ಮನೆಯಲ್ಲಿ ಮಕ್ಕಳಿದ್ರೇನೆ ಚಂದ. ನಾವು ಎಷ್ಟೇ ಒತ್ತಡದಲ್ಲಿದ್ದರೂ ಮನೆಗೆ ಬಂದು ಆ ಮುಗ್ಧ ಮಕ್ಕಳ ತುಂಟತನ, ನಗು ಇವೆಲ್ಲವನ್ನೂ ನೋಡಿದಾಗ ಮನಸ್ಸಿನ ಭಾರವೆಲ್ಲ ಕಳೆದುಹೋಗುತ್ತದೆ. ಹೀಗೆ ಪ್ರತಿಯೊಬ್ಬ ದಂಪತಿಯೂ ಮಗುವನ್ನು ಪಡೆಯುವ ಬಯಕೆಯನ್ನು ಹೊಂದಿರುತ್ತಾರೆ. ಆದರೆ ಸಂತಾನ ಭಾಗ್ಯ ಇಲ್ಲದ ದಂಪತಿಗಳು ಮಕ್ಕಳಿಲ್ಲದ ಕೊರಗನ್ನು ನೀಗಿಸಲು ಮಕ್ಕಳನ್ನು ದತ್ತು ಪಡೆಯುವ ನಿರ್ಧಾರಕ್ಕೆ ಬರುತ್ತಾರೆ. ದಂಪತಿಗಳು ಮಾತ್ರವಲ್ಲದೇ ಸಿಂಗಲ್ ಪೇರೆಂಟ್ಸ್ ಕೂಡಾ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಾರೆ. ನೀವು ಕೂಡಾ ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕು ಎಂಬ ಯೋಚನೆಯಲ್ಲಿದ್ದರೆ, ಅದಕ್ಕಾಗಿ ಇರುವ ಕಠಿಣ ನಿಯಮಗಳನ್ನು ತಿಳಿದುಕೊಳ್ಳಿ.
ಭಾರತದಲ್ಲಿ ಮಗುವನ್ನು ದತ್ತು ಪಡೆಯುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಈ ಪ್ರಕ್ರಿಯೆಯು ಸ್ವಲ್ಪ ಕಷ್ಟದಿಂದ ಕೂಡಿದೆ ಅಂತಾನೇ ಹೇಳಬಹುದು. ಭಾರತದಲ್ಲಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಸರ್ಕಾರವು ಒಂದು ಪ್ರಾಧಿಕಾರವನ್ನು ರಚಿಸಿದೆ. ಇದರ ಹೆಸರು ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿ (CARA). ಇದು ಕೇಂದ್ರದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಭಾರತದಲ್ಲಿ ಒಬ್ಬ ವ್ಯಕ್ತಿ ಮಗುವನ್ನು ದತ್ತು ತೆಗೆದುಕೊಳ್ಳಬೇಕಾದರೆ ಈ ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿಯ ನಿಯಮಗಳನ್ನು ಪಾಲಿಸಬೇಕು, ಆ ನಿಮಮಗಳೇನೆಂದರೆ:
• ದಂಪತಿಗಳು ಮಗುವನ್ನು ದತ್ತು ತೆಗೆದುಕೊಳ್ಳುತ್ತಿದ್ದರೆ, ಅವರು ಮದುವೆಯಾದ ಎರಡು ವರ್ಷಗಳ ಬಳಿಕವಷ್ಟೇ ದತ್ತು ತೆಗೆದುಕೊಳ್ಳಲು ಸಾಧ್ಯ.
• ದತ್ತು ಪಡೆದ ಮಗು ಮತ್ತು ಪೋಷಕರ ನಡುವೆ ಕನಿಷ್ಠ 25 ವರ್ಷಗಳ ವಯಸ್ಸಿನ ಅಂತರವಿರಬೇಕು.
• ದತ್ತು ಪಡೆಯುವ ಮಗುವಿನ ಪೋಷಕರಗೆ ಯಾವುದೇ ಮಾರಣಾಂತಿಕ ಕಾಯಿಲೆ ಇರಬಾರದು.
• ಮಗುವನ್ನು ದತ್ತು ತೆಗೆದುಕೊಳ್ಳಲು ದಂಪತಿಗಳಿಬ್ಬರಿಗೂ ಸಂಪೂರ್ಣ ಒಪ್ಪಿಗೆ ಇರಬೇಕು.
• ಸಿಂಗಲ್ ಪೇರೆಂಟ್ ಮಹಿಳೆಯೊಬ್ಬಳು ಮಗುವನ್ನು ದತ್ತು ಪಡೆಯಲು ಬಯಸಿದರೆ, ಆಕೆ ಸುಲಭವಾಗಿ ಗಂಡು ಅಥವಾ ಹೆಣ್ಣು ಮಗುವನ್ನು ದತ್ತು ಪಡೆಯಬಹುದು. ಆದರೆ ಪುರುಷ ಕೇವಲ ಗಂಡು ಮಗುವನ್ನು ಮಾತ್ರ ದತ್ತು ಪಡೆಯಲು ಸಾಧ್ಯ.
• ಮಗುವನ್ನು ದತ್ತು ತೆಗೆದುಕೊಳ್ಳುವ ಸಮಯದಲ್ಲಿ ಪೋಷಕರ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು.
