Viral: ಬೆಂಗಳೂರಿಗೆ ವಿದಾಯ ಹೇಳಿ ಹೊರಡುವ ಸಮಯ, ಬದುಕು ಕಟ್ಟಿಕೊಟ್ಟ ಸುಂದರ ನಗರಕ್ಕೆ ಧನ್ಯವಾದ ಎಂದ ವ್ಯಕ್ತಿ
ಉದ್ಯೋಗಕ್ಕೆಂದು ಬೆಂಗಳೂರಿಗೆ ಬಂದು ನೆಲೆಸಿರುವ ಅದೆಷ್ಟೋ ಜನರಿದ್ದಾರೆ. ಆದರೆ ಊರು ಬಿಟ್ಟು ಇಲ್ಲಿ ಬಂದ ಅನೇಕರಲ್ಲಿ ಕೆಲವರಿಗೆ ಮಾಯನಗರಿ ಬೆಂಗಳೂರು ಇಷ್ಟವಾದರೆ, ಇನ್ನು ಕೆಲವರು ಈ ಊರಿನ ಸಹವಾಸ ಸಾಕಪ್ಪ ಸಾಕು ಎಂದುಕೊಳ್ಳುತ್ತಾರೆ. ಆದರೆ ಇದೀಗ ಬೆಂಗಳೂರಿಗೆ ಕೆಲಸಕ್ಕಾಗಿ ಬಂದು ನೆಲೆಸಿರುವ ವ್ಯಕ್ತಿಯೊಬ್ಬರು ಈ ಊರು ಬಿಟ್ಟು ಹೊರಡುವಾಗ ಭಾವನಾತ್ಮಕವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇವರು ಬರೆದ ಪ್ರತಿಯೊಂದು ಸಾಲುಗಳು ಬೆಂಗಳೂರು ನಗರ ವಾಸವು ಎಷ್ಟು ಅದ್ಭುತವಾಗಿತ್ತು ಎನ್ನುವುದನ್ನು ಸಾರಿ ಹೇಳಿದೆ. ಈ ಕುರಿತಾದ ಪೋಸ್ಟ್ ಇಲ್ಲಿದೆ.

ಓದು ಮುಗಿಯುತ್ತಿದ್ದಂತೆ ಕಣ್ಣ ತುಂಬಾ ಕನಸು ಹೊತ್ತು ಜೀವನ ಕಟ್ಟಿಕೊಳ್ಳಲು ಯುವಕ ಯುವತಿಯರು ಬೆಂಗಳೂರಿಗೆ (Bengaluru) ಬರುತ್ತಾರೆ. ಹೆಗಲ ಮೇಲೆ ಜವಾಬ್ದಾರಿಯಿರುವ ಕಾರಣ ಎಷ್ಟೇ ಕಷ್ಟವಾದರೂ ಸರಿಯೇ ಇಲ್ಲಿ ಹೊಂದಿಕೊಂಡು ಬದುಕುತ್ತಾರೆ ಕೂಡ. ದಿನ ಕಳೆದಂತೆ ಅಪರಿಚಿತವಾಗಿದ್ದ ಬೆಂಗಳೂರು ನಮ್ಮದೇ ಸ್ವಂತ ಊರು ಎನ್ನುವಷ್ಟು ಹತ್ತಿರವಾಗುತ್ತದೆ. ಅದೆಷ್ಟೋ ವರ್ಷಗಳಿಂದ ಇಲ್ಲಿ ನೆಲೆಸಿರುವ ವ್ಯಕ್ತಿಗಳಿಗೆ ಬೆಂಗಳೂರು ಬಿಟ್ಟು ಹೋಗುವಾಗ ಮನಸ್ಸು ಸಹಜವಾಗಿ ಭಾರವಾಗುತ್ತದೆ. ಆತ್ಮೀಯರ ಜೊತೆಗೆ ಇಲ್ಲಿ ಕಳೆದ ಕ್ಷಣಗಳು ಕಣ್ಣ ಮುಂದೆ ಬರುತ್ತದೆ. ಬೆಂಗಳೂರಿನಲ್ಲಿ ನೆಲೆಸಿದ್ದ ಗೋಲ್ಡ್‌ಮನ್ ಸ್ಯಾಚ್ಸ್‌ನ ಸಾಫ್ಟ್‌ವೇರ್ ಇಂಜಿನಿಯರ್ ರೋಹಿತ್ ದೋಷಿ (Rohit Doshi) ಅವರಿಗೂ ಇದೇ ರೀತಿ ಅನುಭವವಾಗಿದೆ. ಬೆಂಗಳೂರನ್ನು ಬಿಟ್ಟು ಹೋಗುವಾಗ ಸುಂದರವಾದ ಬದುಕು ಕಟ್ಟಿಕೊಟ್ಟ ಈ ಊರಿಗೆ ಧನ್ಯವಾದ ತಿಳಿಸಿ ಭಾವನಾತ್ಮಕ ಪತ್ರ ಬರೆದುಕೊಂಡಿದ್ದಾರೆ. ಇವರ ಈ ಪೋಸ್ಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಲಿಂಕ್ಡ್ ಇನ್‌ನಲ್ಲಿ ಗೋಲ್ಡ್‌ಮನ್ ಸ್ಯಾಚ್ಸ್‌ನ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಮಾಜಿ ಉಪಾಧ್ಯಕ್ಷ ರೋಹಿತ್ ದೋಷಿ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಅವರು ಬರೆದ ಪ್ರತಿಯೊಂದು ಸಾಲುಗಳು ಬೆಂಗಳೂರಿನಲ್ಲಿ ನಾನು ಹೇಗೆ ಜೀವಿಸಿದ್ದೇವೆ ಎನ್ನುವುದನ್ನು ಹೇಳುತ್ತಿದೆ. ಈ ಪೋಸ್ಟ್ ನಲ್ಲಿ ರೋಹಿತ್ ದೋಷಿ ಅವರು ಹೀಗೆ ಬರೆದುಕೊಂಡಿದ್ದಾರೆ. ಬೆಂಗಳೂರು, ನನ್ನೊಂದಿಗೆ ಯಾವಾಗಲೂ ಶಾಶ್ವತವಾಗಿ ಉಳಿಯುವ ಸ್ಥಳ. ನಾನು ಇಲ್ಲಿಗೆ ಕೆಲಸಕ್ಕಾಗಿ ಬಂದಿದ್ದೇನೆ. ನಾನು ಕಥೆಗಳು, ಸ್ನೇಹಗಳು ಮತ್ತು ನನ್ನ ಹೃದಯದಲ್ಲಿ ದೊಡ್ಡ ಕಾಫಿ ಆಕಾರದ ರಂಧ್ರದೊಂದಿಗೆ ಇಲ್ಲಿಂದ ಹೊರಡುತ್ತಿದ್ದೇನೆ. ರಾಮೇಶ್ವರಂ ಕೆಫೆಯಲ್ಲಿ ತಡರಾತ್ರಿಯ ಫಿಲ್ಟರ್ ಕಾಫಿಯಿಂದ ಹಿಡಿದು ನಂದಿ ಬೆಟ್ಟದ ಪ್ಲಾನಿಂಗ್ ವರೆಗೆ ಬೆಂಗಳೂರು ಪ್ರತಿದಿನವೂ ಅದ್ಭುತವಾಗಿತ್ತು ಎಂದಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಕಬ್ಬನ್ ಪಾರ್ಕ್, ಲಾಲ್‌ಬಾಗ್, ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ವಿಧಾನಸೌಧ, ರಾಸ್ತಾ ಕೆಫೆ, ಏರ್‌ಲೈನ್ಸ್ ಹೋಟೆಲ್, ಮಲ್ಲೇಶ್ವರಂ ಮತ್ತು ಇಂದಿರಾನಗರದಂತಹ ಬೆಂಗಳೂರಿನ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುವುದನ್ನು ನಾನು ಒಂದು ಗುರಿಯನ್ನಾಗಿ ಮಾಡಿಕೊಂಡಿದ್ದೆ. ಹೌದು, ಬೆಂಗಳೂರಿನಲ್ಲಿ ತನ್ನದೇ ಆದ ನ್ಯೂನತೆಗಳಿವೆ.ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸಂಚಾರ ವ್ಯವಸ್ಥೆಯಿದೆ. ಇನ್ನು ನಿಮ್ಮ ಕೈಚೀಲವನ್ನು ಹಿಗ್ಗಿಸುವ ಜೀವನ ವೆಚ್ಚಗಳು. ಮತ್ತು ನೀವು ನಿಮ್ಮ ಛತ್ರಿಯನ್ನು ಮರೆತಾಗ ಬರುವ ಅನಿರೀಕ್ಷಿತ ಮಳೆ ಎಲ್ಲವೂ ಇಲ್ಲಿದೆ. ಆದರೆ ಇದೆಲ್ಲದರ ನಡುವೆಯೂ ಬೆಂಗಳೂರು ಸುಂದರವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ತನ್ನ ಸ್ವಂತ ಕಾಲಿನಲ್ಲಿ ಹೇಗೆ ನಿಲ್ಲಬೇಕು ಎಂಬುದನ್ನು ಕಲಿಸಿದೆ. ಅವ್ಯವಸ್ಥೆಯಲ್ಲಿ ಶಾಂತತೆಯನ್ನು ಹೇಗೆ ಪಡೆಯುವುದು ಎಂದು ತಿಳಿಸಿದೆ. ಅನಿರೀಕ್ಷಿತ ಹವಾಮಾನವು ವ್ಯಕ್ತಿತ್ವದ ಲಕ್ಷಣವಾಗಬಹುದು ಎಂದು ನಗರವು ತನಗೆ ಕಲಿಸಿದೆ. ಧನ್ಯವಾದಗಳು, ಬೆಂಗಳೂರು. ಇಲ್ಲಿಯ ಜೀವನ ಸುಲಭವಾಗಿರಲಿಲ್ಲ. ಆದರೆ ಅರ್ಥಪೂರ್ಣವಾಗಿತ್ತು ಎಂದು ಭಾವನಾತ್ಮಕ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Viral: ಬೆಂಗಳೂರಿನಲ್ಲಿ ಬಾಡಿಗೆ ಮನೆ ತುಂಬಾ ದುಬಾರಿ, ಕಹಿ ಅನುಭವ ಹಂಚಿಕೊಂಡ ವಿದೇಶಿಗ
ಈ ಪೋಸ್ಟ್‌ಗೆ ಬಳಕೆದಾರರೊಬ್ಬರು, ಬೆಂಗಳೂರು ಹೇಗೆ ಇರಲಿ, ಬಹುತೇಕರ ಹೊಟ್ಟೆಯ ಹಸಿವನ್ನು ನೀಗಿಸಿದೆ, ಬದುಕು ಕಟ್ಟಿಕೊಟ್ಟಿದೆ ಅನ್ನೋದು ನಿಜ ಎಂದಿದ್ದಾರೆ. ಇನ್ನೊಬ್ಬರು, ಇಲ್ಲಿ ಸಿಗುವ ಅನುಭವಗಳ ಗುಚ್ಛ ಬೇರೆಲ್ಲೂ ಸಿಗಲ್ಲ. ಇಲ್ಲಿಂದ ಹೊರಡುವಾಗ ಒಂದೊಂದು ಹೆಜ್ಜೆಗಳು ಭಾರವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನೀವು ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದರೂ ಮುಂದೊಂದು ದಿನ ಇಲ್ಲಿಂದ ಹೊರಡುವುದು ಅನಿವಾರ್ಯ. ಅದೆಷ್ಟೋ ವರ್ಷಗಳ ಬಳಿಕ ನಿಮ್ಮ ಬದುಕಿನ ಹಾದಿಯನ್ನು ತಿರುಗಿ ನೋಡಿದರೆ ಇಲ್ಲಿ ಕಳೆದ ದಿನಗಳು ನಿಮಗೆ ನಿಜಕ್ಕೂ ಖುಷಿ ಕೊಡುತ್ತದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Thu, 24 July 25








