ಕ್ಯೂಆರ್ ಕೋಡ್ ಮೆನು ಬಳಸಿ ಫುಡ್​ ಆರ್ಡರ್​ ಮಾಡಿದ ಯುವತಿ; ಮಧ್ಯರಾತ್ರಿ ರೆಸ್ಟೋರೆಂಟ್ ಸಿಬ್ಬಂದಿಯಿಂದ ಮೆಸೇಜ್​ ಮೂಲಕ ಕಿರುಕುಳ!

ಪುಣೆಯಲ್ಲಿ ಕ್ಯೂಆರ್ ಕೋಡ್ ಮೆನು ಬಳಸಿ ಊಟ ಆರ್ಡರ್ ಮಾಡಿದ ಯುವತಿಗೆ ಮಧ್ಯರಾತ್ರಿ ರೆಸ್ಟೋರೆಂಟ್ ಸಿಬ್ಬಂದಿಯಿಂದ ಕಿರುಕುಳ ಉಂಟಾದ ಘಟನೆ ಬೆಳಕಿಗೆ ಬಂದಿದೆ. ಇದು ಡಿಜಿಟಲ್ ಯುಗದಲ್ಲಿ ಗ್ರಾಹಕರ ಡೇಟಾ ಗೌಪ್ಯತೆ ಮತ್ತು ಆನ್‌ಲೈನ್ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದ್ದರಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಿಕೊಳ್ಳಲು ಕೆಲವು ಪ್ರಮುಖ ಮುನ್ನೆಚ್ಚರಿಕೆ ಮತ್ತು ಅನುಮತಿಯಿಲ್ಲದೆ ಮೊಬೈಲ್​ ನಂಬರ್​ ದುರುಪಯೋಗವಾದರೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕ್ಯೂಆರ್ ಕೋಡ್ ಮೆನು ಬಳಸಿ ಫುಡ್​ ಆರ್ಡರ್​ ಮಾಡಿದ ಯುವತಿ; ಮಧ್ಯರಾತ್ರಿ ರೆಸ್ಟೋರೆಂಟ್ ಸಿಬ್ಬಂದಿಯಿಂದ ಮೆಸೇಜ್​ ಮೂಲಕ ಕಿರುಕುಳ!
ಯುವತಿಗೆ ಕಂಟಕವಾದ ಕ್ಯೂಆರ್ ಕೋಡ್
Image Credit source: Pinterest

Updated on: May 16, 2026 | 11:12 AM

ಪುಣೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಡಿಜಿಟಲ್ ಆರ್ಡರ್ ವ್ಯವಸ್ಥೆಯಲ್ಲಿ ಗ್ರಾಹಕರ ವೈಯಕ್ತಿಕ ಮಾಹಿತಿ (Data Privacy) ಎಷ್ಟು ಸುರಕ್ಷಿತವಾಗಿದೆ ಎಂಬ ಗಂಭೀರ ಪ್ರಶ್ನೆಯನ್ನು ಮೂಡಿಸಿದೆ. ರೆಸ್ಟೋರೆಂಟ್‌ನ ಕ್ಯೂಆರ್ ಕೋಡ್ ಆಧಾರಿತ ಮೆನು ಬಳಸಿ ಊಟ ಆರ್ಡರ್​​ ಮಾಡಿದ್ದ ಯುವತಿಯ ಫೋನ್ ನಂಬರ್ ಪಡೆದ ಸಿಬ್ಬಂದಿ, ಆಕೆಗೆ ಮಧ್ಯರಾತ್ರಿ ಅಸಭ್ಯವಾಗಿ ಮೆಸೇಜ್ ಮಾಡಿ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಏನಿದು ಘಟನೆ?

ಪುಣೆ ಮೂಲದ ಕಂಟೆಂಟ್ ಕ್ರಿಯೇಟರ್ ಮತ್ತು ಇನ್‌ಫ್ಲುಯೆನ್ಸರ್ ಆದ ರಿಷಿಕಾ ದತ್ತಾ ಅವರು ಇತ್ತೀಚೆಗೆ ಪುಣೆಯ ಎಫ್.ಸಿ. ರೋಡ್‌ನಲ್ಲಿರುವ ರೆಸ್ಟೋರೆಂಟ್‌ ಒಂದಕ್ಕೆ ಭೇಟಿ ನೀಡಿದ್ದರು. ಅಲ್ಲಿ ಊಟದ ಆರ್ಡರ್ ಮಾಡಲು ಡಿಜಿಟಲ್ ಮೆನು ನಿಯಮದಂತೆ ಟೇಬಲ್ ಮೇಲಿದ್ದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ್ದರು. ಆದರೆ, ರೆಸ್ಟೋರೆಂಟ್‌ನಿಂದ ಮನೆಗೆ ಮರಳಿದ ನಂತರ ಆಕೆಗೆ ಅಪರಿಚಿತ ನಂಬರ್‌ನಿಂದ ಮಧ್ಯರಾತ್ರಿ ವಾಟ್ಸಾಪ್ ಸಂದೇಶಗಳು ಬರಲಾರಂಭಿಸಿದವು. ಮೆಸೇಜ್ ಕಳುಹಿಸಿದ ವ್ಯಕ್ತಿ ತಾನು ರೆಸ್ಟೋರೆಂಟ್‌ನ ಸಿಬ್ಬಂದಿ (ಶೇಖ್ ಶಫಿ) ಎಂದು ಪರಿಚಯಿಸಿಕೊಂಡಿದ್ದಲ್ಲದೆ, “ನಿಮ್ಮ ವಯಸ್ಸೇನು?”, “ನನಗೆ ನೀವಂದ್ರೆ ಇಷ್ಟ” ಎಂದು​ ಕಳುಹಿಸಿದ್ದಾನೆ.

ವಿಡಿಯೋ ಮೂಲಕ ಆಕ್ರೋಶ ಹೊರಹಾಕಿದ ಯುವತಿ:

“ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ಕೇವಲ ಊಟವನ್ನು ಆರ್ಡರ್ ಮಾಡುತ್ತಿಲ್ಲ, ಬದಲಿಗೆ ನಿಮ್ಮ ಸುರಕ್ಷತೆ ಮತ್ತು ವೈಯಕ್ತಿಕ ಮಾಹಿತಿಯನ್ನು ತಟ್ಟೆಯಲ್ಲಿಟ್ಟು ಅವರಿಗೆ ಸರ್ವ್ ಮಾಡುತ್ತಿದ್ದೀರಿ,” ಎಂದು ರಿಷಿಕಾ ದತ್ತಾ ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆಯ ಚಾಟ್ ಸ್ಕ್ರೀನ್‌ಶಾಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅರೆಬರೆ ಬಟ್ಟೆ ತೊಟ್ಟು ರೀಲ್ಸ್​ ಮಾಡುತ್ತಿದ್ದ ಹೆಂಡತಿ; ಅವಮಾನ ತಾಳಲಾರದೇ ಆಕೆಗೆ ‘ಪಿಂಡದಾನ’ ಮಾಡಿದ ಗಂಡ!

ರೆಸ್ಟೋರೆಂಟ್ ಮ್ಯಾನೇಜ್‌ಮೆಂಟ್ ಸ್ಪಷ್ಟನೆ:

ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ರೆಸ್ಟೋರೆಂಟ್ ಸಂಸ್ಥೆ, ರಿಷಿಕಾ ಅವರ ಪೋಸ್ಟ್‌ಗೆ ಅಧಿಕೃತವಾಗಿ ಕ್ಷಮೆಯಾಚಿಸಿದೆ. ತಪ್ಪು ಮಾಡಿದ ಸಿಬ್ಬಂದಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ, ಗ್ರಾಹಕರ ಡೇಟಾ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದಾಗಿ ಭರವಸೆ ನೀಡಿದೆ.

ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿರುವುದು ಹೇಗೆ?

  • ನಂಬರ್ ನೀಡುವುದು ಕಡ್ಡಾಯವೇ ಪರಿಶೀಲಿಸಿ: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಫೋನ್ ನಂಬರ್ ಕೇಳಿದರೆ, ಅದು ಕಡ್ಡಾಯವೇ? (Mandatory) ಎಂದು ನೋಡಿ. ಇಲ್ಲದಿದ್ದರೆ ಅದನ್ನು ‘Skip’ ಮಾಡಿ.
  • UPI ಐಡಿ ಬದಲಾಯಿಸಿ: ಬಿಲ್ ಪಾವತಿಸುವಾಗ ನಿಮ್ಮ ಫೋನ್ ನಂಬರ್ ಇರುವ UPI ಐಡಿ (ಉದಾಹರಣೆಗೆ: 1234567890@ybl) ಬದಲಾಗಿ, ನಿಮ್ಮ ಹೆಸರಿರುವ ಸಾಮಾನ್ಯ ಐಡಿ ಬಳಸಿ.
  • ಪ್ರಿಂಟ್ ಮೆನು ಕಾರ್ಡ್ ಕೇಳಿ: ಯಾವುದೇ ಡಿಜಿಟಲ್ ಆಪ್‌ಗಳು ನಿಮ್ಮ ವೈಯಕ್ತಿಕ ಮಾಹಿತಿ ಕೇಳಿದರೆ, ನೇರವಾಗಿ ಹಾರ್ಡ್ ಕಾಪಿ ಮೆನು ಕಾರ್ಡ್ ನೀಡುವಂತೆ ಸಿಬ್ಬಂದಿಯನ್ನು ಒತ್ತಾಯಿಸಿ.
  • ಧೈರ್ಯದಿಂದ ದೂರು ನೀಡಿ: ಇಂತಹ ಕಿರುಕುಳ ಎದುರಾದರೆ ತಕ್ಷಣ ಮ್ಯಾನೇಜ್‌ಮೆಂಟ್‌ಗೆ ಅಥವಾ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿ. ಭಾರತದ DPDP ಕಾಯ್ದೆ ಪ್ರಕಾರ ಗ್ರಾಹಕರ ಅನುಮತಿಯಿಲ್ಲದೆ ಡೇಟಾ ಬಳಸುವುದು ಅಪರಾಧವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:07 am, Sat, 16 May 26

Follow Us