ಡಾಕ್ಟರ್, ನನ್ನ ಕ್ಯಾನ್ಸರ್ ಬಗ್ಗೆ ದಯವಿಟ್ಟು ಅಪ್ಪ ಅಮ್ಮನಿಗೆ ಹೇಳಬೇಡಿ; 6 ವರ್ಷದ ಮಗುವಿನ ನಿವೇದನೆ

Cancer : ‘ನನ್ನ ಅಪ್ಪ ಅಮ್ಮ ನಿಮ್ಮೊಂದಿಗೆ ಮಾತನಾಡುತ್ತಿದ್ದಾಗ ನಾನು ಹೊರಗಡೆ ಕಾಯುತ್ತ ಕುಳಿತಿದ್ದೆ. ನನ್ನ ಐಪ್ಯಾಡ್​ ಮೂಲಕ ನನಗಿರುವ ರೋಗದ ಬಗ್ಗೆ ಓದಿದೆ. ಇನ್ನು ಆರು ತಿಂಗಳು ಮಾತ್ರ ಬದುಕುತ್ತೇನೆ ಎಂಬುದನ್ನೂ ತಿಳಿದುಕೊಂಡೆ.’

ಡಾಕ್ಟರ್, ನನ್ನ ಕ್ಯಾನ್ಸರ್ ಬಗ್ಗೆ ದಯವಿಟ್ಟು ಅಪ್ಪ ಅಮ್ಮನಿಗೆ ಹೇಳಬೇಡಿ; 6 ವರ್ಷದ ಮಗುವಿನ ನಿವೇದನೆ
ಸಾಂದರ್ಭಿಕ ಚಿತ್ರ
Follow us
| Updated By: ಶ್ರೀದೇವಿ ಕಳಸದ

Updated on:Jan 06, 2023 | 1:29 PM

Viral News : ಡಾಕ್ಟರ್,​ ನನಗೆ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ, ಇನ್ನು ಆರು ತಿಂಗಳು ಮಾತ್ರ ಬದುಕುತ್ತೇನೆಂದು ನನ್ನ ಅಪ್ಪ ಅಮ್ಮನಿಗೆ ದಯವಿಟ್ಟು ಹೇಳಬೇಡಿ ಎಂದು 6 ವರ್ಷದ ಬಾಲಕ ಡಾಕ್ಟರ್​ ಬಳಿ ವಿನಂತಿಸಿಕೊಂಡ. ಇತ್ತ ಆ ಮಗುವಿನ ಅಪ್ಪ ಅಮ್ಮ, ದಯಮಾಡಿ ನಮ್ಮ ಮಗನಿಗೆ ಈ ವಿಷಯ ಗೊತ್ತಾಗದಂತೆ ನೋಡಿಕೊಳ್ಳಿ ಎಂದು ಪೋಷಕರೂ ಮಗನ ಅನುಪಸ್ಥಿತಿಯಲ್ಲಿ ವಿನಂತಿಸಿಕೊಂಡರು. ಮಗವಿನ ಧೈರ್ಯ, ತಿಳಿವಳಿಕೆ ಮತ್ತು ಪೋಷಕರ ವಿನಂತಿಯಿಂದ ಡಾ. ಸುಧೀರ್​ ಕುಮಾರ್ ಅಚ್ಚರಿಗೆ ಒಳಗಾದರು. ಆನಂತರ ಡಾಕ್ಟರ್ ಮಾಡಿದ ಟ್ವೀಟ್​ ಥ್ರೆಡ್​ನ ಸಾರಾಂಶ ಇಲ್ಲಿದೆ. ನೆಟ್ಟಿಗರು ಇದನ್ನು ಓದಿ ಹನಿಗಣ್ಣಾಗಿದ್ದಾರೆ.

ಆರು ವರ್ಷದ ಮನು ಎಂಬ ಬಾಲಕ ಅಂದು ವೀಲ್​ ಚೇರ್ ಮೇಲೆ ಬಂದಾಗ ಅಪಾರ ಆತ್ಮವಿಶ್ವಾಸದಿಂದ ಕಂಗೊಳಿಸುತ್ತಿದ್ದ. ಆದರೆ ಪ್ರಯೋಗಾಲಯದ ವರದಿ ಬಂದಾಗ, ಅವನ ಮೆದುಳಿನ ಎಡಭಾಗದಲ್ಲಿ ಗ್ಲಿಯೋಬ್ಲಾಸ್ಟೋಮಾ ಮಲ್ಟಿಫಾರ್ಮ್​ (Glioblastoma Multiforme grade 4) ನಾಲ್ಕನೇ ಹಂತದಲ್ಲಿದೆ ಎನ್ನುವುದು ತಿಳಿಯಿತು.

