Video: ಆನೆಗೆ ಬಿಯರ್ ಕುಡಿಸಿದ ಪ್ರವಾಸಿಗ; ವೈರಲ್ ಆಯ್ತು ವಿಡಿಯೋ
ಪ್ರವಾಸಿ ಸ್ಥಳಗಳಲ್ಲಿ ಒಂದಷ್ಟು ಪ್ರವಾಸಿಗರು ಎಲ್ಲೆ ಮೀರಿ ವರ್ತಿಸುವಂತಹ ಘಟನೆಗಳಿಗೆ ಸಂಬಂಧಪಟ್ಟಂತಹ ಸುದ್ದಿಗಳು ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಸ್ಪ್ಯಾನಿಷ್ ಪ್ರವಾಸಿಗನೊಬ್ಬ ಕೀನ್ಯಾದ ಅಭಯಾರಣ್ಯವೊಂದರಲ್ಲಿ ಆನೆಗೆ ಬಿಯರ್ ಕುಡಿಸಿದ್ದಾನೆ. 2024 ರಲ್ಲಿ ಈ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಪ್ರವಾಸಿಗನ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಾಣಿ ಹಿಂಸೆ ಮಹಾಪಾಪ ಅನ್ನೋ ಮಾತಿದೆ. ಹೀಗಿದ್ರೂ ಕೂಡ ಅನೇಕರು ಒಂದಲ್ಲಾ ಒಂದು ರೀತಿಯಲ್ಲಿ ಪ್ರಾಣಿಗಳಿಗೆ ಹಿಂಸೆಯನ್ನು ನೀಡುತ್ತಿರುತ್ತಾರೆ. ಹೌದು ಕೆಲವರು ತಮ್ಮ ಹುಚ್ಚಾಟಗಳಿಗಾಗಿ ನಾಯಿಯ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚುವಂತಹ, ನಾಯಿಗೆ ಮದ್ಯ ಕುಡಿಸಿದಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತಾನು ಬಿಯರ್ ಕುಡಿಯುವುದರ ಜೊತೆಗೆ ಆನೆಗೂ (Tourist pours beer to elephant’s trunk) ಬಿಯರ್ ಕುಡಿಸಿದ್ದಾನೆ. ಕೀನ್ಯಾದ ಅಭಯಾರಣ್ಯವೊಂದರಲ್ಲಿ ಸ್ಪ್ಯಾನಿಷ್ ಪ್ರವಾಸಿಗ ಆನೆಯ ಸೊಂಡಿಲಿಗೆ ಬಿಯರ್ ಸುರಿದಿದ್ದು, ಈತನ ಈ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಆನೆಯ ಸೊಂಡಿಲಿಗೆ ಬಿಯರ್ ಸುರಿದ ಪ್ರವಾಸಿಗ:
ಬಿಬಿಸಿ ವರದಿಯ ಪ್ರಕಾರ, 2024 ರಲ್ಲಿ ನಡೆದ ಘಟನೆ ಇದಾಗಿದ್ದು, ಕೀನ್ಯಾದ ಲೈಕಿಪಿಯಾದ ಓಲ್ ಜೋಗಿ ಕನ್ಸರ್ವೆನ್ಸಿ ಅಭಯಾರಣ್ಯದಲ್ಲಿ ಸ್ಪ್ಯಾನಿಷ್ ಪ್ರವಾಸಿಗ ಆನೆಯ ಸೊಂಡಿಲಿಗೆ ಬಿಯರ್ ಸುರಿದಿದ್ದಾನೆ. ಈ ವಿಡಿಯೋವನ್ನು ಆ ವ್ಯಕ್ತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದನು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ವಿಡಿಯೋವನ್ನು ಡಿಲಿಟ್ ಮಾಡಿದ್ದನು. ಆದರೆ ಈ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗಿದೆ.
ಓಲ್ ಜೋಗಿ ವನ್ಯಜೀವಿ ಸಂರಕ್ಷಣಾಲಯದಲ್ಲಿನ ಬುಪಾ ಹೆಸರಿನ ಆನೆಯ ಸೊಂಡಿಲಿಗೆ ಪ್ರವಾಸಿಗ ಬಿಯರ್ ಸುರಿದಿದ್ದು, ಈ ಬಗ್ಗೆ ಮಾತನಾಡಿದ ಸಂರಕ್ಷಣಾಲಯವು “ನಾವು ಇಂತಹ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ನಮ್ಮ ಆರೈಕೆಯಲ್ಲಿರುವ ಪ್ರಾಣಿಗಳ ಯೋಗಕ್ಷೇಮ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲಿ ಬದ್ಧರಾಗಿದ್ದೇವೆ” ತಿಳಿಸಿದೆ. ಜೊತೆಗೆ ಸಂರಕ್ಷಣಾಲಯವು ಈ ನಡವಳಿಕೆ ಸ್ವೀಕಾರಾರ್ಹವಲ್ಲ, ಇದು ಅಪಾಯಕಾರಿ ಮತ್ತು ನಮ್ಮ ಮೌಲ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ” ಎಂದು ಹೇಳಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Spanish tourist in Kenya gives beer to elephant
The incident is being investigated by the Kenya Wildlife Service and the relevant authorities. pic.twitter.com/teut0sYhax
— MustShareNews (@MustShareNews) August 29, 2025
ಈ ಕುರಿತ ವಿಡಿಯೋವನ್ನು MustShareNews ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಕೀನ್ಯಾದಲ್ಲಿ ಆನೆಗೆ ಬಿಯರ್ ನೀಡಿದ ಸ್ಪ್ಯಾನಿಷ್ ಪ್ರವಾಸಿಗ; ಈ ಘಟನೆಯ ಬಗ್ಗೆ ಕೀನ್ಯಾ ವನ್ಯಜೀವಿ ಸೇವೆ ಮತ್ತು ಸಂಬಂಧಿತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ಇದನ್ನೂ ಓದಿ: ಹುಟ್ಟಿದ ನಂತರ ಮೊದಲ ಬಾರಿಗೆ ನೀರಿನ ಸ್ಪರ್ಶ, ಆನೆ ಮರಿಯ ಸಂತಸ ನೋಡಿ
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೊದಲು ಸ್ಪ್ಯಾನಿಷ್ ಪ್ರವಾಸಿಗ ತಾನು ಬಿಯರ್ ಕುಡಿದು, ನಂತರ ಆನೆಯ ಸೊಂಡಿಲಿಗೆ ಉಳಿದ ಬಿಯರ್ ಸುರಿಯುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರವಾಸಿಗನ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








