Heeraben Modi: ನನ್ನಮ್ಮ ತುಂಬಾ ಸಿಂಪಲ್ ಆದರೆ ಅಸಾಮಾನ್ಯಳು!; 100 ವರ್ಷದ ಹೀರಾಬೆನ್ ಬಗ್ಗೆ ನರೇಂದ್ರ ಮೋದಿ ಭಾವನಾತ್ಮಕ ಬರಹ
Narendra Modi on Mother: ಮಳೆ ನೀರು ತುಂಬಿದ್ದ ಮನೆಯೊಳಗೆ ಸಂಸಾರ ಮಾಡುತ್ತಿದ್ದ ದಿನದಿಂದ ಹೀರಾಬೆನ್ ಹೆಸರಲ್ಲೇ ರಸ್ತೆಯೊಂದನ್ನು ಉದ್ಘಾಟನೆ ಮಾಡುವವರೆಗೆ ತಮ್ಮ ತಾಯಿಯ 100 ವರ್ಷಗಳ ಪಯಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸುದೀರ್ಘವಾದ ಬರಹವೊಂದನ್ನು ಬರೆದಿದ್ದಾರೆ.
1923ರ ಜೂನ್ 18ರಂದು ಜನಿಸಿದ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಮೋದಿ (Hiraben Modi) ಇಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ತಾಯಿಯ ಹುಟ್ಟುಹಬ್ಬದ ಪ್ರಯುಕ್ತ ಇಂದು ಮುಂಜಾನೆಯೇ ಗುಜರಾತ್ನ ಗಾಂಧಿನಗರಕ್ಕೆ ಭೇಟಿ ನೀಡಿದ್ದ ನರೇಂದ್ರ ಮೋದಿ (Narendra Modi) ಅವರು ತಾಯಿಯ ಪಾದಗಳಿಗೆ ನಮಸ್ಕರಿಸಿ, ಅವರ ಆಶೀರ್ವಾದ ಪಡೆದು, ಅಮ್ಮನೊಂದಿಗೆ ತಿಂಡಿ ಸೇವಿಸಿ, ಸ್ವಲ್ಪ ಸಮಯ ಕಳೆದಿದ್ದಾರೆ. ಶತಾಯುಷಿಯಾಗಿರುವ ತಮ್ಮ ತಾಯಿ ಹೀರಾಬೆನ್ ಮೋದಿ ಅವರ ಬಗ್ಗೆ ನರೇಂದ್ರ ಮೋದಿ ತಮ್ಮ ಬ್ಲಾಗ್ನಲ್ಲಿ ಭಾವನಾತ್ಮಕ ಬರಹವೊಂದನ್ನು ಬರೆದುಕೊಂಡಿದ್ದಾರೆ. ಈ ಲೇಖನದಲ್ಲಿ ತಮ್ಮ ಹಾಗೂ ತಮ್ಮ ತಾಯಿಯ ಬಾಂಧವ್ಯ, ತಮಗಾಗಿ ಆಕೆ ಮಾಡಿದ ತ್ಯಾಗ, ತಮ್ಮ ಸಾಧನೆಯ ಬಗ್ಗೆ ತಾಯಿಗಿರುವ ಹೆಮ್ಮೆ ಹೀಗೆ ನಾನಾ ವಿಷಯಗಳ ಬಗ್ಗೆ ಬರೆದುಕೊಂಡಿದ್ದಾರೆ. ಆ ಬ್ಲಾಗ್ ಬರಹದ ಸಂಕ್ಷಿಪ್ತ ರೂಪ ಇಲ್ಲಿದೆ.
ಅಮ್ಮ, ಈ ಪದ ಪ್ರೀತಿ, ಸಹನೆ, ನಂಬಿಕೆ ಮತ್ತು ಇನ್ನೂ ಅನೇಕ ಭಾವನೆಗಳ ಸಂಗಮ. ಪ್ರಪಂಚದಾದ್ಯಂತ ಅದು ಯಾವುದೇ ದೇಶ ಅಥವಾ ಪ್ರದೇಶವಾಗಿರಲಿ, ಮಕ್ಕಳು ತಮ್ಮ ತಾಯಂದಿರ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿರುತ್ತಾರೆ. ತಾಯಿಯು ತನ್ನ ಮಕ್ಕಳಿಗೆ ಜನ್ಮ ನೀಡುವುದು ಮಾತ್ರವಲ್ಲ, ಅವರ ಮನಸ್ಸು, ಅವರ ವ್ಯಕ್ತಿತ್ವ ಮತ್ತು ಅವರ ಆತ್ಮವಿಶ್ವಾಸವನ್ನು ರೂಪಿಸುತ್ತಾಳೆ. ಅದಕ್ಕಾಗಿ ತಾಯಂದಿರು ನಿಸ್ವಾರ್ಥವಾಗಿ ತಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ತ್ಯಾಗ ಮಾಡುತ್ತಾರೆ.
