Video: ಭಾರತದಲ್ಲಿ ಹೇಗೆ ರಸ್ತೆ ದಾಟಬೇಕೆಂದು ತನ್ನ ಸ್ನೇಹಿತೆಗೆ ಹೇಳಿಕೊಟ್ಟ ರಷ್ಯನ್ ಮಹಿಳೆ
ರಸ್ತೆಯ ತುಂಬಾ ಗಿಜಿಗುಟ್ಟುವ ವಾಹನಗಳು, ಒಂದರ ಹಿಂದೆ ಒಂದರಂತೆ ಸಾಲಾಗಿ ವಾಹನಗಳು ಬಂದು ಬಿಟ್ಟರೆ ರಸ್ತೆ ದಾಟುವುದೇ ದೊಡ್ಡ ಸವಾಲಿನ ಕೆಲಸ. ಆದರೆ ಇದೀಗ ರಷ್ಯಾದ ಮಹಿಳೆಯೊಬ್ಬರು ತಮ್ಮ ಸ್ನೇಹಿತೆಗೆ ಭಾರತದಲ್ಲಿ ರಸ್ತೆ ದಾಟುವುದು ಹೇಗೆಂದು ಹೇಳಿಕೊಟ್ಟಿದ್ದಾಳೆ. ಭಾರತೀಯ ವಿಧಾನಕ್ಕೆ ಈ ವಿದೇಶಿ ಮಹಿಳೆ ಹೊಂದಿಕೊಂಡ ರೀತಿ ಕಂಡು ಬಳಕೆದಾರರು ಅಚ್ಚರಿಗೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ಭಾರತಕ್ಕೆ ಬಂದ ವಿದೇಶಿಗರು ಇಲ್ಲಿನ ಆಚಾರ ವಿಚಾರ ಅನುಸರಿಸುವುದು ಮಾತ್ರವಲ್ಲ, ಇಲ್ಲಿನ ವಿವಿಧ ಬಗೆಯ ಆಹಾರವನ್ನು ಇಷ್ಟ ಪಟ್ಟು ಸವಿಯುತ್ತಾರೆ. ಅಷ್ಟೇ ಅಲ್ಲ, ಇಲ್ಲಿನ ಜನರ ನಡೆ ನುಡಿ ಗಮನಿಸಿ, ಸಣ್ಣ ಪುಟ್ಟ ವಿಚಾರಗಳನ್ನು ಬಹುಬೇಗನೇ ಕಲಿಯುತ್ತಾರೆ. ಇದಕ್ಕೆ ಸಾಕ್ಷಿ ಈ ವಿಡಿಯೋ. ಹೌದು ಭಾರತಕ್ಕೆ ಬಂದಿರುವ ರಷ್ಯಾದ ಮಹಿಳೆಯೂ (Russian Woman) ಭಾರತೀಯ ಶೈಲಿಯಲ್ಲಿ ರಸ್ತೆ ದಾಟುವುದನ್ನು ಕಲಿತುಕೊಂಡಿದ್ದಾಳೆ. ತನ್ನ ಸ್ನೇಹಿತೆಗೂ ಹೇಗೆ ರಸ್ತೆ ದಾಟುವುದೆಂದು ಕಲಿಸಿ ಕೊಟ್ಟಿದ್ದಾಳೆ. ಈ ರಷ್ಯಾದ ಮಹಿಳೆಯ ಹೆಸರು ವೆರಾ ಪ್ರೊಕೊಫೆವಾ (Vera Prokofeva). ಜೈಪುರದ ಪ್ರಸಿದ್ಧ ಹವಾ ಮಹಲ್ ಮುಂಭಾಗದಲ್ಲಿ ತನ್ನ ಸ್ನೇಹಿತೆಗೆ ರಸ್ತೆ ದಾಟುವುದನ್ನು ಹೇಳಿಕೊಡುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.
ತನ್ನ ಸ್ನೇಹಿತೆಗೆ ರಸ್ತೆ ದಾಟುವ ಪಾಠ ಮಾಡಿದ ರಷ್ಯನ್ ಮಹಿಳೆ
vera- india ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಭಾರತದಲ್ಲಿ ಮೊದಲ ನಿಯಮವೆಂದರೆ ರಸ್ತೆ ದಾಟುವುದು ಹೇಗೆಂದು ಕಲಿಯುವುದು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ರಷ್ಯಾದ ಮಹಿಳೆ ತನ್ನ ಸ್ನೇಹಿತೆಗೆ ಭಾರತದಲ್ಲಿ ರಸ್ತೆ ದಾಟುವ ವಿಧಾನದ ಬಗ್ಗೆ ಹೇಳಿಕೊಡುವುದನ್ನು ನೀವು ನೋಡಬಹುದು. ನಾನು ನಿನಗೆ ಭಾರತದಲ್ಲಿ ರಸ್ತೆ ದಾಟುವುದನ್ನು ಹೇಗೆ ಎಂದು ಹೇಳಿಕೊಡುತ್ತೇನೆ ಎಂದಿರುವ ವೆರಾ, ತನ್ನ ಸ್ನೇಹಿತೆಗೆ ಕೈಗಳನ್ನು ಮೇಲೆತ್ತಿ ಮುಂಬರುವ ವಾಹನಗಳಿಗೆ ನಿಧಾನಗೊಳಿಸಿ ಎಂದು ಹೇಳುವ ಸೂಚನೆ ಅವರಿಗೆ ನೀಡು. ಆ ಬಳಿಕ ಆರಾಮಾಗಿ ರಸ್ತೆ ದಾಟು ಎನ್ನುವುದನ್ನು ನೀವು ನೋಡಬಹುದು. ರಸ್ತೆ ದಾಟಿದ ಬಳಿಕ ಮಿಷನ್ ಪೂರ್ಣಗೊಂಡಿದೆ ಎಂದು ವೆರಾ ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ: Video: ಭಾರತೀಯನನ್ನು ಮದುವೆಯಾಗಿದ್ದು ಇದೇ ಕಾರಣಕ್ಕೆ ಎಂದ ರಷ್ಯಾದ ಮಹಿಳೆ
ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಕೆಲವರು ತಮಾಷೆಯಾಗಿಯೇ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು, ಭಾರತದಲ್ಲಿ ರಸ್ತೆ ದಾಟುವುದು ಒಂದು ಕಲೆ, ಇದನ್ನು ಪ್ರವಾಸಿಗರು ಬೇಗನೇ ಕಲಿತುಕೊಂಡು ಬಿಡುತ್ತಾರೆ ಎಂದು ಹೇಳಿದ್ದಾರೆ. ಇದು ನಿಜವಾದ ಕೌಶಲ್ಯ, ಇದು ತಿಳಿದಿದ್ದರೆ ವಾಹನಗಳ ನಡುವೆ ಸಿಲುಕುವುದು ತಪ್ಪುತ್ತೆ ಎಂದು ಮತ್ತೊಬ್ಬರು ಕಾಮೆಂಟ್ ನಲ್ಲಿ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, ಇದುವೇ ಕೈಗಳ ಶಕ್ತಿ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








