Fact Check: ಇದು ವಕ್ಫ್ ಮಸೂದೆ ವಿರುದ್ಧ ಕಾಂಗ್ರೆಸ್ ಆಯೋಜಿಸಿರುವ ಕಾರ್ಯಕ್ರಮ ಎಂದು ಫೇಕ್ ವಿಡಿಯೋ ವೈರಲ್
ಟಿವಿ9 ಕನ್ನಡ ನಡೆಸಿದ ತನಿಖೆಯಲ್ಲಿ ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಕಾಂಗ್ರೆಸ್ ಕಾರ್ಯಕ್ರಮದ್ದಲ್ಲ ಎಂದು ತಿಳಿದುಬಂದಿದೆ. ಹಲಿಯಲ್ಲಿ ಜಮಿಯತ್ ಉಲಮಾ-ಎ-ಹಿಂದ್ ಆಯೋಜಿಸಿದ್ದ ಸಂವಿಧಾನ ಉಳಿಸಿ ಸಮಾವೇಶದ ವಿಡಿಯೋ ಇದಾಗಿದೆ.
ವಕ್ಫ್ ತಿದ್ದುಪಡಿ ಮಸೂದೆ ಭಾರತದ ರಾಜಕೀಯದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಏತನ್ಮಧ್ಯೆ, ಭಾರೀ ಜನಸಮೂಹದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ವಕ್ಫ್ ಮಸೂದೆ ವಿರುದ್ಧದ ಕಾರ್ಯಕ್ರಮದ ರೂಪದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ವಿಡಿಯೋದಲ್ಲಿ, ಜನರು ಕ್ಯಾಪ್ಸ್ ಮತ್ತು ಮುಸ್ಲಿಮರು ಧರಿಸಿರುವ ಬಿಳಿ ಬಟ್ಟೆಗಳನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ದೆಹಲಿಯ ಇಂದಿರಾಗಾಂಧಿ ಸ್ಟೇಡಿಯಂ ನಲ್ಲಿ, ವಖ್ಫ್ ತಿದ್ದುಪಡಿ ಮಾಸೂದೆಯ ವಿರುದ್ಧ ನಿಂತ ಶಾಂತಿದೂತರು. ನಮ್ಮ ಹಿಂದೂಗಳು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಮನೆ ಮಠ ಜಮೀನು ದೇವಸ್ಥಾನಗಳೆಲ್ಲವನ್ನೂ ಅವರ ಪಾಲಿಗೆ ಬಿಟ್ಟು, ದೇಶ ಬಿಟ್ಟು ಹೋಗುವ ಕಾಲ ಜಾಸ್ತಿ ದೂರ ಏನಿಲ್ಲ…’’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ, ‘‘ಕಾಂಗ್ರೆಸ್ ನೇತೃತ್ವದಲ್ಲಿ ವಕ್ಫ್ ಮಸೂದೆ ವಿರೋಧಿಸಿ ದೆಹಲಿ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ಜಮಾಯಿಸಿದ ಲಕ್ಷಾಂತರ ಜನರು. ಮೋದಿ, ಯೋಗಿ ಎಲ್ಲವನ್ನೂ ಮಾಡುತ್ತಾರೆ ಎಂದು ಭಾವಿಸಿ ಹಿಂದೂಗಳು ಇನ್ನೂ ನಿದ್ದೆ ಮಾಡುತ್ತಿದ್ದಾರೆ. ಬಿಜೆಪಿಗೆ ಮತ ಹಾಕುವ ಮೊದಲು ನಾವು ಖಟಾಖತ್ ಯೋಜನೆ, ಉಚಿತ ವಿದ್ಯುತ್ ಮತ್ತು ಉಚಿತ ನೀರು ಮತ್ತು ಲಾಭವನ್ನು ಲೆಕ್ಕಹಾಕಿ ಮತ್ತು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಿ’’ ಎಂದು ಮತ್ತೊಬ್ಬರು ಬರೆದು ಇದೇ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
Fact Check:
ಆದರೆ, ಟಿವಿ9 ಕನ್ನಡ ನಡೆಸಿದ ತನಿಖೆಯಲ್ಲಿ ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಕಾಂಗ್ರೆಸ್ ಕಾರ್ಯಕ್ರಮದ್ದಲ್ಲ ಎಂದು ತಿಳಿದುಬಂದಿದೆ. ಹಲಿಯಲ್ಲಿ ಜಮಿಯತ್ ಉಲಮಾ-ಎ-ಹಿಂದ್ ಆಯೋಜಿಸಿದ್ದ ಸಂವಿಧಾನ ಉಳಿಸಿ ಸಮಾವೇಶದ ವಿಡಿಯೋ ಇದಾಗಿದೆ. ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.
