ಕೋವಿಡ್ಗೆ ಹೆದರಿ 15 ತಿಂಗಳು ಮನೆಯೊಳಗೇ ಅವಿತು ಕುಳಿತಿತ್ತು ಇಡೀ ಕುಟುಂಬ!
COVID-19: ಆಂಧ್ರಪ್ರದೇಶದ ಕಡಾಲಿ ಎಂಬ ಗ್ರಾಮದಲ್ಲಿ ಟೆಂಟ್ ಹೌಸ್ನಲ್ಲಿ ವಾಸವಾಗಿದ್ದ ಕುಟುಂಬದವರು ಕೊರೋನಾದಿಂದ ಸಾಯುತ್ತೇವೆಂಬ ಭಯದಿಂದ ಬರೋಬ್ಬರಿ 15 ತಿಂಗಳು ಮನೆಯೊಳಗೇ ಬಂಧಿಗಳಾಗಿದ್ದರು.
ಹೈದರಾಬಾದ್: 2020 ಇಡೀ ಪ್ರಪಂಚದ ಜನರಿಗೆ ಮರೆಯಲಾಗದ ವರ್ಷ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಸಂಪೂರ್ಣ ಲಾಕ್ಡೌನ್ (Lockdown) ಘೋಷಣೆ ಮಾಡಲಾಗಿತ್ತು. ಅದಾದ ಬಳಿಕ ಕೋವಿಡ್ (Covid-19) ಅಲೆ ಕಡಿಮೆಯಾಗಲೇ ಇಲ್ಲ. ಕೊರೋನಾ (Coronavirus) ಎಂದರೇನೆಂದೇ ಗೊತ್ತಿಲ್ಲದವರು ಇದೀಗ ಕಣ್ಣಿಗೆ ಕಾಣದ ಕೊರೋನಾದೊಂದಿಗೇ ಜೀವನ ಸಾಗಿಸುವ ಸ್ಥಿತಿ ತಲುಪಿದ್ದೇವೆ. ಆರಂಭದಲ್ಲಿ ಕೊರೋನಾವೈರಸ್ ಬಹಳ ಹೊಸದಾಗಿದ್ದರಿಂದ ಹೊರಗೆ ತಿನ್ನಲು, ಏನನ್ನಾದರೂ ಮುಟ್ಟಲು, ಗಾಳಿಯಲ್ಲಿ ಧೈರ್ಯವಾಗಿ ಉಸಿರಾಡಲು ಕೂಡ ಭಯ ಪಡುವಂತ ಪರಿಸ್ಥಿತಿಯಿತ್ತು. ಈಗ ಎಲ್ಲರಿಗೂ ಮಾಸ್ಕ್ (Face Mask), ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್ಗಳು ಸಾಮಾನ್ಯವೆನಿಸಿಕೊಂಡಿವೆ. ಆದರೆ, ಆಂಧ್ರಪ್ರದೇಶದ ಕುಟುಂಬವೊಂದು ಕಳೆದ ವರ್ಷ ಲಾಕ್ಡೌನ್ ಆದಾಗಿನಿಂದ ಇಲ್ಲಿಯವರೆಗೂ ಮನೆಯಿಂದ ಹೊರಗೆ ಕಾಲಿಡದೆ ಗೃಹಬಂಧನ ವಿಧಿಸಿಕೊಂಡಿತ್ತು ಎಂಬ ವಿಷಯ ಅಚ್ಚರಿ ಮೂಡಿಸಿದೆ.
