Video: ಸಿಂಹ ಬಂತು ಎಂದು ವ್ಯಕ್ತಿ ಓಡಿದ್ರೆ, ಇತ್ತ ಕಾಡಿನ ರಾಜ ಏನ್ ಮಾಡಿತು ನೋಡಿ
ಕಾಡು ಪ್ರಾಣಿ ಬಂದು ನಿಮ್ಮ ಎದುರಿಗೆ ನಿಂತರೆ ನಿಮ್ಮ ರಿಯಾಕ್ಷನ್ ಹೇಗಿರಬಹುದು, ಅದನ್ನು ಊಹಿಸಲು ಅಸಾಧ್ಯ. ವ್ಯಕ್ತಿಯೊಬ್ಬನು ತನ್ನ ಎದುರಿಗೆ ಸಿಂಹವೊಂದು ಬರುತ್ತಿದ್ದನ್ನು ಕಂಡು ಎದ್ನೋ ಬಿದ್ನೋ ಎಂದು ಓಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಘಟನೆ ನಡೆದದ್ದು ಎಲ್ಲಿ? ಈ ಕುರಿತಾದ ಮಾಹಿತಿ ಇಲ್ಲಿದೆ.

ಗುಜರಾತ್, ಆಗಸ್ಟ್ 12 : ಕಾಡಿನ ರಾಜ ಸಿಂಹ (lion) ಹೆಸರು ಕೇಳಿದ ಕೂಡಲೇ ಅದರ ಗಾಂಭೀರ್ಯ ನಡಿಗೆಯೂ ಕಣ್ಣ ಮುಂದೆ ಬರುತ್ತದೆ. ಈ ಸಿಂಹವು ಜೋರಾಗಿ ಘರ್ಜಿಸಿದರೇನೇ ಸಾಕು ಜೀವವೆ ಕೈಗೆ ಬಂದು ಬಿಡುತ್ತದೆ. ಹೀಗಿರುವಾಗ ಸಿಂಹವೊಂದು ನಿಮ್ಮ ಮುಂದೆ ಬಂದು ನಿಂತರೆ ಆ ಸನ್ನಿವೇಶ ಹೇಗಿರಬಹುದು. ಕಣ್ಣು ಮುಚ್ಚಿ ಆ ಸಂದರ್ಭವನ್ನು ನೆನೆದರೆ ಸಾಕು, ಮೈಯೆಲ್ಲಾ ನಡುಕ ಬಾರುತ್ತದೆ. ಆದರೆ ಗುಜರಾತ್‌ನ ಜುನಾಗಢ ಜಿಲ್ಲೆಯ ದುಂಗರ್‌ಪುರ್ ಗ್ರಾಮದ (Dungarpur Gram, Junagadh district of Gujarat) ಸಿಮೆಂಟ್ ಕಾರ್ಖಾನೆ ಬಳಿ ವ್ಯಕ್ತಿಯೊಬ್ಬನು ಸಿಂಹವನ್ನು ಕಂಡು ಭಯದಿಂದ ಓಡಿದ್ದಾನೆ. ಆದರೆ ಆ ಸಿಂಹ ಕೂಡ ಆತನನ್ನು ನೋಡುತ್ತಿದ್ದಂತೆ ಎದ್ನೋ ಬಿದ್ನೋ ಎನ್ನುತ್ತಾ ಕಾಡಿನತ್ತ ಓಡಿ ಹೋಗಿದೆ. ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಡಲು ತಮಾಷೆಯಾಗಿ ಕಂಡರೂ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
@Nikhilsaini ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ರಾತ್ರಿ ಸರಿಸುಮಾರು ಹತ್ತು ಗಂಟೆಯ ಸುಮಾರಿಗೆ ಕಾರ್ಖಾನೆಯ ಹೊರಭಾಗದಲ್ಲಿ ಸಿಂಹವನ್ನು ನೋಡಿ ವ್ಯಕ್ತಿಯೊಬ್ಬನು ಭಯಗೊಂಡು ಕಾರ್ಖಾನೆಯ ಆವರಣದ ಕಡೆಗೆ ವೇಗವಾಗಿ ಓಡಿ ಬರುತ್ತಿರುವ ದೃಶ್ಯವಿದೆ. ಈ ವ್ಯಕ್ತಿಯನ್ನು ನೋಡಿದ ಸಿಂಹ ಕೂಡ ಭಯದಲ್ಲಿ ಕಾಡಿನತ್ತ ಓಡಿ ಹೋಗುತ್ತಿರುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Man and lion sudden faceoff what would your reaction be? pic.twitter.com/Nfiu2bp8ut
— Nikhil saini (@iNikhilsaini) August 9, 2025
ಈ ಘಟನೆಯ ಬಗ್ಗೆ ಮಾತನಾಡಿದ ಕಾರ್ಖಾನೆಯ ಮಾಲೀಕ ಸಾಗರ್ ಕೋಟೆಚಾ, ಈ ಪ್ರದೇಶದಲ್ಲಿ ಹಲವಾರು ದಿನಗಳಿಂದ ಸಿಂಹಗಳು ಕಾಣಿಸಿಕೊಂಡಿವೆ. ಅರಣ್ಯ ಪ್ರದೇಶವಾಗಿರುವುದರಿಂದ, ತಡರಾತ್ರಿ ಅಥವಾ ಮುಂಜಾನೆ ಸಿಂಹಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ರಾತ್ರಿಯ ಆ ಸಮಯದಲ್ಲಿ ಸಿಂಹಗಳನ್ನು ಅಷ್ಟು ಹತ್ತಿರದಲ್ಲಿ ನೋಡಸಿಗುವುದು ಕಡಿಮೆ. ಆ ವ್ಯಕ್ತಿ ಗಾಬರಿಗೊಂಡು ಹಿಂದಕ್ಕೆ ಓಡಿದ್ದು, ಸಿಂಹವು ಕೂಡ ಗಾಬರಿಯಿಂದ ಕಾಡಿನತ್ತ ಓಡಿ ಹೋಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಸ್ತೆ ದಾಟುವಾಗ ಸ್ಕೂಟಿಗೆ ಡಿಕ್ಕಿ ಹೊಡೆದ ಹಂದಿಗಳ ಹಿಂಡು; ಬಿದ್ದ ರಭಸಕ್ಕೆ ಮಹಿಳೆಯ ಹೆಲ್ಮೆಟ್ ಛಿದ್ರ!
ಈ ವಿಡಿಯೋ 22 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಮನುಷ್ಯನಿಗಿಂತ ಈ ಸಿಂಹವೇ ಹೆಚ್ಚು ಹೆದರಿತು ಎಂದು ತಮಾಷೆಯಾಗಿ ಹೇಳಿದ್ದಾರೆ. ಇನ್ನೊಬ್ಬರು, ಬಹುಶಃ ಇದು ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಘಟನೆಯಿರಬಹುದು. ಅಲ್ಲಿ ಮಾತ್ರ ಇಂತಹ ದೃಶ್ಯಗಳನ್ನು ಹೆಚ್ಚು ನೋಡುತ್ತೇವೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನಾಯಿ ಬೊಗಳುವಾಗ ಸುತ್ತ ಮುತ್ತ ಗಮನಿಸಿ, ಅವುಗಳು ಈ ಬಗ್ಗೆ ಸೂಚನೆ ಕೊಡುತ್ತವೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:48 am, Tue, 12 August 25








