ಸೋಷಿಯಲ್ ಮೀಡಿಯಾ, ಒಟಿಟಿ, ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ನಿಯಮ: ನೀವು ತಿಳಿಯಬೇಕಾದ 10 ಅಂಶಗಳು

ಸೋಷಿಯಲ್ ಮೀಡಿಯಾ, ಒಟಿಟಿ ಮತ್ತು ವೆಬ್​ಸೈಟ್​ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ನಿಯಮಗಳ ಬಗ್ಗೆ ನೀವು ತಿಳಿಯಲೇಬೇಕಾದ 10 ಪ್ರಮುಖ ಅಂಶಗಳಿವು.

ಸೋಷಿಯಲ್ ಮೀಡಿಯಾ, ಒಟಿಟಿ, ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ನಿಯಮ: ನೀವು ತಿಳಿಯಬೇಕಾದ 10 ಅಂಶಗಳು
ಸಾಂದರ್ಭಿಕ ಚಿತ್ರ
Follow us
|

Updated on:Feb 25, 2021 | 4:24 PM

ದೆಹಲಿ: ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಗುರುವಾರ (ಫೆ.25) ಹೊಸ ನಿಯಮಗಳನ್ನು ಘೋಷಿಸಿತು. ಈ ಕ್ರಮವನ್ನು ‘ಎಲ್ಲರಿಗೂ ದನಿ ನೀಡುವ ಮೃದು ಧೋರಣೆಯ ಸಾಂಸ್ಥಿಕ ನಿಯಂತ್ರಣ ಕ್ರಮ’ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಸಮರ್ಥಿಸಿಕೊಂಡರು. ಇಬ್ಬರು ಸಚಿವರು ಒಂದೇ ವೇದಿಕೆಯಲ್ಲಿ ಡಿಜಿಟಲ್ ವೇದಿಕೆಗೆ ಸಂಬಂಧಿಸಿದ ಮೂರು ಮಾಧ್ಯಮಗಳ ನಿಯಂತ್ರಣ ವ್ಯವಸ್ಥೆಯನ್ನು ಘೋಷಿಸಿದರು. ಸೋಷಿಯಲ್ ಮೀಡಿಯಾ, ಒಟಿಟಿ ಮತ್ತು ವೆಬ್​ಸೈಟ್​ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ನಿಯಮಗಳ ಬಗ್ಗೆ ನೀವು ತಿಳಿಯಲೇಬೇಕಾದ 10 ಪ್ರಮುಖ ಅಂಶಗಳಿವು.

