Viral: ಪತಿಗೆ ಅನಾರೋಗ್ಯ ಜೀವನಕ್ಕೆ ಏನಾದರೂ ಮಾಡಬೇಕಲ್ಲ, ಕ್ಯಾಬ್ ಓಡಿಸಲು ಶುರು ಮಾಡಿದ ಮಹಿಳೆ
ಛಲ ಮತ್ತು ಉತ್ಸಾಹ ಇದ್ದರೆ ಜೀವನದಲ್ಲಿ ಎದುರಾಗುವ ಎಂತಹ ಸವಾಲನ್ನು ಕೂಡ ಮೆಟ್ಟಿನಿಲ್ಲಬಹುದು. ಇದಕ್ಕೆ ಸೂಕ್ತ ನಿದರ್ಶನದಂತಿರುವ ಕಥೆಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೈಕಲ್ ಓಡಿಸಲು ಸಹ ಬಾರದ ಮಹಿಳೆಯೊಬ್ಬರು ತಮ್ಮ ಪತಿ ಅನಾರೋಗ್ಯಕ್ಕೆ ತುತ್ತಾದ ಬಳಿಕ ಸಂಸಾರವನ್ನು ಸಾಗಿಸಲು ಡ್ರೈವಿಂಗ್ ಕಲಿತು, ಇದೀಗ ಕ್ಯಾಬ್ ಚಾಲಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಸ್ಫೂರ್ತಿದಾಯಕ ಜೀವನ ಕಥೆ ಎಲ್ಲರ ಮನ ಗೆದ್ದಿದೆ.
ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ.. ಮನಸೊಂದಿದ್ದರೆ ಮಾರ್ಗವು ಉಂಟು, ಕೆಚ್ಚೆದೆ ಇರಬೇಕು ಎಂದೆಂದೂ..’ ಹಾಡಿನಂತೆ ಇಲ್ಲೊಬ್ಬರು ಮಹಿಳೆ ಜೀವನದಲ್ಲಿ ಕಷ್ಟ ಬಂದಾಗ ಕುಗ್ಗದೆ, ಅಥವಾ ಯಾವುದೇ ದುಡುಕು ನಿರ್ಧಾರವನ್ನು ತೆಗೆದುಕೊಳ್ಳದೆ ಸಂಸಾರ ನಡೆಸಲು ಡ್ರೈವಿಂಗ್ ಬಾರದಿದ್ದರೂ ಡ್ರೈವಿಂಗ್ ಕಲಿತು ಇದೀಗ ಕ್ಯಾಬ್ ಚಾಲಕಿಯಾಗಿ ಪ್ರತಿನಿತ್ಯ 13 ಗಂಟೆಗಳ ಕಾಲ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಜೀವನೋತ್ಸಾಹ ಮತ್ತು ಛಲ ಇದ್ದರೆ ಯಾವುದು ಅಸಾಧ್ಯವಲ್ಲ ಎಂಬುದಕ್ಕೆ ಈ ಕ್ಯಾಬ್ ಚಾಲಕಿ ಅರ್ಚನಾ ಪಾಟೀಲ್ ಸಾಕ್ಷಿ. ಇವರ ಸ್ಫೂರ್ತಿದಾಯಕ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಅರ್ಚನಾ ಅವರ ಪತಿ ಓಲಾ ಚಾಲಕನಾಗಿ ಕೆಲಸ ಮಾಡಿತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅವರು ಅನಾರೋಗ್ಯಕ್ಕೆ ತುತ್ತಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದರು. ಹೀಗೆ ಕ್ಯಾಬ್ ಸಾಲ ತೀರಿಸಲು ಮತ್ತು ಸಂಸಾರ ಸಾಗಿಸಲು ಅರ್ಚನಾ ಅವರು ತನ್ನ ಗಂಡನ ಕೆಲಸವನ್ನು ತಾನೇ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಇದಕ್ಕಾಗಿ ಸೈಕಲ್ ಓಡಿಸಲು ಸಹ ಬಾರದ ಅರ್ಚನಾ ಆರು ತಿಂಗಳುಗಳ ಕಾಲ ಡ್ರೈವಿಂಗ್ ಕಲಿತು ಮತ್ತು ಲೈಸೆನ್ಸ್ ಪಡೆದು ಕ್ಯಾಬ್ ಚಾಲಕಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಮತ್ತು ಇದೀಗ ಕ್ಯಾಬ್ ಓಡಿಸಿ ಜೀವನ ನಡೆಸುತ್ತಿದ್ದಾರೆ.
