಲಕ್ಷ ಹುದ್ದೆಗಳು ಆರ್ಪಿಎನಿಂದ ಭರ್ತಿ ಆಗುತ್ತವೆ. ಮತ್ತು ಇತರ ಹುದ್ದೆಗಳು ಏನಿವೆ, ಅವು ತಾಂತ್ರಿಕ ಮೇಲ್ದರ್ಜೆಯಿಂದ ಹಾಗೂ ಸ್ಥಳೀಯ ಐ.ಟಿ.ಗಳಲ್ಲಿ ಕೌಶಲ ಹೆಚ್ಚುವುದರಿಂದ ಹೋಗುತ್ತವೆ. ಅಂದ ಹಾಗೆ ಆರ್ಪಿಎಯಿಂದ ಅಮೆರಿಕದಲ್ಲಿ ಅತಿ ಕೆಟ್ಟ ಪರಿಣಾಮ ಆಗಲಿದ್ದು, ಹತ್ತಿರಹತ್ತಿರ 10 ಲಕ್ಷ ಹುದ್ದೆಗಳು ನಷ್ಟವಾಗಲಿವೆ ಎಂದು ಬ್ಯಾಂಕ್ ಆಫ್ ಅಮೆರಿಕಾದ ವರದಿ ಬುಧವಾರ ಹೇಳಿದೆ. ಭಾರತ ಮೂಲದ ಪೂರ್ಣ ಪ್ರಮಾಣದ ಉದ್ಯೋಗಿಯ ಸರಾಸರಿ ವೆಚ್ಚ ಒಂದು ವರ್ಷಕ್ಕೆ 25,000 ಅಮೆರಿಕನ್ ಡಾಲರ್ ಆಗುತ್ತದೆ. ಅದೇ ಅಮೆರಿಕದ ಸಂಪನ್ಮೂಲಕ್ಕೆ 50 ಸಾವಿರ ಯುಎಸ್ಡಿ ಆಗುತ್ತದೆ. ಇದರಿಂದಾಗಿ ವಾರ್ಷಿಕವಾಗಿ ವೇತನ ಮತ್ತು ಇತರ ಸಂಬಂಧಿಸಿದ ವೆಚ್ಚಗಳು ಸೇರಿ 10,000 ಕೋಟಿ ಅಮೆರಿಕನ್ ಡಾಲರ್ ಮಿಗುತ್ತದೆ ಎಂದು ವರದಿ ಹೇಳಿದೆ.
ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್ಸಿಎಲ್, ಟೆಕ್ ಮಹೀಂದ್ರಾ ಮತ್ತು ಕಾಗ್ನಿಜಂಟ್ ಸೇರಿದಂತೆ ಇತರ ಕಂಪೆನಿಗಳು 2022ರ ಹೊತ್ತಿಗೆ ಕಡಿಮೆ ಕೌಶಲದ 30 ಲಕ್ಷ ಹುದ್ದೆಗಳನ್ನು ಕಡಿಮೆ ಮಾಡುವ ಯೋಜನೆಯಲ್ಲಿವೆ. ಇದರಿಂದ 100 ಬಿಲಿಯನ್ ಯುಎಸ್ಡಿ ಉಳಿಯುವುದು ಒಂದು ಕಡೆಯಾಯಿತು. ಅದೇ ಸಮಯಕ್ಕೆ 10 ಬಿಲಿಯನ್ ಯುಎಸ್ಡಿ ಆದಾಯವನ್ನು ಐ.ಟಿ. ಕಂಪೆನಿಗಳಿಗೆ ಹೆಚ್ಚಿಸುತ್ತದೆ. ಅದು ಆರ್ಪಿಎ ಮೂಲಕವಾಗಿ. ಮತ್ತು 5 ಬಿಲಿಯನ್ ಯುಎಸ್ಡಿ ಅವಕಾಶ ಹೊಸ ಸಾಫ್ಟ್ವೇರ್ಗಳಿಂದ 2022ರ ಹೊತ್ತಿಗೆ ಬರುತ್ತದೆ. ರೊಬೋಟ್ಗಳು ದಿನದ 24 ಗಂಟೆಯೂ ಕೆಲಸ ಮಾಡಬಹುದು. ಇದರಿಂದಾಗಿ ಮನುಷ್ಯರ ವೇತನದಲ್ಲಿ 10:1 ಪ್ರಮಾಣದಲ್ಲಿ ಉಳಿತಾಯ ಆಗುತ್ತದೆ ಎಂದು ವರದಿ ಹೇಳಿದೆ. ಅಂದಹಾಗೆ ರೊಬೋಟ್ ಪ್ರೊಸೆಸ್ ಆಟೋಮೆಷನ್ ಅಂದಾಕ್ಷಣ ಭೌತಿಕವಾದ ರೊಬೋಟ್ಗಳಲ್ಲ, ಸಾಫ್ಟ್ವೇರ್ಗಳ ಅಪ್ಲಿಕೇಷನ್. ಮಾಮೂಲಿ ಹಾಗೂ ಹೆಚ್ಚಿನ ಪ್ರಮಾಣದ, ಸಿಬ್ಬಂದಿಯು ವಿವಿಧ ಕೆಲಸಗಳನ್ನು ಮಾಡಬೇಕಾದದ್ದು ಈ ಸಾಫ್ಟ್ವೇರ್ ಮಾಡುತ್ತದೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಆಟೋಮೆಷನ್ ಆದರೂ ಪ್ರಮುಖ ಆರ್ಥಿಕತೆಗಳಾದ ಜರ್ಮನಿ (ಶೇ 26), ಚೀನಾ (ಶೇ 7), ಭಾರತ (ಶೇ 5), ಕೊರಿಯಾ, ಬ್ರೆಜಿಲ್, ಥಾಯ್ಲೆಂಡ್, ಮಲೇಷ್ಯಾ, ರಷ್ಯಾ ಇಲ್ಲೆಲ್ಲ ಉದ್ಯೋಗಿಗಳಿಗೆ ಕೊರತೆ ಎದುರಾಗುತ್ತದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಮುಂದಿನ 15 ವರ್ಷಗಳಿಗೆ ದಕ್ಷಿಣ ಆಫ್ರಿಕಾ, ಗ್ರೀಸ್, ಇಂಡೋನೇಷ್ಯಾ, ಫಿಲಿಪಿನ್ಸ್ನಲ್ಲಿ ಹೆಚ್ಚುವರಿ ಕೆಲಸಗಾರರು ಇರಲಿದ್ದಾರೆ ಎನ್ನಲಾಗಿದೆ. ಮುಂದುವರಿಯುತ್ತಿರುವ ದೇಶಗಳಾದ ಚೀನಾ ಮತ್ತು ಭಾರತದಲ್ಲಿ ಈ ತಂತ್ರಜ್ಞಾನದಿಂದ ಹೆಚ್ಚು ಅಪಾಯ ಎದುರಾಗಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಕೀನ್ಯಾ ಮತ್ತು ಬಾಂಗ್ಲಾದೇಶ್ನಂಥ ಕಡೆಗಳಲ್ಲಿ ಶೇ 85ರಷ್ಟು ಉದ್ಯೋಗಗಳ ಮೇಲೆ ತಂತ್ರಜ್ಞಾನದ ಪ್ರಭಾವ ಆಗಲಿದೆ ಎಂದು ತಿಳಿಸಲಾಗಿದೆ. ಭಾರತ ಮತ್ತು ಚೀನಾದಲ್ಲಿ ಗರಿಷ್ಠ ಮಟ್ಟದ ಅಪಾಯ ಹಾಗೂ ಪರ್ಷಿಯನ್ ಗಲ್ಫ್ ಹಾಗೂ ಜಪಾನ್ನಲ್ಲಿ ಕನಿಷ್ಠ ಮಟ್ಟದ ಅಪಾಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: Unemployment in India | ಕೊರೊನಾ ಭೀಕರತೆಗೆ ಮತ್ತೆ 70 ಲಕ್ಷ ಜನರಿಗೆ ಉದ್ಯೋಗ ನಷ್ಟ; ನಿರುದ್ಯೋಗ ದರ 4 ತಿಂಗಳ ಗರಿಷ್ಠ
(According to report, 30 lakh jobs likely to cut by 2022 due to technology advancement, automation and other reasons)
Published On - 9:29 pm, Thu, 17 June 21