Video : ಅಮ್ಮನ ಕೈತುತ್ತು ಎಷ್ಟು ರುಚಿಕರ : ವಿದೇಶಿಗನಿಗೆ ಕೈ ತುತ್ತು ನೀಡಿದ ಭಾರತೀಯ ಮಹಿಳೆ
ಕೈತುತ್ತು ಕೊಟ್ಟೋಳೆ ಐ ಲವ್ ಮೈ ಮದರ್ ಇಂಡಿಯಾ ಈ ಹಾಡು ಕೇಳಿದರೆ ಅಮ್ಮನ ಪ್ರೀತಿಯ ಕೈತುತ್ತು ನೆನಪಾಗುತ್ತದೆ. ಹೌದು ತಾಯಿಯ ಪ್ರೀತಿಯ ಕೈತುತ್ತಿನ ರುಚಿಯೇ ಬೇರೆ. ವಿದೇಶಿಗನೊಬ್ಬನಿಗೆ ಭಾರತೀಯ ಮಹಿಳೆ ಕೈ ತುತ್ತು ನೀಡಿದ್ದಾರೆ. ಮೊದಲ ಬಾರಿ ಕೈ ತುತ್ತು ಸವಿದ ಈ ವಿದೇಶಿಗ ಪ್ರೀತಿ ತುಂಬಿದ ಈ ತುತ್ತು ಸವಿದು ಖುಷಿಪಟ್ಟಿದ್ದಾರೆ. ಈ ವಿಶೇಷ ಹಾಗೂ ಹೃದಯಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು , ನೆಟ್ಟಿಗರು ತಾಯಿಯ ಪರಿಶುದ್ಧ ಪ್ರೀತಿಯಲ್ಲಿ ಮುಳುಗಿದರೆ ಮತ್ತೆ ಮಗುವಾಗುತ್ತೇವೆ ಎಂದು ಹೇಳಿದ್ದಾರೆ.

ಇಂದಿನ ವೇಗ ಜೀವನದಲ್ಲಿ ಮಕ್ಕಳಿಗೆ ಕೈ ತುತ್ತು ಇರಲಿ, ಚಮಚದಲ್ಲಿ ಊಟ ಮಾಡಿಸಲು ಸಮಯವಿಲ್ಲದ ಕಾಲ ಬಂದಾಗಿದೆ. ಆದರೆ ಅಮ್ಮನ (mother) ನೀಡುವ ಕೈ ತುತ್ತಿನ ರುಚಿಯೇ ಬೇರೆ. ಎಷ್ಟೇ ದೊಡ್ಡವರು ಆಗಿರಲಿ, ಅಮ್ಮ ಕೈ ತುತ್ತು ನೀಡುತ್ತಾಳೆ ಎಂದರೆ ಆ ತುತ್ತಿನಲ್ಲಿ ಪ್ರೀತಿ ವಾತ್ಸಲ್ಯದೊಂದಿಗೆ ರುಚಿಯೂ ಅಷ್ಟೇ ಅದ್ಭುತವಾಗಿ ಇರುತ್ತದೆ. ಊಟ ಮಾಡಿಸಿದಾಗ ಒಂದು ತುತ್ತು ಹೆಚ್ಚೇ ಹೊಟ್ಟೆ ಸೇರುತ್ತದೆ. ಭಾರತೀಯ ತಾಯಂದಿರು ಊಟ ಮಾಡಲ್ಲ ಎಂದು ಹಠ ಹಿಡಿದು ಕುಳಿತಾಗ ಪ್ರೀತಿಯಿಂದ ಕೈ ತುತ್ತು ನೀಡುತ್ತಾರೆ. ಆದರೆ ಇದೀಗ ಅಮೆರಿಕನ್ ವ್ಲಾಗರ್ (American vlogger) ಒಬ್ಬರಿಗೆ ಭಾರತೀಯ ತಾಯಿಯೊಬ್ಬರು ಪ್ರೀತಿಯ ಕೈ ತುತ್ತು ನೀಡಿದ್ದಾರೆ. ಈ ರೀತಿ ಪ್ರೀತಿ ತುಂಬಿದ ಊಟ ಸವಿದ ವಿದೇಶಿಗನ ಈ ವಿಡಿಯೋವು ಬಳಕೆದಾರರನ್ನು ಭಾವುಕರನ್ನಾಗಿಸಿದೆ.
