ಗಂಡನ ಮನೆಯ ದೀಪಾವಳಿ ಕಾರ್ಯಕ್ರಮಕ್ಕೆ ಪ್ರವೇಶ ಸಿಗದೇ ಬೀದಿಯಲ್ಲಿ ಕಾದ ರೇಮಂಡ್ ಮುಖ್ಯಸ್ಥರ ಪತ್ನಿ
Raymond Group Chairman's Family dispute: ಪತ್ನಿಯಿಂದ ಬೇರ್ಪಡುತ್ತಿರುವುದಾಗಿ ರೇಮಂಡ್ ಸಂಸ್ಥೆಯ ಮುಖ್ಯಸ್ಥ ಗೌತಮ್ ಸಿಂಘಾನಿಯಾ ಘೋಷಿಸಿದ ಬಳಿಕ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ ವಾರ ಸಿಂಘಾನಿಯ ಪತ್ನಿ ನವಾಜ್ ಮೋದಿ ಅವರು ಗಂಡನ ಮನೆಯ ದೀಪಾವಳಿ ಕಾರ್ಯಕ್ರಮಕ್ಕೆಂದು ಬಂದು ಪ್ರವೇಶ ಸಿಗದೇ ದ್ವಾರದಲ್ಲೇ ನಿಲ್ಲಬೇಕಾದ ದೃಶ್ಯದ ವಿಡಿಯೋ ಅದು.
ಮುಂಬೈ, ನವೆಂಬರ್ 14: ರೇಮಂಡ್ ಸಂಸ್ಥೆಯ ಛೇರ್ಮನ್ ಗೌತಮ್ ಸಿಂಘಾನಿಯಾ (gautam singhania) ತಮ್ಮ ಹಾಗು ನವಾಜ್ ಮೋದಿ ಅವರ 32 ವರ್ಷದ ದಾಂಪತ್ಯ ಅಂತ್ಯವಾಗಿದೆ ಎಂದು ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಅದಾಗಿ ಕೆಲ ಗಂಟೆಗಳಲ್ಲಿ ಗೌತಮ್ ಅವರ ವಿಚ್ಛೇದಿತ ಪತ್ನಿ ನವಾಜ್ ಮೋದಿ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗತೊಡಗಿತು. ಕಳೆದ ವಾರ ಮಹಾರಾಷ್ಟ್ರ ಥಾಣೆ ಜಿಲ್ಲೆಯಲ್ಲಿರುವ ಸಿಂಘಾನಿಯಾ ಅವರ ಮನೆಯಲ್ಲಿ ದೀಪಾವಳಿ ಕಾರ್ಯಕ್ರಮ ನಡೆದಿತ್ತು. ಈ ಪಾರ್ಟಿ ಸ್ಥಳದ ಪ್ರವೇಶ ದ್ವಾರದ ಬಳಿ ನವಾಜ್ ಮೋದಿ ಇರುವ ದೃಶ್ಯದ ವಿಡಿಯೋ ಅದು.
ಬೇರೊಬ್ಬ ಮಹಿಳೆಯೊಂದಿಗೆ ಬಂದಿದ್ದ ನವಾಜ್ ಮೋದಿ, ಪಾರ್ಟಿಗೆ ಆಹ್ವಾನ ಇದ್ದರೂ ತನಗೆ ಒಳಗೆ ಹೋಗಲು ಬಿಡುತ್ತಿಲ್ಲ ಎಂದು ಆ ವಿಡಿಯೋದಲ್ಲಿ ಆರೋಪಿಸುತ್ತಿದ್ದಾರೆ. ಚಂದ್ರಕಾಂತ ಎಂಬ ವ್ಯಕ್ತಿಯ ಹೆಸರನ್ನೂ ಆಕೆ ಹೇಳುತ್ತಿದ್ದಾರೆ. ಸ್ಥಳೀಯ ಪೊಲೀಸ್ ಮತ್ತಿತರ ಭದ್ರತಾ ಸಿಬ್ಬಂದಿ ಸಹಾಯದಿಂದ ನವಾಜ್ ಮೋದಿ ಹಾಗೂ ಇನ್ನೊಬ್ಬ ಮಹಿಳೆಯನ್ನು ಕಾರ್ಯಕ್ರಮಕ್ಕೆ ಬರದಂತೆ ತಡೆಯಲಾಗಿತ್ತು.
