Fact Check: ಎಳನೀರು ಮಾರುತ್ತಿರುವ ತನ್ನ ತಾಯಿಗೆ ಸರ್ಪ್ರೈಸ್ ನೀಡಿದ ಸೈನಿಕ: ಈ ವಿಡಿಯೋ ಶೇರ್ ಮಾಡುವ ಮುನ್ನ ಎಚ್ಚರ
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಭರ್ಜರಿ ವೈರಲ್ ಆಗುತ್ತಿದೆ. ಒಬ್ಬ ಮಹಿಳೆ ತೆಂಗಿನಕಾಯಿ ಮಾರುತ್ತಿರುತ್ತಾಳೆ. ಅಷ್ಟರಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬರುತ್ತಾನೆ. ಎಳನೀರುವ ಕೊಡಿ ಬಗ್ಗೆ ಕೇಳಿದಾಗ, ಮಹಿಳೆ ಅದನ್ನು ಒಡೆಯಲು ಮುಂದಾಗುತ್ತಾಳೆ. ಅಷ್ಟರಲ್ಲಿ..
ಸೇನೆಯಲ್ಲಿನ ಕೆಲಸವೆಂದರೆ ಹಾಗೆ, ಅದಕ್ಕೆ ಬಿಡುವು ಎಂಬುದು ಇರುವುದಿಲ್ಲ. ದಿನದ 24 ಗಂಟೆಯೂ ಎಚ್ಚರದಿಂದ ಇರಬೇಕು. ಅನೇಕರು ತಮ್ಮ ಕುಟುಂಬದಿಂದ ದೂರವಾಗಿ ಸೇನೆಗೆ ಸೇವೆ ಸಲ್ಲಿಸುತ್ತಿದ್ದಾರೆ. ರಜೆ ಸಿಕ್ಕಾಗಲೆಲ್ಲ ಮನೆಗೆ ಬಂದು ತಂದೆ-ತಾಯಿ, ಹೆಂಡತಿ ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ. ಅತ್ತ ಅನೇಕ ಪೋಷಕರು ಗಡಿ ಭದ್ರತೆಯಲ್ಲಿ ತಮ್ಮ ಮಕ್ಕಳ ಬಗ್ಗೆ ಯೋಚಿಸುತ್ತಾ ತಮ್ಮ ಊರಿನಲ್ಲಿಯೇ ಇರುತ್ತಾರೆ. ತಮ್ಮ ಮಕ್ಕಳು ಅನಿರೀಕ್ಷಿತವಾಗಿ ಭೇಟಿಯಾದಾಗ ಆಗುವ ಆನಂದ ವರ್ಣನಾತೀತ. ಕೆಲವು ಸೈನಿಕರು ತಮ್ಮ ಪೋಷಕರಿಗೆ ಅಂತಹ ಸರ್ಪ್ರೈಶ್ ನೀಡುತ್ತಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇಂತಹದೊಂದು ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ಒಬ್ಬ ಮಹಿಳೆ ತೆಂಗಿನಕಾಯಿ ಮಾರುತ್ತಿರುತ್ತಾಳೆ. ಅಷ್ಟರಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬರುತ್ತಾನೆ. ಎಳನೀರುವ ಕೊಡಿ ಬಗ್ಗೆ ಕೇಳಿದಾಗ, ಮಹಿಳೆ ಅದನ್ನು ಒಡೆಯಲು ಮುಂದಾಗುತ್ತಾಳೆ. ಅಷ್ಟರಲ್ಲಿ ಆತ ತನ್ನ ಮಾಸ್ಕ್ ತೆಗೆದಾಗ ಮಹಿಳೆ ಭಾವುಕಳಾಗುತ್ತಾಳೆ. ಇಲ್ಲಿ ಬಂದಿರುವುದು ಎಳನೀರು ಮಾರುವವಳ ಮಗ, ಆತ ಸೈನಿಕ.
ಈ ವಿಡಿಯೋವನ್ನು ಫೇಸ್‌ಬುಕ್, ಎಕ್ಸ್ನಲ್ಲಿ ಅನೇಕರು ಹಂಚಿಕೊಂಡಿದ್ದು, ‘‘ರೈಲ್ವೆ ಸ್ಟೇಷನ್ ಬಳಿ ಎಳನೀರು ಮಾರುವ ಈ ಮಹಾತಾಯಿಯ ಮಗ ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದು, ರಜೆ ಮೇಲೆ ತನ್ನ ತಾಯಿಗೆ ಅರಿವಿಲ್ಲದಂತೆ ಬಳಿ ಬಂದು ಭೇಟಿಯಾದ ಕ್ಷಣ. ತಾಯಿ-ಮಗನ ಭಾವನಾತ್ಮಕ ದೃಶ್ಯ ನೋಡಿ ಕಣ್ಣಲ್ಲಿ ನೀರು ಸುರಿಯಿತು’’ ಎಂದು ಬರೆದುಕೊಂಡಿದ್ದಾರೆ.
