Viral News: ಸಾಲದ ಸುಳಿಯಲ್ಲಿ ಸಿಲುಕಿ ಮನೆ ಮಾರಲು ಹೋದವನಿಗೆ ಹೊಡೀತು 1 ಕೋಟಿ ರೂ. ಲಾಟರಿ..!
Viral Story In Kannada: ಕಳೆದ ನಾಲ್ಕು ತಿಂಗಳಿನಿಂದ ಅದೃಷ್ಟ ಎಂಬುದು ನನ್ನ ದುಃಖವನ್ನು ಕೊನೆಗೊಳಿಸುತ್ತದೆ ಎಂಬ ನಂಬಿಕೆಯಲ್ಲಿ ನಾನು ಲಾಟರಿ ಟಿಕೇಟ್ಗಳನ್ನು ಖರೀದಿಸುತ್ತಿದ್ದೆ.
ಅದೃಷ್ಟ ಯಾರನ್ನು ಯಾವಾಗ ಕೈ ಹಿಡಿಯುತ್ತೋ ಆ ದೇವರಿಗೆ ಗೊತ್ತು…ಅದಕ್ಕೆ ಸಾಕ್ಷಿಯಾಗಿ ಈಗ ಮೊಹಮ್ಮದ್ ಬಾವ ನಿಂತಿದ್ದಾರೆ. ಏಕೆಂದರೆ ದಿನಗಳ ಹಿಂದೆಯಷ್ಟೇ ಬಾವ ಬರೋಬ್ಬರಿ 45 ಲಕ್ಷ ರೂ. ಸಾಲಗಾರನಾಗಿದ್ದ. ಇದೀಗ ಕೋಟ್ಯಾಧಿಪತಿಯಾಗಿ ನಿಂತಿದ್ದಾರೆ. ಅದು ಕೂಡ ಅದೃಷ್ಟ ಕೈ ಹಿಡಿಯುವ ಮೂಲಕ ಎಂಬುದು ವಿಶೇಷ. ಕಾಸರಗೋಡಿನ ಮಂಜೇಶ್ವರ ಮೂಲದ ಮೊಹಮ್ಮದ್ ಬಾವ 8 ತಿಂಗಳ ಹಿಂದೆಯಷ್ಟೇ ಹೊಸ ಮನೆ ಮಾಡಿದ್ದರು. ಸಾಲ ಸೂಲ ಮಾಡಿ ಕಟ್ಟಿಸಿದ್ದ ಮನೆಯ ಸಾಲ ತೀರಿಸುವುದೇ ದೊಡ್ಡ ಸವಾಲಾಯಿತು. ಏಕೆಂದರೆ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಬಾವ ಅವರ ಲೆಕ್ಕಾಚಾರಗಳು ತಲೆಕೆಳಗಾಗಿದ್ದವು.
ಒಂದೆಡೆ ಹೆಂಡತಿ ಅಮೀನಾ ಮನೆಯ ಕೆಲಸ ಪೂರ್ಣಗೊಳಿಸಲು 10 ಲಕ್ಷ ರೂಪಾಯಿ ಬ್ಯಾಂಕ್ ಸಾಲ ಪಡೆದಿದ್ದರೆ, ಇನ್ನೊಂದೆಡೆ ಬಾವ ಸಂಬಂಧಿಕರಿಂದ ಇನ್ನೂ 20 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಇದರ ನಡುವೆ ಮಗಳ ಮದುವೆಗೂ ಒಂದಷ್ಟು ಸಾಲ ಪಡೆದಿದ್ದರು. ಆದರೆ ಕಳೆದ ನಾಲ್ಕು ತಿಂಗಳಿನಿಂದ ಆದಾಯ ಕಡಿಮೆಯಾಗಿದ್ದ ಕಾರಣ ಸಾಲ ತೀರಿಸಲು ಆಗಿರಲಿಲ್ಲ. ಇತ್ತ ಸಾಲದ ಒತ್ತಡದಿಂದ ಪರದಾಡಿದ್ದ ಬಾವ ಕುಟುಂಬವು ಹೊಸ ಮನೆಯನ್ನೇ ಮಾರುವ ನಿರ್ಧಾರಕ್ಕೆ ಬಂದಿದ್ದರು. ಇನ್ನೇನು ಮನೆ ಮಾರಲು ಗ್ರಾಹಕರನ್ನು ಸಹ ಹುಡುಕಲಾರಂಭಿಸಿದರು.