• ನಾಲ್ಕು ವರ್ಷದೊಳಗಿನ ಮಗುವನ್ನು ದತ್ತು ಪಡೆಯುತ್ತಿದ್ದರೆ, ದಂಪತಿಗಳಿಬ್ಬರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು.
• ಈಗಾಗಲೇ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಜನರು ದತ್ತು ಪಡೆಯಲು ಅರ್ಹರಲ್ಲ.
ಮಗುವನ್ನು ದತ್ತು ತೆಗೆದುಕೊಳ್ಳಲು ಈ ಪ್ರಮುಖ ಡಾಕ್ಯುಮೆಂಟ್ಗಳ ಅಗತ್ಯವಿದೆ:
• ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸುವ ದಂಪತಿಗಳ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ
• ದಂಪತಿಗಳಿಬ್ಬರ ಜನನ ಪ್ರಮಾಣ ಪತ್ರ
• ನಿವಾಸ ಪುರಾವೆ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಇತ್ತೀಚಿನ ವಿದ್ಯುತ್ ಬಿಲ್ ಇತ್ಯಾದಿಗಳನ್ನು ಸಲ್ಲಿಸಬಹದು.
• ಆ ವರ್ಷದ ಆದಾಯ ತೆರಿಗೆ ರಿಟರ್ನ್ ಪ್ರಮಾಣೀಕೃತ ಪ್ರತಿ
• ವಿವಾಹಿತ ದಂಪತಿಗಳಿಗೆ ಮದುವೆ ಪ್ರಮಾಣ ಪತ್ರ
• ವಿಚ್ಛೇದನ ಪಡೆದ ವ್ಯಕ್ತಿ ಮಗುವನ್ನು ದತ್ತು ತೆಗೆದುಕೊಳ್ಳುತ್ತಿದ್ದರೆ ವಿಚ್ಛೇದನ ಪಡೆದ ಪ್ರಮಾಣ ಪತ್ರ ಬೇಕಾಗುತ್ತವೆ.
• ದತ್ತು ಪಡೆಯುವ ವ್ಯಕ್ತಿಗೆ ಸಂಬಂಧಿಸಿದ ಇಬ್ಬರು ವ್ಯಕ್ತಿಗಳ ಹೇಳಿಕೆ
• ಯಾವುದೇ ಗಂಭೀರ ಸಮಸ್ಯೆಗಳಿಲ್ಲ ಎಂಬ ವೈದ್ಯಕೀಯ ದೃಢೀಕರಣ ಪತ್ರ.
ಇದನ್ನೂ ಓದಿ: ನಿಮಗಿದು ಗೊತ್ತೆ? ಸುಟ್ಟ ಗಾಯಗಳಿಗೆ ರಾಮ ಬಾಣ ಈ ವಿಶೇಷ ಮೀನಿನ ಚರ್ಮ!
ಮಗುವನ್ನು ದತ್ತು ಪಡೆಯಲು ಮೊದಲನೆಯದಾಗಿ ಪೋಷಕರು www.cara.nic.in ವೆಬ್ಸೈಟ್ ಅಲ್ಲಿ ಅರ್ಜಿಯನ್ನು ನೋಂದಾಯಿಸಿಕೊಳ್ಳಬೇಕು. ಇದರ ಹೊರತಾಗಿ ಮಾನ್ಯತೆ ಪಡೆದ ಭಾರತೀಯ ಪ್ಲೇಸ್ ಮೆಂಟ್ ಏಜೆನ್ಸಿಗಳಲ್ಲಿ ಮಗುವನ್ನು ದತ್ತು ಪಡೆದುಕೊಳ್ಳಲು ಪೋಷಕರು ಅರ್ಜಿ ಸಲ್ಲಿಸಬಹುದು. ಇದರ ನಂತರ ಅವರು ಕೇಳಿರುವ ಎಲ್ಲಾ ದಾಖಲೆಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕು. ಇದಾದ ನಂತರ ಮನೆ ಭೇಟಿಗಾಗಿ ಏಜೆನ್ಸಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆ ಸಂಸ್ಥೆ ತನಿಖೆಗಾಗಿ ದತ್ತು ಪಡೆಯಬೇಕೆಂದಿರುವ ಪೋಷಕರ ಮನೆಗೆ ಭೇಟಿ ನೀಡುತ್ತಾರೆ. ತನಿಖೆ ಪೂರ್ಣಗೊಂಡಾಗ, ಕಾಯುವ ಅವಧಿಯು ಪ್ರಾರಂಭವಾಗುತ್ತದೆ. ಇದು ಎರಡರಿಂದ ಮೂರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ದಂಪತಿಗಳ ಸರದಿ ಬಂದಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಛೇರಿಯಿಂದ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುತ್ತದೆ, ಮಗುವಿನ ಜನನ ಪ್ರಮಾಣ ಪತ್ರವನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಅದನ್ನು ದತ್ತು ಪಡೆಯುವಂತಹ ಪೋಷಕರಿಗೆ ನೀಡಲಾಗುತ್ತದೆ. ಹೀಗೆ ಎಲ್ಲಾ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ, ಮಗುವನ್ನು ಪೋಷಕರಿಗೆ ಹಸ್ತಾಂತರಿಸಲಾಗುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