ಇಂದು, ನನ್ನ ಅಮ್ಮ ಶ್ರೀಮತಿ ಹೀರಾಬಾ ತಮ್ಮ ನೂರನೇ ವರ್ಷಕ್ಕೆ ಕಾಲಿಡುತ್ತಿರುವುದನ್ನು ಹಂಚಿಕೊಳ್ಳಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಇದು ಅವರ ಜನ್ಮ ಶತಮಾನೋತ್ಸವದ ವರ್ಷ. ನನ್ನ ತಂದೆ ಬದುಕಿದ್ದರೆ ಅವರೂ ಕಳೆದ ವಾರ ನೂರನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ನನ್ನ ತಾಯಿಯ ಶತಮಾನೋತ್ಸವ ವರ್ಷ ಆರಂಭವಾಗುತ್ತಿರುವುದರಿಂದ ಮತ್ತು ನನ್ನ ತಂದೆಯವರು ಶತಮಾನೋತ್ಸವವನ್ನು ಪೂರ್ಣಗೊಳಿಸುತ್ತಿದ್ದರಿಂದ 2022 ನನಗೆ ಒಂದು ವಿಶೇಷ ವರ್ಷವಾಗಿದೆ.
ಹಿಂದೆ ನಮ್ಮ ಕುಟುಂಬದಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ಪದ್ಧತಿ ಇರಲಿಲ್ಲ. ಆದರೆ, ನನ್ನ ತಂದೆಯ ಜನ್ಮದಿನದಂದು ಅವರ ನೆನಪಿಗಾಗಿ ಯುವ ಪೀಳಿಗೆಯ ಮಕ್ಕಳು 100 ಗಿಡಗಳನ್ನು ನೆಟ್ಟರು. ನನ್ನ ಜೀವನದಲ್ಲಿ ನಡೆದ ಒಳ್ಳೆಯದಕ್ಕೆ ಮತ್ತು ನನ್ನಲ್ಲಿರುವ ಒಳ್ಳೆಯತನಕ್ಕೆ ನನ್ನ ಹೆತ್ತವರೇ ಕಾರಣ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನನ್ನ ತಾಯಿ ಎಷ್ಟು ಅಸಾಧಾರಣಳೋ ಅಷ್ಟೇ ಸರಳ, ಎಲ್ಲಾ ತಾಯಂದಿರಂತೆ!. ಇದನ್ನು ಓದುವಾಗ, ನೀವು ನಿಮ್ಮ ಸ್ವಂತ ತಾಯಿಯ ಚಿತ್ರವನ್ನೇ ನೋಡಬಹುದು.
ನನ್ನ ತಾಯಿ ಗುಜರಾತ್ನ ಮೆಹ್ಸಾನಾದ ವಿಸ್ನಗರದಲ್ಲಿ ಜನಿಸಿದರು. ಇದು ನನ್ನ ತವರು ವಡ್ನಾಗರಕ್ಕೆ ಬಹಳ ಹತ್ತಿರದಲ್ಲಿದೆ. ಆಕೆಗೆ ಸ್ವಂತ ತಾಯಿಯ ವಾತ್ಸಲ್ಯ ಸಿಗಲಿಲ್ಲ. ನನ್ನ ತಾಯಿಯು ಎಳೆವಯಸ್ಸಿನಲ್ಲಿಯೇ ನನ್ನ ಅಜ್ಜಿಯನ್ನು ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ರೋಗದಿಂದಾಗಿ ಕಳೆದುಕೊಂಡರು. ಆಕೆಗೆ ನನ್ನ ಅಜ್ಜಿಯ ಮುಖವಾಗಲಿ, ಅವಳ ಮಡಿಲಿನ ನೆಮ್ಮದಿಯಾಗಲಿ ನೆನಪಿಲ್ಲ. ಆಕೆ ತನ್ನ ಇಡೀ ಬಾಲ್ಯವನ್ನು ತನ್ನ ತಾಯಿಯಿಲ್ಲದೆ ಕಳೆದರು. ನಾವೆಲ್ಲರೂ ಮಾಡುವಂತೆ ಅವರು ತನ್ನ ತಾಯಿಯ ಮೇಲೆ ಕೋಪತಾಪ ತೋರಿಸಲು ಸಾಧ್ಯವಾಗಲಿಲ್ಲ. ನಮ್ಮೆಲ್ಲರಂತೆ ಅವರಿಗೆ ತನ್ನ ತಾಯಿಯ ಮಡಿಲಿನಲ್ಲಿ ಮಲಗಲಾಗಲಿಲ್ಲ. ಶಾಲೆಗೆ ಹೋಗಿ ಓದು ಬರಹ ಕಲಿಯಲೂ ಆಗಲಿಲ್ಲ. ಆಕೆಯ ಬಾಲ್ಯವು ಬಡತನ ಮತ್ತು ಕಷ್ಟದಿಂದ ಕೂಡಿತ್ತು.