1) ವಾಟ್ಸ್ಯಾಪ್​ಗೆ​ ಗೂಢಲಿಪಿ ವಿನಾಯ್ತಿಯಿಲ್ಲ: ಆಕ್ಷೇಪಾರ್ಹ ಸಂದೇಶವನ್ನು ಹರಿಬಿಟ್ಟವರು ಯಾರು ಎಂಬ ಬಗ್ಗೆ ಅನಿವಾರ್ಯ ಸಂದರ್ಭಗಳಲ್ಲಿ ಸರ್ಕಾರಕ್ಕೆ ಮೆಸೆಂಜಿಂಗ್ ಆ್ಯಪ್​ಗಳು ಮಾಹಿತಿ ನೀಡಲೇಬೇಕು. ಗೂಢಲಿಪಿ (Encryption) ಇರುವುದರಿಂದ ಯಾರು ಯಾವ ಮೆಸೇಜ್ ಬರೆಯುತ್ತಾರೆ ಎಂಬ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ವಾಟ್ಸ್ಯಾಪ್, ಟೆಲಿಗ್ರಾಂ, ಸಿಗ್ನಲ್​ನಂಥ ಆ್ಯಪ್​ಗಳು ಇನ್ನು ಮುಂದೆ ಜಾರಿಕೊಳ್ಳಲು ಆಗದು. 2) ಕಂಟೆಂಟ್ ತೆಗೆದುಹಾಕಬೇಕು: ನ್ಯಾಯಾಲಯ ಆದೇಶ ನೀಡಿದ 36 ಗಂಟೆಗಳ ಒಳಗೆ ಸಾಮಾಜಿಕ ಜಾಲತಾಣಗಳು ಆಕ್ಷೇಪಾರ್ಹ ಅಥವಾ ಅನೈತಿಕ ಕಂಟೆಂಟ್​ ತೆಗೆದುಹಾಕಬೇಕು. 3) ದಂಡನಾರ್ಹ ಅಪರಾಧ: ಮಾನಹಾನಿಕರ, ಅಶ್ಲೀಲ, ಆಕ್ಷೇಪಾರ್ಹ, ಜನಾಂಗೀಯ ನಿಂದನೆ, ಅಪ್ರಾಪ್ತರಿಗೆ ಹಾನಿಕಾರಕವಾಗಿರುವ, ದೇಶದ ಭದ್ರತೆ-ಸಾರ್ವಭೌಮತೆ-ಏಕತೆಗೆ ಧಕ್ಕೆ ತರುವ, ಇತರ ದೇಶಗಳೊಂದಿಗೆ ಭಾರತದ ಸಂಬಂಧಕ್ಕೆ ಧಕ್ಕೆ ತರುವ ಕಂಟೆಂಟ್ ಪ್ರಕಟಿಸುವಂತಿಲ್ಲ. ಇದು ದಂಡನೆ ವಿಧಿಸುವ ಅಥವಾ ಶಿಕ್ಷೆ ವಿಧಿಸುವ ಅಪರಾಧವಾಗುತ್ತದೆ. 4) ಶೀಘ್ರ ಕ್ರಮ ಅನಿವಾರ್ಯ: ದೂರು ದಾಖಲಾದ 24 ಗಂಟೆಗಳ ಒಳಗೆ ಸಂಬಂಧಿಸಿದ ಸಂಸ್ಥೆಯು ಆಕ್ಷೇಪಾರ್ಹ ಕಂಟೆಂಟ್​ ತೆಗೆದುಹಾಕುವ, ನಿರ್ಬಂಧಿಸುವ ಕ್ರಮ ತೆಗೆದುಕೊಳ್ಳಬೇಕು. 5) ಮೂರು ಹಂತದ ವ್ಯವಸ್ಥೆ: ನೀತಿ ಸಂಹಿತೆ ಜಾರಿಗೆ ಮೂರು ಹಂತದ ವ್ಯವಸ್ಥೆ ರೂಪಿಸಬೇಕು- ಸ್ವಯಂ ನಿಯಂತ್ರಣ, ಸಂಸ್ಥೆಗಳೇ ರೂಪಿಸಿರುವ ಉನ್ನತ ನಿಯಂತ್ರಣ ವ್ಯವಸ್ಥೆ ಮತ್ತು ಸರ್ಕಾರ ರೂಪಿಸುವ ವಿವಿಧ ಸಚಿವಾಲಯಗಳ ಸಮನ್ವಯ ಸಮಿತಿ. 6) ಆನ್​ಲೈನ್ ದೂರು ಸಲ್ಲಿಕೆ: ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಸಾರ್ವಜನಿಕರು ಆನ್​ಲೈನ್​ನಲ್ಲಿ ದೂರು ಸಲ್ಲಿಸಲು ವ್ಯವಸ್ಥೆ ಇರಬೇಕು. ಸ್ವೀಕರಿಸಿದ ಎಲ್ಲ ದೂರುಗಳನ್ನೂ 15 ದಿನಗಳ ಒಳಗೆ ವಿಲೇವಾರಿ ಮಾಡಬೇಕು. 7) ಸೋಷಿಯಲ್ ಮೀಡಿಯಾ ವಿಂಗಡನೆ: ಸಾಮಾಜಿಕ ಜಾಲತಾಣಗಳನ್ನು ಬಳಕೆದಾರರ ಸಂಖ್ಯೆಗೆ ಅನುಗುಣವಾಗಿ ಸರ್ಕಾರ ವಿಂಗಡಿಸುತ್ತದೆ. ಈ ವಿಂಗಡನೆಗೆ ಅನುಗುಣವಾಗಿ ನಿಯಂತ್ರಣ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತದೆ. ಭಾರತದಲ್ಲಿ ಪ್ರಸ್ತುತ 53 ಕೋಟಿ ವಾಟ್ಸಾಪ್, 44.8 ಕೋಟಿ ಯುಟ್ಯೂಬ್, 41 ಕೋಟಿ ಫೇಸ್​ಬುಕ್, 21 ಕೋಟಿ ಇನ್​ಸ್ಟಾಗ್ರಾಂ ಮತ್ತು 1.5 ಕೋಟಿ ಟ್ವಿಟರ್ ಬಳಕೆದಾರರಿದ್ದಾರೆ. 8) ದೂರು ವಿಲೇವಾರಿ ಅಧಿಕಾರಿ: ಎಲ್ಲಾ ಪ್ರಮುಖ ಸೋಷಿಯಲ್ ಮೀಡಿಯಾ, ಒಟಿಟಿ ಸಂಸ್ಥೆಗಳು ದೂರು ವಿಲೇವಾರಿ ಅಧಿಕಾರಿಯನ್ನು ನೇಮಿಸಬೇಕು. ಈ ವ್ಯಕ್ತಿ ಭಾರತದಲ್ಲಿಯೇ ಇರಬೇಕು. ಪ್ರತಿ ಆರು ತಿಂಗಳಿಗೆ ಒಮ್ಮೆ ದೂರು ವಿಲೇವಾರಿ ಮಾಹಿತಿಯನ್ನು ಪ್ರಕಟಿಸಬೇಕು. 9) ಜನರ ಧ್ವನಿ ಹತ್ತಿಕ್ಕುವ ಯತ್ನವಿಲ್ಲ: ಸಾಮಾಜಿಕ ಮಾಧ್ಯಮಗಳಿಂದ ದೇಶದ ಸಾಮಾನ್ಯ ಜನರಿಗೆ ಧ್ವನಿ ಸಿಕ್ಕಿದೆ. ಈ ಸಂಸ್ಥೆಗಳ ಕೊಡುಗೆಯನ್ನು ಸರ್ಕಾರ ಶ್ಲಾಘಿಸುತ್ತದೆ. ಆದರೆ ಜನರು ತಮ್ಮ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು ಎಂದು ಸರ್ಕಾರ ಹೇಳಿದೆ. 10) ಹೊಸ ಕಾಯ್ದೆ ಇಲ್ಲ: ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕಾಗಿ ಸರ್ಕಾರ ಯಾವುದೇ ಕಾಯ್ದೆಯನ್ನು ಹೊಸದಾಗಿ ಹೇರುತ್ತಿಲ್ಲ. ಹಾಲಿ ಚಾಲ್ತಿಯಲ್ಲಿರುವ ಐಟಿ ಕಾಯ್ದೆಯ ಅನ್ವಯವೇ ಹೊಸ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ, ಜಾರಿಗೊಳಿಸುತ್ತಿದೆ.