ಒಟ್ಟು 45 ಲಕ್ಷ ರೂ. ಸಾಲವೊಂದಿದ್ದ ಬಾವ ಮನೆಯನ್ನು ಅಷ್ಟೇ ಮೊತ್ತಕ್ಕೆ ಮಾರಾಟ ಮಾಡಲು ನಿರ್ಧರಿಸಿದ್ದರು. ಇದರ ನಡುವೆ ಬ್ರೋಕರ್ ಒಬ್ಬರು ಪಾರ್ಟಿಯೊಬ್ಬರನ್ನು ಕರೆತಂದಿದ್ದರು. ಅವರು 40 ಲಕ್ಷಕ್ಕೆ ಮನೆ ಖರೀದಿಸಲು ಒಪ್ಪಿಕೊಂಡಿದ್ದರು. ಅದರಂತೆ ಭಾನುವಾರ ಸಂಜೆ 5 ಗಂಟೆಗೆ ಟೋಕನ್ ಅಡ್ವಾನ್ಸ್ ನೀಡುವುದಾಗಿ ತಿಳಿಸಿದ್ದರು.
ಇದರ ನಡುವೆ ಕೇರಳ ಸರ್ಕಾರ ನಡೆಸುವ ಫಿಫ್ಟಿ ಫಿಫ್ಟಿ ಲಾಟರಿ ಟಿಕೆಟ್ಗಳನ್ನು ಬಾವ ಖರೀದಿಸಿದ್ದರು. ಆದರೆ ಟೋಕನ್ ಅಡ್ವಾನ್ ಪಡೆಯಲು ತೆರಳುವ ಗಂಟೆಗಳ ಮುನ್ನ ಬಾವ ಅವರ ಅದೃಷ್ಟವೇ ಬದಲಾಯಿತು. ಅಂದರೆ ಬಾವ ಖರೀದಿಸಿದ ಲಾಟರಿ ಟಿಕೆಟ್ನ ಫಲಿತಾಂಶ ಭಾನುವಾರ ಸಂಜೆ 3 ಗಂಟೆಗೆ ಹೊರಬಿದ್ದಿದೆ. ಈ ಫಲಿತಾಂಶವನ್ನು ನೋಡಿ ಖುದ್ದು ಮೊಹಮ್ಮದ್ ಬಾವ ಅವರೇ ದಂಗಾಗಿದ್ದರು.
ಏಕೆಂದರೆ ಬಾವ ಖರೀದಿಸಿದ ಲಾಟರಿ ಟಿಕೆಟ್ಗೆ ಮೊದಲ ಬಹುಮಾನ ಬಂದಿತ್ತು. ಅದು ಕೂಡ ಬರೋಬ್ಬರಿ 1 ಕೋಟಿ ರೂ. ಅಂದರೆ ಸಾಲ ಸುಳಿಯಲ್ಲಿ ಸಿಲುಕಿದ್ದ ಬಾವ ಅವರ ಜೀವನ ಗಂಟೆಗಳ ಅಂತರದಲ್ಲಿ ಸಂಪೂರ್ಣ ಬದಲಾಯಿತು. ಅದರಂತೆ ಇದೀಗ ಎಲ್ಲಾ ತೆರಿಗೆಯ ನಂತರ ಸುಮಾರು 63 ಲಕ್ಷ ರೂ. ಬಹುಮಾನ ಮೊತ್ತವಾಗಿ ಪಡೆದಿದ್ದಾರೆ. ಅಂದರೆ 45 ಲಕ್ಷ ರೂ. ಸಾಲವನ್ನು ಬಾವ ಒಂದೇ ದಿನದಲ್ಲಿ ತೀರಿಸಲಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಅದೃಷ್ಟ ಎಂಬುದು ನನ್ನ ದುಃಖವನ್ನು ಕೊನೆಗೊಳಿಸುತ್ತದೆ ಎಂಬ ನಂಬಿಕೆಯಲ್ಲಿ ನಾನು ಲಾಟರಿ ಟಿಕೇಟ್ಗಳನ್ನು ಖರೀದಿಸುತ್ತಿದ್ದೆ. ಇದೀಗ ಕೊನೆಗೂ ನನ್ನ ಅದೃಷ್ಟ ಕೈ ಹಿಡಿದಿದೆ. ಜೊತೆಗೆ ನಾನು ಕಟ್ಟಿಸಿದ ಮನೆಯನ್ನು ಕೂಡ ಉಳಿಸಿಕೊಂಡಿದ್ದೇನೆ ಎಂದು ಬಾವ ಹೇಳಿದ್ದಾರೆ. ಹೌದು, ಅದೃಷ್ಟ ಯಾರನ್ನು ಯಾವಾಗ ಕೈ ಹಿಡಿಯುತ್ತೆ ಎಂದು ಹೇಳಲಾಗುವುದಿಲ್ಲ. ಆದರೆ ಕೆಲ ಅದೃಷ್ಟಗಳು ನಮ್ಮ ಇಡೀ ಜೀವನವನ್ನೇ ಬದಲಿಸುತ್ತೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ.