ಅಂತರ್ಜಾಲದಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಪರೂಪದ ಘಟನೆಗಳು, ಮಾನವೀಯ ವಿಡಿಯೋಗಳಿಂದ ಹಿಡಿದು, ಜಗತ್ತು ಹೀಗೂ ಇರುತ್ತದಾ ಎಂಬಂತಹ ಅಚ್ಚರಿಯ ಘಟನೆಗಳ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತವೆ. ಇದರಲ್ಲಿ ವಸ್ತುಗಳನ್ನು ತಲುಪಿಸುವ ಡೆಲಿವರ್ ವ್ಯಕ್ತಿಗಳ ವಿಡಿಯೋಗಳೂ ಸೇರಿವೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ ಡೆಲಿವರಿ ಬಾಯ್ಗಳು, ಕಷ್ಟಪಟ್ಟು ಜೀವನ ಸಾಗಿಸುವ ಡೆಲಿವರಿ ವ್ಯಕ್ತಿಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಾಗೆಯೇ ವಸ್ತುಗಳನ್ನು ತಲುಪಿಸುವಾಗ ಡೆಲಿವರಿ ಮಾಡುವ ವ್ಯಕ್ತಿ ಮಾಡಿರುವ ತಪ್ಪು ಕೆಲಸಗಳ ವಿಡಿಯೋಗಳು ಸುದ್ದಿಯಾಗುತ್ತವೆ. ಸದ್ಯ ಅಂತರ್ಜಾಲದಲ್ಲಿ ಇಂಥದ್ದೇ ಒಂದು ವಿಡಿಯೋ ವೈರಲ್ (Viral Video) ಆಗಿದೆ. ಅದರಲ್ಲಿ ಅಮೇರಿಕಾದ ಮಹಿಳೆಯೊಬ್ಬರು ಪಾರ್ಸಲ್ ತಲುಪಿಸುವಾಗ ಅಂಗಡಿಯೊಂದರಿಂದ ವಸ್ತುವನ್ನು ಕದ್ದಿದ್ದಾರೆ. ಈ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮರಳುವ ಮುನ್ನ ಮಹಿಳೆ ಹೇಳಿದ್ದೇನು? ಇಲ್ಲಿದೆ ಘಟನೆಯ ವಿವರ
ಆರ್ಡರ್ ಮಾಡಿದ್ದ ಪಾರ್ಸಲ್ ತಲುಪಿಸಲು ಕ್ಯಾಲಿಫೋರ್ನಿಯಾದ ಪಿಸ್ಮೋ ಬೀಚ್ನಲ್ಲಿರುವ ಬ್ಯೂಟಿ ಸಲೂನ್ ಒಂದಕ್ಕೆ ಡೋರ್ಡ್ಯಾಶ್ ಡೆಲಿವರಿಯ ಡ್ರೈವರ್ ಓರ್ವರು ತೆರಳಿರುತ್ತಾರೆ. ಬೂದು ಬಣ್ಣದ ಶರ್ಟ್ ಧರಿಸಿರುವ ಮಹಿಳಾ ಡ್ರೈವರ್, ಅಂಗಡಿಯಲ್ಲಿರುವ ಯುವತಿಗೆ ಪಾರ್ಸಲ್ ಹಸ್ತಾಂತರಿಸುತ್ತಾರೆ. ನಂತರ ಸಮಯ ನೋಡಿ ಅಂಗಡಿಯಲ್ಲಿದ್ದ ವಸ್ತುವೊಂದನ್ನು ಜೇಬಿಗೆ ಹಾಕಿಕೊಂಡಿದ್ದಾರೆ. ವರದಿಗಳ ಪ್ರಕಾರ ನೆಕ್ಲೇಸ್ ಒಂದನ್ನು ಮಹಿಳೆ ಕದ್ದಿದ್ದಾರೆ. ಅಂಗಡಿಯಿಂದ ಮರಳುವ ಮುನ್ನ ಮಹಿಳೆ ಸಂಭಾವಿತರಂತೆ ‘ಧನ್ಯವಾದ, ಶುಭದಿನ’ ಎಂದು ಅಂಗಡಿಯ ಮಾಲಕಿಗೆ ಹೇಳಿದ್ದಾರೆ. ಇದೂ ಕೂಡ ವಿಡಿಯೋದಲ್ಲಿ ದಾಖಲಾಗಿದೆ.
ಘಟನೆಯ ನಂತರ ಅಂಗಡಿಯ ಮಾಲಕಿ ಮೆಲಿಯಾನಾ ಸೊಡರ್ಕ್ವಿಸ್ಟ್ ಅವರು ತಮ್ಮ ಟಿಕ್ಟಾಕ್ ಖಾತೆಯಲ್ಲಿ ಸಿಸಿಟಿವಿ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದಿದೆ. ಪಾರ್ಸಲ್ ತಲುಪಿಸಲು ಬಂದವರ ಹೆಸರು ಕಾರ್ಸನ್ ಎಂದಾಗಿದ್ದು, ಕೊರೊನಾ ಸಂದರ್ಭದಲ್ಲಿಯೂ ಆಕೆ ಮಾಸ್ಕ್ ಧರಿಸಿರಲಿಲ್ಲ ಹಾಗೂ ಅಂಗಡಿಯಲ್ಲಿ ಚಲಿಸುವುದು ತಿಳಿಯಬಾರದೆಂದು ಶೂ ಕೂಡ ಧರಿಸಿರಲಿಲ್ಲ ಎಂದು ಮಾಲಕಿ ತಿಳಿಸಿದ್ದಾರೆ. ಅಲ್ಲದೇ ಹೊರ ಹೋಗುವಾಗ ಡ್ರೈವರ್ ಆಭರಣ ಕದ್ದಿದ್ದಕ್ಕೆ ಸಿಸಿಟಿವಿ ವಿಡಿಯೋ ಸಾಕ್ಷಿಯನ್ನು ಮಾಲಕಿ ನೀಡಿದ್ದಾರೆ. ವಸ್ತುವನ್ನು ಕದ್ದಿದ್ದ ಮಹಿಳೆಯನ್ನು ಸಿಸಿಟಿವಿ ಆಧಾರದಲ್ಲಿ ಬಂಧಿಸಲಾಗಿದೆ ಎಂದು ವರದಿಗಳು ಹೇಳಿವೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಡೋರ್ಡ್ಯಾಶ್ ಸಂಸ್ಥೆ ಡ್ರೈವರ್ ಖಾತೆಯನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ತಿಳಿಸಿದೆ. ಅಲ್ಲದೇ ಕಂಪನಿಯ ನಿಲುವುಗಳಿಗೆ ವಿರುದ್ಧವಾಗಿ ಕೆಲಸ ಮಾಡಿದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದೆ. ಇದಕ್ಕೆ ಸಂಬಂಧಪಟ್ಟಂತೆ ಹೆಚ್ಚುವರಿ ತನಿಖೆಯನ್ನೂ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:
WhatsApp: ವಾಟ್ಸ್ಆ್ಯಪ್ ಗ್ರೂಪ್ ಕಾಲ್ನಲ್ಲಿ ಬರುತ್ತಿದೆ ಅಚ್ಚರಿ ಫೀಚರ್: ಹೊಸ ಲುಕ್ ಹೇಗಿದೆ ನೋಡಿ