ಸಚಿವರು ಹೇಳಿದ್ದಿಷ್ಟು.. ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವಡೇಕರ್ ಅವರು ಹೇಳಿದ್ದಿಷ್ಟು..

ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುವ ಕಂಟೆಂಟ್​ ನಿಯಂತ್ರಿಸಲು ಸೆನ್ಸಾರ್​ ಬೋರ್ಡ್​ ರೂಪಿಸುವುದಿಲ್ಲ. ಆದರೆ ಆಯಾ ಪ್ಲಾಟ್​ಫಾರ್ಮ್​​ಗಳೇ ತಮ್ಮ ಕಂಟೆಂಟ್​ ಅನ್ನು ವಯಸ್ಸಿಗೆ ಅನುಗುಣವಾಗಿ ಕಂಟೆಂಟ್ ವಿಂಗಡಿಸಬೇಕು. ಪೇರಂಟಲ್ ಲಾಕ್​ ವ್ಯವಸ್ಥೆ ಕಡ್ಡಾಯವಾಗಲಿದೆ. 13+, 18+, ಅಡಲ್ಟ್​ ಓನ್ಲಿ ಎಂಬ ವಿಂಗಡನೆ ಇರಬೇಕು. ಸೆನ್ಸಾರ್​ ಮಂಡಳಿಯು ಸಿನಿಮಾಗೆ ಸಂಬಂಧಿಸಿದಂತೆ ನೀಡುವ ಸೂಚನೆಗಳು ಒಟಿಟಗೂ ಅನ್ವಯಿಸುತ್ತವೆ.

ಡಿಜಿಟಲ್ ಸುದ್ದಿ ಪ್ರಕಾಶನ ಸಂಸ್ಥೆಗಳು, ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳು ಮತ್ತು ಒಟಿಟಿ ಸ್ಟ್ರೀಮಿಂಗ್ ಸೇವೆಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸಲು ನಿಯಮಾವಳಿಗಳನ್ನು ರೂಪಿಸಿ, ಶೀಘ್ರ ಪ್ರಕಟಿಸಲಾಗುವುದು. ಮಾಹಿತಿ ತಂತ್ರಜ್ಞಾನ ನಿಯಮಗಳು 2021ರ (ಡಿಜಿಟಲ್ ಮಾಧ್ಯಮಗಳ ನೀತಿಸಂಹಿತೆ) ಅನ್ವಯ ಈ ನಿಯಮಗಳು ಜಾರಿಗೆ ಬರಲಿವೆ. ಇನ್ನು ಮೂರು ತಿಂಗಳಲ್ಲಿ ವಿಸ್ತೃತ ದಾಖಲೆಯನ್ನು ಪ್ರಕಟಿಸಲಾಗುವುದು.

