Video: ಬಯಲು ಶೌಚಕ್ಕೆ ಹೋದವನ ಮೇಲೆ ದೈತ್ಯ ಹೆಬ್ಬಾವು ಅಟ್ಯಾಕ್, ಎದೆ ಝಲ್‌ ಎನಿಸುವ ದೃಶ್ಯ ವೈರಲ್‌

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವೊಂದು ವಿಡಿಯೋ ದೃಶ್ಯಗಳು ನಿಜಕ್ಕೂ ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಅಂತಹದೇ ಆಘಾತಕಾರಿ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಬಯಲು ಶೌಚಕ್ಕೆಂದು ಪೊದೆಯ ಬಳಿ ಹೋಗಿ ಕುಳಿತ ವ್ಯಕ್ತಿಯೊಬ್ಬನ ಮೇಲೆ ದೈತ್ಯ ಹೆಬ್ಬಾವೊಂದು ಅಟ್ಯಾಕ್‌ ಮಾಡಿದೆ. ಆ ವ್ಯಕ್ತಿಯನ್ನು ಸುತ್ತುವರಿದಿದ್ದ ಹೆಬ್ಬಾವನ್ನು ಕೊಂದು, ಗ್ರಾಮಸ್ಥರು ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಈ ಭೀಕರ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ.

Video: ಬಯಲು ಶೌಚಕ್ಕೆ ಹೋದವನ ಮೇಲೆ ದೈತ್ಯ ಹೆಬ್ಬಾವು ಅಟ್ಯಾಕ್, ಎದೆ ಝಲ್‌ ಎನಿಸುವ ದೃಶ್ಯ ವೈರಲ್‌
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 24, 2024 | 5:39 PM

ಮಳೆಗಾಲ ಬಂತೆಂದರೆ ಸಾಕು ಹಾವುಗಳ ಕಾಟ ಹೆಚ್ಚಾಗುತ್ತದೆ. ಶೀತ ವಾತಾವರಣಕ್ಕೆ ಬೆಚ್ಚನೆಯ ಸ್ಥಳವನ್ನರಸುತ್ತಾ ಬರುವ ಈ ಹಾವುಗಳು ಮನೆಯ ಮೂಲೆಗಳಲ್ಲಿ, ಪೊದೆಗಳಲ್ಲಿ ಅಡಗಿ ಕೂರುತ್ತವೆ. ಹಾವುಗಳು ಪೊದೆಗಳ ಬಳಿ ಅಡಗಿ ಕುಳಿತಿರುತ್ತವೆ ಎಂಬ ಕಾರಣಕ್ಕೆ ಪೊದೆಯ ಬಳಿ, ಗುಡ್ಡ ಪ್ರದೇಶಗಳಿಗೆ ಹೋಗ್ಬಾರ್ದು ಅಂತ ಎಚ್ಚರಿಕೆಯನ್ನು ನೀಡುವುದು ಕೂಡಾ ಉಂಟು. ಆದ್ರೆ ಇಲ್ಲೊಬ್ಬ ವ್ಯಕ್ತಿ ಪೊದೆಯ ಬಳಿಯೇ ಬಯಲು ಶೌಚಕ್ಕೆಂದು ಹೋಗಿದ್ದು, ಆ ಸಂದರ್ಭದಲ್ಲಿ ಅಲ್ಲಿದ್ದ ದೈತ್ಯ ಹೆಬ್ಬಾವು ಆತನ ಮೇಲೆ ಅಟ್ಯಾಕ್‌ ಮಾಡಿದೆ. ಈ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದ್ದು, ಸೋಮವಾರದಂದು (ಜುಲೈ 22) ಇಲ್ಲಿನ ಗ್ರಾಮಸ್ಥನೊಬ್ಬ ಮಲವಿಸರ್ಜನೆಗೆಂದು ಪೊದೆಯ ಬಳಿ ಹೋಗಿದ್ದ, ಆ ಸಂದರ್ಭದಲ್ಲಿ 13 ಅಡಿ ಉದ್ದ ದೈತ್ಯ ಹೆಬ್ಬಾವೊಂದು ಆ ವ್ಯಕ್ತಿಯ ಮೇಲೆ ಅಟ್ಯಾಕ್‌ ಮಾಡಿದೆ. ಹೆಬ್ಬಾವು ತನ್ನ ಬಾಲವನ್ನು ಆ ವ್ಯಕ್ತಿಯ ಕುತ್ತಿಗೆಗೆ ಸುತ್ತಿ ಅವನನ್ನು ಜೀವಂತವಾಗಿ ನುಂಗಲು ಪ್ರಯತ್ನಿಸಿದೆ. ಆಗ ಆ ವ್ಯಕ್ತಿ ಜೋರಾಗಿ ಕಿರುಚಿದ್ದು, ತಕ್ಷಣವೇ ಸಹಾಯಕ್ಕಾಗಿ ಸ್ಥಳೀಯರು ಧಾವಿಸಿದ್ದಾರೆ. ಇನ್ನೇನೂ ಹಾವು ವ್ಯಕ್ತಿಯನ್ನು ನುಂಗಿ ಬಿಡುತ್ತದೆ ಎಂದು ಹೆದರಿದ ಸ್ಥಳೀಯರು, ಆ ವ್ಯಕ್ತಿಯ ಪ್ರಾಣ ಉಳಿಸುವ ಉದ್ದೇಶದಿಂದ ಕೊಡಲಿ ಏಟಿನಿಂದ ಹೆಬ್ಬಾವನ್ನು ಕೊಂದು, ಆ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಕೃಷ್ಣ ಬಿಹಾರಿ ಸಿಂಗ್‌ (KrishnaBihariS2) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ 13 ಅಡಿ ಉದ್ದದ ಹೆಬ್ಬಾವು ಶೌಚಕ್ಕೆ ಕುಳಿತ ವ್ಯಕ್ತಿಯ ಕುತ್ತಿಗೆಯನ್ನು ಸುತ್ತುವರೆದ ದೃಶ್ಯವನ್ನು ಕಾಣಬಹುದು. ಹೀಗೆ ಬಿಟ್ಟರೇ ಹಾವು ಆ ವ್ಯಕ್ತಿಯನ್ನೇ ಜೀವಂತವಾಗಿ ನುಂಗಿಬಿಡುತ್ತೇ ಎಂದು ಭಾವಿಸಿದ ಸ್ಥಳೀಯರು ಬೇರೆ ದಾರಿ ತೋರದೆ, ಕೊಡಲಿ ಏಟು ಕೊಟ್ಟು ಹೆಬ್ಬಾವನ್ನು ಸಾಯಿಸಿ ಆ ವ್ಯಕ್ತಿಯ ಪ್ರಾಣ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಸೋಫಾ ಮೇಲೆ ಮಲಗಿದ್ದ ಯುವತಿ ಬಳಿ ಇದ್ದಕ್ಕಿದ್ದಂತೆ ಬಂದ ಮೊಸಳೆ; ಕೊನೆಗೆ ಏನಾಯ್ತು?

ಜುಲೈ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಲ್ಲಾ ಆತನಿಗೆ ಗುಡ್ಡದ ಬಳಿ ಏಕೆ ಶೌಚಕ್ಕೆ ಹೋಗಬೇಕಿತ್ತುʼ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೆಬ್ಬಾವನ್ನು ಕೊಂದಿದ್ದಕ್ಕೆ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