Viral Video: ಇಲ್ಲಿಗೆ ಕುಡ್ಕೊಂಡು ಬಂದಿದ್ಯೇನೋ.. ಕುಡುಕನನ್ನು ಕೋಪದಿಂದ ಎತ್ತೆಸೆದ ಕುಕ್ಕೆ ಸುಬ್ರಮಣ್ಯ ದೇಗುಲದ ಆನೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಆನೆ ʼಯಶಸ್ವಿನಿʼ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಾಮಾನ್ಯವಾಗಿ ಈ ಆನೆ ಭಕ್ತರೊಂದಿಗೆ ಶಾಂತ ರೀತಿಯಲ್ಲಿಯೇ ವರ್ತಿಸುತ್ತದೆ. ಆದರೆ ಇದೀಗ ಯಶಸ್ವಿನಿ ಆನೆ ತನ್ನ ಬಳಿ ಕಂಠ ಪೂರ್ತಿ ಕುಡಿದು ಬಂದ ವ್ಯಕ್ತಿಯೊಬ್ಬನನ್ನು ಕೋಪದಲ್ಲಿ ಸೊಂಡಿಲಿನಿಂದ ಎತ್ತೆಸೆದಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಆನೆಗಳು ತುಂಬಾನೇ ಸಾದು ಪ್ರಾಣಿಗಳು ಅವುಗಳು ಅಷ್ಟಾಗಿ ಯಾರಿಗೂ ತೊಂದರೆ ಕೊಡಲು ಹೋಗುವುದಿಲ್ಲ. ಅದರಲ್ಲೂ ದೇವಾಲಯಗಳಲ್ಲಿನ ಆನೆಗಳಂತೂ ತನ್ನ ಮಾವುತನ ಮಾತು ಕೇಳಿಕೊಂಡು ಶಿಸ್ತು ಬದ್ಧವಾಗಿ ನಡೆದುಕೊಳ್ಳುತ್ತವೆ. ದೇವಾಲಯಕ್ಕೆ ಬಂದ ಭಕ್ತರ ಬಳಿ ಶಾಂತ ರೀತಿಯಲ್ಲಿ ವರ್ತಿಸುತ್ತವೆ. ಅಷ್ಟೇ ಯಾಕೆ ತನ್ನ ಬಳಿ ಬಂದ ಭಕ್ತರ ತಲೆಯ ಮೇಲೆ ಸೊಂಡಿಲಿಟ್ಟು ಆಶೀರ್ವಾದವನ್ನು ಮಾಡುತ್ತದೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕೂಡಾ ಕುಕ್ಕೆ ಶ್ರೀ ಸುಬ್ರಮಣ್ಯ ದೇಗುಲದ ಆನೆಯ ಬಳಿ ಬಂದಿದ್ದು, ಆತ ಮದ್ಯಪಾನ ಮಾಡಿ ತನ್ನ ಬಳಿ ಬಂದಿದ್ದರಿಂದ ಕೋಪಗೊಂಡ ಆನೆ ಆ ಕುಡುಕ ಮಹಾಶಯನನ್ನು ಎತ್ತೆಸೆದಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಸೂರ್ಯ ರಶ್ಮಿ (Suryarashmi) ಎಂಬ ಫೇಸ್ಬುಕ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, “ಮಾವುತ ಬೈದು ಕಳುಹಿಸಿದರೂ ಮತ್ತೆ ಹತ್ತಿರಕ್ಕೆ ಬಂದ ಮದ್ಯಪಾನಿ, ಕೋಪದಲ್ಲಿ ಆತನನ್ನು ಎತ್ತಿ ಬಿಸಾಕಿದ ಆನೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ವಿಡಿಯೋದಲ್ಲಿ ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯದ ಆನೆ ಯಶಸ್ವಿನಿ ತನ್ನ ಮಾವುತನ ಬಳಿ ನಿಂತು ಖುಷಿ ಖುಷಿಯಾಗಿ ನೃತ್ಯ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಬಳಿಕ ಪೊಲೀಸರು ಸೇರಿದಂತೆ ಒಂದಿಬ್ಬರು ಯಶಸ್ವಿನಿಯ ಬಳಿ ಬಂದು ಫೋಟೋ ಕ್ಲಿಕ್ಕಿಸಿಕೊಂಡರೂ ಆನೆ ಶಾಂತವಾಗಿಯೇ ವರ್ತಿಸಿತ್ತು. ಆದರೆ ಅಷ್ಟರಲ್ಲೇ ಕುಡಿದು ಬಂದ ವ್ಯಕ್ತಿಯೊಬ್ಬನನ್ನು ಯಶಸ್ವಿನಿ ಕೋಪದಿಂದ ತನ್ನ ಸೊಂಡಿಲಿನಿಂದ ಎತ್ತೆಸೆದಿದ್ದು, ಅತ ಒಂದಷ್ಟು ದೂರಕ್ಕೆ ಹೋಗಿ ಬಿದ್ದಿದ್ದಾನೆ. ಆ ವೇಳೆ ಮಾವುತ ಮದ್ಯಪಾನ ಮಾಡಿ ಆನೆಯ ಹತ್ತಿರ ಏಕೆ ಬರುತ್ತೀರಿ ಎಂದು ಕುಡುಕ ಮಹಾಶಯನನ್ನು ಮಾವುತ ದಬಾಯಿಸಿದ್ದಾರೆ. ಯಶಸ್ವಿನಿಗೆ ಮದ್ಯದ ವಾಸನೆ ಆಗುವುದಿಲ್ಲ, ಅದಕ್ಕೆ ಕುಡಿದು ಬಂದ್ರೆ ಗೊತ್ತಾಗುತ್ತೆ ಅದೇ ಕಾರಣಕ್ಕೆ ಈತನನ್ನು ಎತ್ತೆಸೆದಿದ್ದು ಎಂದು ಮಾವುತ ಅಲ್ಲಿದ್ದ ಇತರರ ಬಳಿ ಹೇಳಿದ್ದಾರೆ.
ಇದನ್ನೂ ಓದಿ: ಮೈ ಮೇಲೆ ದೆವ್ವ ಬಂದಂತೆ ವರ್ತಿಸುತ್ತಿರುವ ವಿದ್ಯಾರ್ಥಿನಿಯರು, ಗಾಬರಿಗೊಂಡ ಶಿಕ್ಷಕ ವೃಂದ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೆಲವರು ಮಾವುತ ಆನೆಗೆ ಸರಿಯಾಗಿ ಟ್ರೈನಿಂಗ್ ಕೊಟ್ಟಿಲ್ಲ ಎಂದು ಹೇಳಿದ್ರೆ, ಇನ್ನೂ ಕೆಲವರು ಮಾವುತನ ಮಾತು ಆತ ಕೇಳದಿದ್ದಕ್ಕೆ ಆನೆ ಕೋಪಗೊಂಡಿದೆ ಎಂದು ಕಾಮೆಂಟ್ಸ್ ಮಾಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:01 am, Thu, 27 June 24