ಕಾರ್ಯಕ್ರಮ ಸ್ಥಳದ ಹೊರಗೆ ತಾನು ಕಾರಿನಲ್ಲೇ 3 ಗಂಟೆ ಕಾಲ ಕಾಯುವಂತಾಗಿತ್ತು ಎಂದು ರೇಮಂಡ್ ಗ್ರೂಪ್ನ ಮುಖ್ಯಸ್ಥ ಗೌತಮ್ ಸಿಂಘಾನಿಯಾ ಅವರ ವಿಚ್ಛೇದಿತ ಪತ್ನಿ ನವಾಜ್ ಮೋದಿ ಹೇಳುತ್ತಿರುವುದು ಈ ವಿಡಿಯೋದಲ್ಲಿದೆ.
ಈ ವಿಡಿಯೋ ವೈರಲ್ ಆಗುವ ಕೆಲ ಹೊತ್ತಿನ ಮೊದಲಷ್ಟೇ ಗೌತಮ್ ಸಿಂಘಾನಿಯಾ ಅವರು ತಮ್ಮ ದಾಂಪತ್ಯ ಅಂತ್ಯವಾಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು. ತಮ್ಮ ಕುಟುಂಬದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿರುವ ಅವರು, ಪತ್ನಿಯಿಂದ ಬೇರೆಯಾಗುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ.
ಗೌತಮ್ ಸಿಂಘಾನಿಯಾ ಅವರು 1999ರಲ್ಲಿ ನವಾಜ್ ಮೋದಿ ಅವರನ್ನು ಮದುವೆಯಾಗಿದ್ದರು. ಅವರ ಟ್ವೀಟ್ ಪ್ರಕಾರ 32 ವರ್ಷಗಳ ದಾಂಪತ್ಯ ಅವರದ್ದಾಗಿತ್ತು. ಆದರೆ, ಇಬ್ಬರೂ ಬೇರ್ಪಡಲು ಏನು ಕಾರಣ ಎಂಬುದು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: Vijaypat Singhania: ಬೀದಿಗೆ ಬಿದ್ಧ ಶ್ರೀಮಂತ; 13 ಲಕ್ಷ ಕೋಟಿ ರೂ ಮೌಲ್ಯದ ರೇಮಂಡ್ಸ್ ಕಂಪನಿ ಮಾಜಿ ಛೇರ್ಮನ್ನ ಕರುಣಾಜನಕ ಕಥೆ
ಗೌತಮ್ ಸಿಂಘಾನಿಯಾ ಖಾಸಗಿ ಬದುಕಿನಲ್ಲಿ ವಿವಾದಕ್ಕೆ ಒಳಗಾಗಿದ್ದು ಇದೇ ಮೊದಲಲ್ಲ. ಅವರ ತಂದೆ ವಿಜಯಪತ್ ಸಿಂಘಾನಿಯಾ ಜೊತೆಗೂ ಗೌತಮ್ಗೆ ವ್ಯಾಜ್ಯವಿದ್ದದ್ದು ಇತ್ತೀಚಿನ ವರ್ಷದಲ್ಲಿ ಬಹಿರಂಗವಾಗಿತ್ತು. ಲಕ್ಷಾಂತರ ಕೋಟಿ ರೂನಷ್ಟು ಶ್ರೀಮಂತರಾಗಿದ್ದ ವಿಜಯ್ಪತ್ ಸಿಂಘಾನಿಯಾ ಇವತ್ತು ಸಾಧಾರಣ ಬದುಕು ನಡೆಸುತ್ತಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