ಇದನ್ನೂ ಓದಿ: ಗುಜರಾತ್ನಲ್ಲಿ ತಾಯಿ ಹೀರಾಬೆನ್ರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ; ಒಟ್ಟಿಗೇ ಊಟ ಮಾಡಿದ ಅಮ್ಮ-ಮಗ
ಈ ಹೆಣಗಾಟಗಳಿಂದಾಗಿ ತಾಯಿಯು ಬಾಲ್ಯವನ್ನು ಅನುಭವಿಸಲಾಗಲಿಲ್ಲ. ಆಕೆಯು ತನ್ನ ವಯಸ್ಸಿಗೆ ಮೀರಿ ಬೆಳೆಯುವಂತೆ ಮಾಡಿತು. ಕುಟುಂಬದಲ್ಲಿ ಹಿರಿಯ ಮಗುವಾಗಿದ್ದ ಅವರು ಮದುವೆಯ ನಂತರ ಹಿರಿಯ ಸೊಸೆಯಾದರು. ವಡ್ನಾಗರದಲ್ಲಿ, ನಮ್ಮ ಕುಟುಂಬವು ಶೌಚಾಲಯ ಅಥವಾ ಸ್ನಾನದ ಮನೆಯಂತಹ ಐಷಾರಾಮಗಳಿರಲಿ, ಕಿಟಕಿಯೂ ಇಲ್ಲದ ಪುಟ್ಟ ಮನೆಯಲ್ಲಿ ವಾಸಿಸುತ್ತಿತ್ತು. ಮಣ್ಣಿನ ಗೋಡೆಗಳು ಮತ್ತು ಮಣ್ಣಿನ ಹೆಂಚುಗಳ ಛಾವಣಿಯಿದ್ದ ಒಂದು ಕೋಣೆಯನ್ನೇ ನಾವು ನಮ್ಮ ಮನೆ ಎಂದು ಕರೆಯುತ್ತಿದ್ದೆವು. ನಾವೆಲ್ಲರೂ-ನನ್ನ ಹೆತ್ತವರು, ನನ್ನ ಒಡಹುಟ್ಟಿದವರು ಮತ್ತು ನಾನು ಅದರಲ್ಲಿಯೇ ಇದ್ದೆವು.
ನನ್ನ ತಂದೆ ತಾಯಿಯರಿಬ್ಬರೂ ತಮ್ಮ ಜವಾಬ್ದಾರಿಗಳನ್ನು ಹಂಚಿಕೊಂಡು ಜಾಗರೂಕತೆಯಿಂದ ಕುಟುಂಬವನ್ನು ನಿರ್ವಹಿಸಿದರು. ಗಡಿಯಾರದ ಗಂಟೆ ಬಾರಿಸಿದಂತೆ, ನನ್ನ ತಂದೆ ಬೆಳಗ್ಗೆ ನಾಲ್ಕು ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದರು. ತಾಯಿಯೂ ಅಷ್ಟೇ ಸಮಯಪಾಲನೆ ಮಾಡುತ್ತಿದ್ದರು. ಅವರು ಕೂಡ ನನ್ನ ತಂದೆಯೊಂದಿಗೆ ಏಳುತ್ತಿದ್ದರು ಮತ್ತು ಬೆಳಗ್ಗೆಯೇ ಅನೇಕ ಕೆಲಸಗಳನ್ನು ಮುಗಿಸುತ್ತಿದ್ದರು. ಕಾಳುಗಳನ್ನು ಅರೆಯುವುದರಿಂದ ಹಿಡಿದು ಅಕ್ಕಿ ಮತ್ತು ಬೇಳೆಯನ್ನು ಜರಡಿ ಹಿಡಿಯುವವರೆಗೆ ತಾಯಿಗೆ ಯಾರದೇ ನೆರವಿರಲಿಲ್ಲ. ಕೆಲಸ ಮಾಡುವಾಗ ಆಕೆ ತನ್ನ ನೆಚ್ಚಿನ ಭಜನೆ ಮತ್ತು ಸ್ತೋತ್ರಗಳನ್ನು ಗುನುಗುತ್ತಿದ್ದರು. ನರಸಿ ಮೆಹ್ತಾ ಜಿ ಯವರ ಜನಪ್ರಿಯ ಭಜನೆ ‘ಜಲ್ಕಮಲ್ಛಡಿ ಜಾನೇ ಬಾಲಾ, ಸ್ವಾಮಿ ಅಮರೋ ಜಗ್ಸೆ’ ಇಷ್ಟಪಡುತ್ತಿದ್ದರು. ‘ಶಿವಾಜಿ ನೂ ಹಲಾರ್ದು’ಎಂಬ ಲಾಲಿ ಹಾಡು ಸಹ ಅವರಿಗೆ ಇಷ್ಟವಾಗಿತ್ತು.
ಮನೆಯ ಖರ್ಚನ್ನು ನಿಭಾಯಿಸಲು ತಾಯಿ ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು. ನಮ್ಮ ಅಲ್ಪ ಆದಾಯಕ್ಕೆ ಪೂರಕವಾಗಿ ಚರಕದಲ್ಲಿ ನೂಲುತ್ತಿದ್ದರು. ಹತ್ತಿ ಬಿಡಿಸುವುದರಿಂದ ಹಿಡಿದು ನೂಲುವವರೆಗೆ ಎಲ್ಲವನ್ನೂ ಮಾಡುತ್ತಿದ್ದರು. ಇಂತಹ ಕಷ್ಟದ ಕೆಲಸದ ನಡುವೆಯೂ ಹತ್ತಿಗಿಡದ ಮುಳ್ಳು ನಮಗೆ ಚುಚ್ಚದಂತೆ ಕಾಳಜಿ ವಹಿಸುತ್ತಿದ್ದರು.
ತಾಯಿ ಮನೆಯನ್ನು ಒಪ್ಪವಾಗಿಡಲು ಇಷ್ಟಪಡುತ್ತಿದ್ದರು ಮತ್ತು ಅದನ್ನು ಸ್ವಚ್ಛಗೊಳಿಸಲು ಮತ್ತು ಸುಂದರಗೊಳಿಸಲು ಸಾಕಷ್ಟು ಸಮಯವನ್ನು ಕಳೆಯುತ್ತಿದ್ದರು. ಹಸುವಿನ ಸಗಣಿಯಿಂದ ನೆಲವನ್ನು ಸಾರಿಸುತ್ತಿದ್ದರು. ಮನೆಯ ಹಳೆಯ ವಸ್ತುಗಳನ್ನು ಮರುಬಳಕೆ ಮಾಡುವಲ್ಲಿ ಅಮ್ಮ ಚಾಂಪಿಯನ್ ಆಗಿದ್ದರು. ಹಾಸಿಗೆ ಸ್ವಚ್ಛವಾಗಿರಬೇಕು ಮತ್ತು ಸರಿಯಾಗಿ ಹಾಸಿರಬೇಕು ಎಂದು ತಾಯಿ ತುಂಬಾ ಗಮನಿಸುತ್ತಿದ್ದರು. ಸ್ವಲ್ಪವೇ ಸುಕ್ಕು ಕಂಡರೂ ಅದನ್ನು ಕೊಡವಿ ಮತ್ತೆ ಹಾಸುತ್ತಿದ್ದರು. ಈ ವಯಸ್ಸಿನಲ್ಲೂ, ತನ್ನ ಹಾಸಿಗೆಯ ಮೇಲೆ ಒಂದೇ ಒಂದು ಸುಕ್ಕು ಇರಬಾರದು ಎಂದು ನಮ್ಮ ತಾಯಿ ಬಯಸುತ್ತಾರೆ!
ಅವರು ಗಾಂಧಿನಗರದಲ್ಲಿ ನನ್ನ ಸಹೋದರ ಮತ್ತು ನನ್ನ ಸೋದರ ಸಂಬಂಧಿಯ ಕುಟುಂಬಗಳೊಂದಿಗೆ ಉಳಿದುಕೊಂಡಿದ್ದರೂ, ಈ ವಯಸ್ಸಿನಲ್ಲೂ ಅ ತನ್ನ ಎಲ್ಲಾ ಕೆಲಸಗಳನ್ನು ಸ್ವತಃ ಮಾಡಲು ಪ್ರಯತ್ನಿಸುತ್ತಾರೆ. ನಾನು ಅವರನ್ನು ಭೇಟಿ ಮಾಡಲು ಗಾಂಧಿನಗರಕ್ಕೆ ಹೋದಾಗ, ನನಗೆ ತನ್ನ ಕೈಯಾರೆ ಸಿಹಿತಿಂಡಿಗಳನ್ನು ತಿನ್ನಿಸುತ್ತಾರೆ. ಚಿಕ್ಕ ಮಗುವಿನ ತಾಯಿಯಂತೆ, ನಾನು ತಿಂದ ನಂತರ ನ್ಯಾಪ್ಕಿನ್ ನಿಂದ ನನ್ನ ಮುಖವನ್ನು ಒರೆಸುತ್ತಾರೆ. ಅವರು ಯಾವಾಗಲೂ ತನ್ನ ಸೀರೆಗೆ ಕರವಸ್ತ್ರ ಅಥವಾ ಸಣ್ಣ ಟವೆಲ್ ಅನ್ನು ಸಿಕ್ಕಿಸಿಕೊಂಡಿರುತ್ತಾರೆ.
ಒಂದು ಅಗಳು ಆಹಾರವನ್ನೂ ವ್ಯರ್ಥ ಮಾಡಬಾರದು ಎಂದು ತಾಯಿ ಹೇಳುತ್ತಿದ್ದರು. ನಮ್ಮ ನೆರೆಹೊರೆಯಲ್ಲಿ ಮದುವೆಗಳು ನಡೆದಾಗ ಯಾವುದೇ ಆಹಾರವನ್ನು ವ್ಯರ್ಥ ಮಾಡಬೇಡಿ ಎಂದು ನಮಗೆ ನೆನಪಿಸುತ್ತಿದ್ದರು. ಇಂದಿಗೂ ತಾಯಿ ತಟ್ಟೆಯಲ್ಲಿ ಎಷ್ಟು ತಿನ್ನಲು ಸಾಧ್ಯವೋ ಅಷ್ಟು ಮಾತ್ರ ಹಾಕಿಸಿಕೊಳ್ಳುತ್ತಾರೆ ಮತ್ತು ಒಂದು ತುತ್ತು ಕೂಡ ವ್ಯರ್ಥ ಮಾಡುವುದಿಲ್ಲ. ಸಮಯಕ್ಕೆ ಸರಿಯಾಗಿ ತಿನ್ನುತ್ತಾರೆ ಮತ್ತು ಆಹಾರವು ಸರಿಯಾಗಿ ಜೀರ್ಣವಾಗಲು ಅಗಿದು ತಿನ್ನುತ್ತಾರೆ.
ತಾಯಿ ಇತರರ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುತ್ತಾರೆ. ನಮ್ಮ ಮನೆ ಚಿಕ್ಕದಾಗಿರಬಹುದು, ಆದರೆ ಅವರು ತುಂಬಾ ವಿಶಾಲ ಹೃದಯದವರು. ನನ್ನ ತಂದೆಯ ಆಪ್ತ ಸ್ನೇಹಿತರೊಬ್ಬರು ಹತ್ತಿರದ ಹಳ್ಳಿಯಲ್ಲಿದ್ದರು. ಅವರ ಅಕಾಲಿಕ ಮರಣದ ನಂತರ, ನನ್ನ ತಂದೆ ತನ್ನ ಸ್ನೇಹಿತನ ಮಗ ಅಬ್ಬಾಸ್ ನನ್ನು ನಮ್ಮ ಮನೆಗೆ ಕರೆತಂದರು. ಅವನು ನಮ್ಮಲ್ಲಿಯೇ ಇದ್ದು ಓದು ಮುಗಿಸಿದ. ತಾಯಿಯು ನಮ್ಮೆಲ್ಲರಂತೆಯೇ ಅಬ್ಬಾಸ್ ಬಗ್ಗೆಯೂ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರು. ಪ್ರತಿ ವರ್ಷ ಈದ್ನಂದು ಅವನ ನೆಚ್ಚಿನ ಖಾದ್ಯಗಳನ್ನು ತಯಾರಿಸುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ನೆರೆಹೊರೆಯ ಮಕ್ಕಳು ನಮ್ಮ ಮನೆಗೆ ಬಂದು ಅಮ್ಮನ ವಿಶೇಷ ಅಡುಗೆಯನ್ನು ಸವಿಯುವುದು ಮಾಮೂಲಿಯಾಗಿತ್ತು.
ಇಂದು, ಹಲವು ವರ್ಷಗಳ ನಂತರ, ನಿಮ್ಮ ಮಗ ದೇಶದ ಪ್ರಧಾನಿಯಾಗಿದ್ದಾನೆ ಎಂದು ಹೆಮ್ಮೆಪಡುತ್ತೀರಾ ಎಂದು ಜನರು ಕೇಳಿದಾಗಲೆಲ್ಲಾ, ತಾಯಿ ಅತ್ಯಂತ ಗಾಢವಾದ ಪ್ರತಿಕ್ರಿಯೆಯನ್ನು ನೀಡುತ್ತಾರೆ. ನನಗೂ ನಿಮ್ಮಂತೆಯೇ ಹೆಮ್ಮೆ ಇದೆ. ಇಲ್ಲಿ ಯಾವುದೂ ನನ್ನದಲ್ಲ. ನಾನು ದೇವರ ಯೋಜನೆಗಳಲ್ಲಿ ಕೇವಲ ಸಾಧನ ಮಾತ್ರವಾಗಿದ್ದೇನೆ ಎಂದು ಹೇಳುತ್ತಾರೆ.
ಯಾವುದೇ ಸರ್ಕಾರಿ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ತಾಯಿ ನನ್ನೊಂದಿಗೆ ಎಂದಿಗೂ ಬರುವುದಿಲ್ಲ ಎಂಬುದನ್ನು ನೀವು ಗಮನಿಸಿರಬಹುದು. ಈ ಹಿಂದೆ ಎರಡು ಬಾರಿ ಮಾತ್ರ ನನ್ನ ಜೊತೆಗಿದ್ದರು. ಮೊದಲನೆಯ ಬಾರಿಗೆ, ನಾನು ಏಕತಾ ಯಾತ್ರೆಯನ್ನು ಮುಗಿಸಿ ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಶ್ರೀನಗರದಿಂದ ಹಿಂದಿರುಗಿದ ನಂತರ ಅಹಮದಾಬಾದ್ನಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಅವರು ನನ್ನ ಹಣೆಗೆ ತಿಲಕವನ್ನು ಇಟ್ಟಿದ್ದರು.
ಎರಡನೆಯ ನಿದರ್ಶನವೆಂದರೆ, ನಾನು 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ. ಎರಡು ದಶಕಗಳ ಹಿಂದೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ತಾಯಿ ನನ್ನೊಂದಿಗೆ ಭಾಗವಹಿಸಿದ ಕೊನೆಯ ಸಾರ್ವಜನಿಕ ಕಾರ್ಯಕ್ರಮ. ಅಂದಿನಿಂದ, ಅವರು ಒಂದೇ ಒಂದು ಸಾರ್ವಜನಿಕ ಕಾರ್ಯಕ್ರಮಕ್ಕೆ ನನ್ನೊಂದಿಗೆ ಬಂದಿಲ್ಲ.
ನನಗೆ ಇನ್ನೊಂದು ಘಟನೆ ನೆನಪಿದೆ. ನಾನು ಗುಜರಾತ್ ಮುಖ್ಯಮಂತ್ರಿಯಾದಾಗ ನನ್ನ ಎಲ್ಲ ಶಿಕ್ಷಕರನ್ನು ಸಾರ್ವಜನಿಕವಾಗಿ ಸನ್ಮಾನಿಸಲು ಬಯಸಿದ್ದೆ. ನನ್ನ ಜೀವನದಲ್ಲಿ ತಾಯಿ ದೊಡ್ಡ ಗುರು ಎಂದು ನಾನು ಭಾವಿಸಿದೆ ಮತ್ತು ನಾನು ಅವರನ್ನು ಗೌರವಿಸಬೇಕು ಎಂದು ತೀರ್ಮಾನಿಸಿದೆ. ಕಾರ್ಯಕ್ರಮಕ್ಕೆ ಬರುವಂತೆ ನಾನು ತಾಯಿಯನ್ನು ವಿನಂತಿಸಿದೆ, ಆದರೆ ಅವರು ನಿರಾಕರಿಸಿದರು. ನೋಡಿ, ನಾನು ಸಾಮಾನ್ಯ ವ್ಯಕ್ತಿ. ನಾನು ನಿಮಗೆ ಜನ್ಮ ನೀಡಿರಬಹುದು, ಆದರೆ ನೀವು ಸರ್ವಶಕ್ತನಿಂದ ಕಲಿಸಲ್ಪಟ್ಟಿರುವುದು ಮತ್ತು ಬೆಳೆಸಲ್ಪಟ್ಟಿರುವಿರಿ ಎಂದು ಆಕೆ ಹೇಳಿದರು. ಆ ದಿನ ನನ್ನ ತಾಯಿಯನ್ನುಳಿದು ಎಲ್ಲಾ ಶಿಕ್ಷಕರನ್ನು ಗೌರವಿಸಲಾಯಿತು.
ಜೀವನದಲ್ಲಿ ಅಮ್ಮ ಯಾವುದರ ಬಗ್ಗೆಯೂ ದೂರುವುದನ್ನು ನಾನು ಕೇಳಿಲ್ಲ. ಅವರು ಯಾರ ಬಗ್ಗೆಯೂ ದೂರುವುದಿಲ್ಲ ಅಥವಾ ಯಾರಿಂದಲೂ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಿಲ್ಲ. ಇಂದಿಗೂ ತಾಯಿಯ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ. ಆಕೆ ಚಿನ್ನದ ಆಭರಣಗಳನ್ನು ಧರಿಸಿರುವುದನ್ನು ನಾನು ನೋಡಿಲ್ಲ ಮತ್ತು ಅವರಿಗೆ ಅದರಲ್ಲಿ ಆಸಕ್ತಿಯೂ ಇಲ್ಲ. ಮೊದಲಿನಂತೆಯೇ, ಅವರು ತನ್ನ ಸಣ್ಣ ಕೋಣೆಯಲ್ಲಿ ಅತ್ಯಂತ ಸರಳವಾದ ಜೀವನವನ್ನು ಮುಂದುವರಿಸಿದ್ದಾರೆ. ಅವರು ಪ್ರಪಂಚದ ಬೆಳವಣಿಗೆಗಳ ಬಗ್ಗೆ ತಿಳಿದಿರುತ್ತಾರೆ. ಇತ್ತೀಚಿಗೆ ನಾನು ಅವರನ್ನು ದಿನ ಎಷ್ಟು ಹೊತ್ತು ಟಿವಿ ನೋಡುತ್ತೀಯಾ ಎಂದು ಕೇಳಿದೆ. ಟಿವಿಯಲ್ಲಿ ಹೆಚ್ಚಿನವರು ಪರಸ್ಪರ ಜಗಳವಾಡುತ್ತಿರುತ್ತಾರೆ, ಶಾಂತವಾಗಿ ಸುದ್ದಿಗಳನ್ನು ಓದುವ ಮತ್ತು ಎಲ್ಲವನ್ನೂ ವಿವರಿಸುವವರನ್ನು ಮಾತ್ರ ನೋಡುತ್ತೇನೆ ಎಂದು ಅವರು ಉತ್ತರಿಸಿದರು.