ರೈಲ್ವೆ ಸ್ಟೇಷನ್ ಬಳಿ ಎಳನೀರು ಮಾರುವ ಈ ಮಹಾತಾಯಿಯ ಮಗ ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದು, ರಜೆ ಮೇಲೆ ತನ್ನ ತಾಯಿಗೆ ಅರಿವಿಲ್ಲದಂತೆ ಬಳಿ ಬಂದು ಭೇಟಿಯಾದ ಕ್ಷಣ😍 ತಾಯಿ-ಮಗನ ಭಾವನಾತ್ಮಕ ದೃಶ್ಯ ನೋಡಿ ಕಣ್ಣಲ್ಲಿ ನೀರು ಸುರಿಯಿತು❤️🙏🙏🙏 pic.twitter.com/CCl1jupBN9
— BAIRAPPA BMNAYAK (@BairappaBmnayak) November 20, 2024
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಪೋಸ್ಟ್ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ, ಇದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಆಗಿದೆ. ಸದ್ಯ ವೈರಲ್ ಆಗುತ್ತಿರುವ ಪೋಸ್ಟ್‌ಗಳು ಜನರನ್ನು ದಾರಿ ತಪ್ಪಿಸುವಂತಿದೆ. ನಿಜಾಂಶವನ್ನು ತಿಳಿಯಲು ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡುವಾಗ ನಮಗೆ ನಟಿ ಸಂಜನಾ ಗಲ್ರಾನಿ ಅವರ ಫೇಸ್‌ಬುಕ್ ಪುಟದಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಸುದೀರ್ಘ ಆವೃತ್ತಿ ಕಂಡುಬಂದಿದೆ. ಇವರು ಈ ವಿಡಿಯೋವನ್ನು 12 ನವೆಂಬರ್ 2024 ರಂದು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದು 4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಇದರಲ್ಲಿ ನಾವು 3:37 ಸೆಕೆಂಡ್‌ಗಳ ವೀಡಿಯೋವನ್ನು ನೋಡಬಹುದು. ವಿಡಿಯೋದ ಶೀರ್ಷಿಕೆಯಲ್ಲಿ “ಈ ಪೇಜ್ ಸ್ಕ್ರಿಪ್ಟ್ ಮಾಡಿದ ಡ್ರಾಮಾ, ಜಾಗೃತಿಯ ವಿಡಿಯೋಗಳನ್ನು ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳನ್ನು ಮನರಂಜನೆ, ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ. ವಿಡಿಯೋಗಳಲ್ಲಿ ಚಿತ್ರಿಸಲಾದ ಎಲ್ಲಾ ಪಾತ್ರಗಳು, ಸನ್ನಿವೇಶಗಳು ಕಾಲ್ಪನಿಕವಾಗಿವೆ. ಜಾಗೃತಿ ಮೂಡಿಸಲು, ಮನರಂಜನೆಗಾಗಿ ಉದ್ದೇಶಿಸಲಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ. ಇದರಿಂದ ಇದು ಕಟ್ಟುಕಥೆ ಎಂಬುದು ಸ್ಪಷ್ಟವಾಗಿದೆ.
ಹಾಗೆಯೆ 15 ನವೆಂಬರ್ 2024 ರಂದು “3RD EYE” ಯೂಟ್ಯೂಬ್ ಚಾನಲ್‌ನಲ್ಲಿ ನಾವು ಇದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಮನೋರಂಜನೆ ಮತ್ತು ಶಿಕ್ಷಣಕ್ಕಾಗಿ ಇದನ್ನು ಮಾಡಲಾಗಿದೆ ಎಂದು ವಿಡಿಯೋ ವಿವರಣೆಯಲ್ಲಿ ತಿಳಿಸಲಾಗಿದೆ. 3RD EYE ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಈ ರೀತಿ ಜಾಗೃತಿಗಾಗಿ ಮಾಡಿದ ವಿಡಿಯೋಗಳು ತುಂಬಾ ಇವೆ.
ಫ್ಯಾಕ್ಟ್ ಚೆಕ್ ನಡೆಸಿ ಮಾಹಿತಿ ನೀಡುವ dintentdata ಕೂಡ ತನ್ನ ಎಕ್ಸ್ ಖಾತೆಯಲ್ಲಿ ಈ ವೈರಲ್ ಪೋಸ್ಟ್‌ಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ವಿವರಣೆಯನ್ನು ನೀಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ವೈರಲ್ ವಿಡಿಯೋದಲ್ಲಿ ಸತ್ಯಾಂಶವಿಲ್ಲ ಎಂದು ಹಲವು ಸತ್ಯ ತಪಾಸಣೆ ಸಂಸ್ಥೆಗಳು ಲೇಖನಗಳನ್ನು ಪ್ರಕಟಿಸಿವೆ.
2664 ANALYSIS: Fake FACT: A video shows a heartwarming scene where a masked man in uniform approaches a coconut shop and asks a woman working there for coconut water. As the woman prepares it, the man removes his mask, revealing himself as her son serving in the army. (1/3) pic.twitter.com/oGwNEhihOn
— D-Intent Data (@dintentdata) November 20, 2024
ಹೀಗಾಗಿ, ವೈರಲ್ ವಿಡಿಯೋದಲ್ಲಿ ಯಾವುದೇ ಸತ್ಯವಿಲ್ಲ ಮತ್ತು ಇದೊಂದು ಕಾಲ್ಪನಿಕ ಪಾತ್ರಗಳೊಂದಿಗೆ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ವೈರಲ್ ಪೋಸ್ಟ್‌ಗಳು ಜನರನ್ನು ದಾರಿ ತಪ್ಪಿಸುತ್ತಿವೆ. ಇಂತಹ ವಿಡಿಯೋಗಳನ್ನು ಶೇರ್ ಮಾಡುವ ಮುನ್ನ ಎಚ್ಚರ ವಹಿಸಿ.
Published On - 6:34 pm, Wed, 27 November 24