ಆಂಧ್ರಪ್ರದೇಶದ ಪೊಲೀಸರು ಕಡಾಲಿ ಎಂಬ ಗ್ರಾಮದಲ್ಲಿ ಟೆಂಟ್ ಹೌಸ್ನಲ್ಲಿ ವಾಸವಾಗಿದ್ದ ಕುಟುಂಬವೊಂದನ್ನು ರಕ್ಷಣೆ ಮಾಡಿದ್ದಾರೆ. ಬರೋಬ್ಬರಿ 15 ತಿಂಗಳ ಬಳಿಕ ಆ ಕುಟುಂಬದವರು ಹೊರಗಿನ ಪ್ರಪಂಚವನ್ನು ನೋಡಿದ್ದಾರೆ. ರುತಮ್ಮ (50) ಕಾಂತಾಮಣಿ (32), ರಾಣಿ (30) ಎಂಬುವವರು ಕೊರೋನಾಗೆ ಹೆದರಿ ಕಳೆದ 15 ತಿಂಗಳಿನಿಂದ ಮನೆಯೊಳಗಿಂದ ಹೊರಗೆ ಕಾಲನ್ನೇ ಇಟ್ಟಿಲ್ಲ. ಅವರ ಪಕ್ಕದ ಮನೆಯವರು ಕೊರೋನಾದಿಂದ ಸಾವನ್ನಪ್ಪಿದ ಬಳಿಕ ಭಯಗೊಂಡಿದ್ದ ಈ ಮೂವರು ಮನೆಯಿಂದ ಹೊರಗೆ ಹೋದರೆ ಸಾಯುತ್ತೇವೆಂದು ಹೆದರಿ ಗೃಹಬಂಧನ ವಿಧಿಸಿಕೊಂಡಿದ್ದರು.
ಸರ್ಕಾರಿ ಯೋಜನೆಯಡಿ ಆ ಕುಟುಂಬಕ್ಕೆ ಮನೆ ಮಂಜೂರಾಗಿತ್ತು. ಈ ಹಿನ್ನೆಲೆಯಲ್ಲಿ ಆ ಗ್ರಾಮ ಪಂಚಾಯ್ತಿಯ ಸಿಬ್ಬಂದಿ ಆ ಮನೆಯವರ ಹೆಬ್ಬೆರಳಿನ ಗುರುತು ಹಾಕಿಸಿಕೊಂಡು ಬರಲು ಹೋಗಿದ್ದರು. ಆಗ ಆ ಮನೆಯವರಾರೂ ಹೊರಗೆ ಬರಲು ಒಪ್ಪಲಿಲ್ಲ. ಏಕೆಂದು ವಿಚಾರಿಸಿದಾಗ ಹೀಗೆ ಕಳೆದ ವರ್ಷದಿಂದ ಕೊರೋನಾ ಭೀತಿಯಿಂದ ಮನೆಯೊಳಗೇ ಅವಿತಿರುವುದಾಗಿ ತಿಳಿಸಿದ್ದರು. ಈ ವಿಷಯವನ್ನು ಆತ ಗ್ರಾಮ ಪಂಚಾಯ್ತಿಯ ಅಧಿಕಾರಿಗಳಿಗೆ ತಿಳಿಸಿದ್ದ. ನಂತರ ಪೊಲೀಸರಿಗೆ ವಿಚಾರವನ್ನು ತಿಳಿಸಿದ್ದರಿಂದ ಅವರು ಬಂದು ಆ ಮನೆಯವರನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ.
15 ತಿಂಗಳಿನಿಂದ ಮನೆಯೊಳಗೇ ಇದ್ದ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿತ್ತು. ಆಸ್ಪತ್ರೆಗೂ ಹೋಗಲು ಹೆದರಿ ಮನೆಯೊಳಗೇ ಬಂಧಿಯಾಗಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಮನೆಯೊಳಗೇ ಇದ್ದುದರಿಂದ ಯಾರ ಸಂಪರ್ಕವೂ ಇಲ್ಲದೆ ಅವರ ಮಾನಸಿಕ ಸ್ಥಿತಿಯೂ ಹದಗೆಟ್ಟಿತ್ತು. ಹೀಗಾಗಿ ಆ ಮನೆಯವರೆಲ್ಲರಿಗೂ ಕೌನ್ಸಿಲಿಂಗ್ ಮಾಡಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಸಾವಿನಂಚಿನಲ್ಲಿರುವ ಗಂಡನಿಂದ ಗರ್ಭಿಣಿಯಾಗಬೇಕೆಂದ ಹೆಂಡತಿ; ವೀರ್ಯ ಸಂಗ್ರಹಿಸಲು ಹೈಕೋರ್ಟ್ ಅನುಮತಿ
ಕೋವಿಡ್ ಕುರಿತ ಆತಂಕಕಾರಿ ವಿಚಾರ ಬಯಲು; ಭಾರತದ 40 ಕೋಟಿ ಜನರಿಗೆ ಇನ್ನೂ ಕೊರೋನಾ ಅಪಾಯ ತಪ್ಪಿಲ್ಲ!
(Andhra Pradesh Poor Family Locks Themselves In Home For 15 Months Fearing Death From Covid-19)