Viral: ಮನೆಯವರ ಬೆಂಬಲವಿಲ್ಲ, ಮಕ್ಕಳನ್ನು ಬೆಳೆಸುವಾಗ ಕೈಯಲ್ಲಿ ಎಷ್ಟು ದುಡ್ಡಿದ್ರೂ ಸಾಲಲ್ಲ ಎಂದ ದಂಪತಿ
ಈ ದುಬಾರಿ ದುನಿಯಾದಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟ. ಮದುವೆಯಾದ ಬಳಿಕ ಖರ್ಚು ವೆಚ್ಚಗಳು ಸಹಜವಾಗಿ ಹೆಚ್ಚಾಗುತ್ತದೆ. ಮಕ್ಕಳಾದ ಮೇಲಂತೂ ಕೇಳುವುದೇ ಬೇಡ. ಈ ವೇಳೆಯಲ್ಲಿ ಮನೆಯವರ ಬೆಂಬಲವಿದ್ದರೆ ಬದುಕು ಅಷ್ಟೇನು ಕಷ್ಟ ಅನಿಸಲ್ಲ. ಇದೀಗ ದಂಪತಿಯು ಮಗುವನ್ನು ನೋಡಿಕೊಳ್ಳಲು ತಿಂಗಳಿಗಾಗುವ ವೆಚ್ಚದ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಹೇಗೆ ಈ ಖರ್ಚನ್ನು ನಿಭಾಯಿಸಿಕೊಂಡು ಹೋಗುತ್ತೇವೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಇತ್ತೀಚೆಗಿನ ದಿನಗಳಲ್ಲಿ ದಿನಸಿ ವಸ್ತುಗಳಿಂದ ಹಿಡಿದು ಮನೆಗೆ ಬೇಕಾದ ಎಲ್ಲಾ ವಸ್ತುಗಳ ಬೆಲೆಯು ಗಗನಕ್ಕೆ ಏರುತ್ತಿದೆ. ಹೀಗಾಗಿ ಕೈಯಲ್ಲಿ ಎಷ್ಟು ದುಡ್ಡಿದರೂ ಮನೆನಿರ್ವಹಣೆ ಮಾಡುವುದು ಹಾಗೂ ಮಕ್ಕಳನ್ನು ಬೆಳೆಸುವುದು ಅಷ್ಟು ಸುಲಭವಲ್ಲ. ಹೌದು, ಮದುವೆ, ಮಕ್ಕಳಾದ ಮೇಲಂತೂ ಕೈಯಲ್ಲಿನ ದುಡ್ಡು ಹೇಗೆ ಖಾಲಿಯಾಗುತ್ತದೆ ಎಂದು ತಿಳಿಯುವುದಿಲ್ಲ. ಇದೇ ಪರಿಸ್ಥಿತಿ ಚೆನ್ನೈ ದಂಪತಿಯದ್ದಾಗಿದೆ (Chennai couple). ಮನೆಯವರ ವಿರುದ್ಧವಾಗಿ ಮದುವೆ ಮಾಡಿಕೊಂಡ ಈ ದಂಪತಿಗೆ ಇದೀಗ ಎಂಟುವರೆ ತಿಂಗಳ ಮಗುವಿದೆ. ಮಗುವಾದ ಬಳಿಕ ಖರ್ಚು ವೆಚ್ಚಗಳು (expensive) ಹೆಚ್ಚಾಗಿದ್ದು, ಮನೆಯವರ ಬೆಂಬಲವಿಲ್ಲ. ಹೀಗಾಗಿ ಜವಾಬ್ದಾರಿ ಸಹಜವಾಗಿ ಹೆಚ್ಚಾಗಿದೆ. ತೆರಿಗೆ ಪಾವತಿಸಿ ಆದಾಯದಲ್ಲಿ 78000 ರೂ ಕೈ ಸೇರಿದರೂ ಕೂಡ ತಿಂಗಳಿಗೆ 8000 ರೂ ಉಳಿತಾಯ ಮಾಡುವುದು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಈ ನಡುವೆ ತಮ್ಮ ಮಗುವಿನ ಖರ್ಚು ವೆಚ್ಚವನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದು ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡಿದ್ದು ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರೆಡ್ಡಿಟ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ದಂಪತಿ , ನಾವು ಚೆನ್ನೈಯಲ್ಲಿ ವಾಸಿಸುತ್ತಿದ್ದೇವೆ. ತೆರಿಗೆ ಕಡಿತವಾಗಿ ಒಟ್ಟು ಮಾಸಿಕ ಆದಾಯ 78,000 ರೂ ನಮ್ಮ ಕೈ ಸೇರುತ್ತದೆ. ನಮಗೆ ಈಗ 8.5 ತಿಂಗಳ ಮಗುವಿದೆ. ಮಗುವಿಗಾಗಿ ಉತ್ತಮ ಡೇಕೇರ್ ವ್ಯವಸ್ಥೆ ಮಾಡಿದ್ದೇವೆ. ಅದರ ಹತ್ತಿರದಲ್ಲೇ ಸುರಕ್ಷಿತವಾದ ಬಾಡಿಗೆ ಮನೆಯಲ್ಲಿ ಇದ್ದೇವೆ. ನಮ್ಮ ಮಗುವಿನ ಸುರಕ್ಷತೆ, ಶುಚಿತ್ವವನ್ನು ಖಚಿತಪಡಿಸಿಕೊಳ್ಳಲು ನಾವು ಸದಾ ಬಯಸುತ್ತೇವೆ. ಹೀಗಾಗಿ ಪ್ರತಿತಿಂಗಳು ಬಾಡಿಗೆ ಮತ್ತು ಡೇಕೇರ್‌ಗೆ ಪ್ರತಿ ತಿಂಗಳು 46,500 ರೂ ಖರ್ಚಾಗುತ್ತದೆ. ಇನ್ನು ಉಳಿದಂತೆ ದಿನಸಿ, ಹಣ್ಣು-ತರಕಾರಿಗಳು, ಹಾಲು ಹಾಗೂ ಆಹಾರ ಸೇರಿದಂತೆ ಮನೆಗೆ ಬೇಕಾದ ಅಗತ್ಯ ವಸ್ತುಗಳಿಗೆ ಸರಿಸುಮಾರು 10,000 ರೂ ಹಣವನ್ನು ಇಡಬೇಕಾಗುತ್ತದೆ. ನಮ್ಮ ದಿನನಿತ್ಯದ ಓಡಾಟಕ್ಕಾಗಿ 8,500 ರೂ ಹಣ ಬೇಕೆ ಬೇಕು. ಆಟೋ ಸವಾರಿ, ಮೆಟ್ರೋ ಮತ್ತು ಪೆಟ್ರೋಲ್ ಎಲ್ಲವೂ ಇದರಲ್ಲಿ ಬರುತ್ತವೆ ಎಂದಿದ್ದಾರೆ.
ಇನ್ನು ಉಳಿದಂತೆ ಬೇಬಿ ಡೈಪರ್‌ಗಳಿಗೆ 3,000 ರೂ, ವಿದ್ಯುತ್ ಮತ್ತು ಗ್ಯಾಸ್‌ಗಾಗಿ 2, 000 ರೂ ಎತ್ತಿಡಬೇಕಾಗುತ್ತದೆ. ಈ ಎಲ್ಲಾ ಖರ್ಚುಗಳನ್ನು ಒಟ್ಟು ಸೇರಿದಾಗ ಪ್ರತಿ ತಿಂಗಳು ಸರಿಸುಮಾರು 70,000 ರೂ. ಇನ್ನು ಕೈಯಲ್ಲಿ ಉಳಿಯುವುದು 8000 ರೂ ಮಾತ್ರ. ಈ ಹಣನ್ನು ಉಳಿತಾಯ ಹಾಗೂ ತುರ್ತು ಪರಿಸ್ಥಿತಿಗಾಗಿ ಎತ್ತಿ ಇಡುತ್ತೇವೆ. ಅದಲ್ಲದೇ, ನಾವಿಬ್ಬರೂ ಮನೆಯವರು ವಿರುದ್ಧವಾಗಿ ಕುಟುಂಬಗಳ ಒಪ್ಪಿಗೆಯಿಲ್ಲದೆ ಮದುವೆಯಾದ ಕಾರಣ ಕುಟುಂಬದಿಂದ ಯಾವುದೇ ಸಹಾಯ ಸಿಗುತ್ತಿಲ್ಲ ಎಂದು ಇಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Video: ಸರ್ಕಸ್ ವಿತ್ ಹೋಮ್ ವರ್ಕ್: ಎರಡು ಕಾಲು ಕುರ್ಚಿ ಮೇಲೆ, ತಲೆಕೆಳಗಾಗಿ ಮಲಗಿ ಹೋಮ್ ವರ್ಕ್ ಮಾಡಿದ ಪುಟಾಣಿ
ನನ್ನ ಪತ್ನಿ ಮನೆಯಲ್ಲೇ ಕುಳಿತು ಮಾಡಬಹುದಾದ ಆನ್‌ಲೈನ್ ಕೆಲಸ ಸಿಗುತ್ತದೆಯೇ ಎಂದು ನೋಡುತ್ತಿದ್ದಾಳೆ. ಅವಳಿಗೆ ಪ್ರತಿದಿನ ಒಂದು ಗಂಟೆ ಮಾತ್ರ ಸಮಯವಿದೆ. ಆ ಸಮಯಕ್ಕೆ ಹೊಂದುವಂತೆ ಇರುವ ಕೆಲಸವನ್ನು ಹುಡುಕುತ್ತಿದ್ದಾಳೆ ಎಂದು ವಿವರಿಸಿದ್ದಾರೆ. ಈ ದಂಪತಿ ಮಾಡಿದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕ ಬಳಕೆದಾರರು ತಿಂಗಳ ಖರ್ಚು ವೆಚ್ಚಗಳನ್ನು ಸರಿದೂಗಿಸಿ ಉಳಿತಾಯ ಮಾಡುವುದು ಕಷ್ಟ ಎಂದಿದ್ದಾರೆ. ಕೆಲವರು ಮನೆಯವರ ಬೆಂಬಲ ಅಗತ್ಯ ಎಂದು ಕೂಡ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








