ಎಂಥಾ ಪ್ರಾಮಾಣಿಕತೆ; 1500 ರೂ. ಹಣ, ಪತ್ರದೊಂದಿಗೆ ಕದ್ದ ಬೈಕನ್ನು ಮಾಲೀಕನಿಗೆ ವಾಪಸ್ ನೀಡಿದ ವ್ಯಕ್ತಿ
ಪ್ರತಿನಿತ್ಯ ಕಳ್ಳತನ, ದರೋಡೆ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಅದರಲ್ಲಿ ಕೆಲವೊಂದು ವಿಚಿತ್ರ ಕಳ್ಳತನದ ಸುದ್ದಿಗಳು ನಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತವೆ. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬ ತಾನು ಕದ್ದ ಬೈಕನ್ನು ಮಾಲೀಕನಿಗೆ ವಾಪಸ್ ಕೊಟ್ಟು ಪ್ರಾಮಾಣಿಕತೆಯನ್ನು ಮೆರೆದಿದ್ದಾನೆ. ಹೌದು ತುರ್ತು ಸಂದರ್ಭದಲ್ಲಿ ನಿಮ್ಮ ಬೈಕ್ ನನಗೆ ತುಂಬಾ ಸಹಾಯ ಮಾಡಿದೆ ಎಂದು ಪತ್ರ ಬರೆದು 1500 ರೂ. ಪೆಟ್ರೋಲ್ ಹಣದ ಜೊತೆಗೆ ಕದ್ದ ಬೈಕನ್ನು ಆತ ಹಿಂತಿರುಗಿಸಿದ್ದಾನೆ.

ತಮಿಳುನಾಡು, ಫೆ.27: ಕಳ್ಳತನಕ್ಕೆ (Theft) ಸಂಬಂಧಿಸಿದ ಚಿತ್ರವಿಚಿತ್ರ ಪ್ರಕರಣಗಳ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಕಳ್ಳತನ ಮಾಡಲು ಹೋಗಿ ಕಳ್ಳನೊಬ್ಬ ನಿದ್ದೆ ಮಾಡಿದ, ಕದಿಯಲು ಬಂದಾಗ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತು ಸಿಗದ ಹಿನ್ನೆಲೆ ಮನೆ ಒಡತಿಗೆ ಕಳ್ಳನೊಬ್ಬ ಮುತ್ತಿಟ್ಟ ವಿಚಿತ್ರ ಪ್ರಕರಣಗಳ ಸುದ್ದಿಗಳ ಬಗ್ಗೆ ಕೇಳಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬ ಬೈಕ್ ಎಗರಿಸಿ, ನಂತರ 1500 ರೂ. ಹಣ ಮತ್ತು ಪತ್ರದೊಂದಿಗೆ ಆ ಬೈಕನ್ನು ಮಾಲೀಕನಿಗೆ ವಾಪಸ್ ಕೊಟ್ಟಿದ್ದಾನೆ. ಸುದ್ದಿ ಭಾರೀ ವೈರಲ್ ಆಗಿತ್ತಿದೆ.
ಈ ಘಟನೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ತಿರುಪ್ಪುವನಂ ಪ್ರದೇಶದ ಬಳಿ ಇರುವ ಡಿ. ಪಳಯೂರು ಎಂಬ ಹಳ್ಳಿಯ ವೀರಮಣಿ ಎಂಬವರ ಬೈಕನ್ನು ಎಗರಿಸಿದ ವ್ಯಕ್ತಿಯೊಬ್ಬ ಆ ಬೈಕನ್ನು ಪತ್ರ ಮತ್ತು 1500 ರೂ. ಪೆಟ್ರೋಲ್ ಹಣದ ಜೊತೆಗೆ ವಾಪಸ್ ಅವರಿಗೆಯೇ ನೀಡಿದ್ದಾನೆ.
ವೀರಮಣಿ ಎಂದಿನಂತೆ ರಾತ್ರಿ ತನ್ನ ಮನೆಯ ಮುಂದೆ ಬೈಕ್ ನಿಲ್ಲಿಸಿ ನಂತರ ಒಳಗೆ ಹೋಗಿ ಮಲಗಿದ್ದ. ಆದರೆ ಮರುದಿನ ಬೆಳಗ್ಗೆ ಎದ್ದಾಗ ಬೈಕ್ ಕಳ್ಳತನವಾಗಿತ್ತು. ಇದರಿಂದ ಆಘಾತಕ್ಕೊಳಗಾದ ವೀರಮಣಿ ಮತ್ತು ಆತನ ಕುಟುಂಬ ಸದಸ್ಯರು ಬೈಕ್‌ಗಾಗಿ ಎಲ್ಲೆಡೆ ಹುಡುಕಿದರು. ಆದರೆ ವಾಹನ ಎಲ್ಲೂ ಪತ್ತೆಯಾಗಲಿಲ್ಲ. ಯಾರೋ ಬೈಕ್ ಕದ್ದಿದ್ದಾರೆ ಎಂದು ಖಚಿತಪಡಿಸಿಕೊಂಡ ನಂತರ ವೀರಮಣಿ ತಿರುಪ್ಪುವನಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದನು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಬೈಕ್‌ಗಾಗಿ ಹುಡುಕಾಟ ನಡೆಸಿದರು. ಆದ್ರೆ ಪೊಲೀಸರಿಗೂ ಬೈಕ್ ಸಿಗಲಿಲ್ಲ.
