ಮಗುವನ್ನು ಎತ್ತಿಕೊಂಡೇ ವೇದಿಕೆಯ ಮೇಲೆ ಭಾಷಣ ಮಾಡಿದ ಕೇರಳ ಐಎಎಸ್ ಅಧಿಕಾರಿ; ನೆಟ್ಟಿಗರ ಮಿಶ್ರಪ್ರತಿಕ್ರಿಯೆ
Kerala : ಸಾಮಾಜಿಕ ಜಾಲತಾಣದಿಂದ ವಿಡಿಯೋ ಡಿಲೀಟ್ ಆದರೂ ಚರ್ಚೆ ಮಾತ್ರ ಜೀವಂತವಾಗಿದೆ. ನ್ಯೂಝಿಲೆಂಡ್ನ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ವಿಶ್ವಸಂಸ್ಥೆಯ ಸಭೆಗೆ ತನ್ನ 3 ತಿಂಗಳ ಮಗುವನ್ನು ಕರೆದೊಯ್ದಿದ್ದನ್ನು ನೆಟ್ಟಿಗರು ನೆನಪಿಸಿದ್ದಾರೆ.
Viral : ಸರ್ಕಾರಿ ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳ ಮೇಲೆ ಸಾರ್ವಜನಿಕ ವಲಯ ಸದಾ ಕಣ್ಣಿಟ್ಟಿರುತ್ತದೆ. ಅದರಲ್ಲೂ ಈಗ ನೆಟ್ಯುಗ. ಹೀಗಾಗಿ ಕಣ್ಣುಗಳು ಇನ್ನೂ ಸೂಕ್ಷ್ಮವಾಗಿರುತ್ತವೆ! ಖಾಸಗೀ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭಕ್ಕೆ ಆಹ್ವಾನಿತರಾಗಿ ಹೋಗಿದ್ದ ಕೇರಳದ ಜಿಲ್ಲಾಧಿಕಾರಿ ದಿವ್ಯಾ ಎಸ್. ಅಯ್ಯರ್ ತಮ್ಮ 3 ವರ್ಷದ ಮಗುವನ್ನು ಎತ್ತಿಕೊಂಡೇ ವೇದಿಕೆಯ ಮೇಲೆ ಭಾಷಣ ಮಾಡಿದ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದಿವ್ಯಾ ಪತನಂತಿಟ್ಟ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಡೂರಿನ 6ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟಕರಲ್ಲಿ ಒಬ್ಬರಾದ ರಾಜ್ಯ ವಿಧಾನಸಭೆಯ ಉಪಸಭಾಪತಿ ಚಿಟ್ಟಾಯಂ ಗೋಪಕುಮಾರ್ ಅವರು ದಿವ್ಯಾ ಅವರ ಭಾಷಣದ ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ ವಿವಾದದ ಸ್ವರೂಪ ಪಡೆದುಕೊಂಡಿದೆ. ಉನ್ನತಾಧಿಕಾರಿಗಳು ತಮ್ಮ ಕಾರ್ಯನೀತಿಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಕೆಲ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ಧಾರೆ. ಆನಂತರ ಆ ವಿಡಿಯೋ ಇದ್ದ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ.
ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ಮಾತ್ರ ಚರ್ಚೆ ಇನ್ನೂ ಜೀವಂತವಾಗಿದೆ. ಸಾಕಷ್ಟು ಜನರು ದಿವ್ಯಾ ಅವರಿಗೆ ಸಾಥ್ ನೀಡಿದ್ದಾರೆ. ಅನೇಕ ಅಧಿಕಾರಿಗಳು, ರಾಜಕಾರಣಿಗಳು ಮಹತ್ವದ ಸಭೆಗೂ ಹಸುಗೂಸು ಮತ್ತು ಪುಟ್ಟಮಕ್ಕಳನ್ನು ಕರೆದೊಯ್ದುದನ್ನು ನೆನಪಿಸಿದ್ದಾರೆ. ನ್ಯೂಝಿಲೆಂಡ್ನ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಕೂಡ ಇದಕ್ಕೆ ಹೊರತಾಗಿಲ್ಲ, 2018ರಲ್ಲಿ ಅವರು ವಿಶ್ವಸಂಸ್ಥೆಯ ಸಭೆಗೆ ತನ್ನ 3 ತಿಂಗಳ ಮಗುವನ್ನು ಕರೆದೊಯ್ದಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಅಯ್ಯರ್ ಅವರ ಪತಿ, ಮಾಜಿ ಶಾಸಕ ಮತ್ತು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಶಬರಿನಾಥನ್, ‘ಕಾರ್ಯಕ್ರಮ ನಡೆದಿದ್ದು ಭಾನುವಾರ ಮತ್ತು ಕಚೇರಿ ಕೆಲಸಕ್ಕೆ ಸಂಬಂಧಿಸಿರಲಿಲ್ಲ’ ಎಂದು ಹೇಳಿಕೆ ನೀಡಿದ್ಧಾರೆ. ಆದರೆ ಈ ವಿವಾದದ ಕುರಿತು ದಿವ್ಯಾ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