ಈ ನಿಯಮಗಳನ್ನು ಕ್ರಮಬದ್ಧವಾಗಿ ಅನುಷ್ಠಾನಕ್ಕೆ ತರಲು ಹಲವು ಸಚಿವಾಲಯಗಳ ಸಮನ್ವಯದಲ್ಲಿ ವ್ಯವಸ್ಥೆ ರೂಪಿಸಲಾಗುವುದು. ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಏಕತೆಗೆ ಧಕ್ಕೆ ತರುವ ಕಂಟೆಂಟ್​ ಪ್ರಸಾರವನ್ನು ನಿಷೇಧಿಸಲಾಗುವುದು. ಸಾಮಾಜಿಕ ಮಾಧ್ಯಮ ಕಂಪನಿಗಳು ಭಾರತೀಯ ಮೂಲದ ದೂರು ಪರಿಹಾರ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಆಗಿದ್ದ ಯಾವುದೇ ಕಂಟೆಂಟ್​ ರಿಮೂವ್ ಮಾಡಿದ್ದರೆ, ಅದರ ಕಾರಣವನ್ನು ಬಳಕೆದಾರರಿಗೆ ಸ್ಪಷ್ಟವಾಗಿ ವಿವರಿಸಬೇಕು.

ರಕ್ಷಣೆ, ವಿದೇಶಾಂಗ ವ್ಯವಹಾರ, ಗೃಹ, ಮಾಹಿತಿ ಮತ್ತು ಪ್ರಸಾರ, ಕಾನೂನು, ಮಾಹಿತಿ ತಂತ್ರಜ್ಞಾನ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಪ್ರತಿನಿಧಿಗಳು ಇರುವ ಉನ್ನತ ನಿಗಾ ಸಮಿತಿಯನ್ನು ಕೇಂದ್ರ ಸರ್ಕಾರ ರೂಪಿಸಲಿದೆ. ಈ ಸಮಿತಿಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವ, ವಿಚಾರಣೆ ನಡೆಸುವ ಅಧಿಕಾರ ಇರುತ್ತದೆ. ಈ ಸಮಿತಿಗೆ ಎಚ್ಚರಿಕೆ ನೀಡುವ, ಆಕ್ಷೇಪಾರ್ಹ ಕಂಟೆಂಟ್​ ತೆಗೆಯಲು ಸೂಚಿಸುವ, ನಿಯಮಾವಳಿಗಳನ್ನು ಉಲ್ಲಂಘಿಸಿದವರನ್ನು ಗುರುತಿಸಿ, ಶಿಕ್ಷಿಸುವ ಮತ್ತು ಅವರಿಗೆ ಕ್ಷಮೆ ಕೇಳುವಂತೆ ಸೂಚಿಸುವ ಅಧಿಕಾರ ಇರುತ್ತದೆ.

ಯಾವುದೇ ಕಂಟೆಂಟ್​ ಅನ್ನು ಆಕ್ಷೇಪಾರ್ಹ ಎಂದು ಗುರುತಿಸಿ ನಿರ್ಬಂಧಿಸಲೆಂದೇ ಜಂಟಿ ಕಾರ್ಯದರ್ಶಿ ಅಥವಾ ಅದಕ್ಕೂ ಉನ್ನತ ದರ್ಜೆಯ ಅಧಿಕಾರಿಯನ್ನು ಗುರುತಿಸಲಾಗುವುದು. ಸ್ಟ್ರೀಮಿಂಗ್ ಪ್ಲಾಟ್​ಫಾರ್ಮ್​ ಕಂಟೆಂಟ್​ಗಳ ಬಗೆಗಿನ ದೂರಿನ ಬಗ್ಗೆ ಪರಿಶೀಲನೆ ನಡೆಸಲು ಪ್ರಾಧಿಕಾರ ರಚಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಈ ಹಿಂದೆ ನೆಟ್​ಫ್ಲಿಕ್ಸ್ ಮತ್ತು ಅಮೆಜಾನ್​ ಪ್ರೈಂ ಸಂಸ್ಥೆಗಳಿಗೆ ಹೇಳಿತ್ತು. ಆದರೆ ಈ ಒಟಿಟಿ ಪ್ಲಾಟ್​ಫಾರ್ಮ್​ಗಳು ಸರ್ಕಾರದ ಸೂಚನೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರವು ನಿಯಂತ್ರಣ ಕ್ರಮವನ್ನು ಬಿಗಿಗೊಳಿಸಬೇಕಾಯಿತು.

ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ದೂರು ನಿಯಂತ್ರಣ ಪ್ರಾಧಿಕಾರ ರಚಿಸಬೇಕು. ಪ್ರಸಾರವಾಗುವ ಕಂಟೆಂಟ್​ ಅನ್ನು ವಯಸ್ಸು, ಲೈಂಗಿಕ ವಿಚಾರ, ಹಿಂಸಾಚಾರ ಮತ್ತು ನಗ್ನತೆಯ ಅಧಾರದಲ್ಲಿ ವಿಂಗಡಿಸಬೇಕು. ಯಾವುದೇ ಸ್ಟ್ರೀಮಿಂಗ್ ಪ್ಲಾಟ್​ಫಾರ್ಮ್​ ಅಥವಾ ಸಾಮಾಜಿಕ ಮಾಧ್ಯಮ ಈ ನಿಯಮಗಳನ್ನು ಉಲ್ಲಂಘಿಸಿದರೆ ಉನ್ನತ ಪ್ರಾಧಿಕಾರವು ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಸರ್ಕಾರದ ಉನ್ನತ ಸಮಿತಿಯ ಗಮನಕ್ಕೆ ತರುವ ಮತ್ತು ನಿರ್ಬಂಧದ ಆದೇಶ ನೀಡುವಂತೆ ವಿನಂತಿಸುವ ಅಧಿಕಾರ ಹೊಂದಿರುತ್ತದೆ. ಬಹುತೇಕ ನಿಯಂತ್ರಣ ಕ್ರಮಗಳು ಭಾರತೀಯ ಪತ್ರಿಕಾ ಮಂಡಳಿ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿಯೇ ಇವೆ.

ಸುದ್ದಿ ನೀಡುವ ಉದ್ದೇಶದ ಹೊಸ ವೆಬ್​ಸೈಟ್​ಗಳು ಮುಂದಿನ ದಿನಗಳಲ್ಲಿ ಮಾಹಿತಿ ಮತ್ತು ಪ್ರಸಾರ ಇಲಾಖೆ ವೆಬ್​ಸೈಟ್​ ಮೂಲಕ ಮಾಹಿತಿ ಸಲ್ಲಿಸಬೇಕಾಗುತ್ತದೆ. ಆದರೆ ನೋಂದಣಿ ಪ್ರಕ್ರಿಯೆ ಕಡ್ಡಾಯವಲ್ಲ. ಪತ್ರಿಕೆಗಳು ಮತ್ತು ಸುದ್ದಿ ವಾಹಿನಗಳ ಮಾದರಿಯಲ್ಲಿ ವೆಬ್​ಸೈಟ್​ನ ವಿವರಗಳನ್ನು ಕಡ್ಡಾಯವಾಗಿ ಎಲ್ಲರಿಗೂ ತಿಳಿಯುವಂತೆ ಘೋಷಿಸಿಕೊಳ್ಳಬೇಕಾಗುತ್ತದೆ.

ಸಾಮಾಜಿಕ ಮಾಧ್ಯಮಗಳು ಸಂದೇಶದ ಮೂಲ ಪತ್ತೆಹಚ್ಚಲು ಸಹಕರಿಸಬೇಕು ಎಂದು ಸಚಿವರು ಹೇಳಿದಾಗ, ‘ಇದು ವಾಟ್ಸ್ಯಾಪ್​ ಮತ್ತು ಸಿಗ್ನಲ್​ ಆ್ಯಪ್​ಗಳು ಅನುಸರಿಸುತ್ತಿರುವ ಗೂಢಲಿಪಿ ವ್ಯವಸ್ಥೆಗೆ ವಿರೋಧವಾಗುತ್ತದೆಯಲ್ಲವೇ?’ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು. ‘ಎಲ್ಲಿಂದ ತಪ್ಪಾಯಿತು ಎಂಬುದು ನಮಗೆ ತಿಳಿಯಬೇಕು. ನೀವು ತಿಳಿಸಲೇಬೇಕು’ ಎಂದು ಸಚಿವರು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಓಟಿಟಿ ವೇದಿಕೆಗಳಿಗೆ ನಿಯಂತ್ರಣ ವಿಧಿಸುವ ಯೋಚನೆ ಸರ್ಕಾರಕ್ಕಿದೆ: ಕೇಂದ್ರ ಸರ್ಕಾರ

ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಸರ್ಕಾರದ ಆಲೋಚನೆ; ಬಿಜೆಪಿ ನಾಯಕ ರಾಮ್ ಮಾಧವ್

Published On - 4:16 pm, Thu, 25 February 21