ನಾನು ವಿಭಿನ್ನ ದಾರಿಯಲ್ಲಿ ಹೋಗುತ್ತಿದ್ದೇನೆ ಎಂದು ಅಮ್ಮ ಗ್ರಹಿಸಿದ್ದರು. ಒಮ್ಮೆ ನಮ್ಮ ಮನೆಯ ಸಮೀಪದಲ್ಲಿರುವ ಗಿರಿ ಮಹಾದೇವ ದೇವಸ್ಥಾನಕ್ಕೆ ಒಬ್ಬ ಮಹಾತ್ಮರು ಬಂದಿದ್ದರು. ನಾನು ಬಹಳ ಭಕ್ತಿಯಿಂದ ಅವರ ಸೇವೆ ಮಾಡಲು ಪ್ರಾರಂಭಿಸಿದೆ. ಆ ಸಮಯದಲ್ಲಿ, ತಾಯಿಯು ತನ್ನ ಸಹೋದರಿಯ ವಿವಾಹದ ಬಗ್ಗೆ ತುಂಬಾ ಉತ್ಸುಕರಾಗಿದ್ದರು, ವಿಶೇಷವಾಗಿ ಅದು ಆಕೆಗೆ ತನ್ನ ಸಹೋದರನ ಮನೆಗೆ ಹೋಗುವ ಅವಕಾಶವಾಗಿತ್ತು. ಮನೆಯವರೆಲ್ಲ ಸೇರಿ ಮದುವೆ ತಯಾರಿಯಲ್ಲಿ ತೊಡಗಿದ್ದಾಗ ನನಗೆ ಬರಲು ಇಷ್ಟವಿಲ್ಲ ಎಂದು ಆಕೆಗೆ ಹೇಳಿದೆ. ತಾಯಿಯು ಕಾರಣವನ್ನು ಕೇಳಿದರು, ನಾನು ಮಹಾತ್ಮರಿಗೆ ಮಾಡುತ್ತಿರುವ ನನ್ನ ಸೇವೆಯ ಬಗ್ಗೆ ವಿವರಿಸಿದೆ.
ನಾನು ಮನೆ ಬಿಟ್ಟು ಹೊರಡಲು ನಿರ್ಧರಿಸಿದಾಗ, ನಾನು ಅವರಿಗೆ ಹೇಳುವ ಮೊದಲೇ ನನ್ನ ನಿರ್ಧಾರವನ್ನು ತಾಯಿ ಗ್ರಹಿಸಿದ್ದರು. ನಾನು ಹೊರಗೆ ಹೋಗಿ ಜಗತ್ತನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇನೆ ಎಂದು ನಾನು ಆಗಾಗ್ಗೆ ನನ್ನ ಹೆತ್ತವರಿಗೆ ಹೇಳುತ್ತಿದ್ದೆ. ನಾನು ಅವರಿಗೆ ಸ್ವಾಮಿ ವಿವೇಕಾನಂದರ ಬಗ್ಗೆ ಹೇಳುತ್ತಿದ್ದೆ ಮತ್ತು ನಾನು ರಾಮಕೃಷ್ಣ ಮಿಷನ್ ಮಠಕ್ಕೆ ಭೇಟಿ ನೀಡಬೇಕು ಎಂದು ಹೇಳುತ್ತಿದ್ದೆ. ಇದು ಹಲವು ದಿನಗಳ ಕಾಲ ನಡೆದಿತ್ತು.