@dustincheverier ಹೆಸರಿನ ಖಾತೆಯಲ್ಲಿ ವಿಯೆಟ್ನಾಂ ಮೂಲದ ಕಂಟೆಂಟ್ ಕ್ರಿಯೇಟರ್ ಡಸ್ಟಿನ್ ಚೆವ್ರಿಯರ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಿನ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತೀಯ ಮಹಿಳೆಯೂ ಕೈ ತುತ್ತು ನೀಡಿದ ವಿಡಿಯೋ ಇದಾಗಿದೆ. ಭಾರತೀಯ ತಾಯಿ ನನಗೆ ಮಗುವಿನಂತೆ ಊಟ ಮಾಡಿಸುತ್ತಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಡಸ್ಟಿನ್ ಮಹಿಳೆಯೊಂದಿಗೆ ಕುಳಿತುಕೊಂಡಿರುವುದನ್ನು ಕಾಣಬಹುದು.
ಇದನ್ನೂ ಓದಿ :ಒಂದು ತಿಂಗಳಿನಿಂದ ಜೀವಂತ ಹುಳುಗಳನ್ನು ವಾಂತಿ ಮಾಡುತ್ತಿರುವ ಬಾಲಕಿ, ಇದಕ್ಕೆ ಕಾರಣ ಒಳಚರಂಡಿ
ಈ ಮಹಿಳೆಯೂ ಈ ವಿದೇಶಿಗನ ಸ್ನೇಹಿತನ ತಾಯಿಯಾಗಿದ್ದು, ಈ ಮಹಿಳೆಯೂ ಅನ್ನ ಹಾಗೂ ಸಾಂಬಾರನ್ನು ತನ್ನ ಕೈಯಿಂದ ಚೆನ್ನಾಗಿ ಬೆರೆಸುತ್ತಿದ್ದಾಳೆ. ಅಮ್ಮ ನನಗಾಗಿ ಪ್ರೀತಿಯಿಂದ ಆಹಾರ ಬೆರೆಸುತ್ತಿದ್ದಾಳೆ ಎಂದು ನಗುತ್ತಾ ಹೇಳುವುದನ್ನು ಕಾಣಬಹುದು. ಭಾರತೀಯರ ತಾಯಂದಿರು ತಮ್ಮ ಪುಟಾಣಿ ಮಕ್ಕಳಿಗೆ ಹೇಗೆ ನಿಧಾನವಾಗಿ ಊಟ ಮಾಡಿಸುತ್ತಾರೆ, ಅದೇ ರೀತಿ ವಿದೇಶಿಗನಿಗೆ ಪ್ರೀತಿಯ ಕೈ ತುತ್ತು ನೀಡುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು ಮೂವತ್ತಾರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ತಾಯಿ ಪ್ರೀತಿಯಿಂದ ಕೈ ತುತ್ತು ನೀಡಿದರೆ ಊಟ ಹೆಚ್ಚು ಮಾಡುತ್ತೀರಿ ಎಂದಿದ್ದಾರೆ. ಇನ್ನೊಬ್ಬರು, ತಾಯಿ ನೀಡುವ ಕೈತುತ್ತು ನಿಜವಾದ ಅಮೃತ. ಈ ತುತ್ತಿನ ತುಂಬಾ ತಾಯಿಯ ಪ್ರೀತಿ ತುಂಬಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಭಾರತೀಯ ತಾಯಂದಿರಿಗೆ ಮಕ್ಕಳು ಎಷ್ಟೇ ದೊಡ್ಡವರಾದರೂ ಪುಟ್ಟ ಮಕ್ಕಳಂತೆ ಕಾಣುತ್ತಾರೆ. ಹೀಗಾಗಿ ಆಗಾಗ ಅಮ್ಮ ಕೈತುತ್ತು ನೀಡುತ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ನೋಡಿದಾಗ ನನ್ನ ಕಣ್ಣಲ್ಲಿ ನೀರು ತುಂಬಿ ಬಂತು, ನಾನು ನನ್ನ ತಾಯಿ ಹಾಗೂ ಆಕೆಯ ಕೈ ತುತ್ತನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕಾಮೆಂಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:50 am, Wed, 2 July 25