ಆಗ ಇದೇ ಘಟನೆಯ ಇತರ ಹಲವು ವಿಡಿಯೋಗಳನ್ನು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಅನೇಕ ಜನರು ಹಂಚಿಕೊಂಡಿದ್ದಾರೆ ಎಂದು ಕಂಡುಬಂದಿದೆ. ಇದೇ ಕಾರ್ಯಕ್ರಮದ ಮತ್ತೊಂದು ಕೋನದ ವಿಡಿಯೋ ನಮಗೆ ಸಿಕ್ಕಿದ್ದು, ಇದರಲ್ಲಿ ‘ದೆಹಲಿ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಜಮಿಯತ್ ಉಲಾಮಾ-ಎ-ಹಿಂದ್’ ಎಂಬ ಶೀರ್ಷಿಕೆ ನೀಡಲಾಗಿದೆ. ಸ್ಮಾರ್ಟ್ ಬಾಯ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
ನಂತರ ನಾವು ದೆಹಲಿಯ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ಮುಸ್ಲಿಂ ಸಂಘಟನೆಯಾದ ಜಮಿಯತ್ ಉಲಮಾ-ಎ-ಹಿಂದ್ ನಡೆಸಿದ ಕಾರ್ಯಕ್ರಮದ ಬಗ್ಗೆ ವಿಚಾರಿಸಿದೆವು. ಈ ಸಂಸ್ಥೆಯು ನವೆಂಬರ್ 3, 2024 ರಂದು ದೆಹಲಿಯಲ್ಲಿ ಸಮಾವೇಶವನ್ನು ಆಯೋಜಿಸಿದೆ. ಅಲ್ಲದೆ ವೈರಲ್ ವಿಡಿಯೋದಲ್ಲಿ ಜಮಿಯತ್ ಉಲೇಮಾ-ಎ-ಹಿಂದ್ ಧ್ವಜಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಜೊತೆಗೆ ಕ್ರೀಡಾಂಗಣದಲ್ಲಿ ಹಾಕಿರುವ ದೊಡ್ಡ ಡಿಸ್ಪ್ಲೇ ಮೇಲೆ ವ್ಯಕ್ತಿಯೊಬ್ಬರು ಉಪನ್ಯಾಸ ನೀಡುತ್ತಿರುವುದನ್ನು ಕಾಣಬಹುದು. ಇವರು ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಆಗಿದ್ದಾರೆ.
ಹಾಗೆಯೆ ನಾವು ಜಮೀಯತ್ ಉಲಮಾ-ಎ-ಹಿಂದ್‌ನ ಸಮಾವೇಶಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಗೂಗಲ್ನಲ್ಲಿ ಕಂಡಿದ್ದೇವೆ. ಜಮಿಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಈ ಸಮಾವೇಶದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ತೀವ್ರ ಟೀಕೆ ಎತ್ತಿದ್ದಾರೆ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಈ ವಿಷಯದ ಬಗ್ಗೆ ಮುಸ್ಲಿಂ ಸಮುದಾಯದ ಭಾವನೆಗಳನ್ನು ಪರಿಗಣಿಸಬೇಕು ಎಂದು ಹೇಳಿದರು. ನವೆಂಬರ್ 3 ರಂದು ಖಾಸಗಿ ವೆಬ್ಸೈಟದ ಒಂದು ಪ್ರಕಟಿಸಿದ ಸುದ್ದಿಯಲ್ಲಿ, ಜಮಿಯತ್ ಉಲಾಮಾ-ಎ-ಹಿಂದ್ ನಡೆಸಿದ ಸಂವಿಧಾನ ಉಳಿಸಿ ಸಮಾವೇಶದಲ್ಲಿ ಮದನಿ ಈ ರೀತಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: ಸೂಪರ್ ಮಾರ್ಕೆಟ್‌ನಲ್ಲಿ ಬುರ್ಖಾಧಾರಿ ಮಹಿಳೆಯ ಕರಾಮತ್ತು, ಹಾಲು ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ಯಾವುದೇ ವರದಿಗಳಿಲ್ಲ. ಹೀಗಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕಾಂಗ್ರೆಸ್ ನೇತೃತ್ವದಲ್ಲಿ ವಕ್ಫ್ ಮಸೂದೆ ವಿರುದ್ಧದ ಕಾರ್ಯಕ್ರಮ ಎಂದು ವೈರಲ್ ಆಗುತ್ತಿರುವ ವಿಡಿಯೋ ಸುಳ್ಳಾಗಿದೆ. ಇದು ಜಮೀಯತ್ ಉಲಮಾ-ಎ-ಹಿಂದ್ ಆಯೋಜಿಸಿದ್ದ ಕಾರ್ಯಕ್ರಮದ ವಿಡಿಯೋ ಆಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