ಆದರೆ ಆಶ್ಚರ್ಯಕರವೆಂಬಂತೆ ಫೆಬ್ರವರಿ 24, 2025 ರ ರಾತ್ರಿ ಇದ್ದಕ್ಕಿದ್ದಂತೆ ಬೈಕ್ ವೀರಮಣಿಯ ಮನೆಯ ಮುಂದೆ ಬಂದು ನಿಂತಿತ್ತು. ಬೈಕ್‌ನಲ್ಲಿ ಒಂದು ಪತ್ರವೂ ಪತ್ತೆಯಾಗಿತ್ತು. ವೀರಮಣಿ ತಕ್ಷಣ ಈ ವಿಷಯದ ಬಗ್ಗೆ ತಿರುಪ್ಪುವನಂ ಪೊಲೀಸರಿಗೆ ಮಾಹಿತಿ ನೀಡಿದನು. ಸ್ಥಳಕ್ಕೆ ಬಂದ ಪೊಲೀಸರು ಪತ್ರವನ್ನು ಓದಿ ಆಶ್ಚರ್ಯಚಕಿತರಾದರು.
ಇದನ್ನೂ ಓದಿ: ಕಿಟಕಿಯಿಂದ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ನೀರೆರಚಿದ ಯುವಕ; ಒದ್ದು ಬುದ್ಧಿ ಕಲಿಸಿದ ಪೊಲೀಸ್
ಕ್ಷಮಾಪಣೆ ಪತ್ರದೊಂದಿಗೆ ಬೈಕ್ ಹಿಂತಿರುಗಿಸಿದ ವ್ಯಕ್ತಿ:
“ನಾನು ಬೇರೆ ಸ್ಥಳದಿಂದ ಬರುತ್ತಿರುವಾಗ ಹೆದ್ದಾರಿಯ ಬಳಿ ಒಂದು ಸಮಸ್ಯೆಯನ್ನು ಎದುರಿಸಿದೆ. ಆ ಸಂದರ್ಭದಲ್ಲಿ ನಿಮ್ಮ ಬೈಕನ್ನು ನೋಡಿದೆ. ಆ ತಕ್ಷಣಕ್ಕೆ ನಿಮ್ಮ ಬೈಕನ್ನು ಅಗತ್ಯಕ್ಕೆ ತೆಗೆದುಕೊಂಡು ಹೋಗುವುದು ತಪ್ಪೆಂದು ಅನಿಸಲಿಲ್ಲ. ಆದರೆ ನಂತರ ಹೀಗೆ ಮಾಡಿದ್ದು, ದೊಡ್ಡ ತಪ್ಪು ಎಂಬ ಭಾವನೆ ನನ್ನಲ್ಲಿ ಕಾಡತೊಡಗಿತು. ಅದಕ್ಕಾಗಿಯೇ ನಾನು 450 ಕಿಲೋಮೀಟರ್ ಹಿಂದಕ್ಕೆ ಪ್ರಯಾಣಿಸಿ ನಿಮ್ಮ ಬೈಕನ್ನು ನಿಮ್ಮ ಬಳಿಗೆ ಜೋಪಾನವಾಗಿ ತಂದಿದ್ದೇನೆ. ತುರ್ತು ಸಂದರ್ಭದಲ್ಲಿ ನಿಮ್ಮ ಬೈಕ್ ನನಗೆ ತುಂಬಾ ಸಹಾಯ ಮಾಡಿದೆ. ಅದಕ್ಕಾಗಿ ನಿಮಗೆ ನಾನು ಋಣಿಯಾಗಿದ್ದೇನೆ. ಜೊತೆಗೆ ಪೆಟ್ರೋಲ್ ಹಣ 1500 ರೂ. ನ್ನು ಕೂಡಾ ಇಟ್ಟಿದ್ದೇನೆ” ಎಂದು ಪತ್ರದಲ್ಲಿ ಬರೆಯಲಾಗಿತ್ತು. ಬೈಕ್ ಕದ್ದು, ಅದನ್ನು ಮಾಲೀಕನಿಗೆ ಪುನಃ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಈ ವ್ಯಕ್ತಿಯ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








