Video: ಚಿಂತೆಯಿಲ್ಲದ ಬಾಲ್ಯ; ಅಡುಗೆಯಾಟ ಆಡಿ ಸಂಭ್ರಮಿಸಿದ ಪುಟಾಣಿಗಳು

ಈಗಿನ ಕಾಲದ ಮಕ್ಕಳಿಗೆ ಅಡುಗೆ ಮನೆಯಾಟ, ಮಣ್ಣಲ್ಲಿ ಆಟ ಆಡುವುದೆಂದರೆ ತಿಳಿಯುವುದೇ ಇಲ್ಲ. ಅವರದ್ದೇನಿದ್ದರೂ ಮೊಬೈಲ್‌ಯೇ ಪ್ರಪಂಚ. ಆದರೆ ಇದೀಗ ಬಾಲ್ಯವನ್ನು ನೆನಪಿಸುವ ವಿಡಿಯೋವೊಂದು ವೈರಲ್ ಆಗಿದೆ. ಪುಟಾಣಿಗಳೆಲ್ಲಾ ಸೇರಿ ಅಡುಗೆ ಮನೆಯಾಟ ಆಡುವುದಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಚಿಂತೆಯಿಲ್ಲದ ಬಾಲ್ಯ; ಅಡುಗೆಯಾಟ ಆಡಿ ಸಂಭ್ರಮಿಸಿದ ಪುಟಾಣಿಗಳು
ವೈರಲ್ ವಿಡಿಯೋ
Image Credit source: Instagram

Updated on: Apr 06, 2026 | 11:04 AM

ಈಗಿನ ಮಕ್ಕಳಿಗೆ (children) ಮೊಬೈಲ್ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಎನ್ನುವಂತಾಗಿದೆ. ಆದರೆ ನಾವು ಸಣ್ಣವರು ಇದ್ದಾಗ ಆಡುತ್ತಿದ್ದ ಅದೆಷ್ಟೋ ಆಟಗಳ ಬಗ್ಗೆ ಈಗಿನ ಮಕ್ಕಳಿಗೆ ತಿಳಿದೇ ಇಲ್ಲ. ಅಂದು ಶಾಲೆ ಬಿಟ್ಟ ಕೂಡಲೇ ಮನೆಗೆ ಬಂದು ನಾನಾ ರೀತಿಯ ಆಟವನ್ನು ಆಡುತ್ತಿದ್ದ ಕಾಲವೊಂದಿತ್ತು. ಸೊಪ್ಪಾಟ, ಚೊಂಕಾಟ, ಕೆರೆದಡ, ಹುಲಿದನ ಹಾಗೂ ಅಡುಗೆಯಾಟ ಹೀಗೆ ನಾನಾ ರೀತಿಯ ಆಟವಾಡಿ ಖುಷಿ ಪಡುತ್ತಿದ್ದೆವು. ಹೆಣ್ಣು ಮಕ್ಕಳಿಗೆ ಅಡುಗೆಯಾಟವೇ ಮೆಚ್ಚಿನ ಆಟವಾಗಿತ್ತು. ಎಲೆ, ಸೊಪ್ಪು, ಮಣ್ಣು ಹೀಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಬಳಸಿ ಅಡುಗೆ ಮನೆ ಮನೆ ಮಂದಿಯಂತೆ ಕುಳಿತು ಊಟ ಸವಿದು ಸಂಭ್ರಮಿಸುತ್ತಿದ್ದ ಆಟವದು. ಇದೀಗ ಈ ವಿಡಿಯೋ ನೋಡಿದ್ರೆ ನಿಮಗೆ ಖಂಡಿತ ನಿಮ್ಮ ಬಾಲ್ಯ ನೆನಪಾಗುತ್ತದೆ. ಪುಟಾಣಿಗಳೆಲ್ಲಾ ಜತೆ ಸೇರಿ ಅಡುಗೆ ಆಟ ಆಡುವ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.

deepasakshi8217 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಗಳು ರಸ್ತೆ ಪಕ್ಕದಲ್ಲಿರುವ ಸಣ್ಣದಾದ ಜಾಗದಲ್ಲಿ ಕುಳಿತು ಅಡುಗೆಯಾಟ ಆಡುತ್ತಿದ್ದಾರೆ. ಸಾಲಾಗಿ ಕುಳಿತು ತಾವೇ ಮಾಡಿದ ಅಡುಗೆಯನ್ನು ಸವಿಯುತ್ತಿದ್ದರೆ, ಮನೆಯ ಮುಖ್ಯ ಗೃಹಿಣಿಯಂತಿರುವ ಪುಟ್ಟ ಹುಡುಗಿಯೂ ಎಲ್ಲರಿಗೂ ಊಟ ಬಡಿಸುವುದರಲ್ಲಿ  ಬ್ಯುಸಿಯಾಗಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಹಳೆ ದಿನಗಳು ಮತ್ತೆ ಮರಳಿ ಬಾರದು ಎಂದು ಹೇಳಿದರೆ, ಇನ್ನೊಬ್ಬರು ಆ ಬಾಲ್ಯದ ದಿನಗಳೇ ಸುಂದರ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಚಿಂತೆಗಳಿಲ್ಲದೇ ಆಟವನ್ನು ಸಂಭ್ರಮಿಸುತ್ತಿದ್ದ ಬಾಲ್ಯದ ದಿನಗಳು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us