ಓಜಸ್ ದೇಸಾಯಿ (Ojas Desai) ಎಂಬವರು ಕ್ಯಾಬ್ ಚಾಲಕಿ ಅರ್ಚನಾ ಅವರ ಈ ಸ್ಫೂರ್ತಿದಾಯಕ ಕಥೆಯನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮತ್ತು ದೇಸಾಯಿಯವರು “ಇಂದು ಅಹಮದಾಬಾದ್‌ನಲ್ಲಿ , ನಾನು ರೈಲ್ವೆ ನಿಲ್ದಾಣವನ್ನು ತಲುಪಿದ ಬಳಿಕ ಓಲಾ ಕ್ಯಾಬ್ ಅನ್ನು ಬುಕ್ ಮಾಡಿದೆ. ದೃಢೀಕರಣ ಸಂದೇಶದಲ್ಲಿ ಚಾಲಕನ ಹೆಸರನ್ನು ಅರ್ಚನಾ ಪಾಟೀಲ್ ಎಂದು ನಮೂದಿಸಲಾಗಿತ್ತು. ಆಕೆ ಸಲೀಸಾಗಿ ಕ್ಯಾಬ್ ಓಡಿಸುವುದನ್ನು ಕಂಡು ನನಗೆ ತುಂಬಾ ಸಂತೋಷವಾಯಿತು. ಹೀಗೆ ಟ್ರಾಫಿಕ್ ಅಲ್ಲಿ ಹೋಗುವಾಗ ಅವರ ಜೊತೆ ಮಾತುಕತೆ ನಡೆಸಲು ಶುರು ಮಾಡಿದೆ. ಆ ಸಂದರ್ಭದಲ್ಲಿ ಅವರ ಸ್ಫೂರ್ತಿದಾಯಕ ಕಥೆಯನ್ನು ನನ್ನ ಬಳಿ ಹಂಚಿಕೊಂಡರು. ಅರ್ಚನಾ ಅವರಿಗೆ ಸೈಕಲ್ ಓಡಿಸಲು ಸಹ ಬರುತ್ತಿರಲಿಲ್ಲ, ಆದರೆ ಅವರ ಪತಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಬಳಿಕ ಅರ್ಚನಾ ಅವರೇ ಕ್ಯಾಬ್ ಓಡಿಸುವ ನಿರ್ಧಾರಕ್ಕೆ ಬಂದು ಆರು ತಿಂಗಳುಗಳ ಕಾಲ ಡ್ರೈವಿಂಗ್ ಕಲಿತು ಬಳಿಕ ಲೈಸನ್ಸ್ ಪಡೆದು ಕ್ಯಾಬ್ ಓಡಿಸಲು ಶುರು ಮಾಡಿದರು. ಈಗ ದಿನಕ್ಕೆ 13 ರಿಂದ 14 ಗಂಟೆಗಳ ಕ್ಯಾಬ್ ಓಡಿಸುವ ಕೆಲಸ ಮತ್ತು ಮನೆ ಕೆಲಸ ಎಲ್ಲವನ್ನೂ ಒಬ್ಬರೇ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಇವರ ಕಥೆ ನಿಜಕ್ಕೂ ಮಹಿಳಾ ಸಬಲೀಕರಣದ ಸೂಕ್ತ ಉದಾಹರಣೆಯಾಗಿದೆ” ಎಂಬ ಸುದೀರ್ಘ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬಸ್ಸಿನಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಲೇಡಿ ಕಂಡಕ್ಟರ್
ಆಗಸ್ಟ್ 11 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 20 ಸಾವಿರ ಲೈಕ್ಸ್ ಮತ್ತು ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಧೈರ್ಯಶಾಲಿ ಮಹಿಳೆ, ಸಮಸ್ಯೆಗಳನ್ನು ಮೆಟ್ಟಿ ನಿಂತು ಸುಖಕರ ಜೀವನ ನಡೆಸುತ್ತಿದ್ದಾರೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಕಷ್ಟಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವ ಜನರನ್ನು ನಾನು ಯಾವಾಗಲೂ ಪ್ರಶಂಸಿಸುತ್ತೇನೆ. ಈ ಮಹಿಳೆಗೂ ನನ್ನದೊಂದು ಸಲಾಂ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಅರ್ಚನಾ ಅವರ ದಿಟ್ಟತನಕ್ಕೆ ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