ಅಂತಿಮವಾಗಿ, ನಾನು ಮನೆ ಬಿಟ್ಟು ಹೊರಡುವ ನನ್ನ ಆಸೆಯನ್ನು ಬಿಚ್ಚಿಟ್ಟೆ ಮತ್ತು ಅವರ ಆಶೀರ್ವಾದವನ್ನು ಕೇಳಿದೆ. ನನ್ನ ತಂದೆ ತುಂಬಾ ನಿರಾಶೆಗೊಂಡರು ಮತ್ತು ಕಿರಿಕಿರಿಯಿಂದ “ನಿನ್ನಿಷ್ಟ” ಎಂದರು. ಅವರ ಆಶೀರ್ವಾದವಿಲ್ಲದೆ ನಾನು ಮನೆ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದೆ. ಆದರೆ, ಅಮ್ಮ ನನ್ನ ಆಸೆಗಳನ್ನು ಅರ್ಥಮಾಡಿಕೊಂಡು, ನಿನ್ನ ಮನಸ್ಸು ಹೇಳಿದಂತೆ ಮಾಡು ಎಂದು ಆಶೀರ್ವದಿಸಿದರು.
ಗುಜರಾತಿನ ಮುಖ್ಯಮಂತ್ರಿ ನಾನೇ ಎಂದು ನಿರ್ಧರಿಸಿದಾಗ ನಾನು ರಾಜ್ಯದಲ್ಲಿ ಇರಲಿಲ್ಲ ಎಂದು ನನಗೆ ನೆನಪಿದೆ. ನಾನು ಗುಜರಾತಿಗೆ ಹೋದ ಕೂಡಲೇ, ನಾನು ನೇರವಾಗಿ ತಾಯಿಯನ್ನು ಭೇಟಿ ಮಾಡಲು ಹೋದೆ. ಅವರು ಅತ್ಯಂತ ಭಾವಪರವಶಳಾಗಿದ್ದರು. “ಸರ್ಕಾರದಲ್ಲಿ ನಿಮ್ಮ ಕೆಲಸ ಏನೆಂದು ನನಗೆ ಅರ್ಥವಾಗುವುದಿಲ್ಲ, ಆದರೆ ನೀವು ಎಂದಿಗೂ ಲಂಚ ತೆಗೆದುಕೊಳ್ಳಬಾರದು ಎಂಬುದು ನನ್ನ ಬಯಕೆ.” ಎಂದು ತಾಯಿ ಹೇಳಿದ್ದರು. ದೆಹಲಿಗೆ ತೆರಳಿದ ನಂತರ, ಅವರೊಂದಿಗಿನ ನನ್ನ ಭೇಟಿಗಳು ಮೊದಲಿಗಿಂತ ಕಡಿಮೆಯಾಗಿವೆ. ಕೆಲವೊಮ್ಮೆ ನಾನು ಗಾಂಧಿನಗರಕ್ಕೆ ಭೇಟಿ ನೀಡಿದಾಗ, ನಾನು ಸ್ವಲ್ಪ ಕಾಲ ತಾಯಿಯನ್ನು ಭೇಟಿ ಮಾಡುತ್ತೇನೆ. ನಾನು ಮೊದಲಿನಂತೆ ಅವರನ್ನು ಭೇಟಿಯಾಗಲು ಆಗುವುದಿಲ್ಲ. ಆದಾಗ್ಯೂ, ಅವರ ಪ್ರೀತಿ ಮತ್ತು ವಾತ್ಸಲ್ಯ ಹಾಗೆಯೇ ಇದೆ; ಅವರ ಆಶೀರ್ವಾದ ಹಾಗೆಯೇ ಇರುತ್ತದೆ. ನೀವು ದೆಹಲಿಯಲ್ಲಿ ಸಂತೋಷವಾಗಿದ್ದೀರಾ?” ಎಂದು ತಾಯಿ ಆಗಾಗ ನನ್ನನ್ನು ಕೇಳುತ್ತಾರೆ.
ಕಷ್ಟದ ಪ್ರತಿಯೊಂದು ಕಥೆಗಳಾಚೆಯೂ ತಾಯಿಯ ಅದ್ಭುತ ಕಥೆಯೊಂದು ಇರುತ್ತದೆ. ಪ್ರತಿ ಹೋರಾಟಕ್ಕಿಂತ ಹೆಚ್ಚಿನದು, ತಾಯಿಯ ಬಲವಾದ ಸಂಕಲ್ಪ. ಅಮ್ಮಾ, ಜನ್ಮ ಶತಮಾನೋತ್ಸವ ವರ್ಷಕ್ಕೆ ಕಾಲಿಡುತ್ತಿರುವ ನಿಮಗೆ ಶುಭಾಶಯಗಳು. ನಿಮ್ಮ ಜೀವನದ ಬಗ್ಗೆ ಸಾರ್ವಜನಿಕವಾಗಿ ಬರೆಯುವ ಧೈರ್ಯವನ್ನು ನಾನು ಇದುವರೆಗೆ ತೋರಿಸಿರಲಿಲ್ಲ. ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಮತ್ತು ನಮ್ಮೆಲ್ಲರಿಗೂ ನಿಮ್ಮ ಆಶೀರ್ವಾದಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ.
ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ. ಈ ಬ್ಲಾಗ್ ಬರಹವನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:34 am, Sat, 18 June 22