ಇದನ್ನೂ ಓದಿ : ಕ್ಯಾನ್ಸರ್ ಹಿಮ್ಮೆಟ್ಟಿದ ಗೋವಾ ಪೊಲೀಸ್​ ಅಧಿಕಾರಿ; ಪಂದ್ಯವನ್ನು ಗೆಲ್ಲದಿದ್ದರೂ ಜನರ ಮನಸು ಗೆದ್ದರು

ನಂತರ ಬಾಲಕನೊಂದಿಗೆ ಸ್ವಲ್ಪ ಹೊತ್ತು ಡಾಕ್ಟರ್ ಸಮಯ ಕಳೆದರು. ಮಾತನಾಡುತ್ತಾ ಹೋದಂತೆ ಬಾಲಕ ನಿಜಕ್ಕೂ ಧೈರ್ಯಶಾಲಿ ಎನ್ನುವುದು ಅರಿವಿಗೆ ಬಂದಿತು. ತನ್ನ ಹೆತ್ತವರ ಬಗ್ಗೆ ಕಾಳಜಿ ವಹಿಸುವ ರೀತಿಗೆ ನಿಜಕ್ಕೂ ಡಾಕ್ಟರ್ ಬಳಿ ಮಾತೇ ಇರಲಿಲ್ಲ.

‘ನನ್ನ ಅಪ್ಪ ಅಮ್ಮ ನಿಮ್ಮೊಂದಿಗೆ ಮಾತನಾಡುತ್ತಿದ್ದಾಗ ನಾನು ಹೊರಗಡೆ ಕಾಯುತ್ತ ಕುಳಿತಿದ್ದೆ. ಆಗ ನನ್ನ ಐಪ್ಯಾಡ್​ ಮೂಲಕ ನನಗಿರುವ ರೋಗದ ಬಗ್ಗೆ ಓದಿದೆ. ಇನ್ನು ಆರು ತಿಂಗಳು ಮಾತ್ರ ಬದುಕುತ್ತೇನೆ ಎಂಬುದನ್ನೂ ತಿಳಿದುಕೊಂಡೆ. ನನ್ನ ಅಪ್ಪ ಅಮ್ಮನಿಗೆ ತಿಳಿದರೆ ಅವರು ಆಘಾತಕ್ಕೆ ಒಳಗಾಗುತ್ತಾರೆ. ಏಕೆಂದರೆ ಅವರು ನನ್ನನ್ನು ತುಂಬಾನೇ ಪ್ರೀತಿಸುತ್ತಾರೆ. ದಯವಿಟ್ಟು ಅವರೊಂದಿಗೆ ಈ ವಿಷಯ ಹೇಳಬೇಡಿ’ ಎಂದು ಡಾಕ್ಟರ್​ ಬಳಿ ಕೇಳಿಕೊಂಡ.

ಇದನ್ನೂ ಓದಿ : ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಮದುವೆಯ ದಿನವೇ ತಲೆಗೂದಲನ್ನು ಕತ್ತರಿಸಿದ ವಧು

ಆಘಾತವನ್ನು ತಡೆದುಕೊಳ್ಳಲಾಗದೆ ಪೋಷಕರು ಒಂದೇ ಸಮ ಅಳುತ್ತ ಒಪಿಡಿಯಿಂದ ಹೊರಟರು. ಮತ್ತೊಬ್ಬ ರೋಗಿಯನ್ನು ನೋಡುತ್ತಿದ್ಧಾಗ ವಾಪಾಸು ಬಂದು, ಈ ವಿಷಯವನ್ನು ದಯವಿಟ್ಟು ಮಗನಿಗೆ ತಿಳಿಸಬೇಡಿ ಎಂದು ಕೇಳಿಕೊಂಡರು. ಇದಾದ ನಂತರ ಮತ್ತೆ ಒಂಬತ್ತು ತಿಂಗಳುಗಳ ನಂತರ ಪೋಷಕರು ಇದೇ ಡಾಕ್ಟರ್ ಬಳಿ ಬಂದರು. ಆ ಹೊತ್ತಿಗೆ ಡಾಕ್ಟರ್ ಈ ಘಟನೆಯನ್ನು ಮರೆತಿದ್ದರು. ‘ಒಂಬತ್ತು ತಿಂಗಳುಗಳಲ್ಲಿ ನಾನು ಈ ಘಟನೆಯನ್ನು ಬಹುತೇಕ ಮರೆತುಬಿಟ್ಟಿದ್ದೆ. ವಾಪಾಸು ಬಂದಾಗ ಮಗುವಿನ ಆರೋಗ್ಯದ ಬಗ್ಗೆ ಕೇಳಿದೆ. ನಿಮ್ಮನ್ನು ಭೇಟಿಯಾದಾಗಿನಿಂದಲೂ ಅವನಿಗೆ ಸಂಪೂರ್ಣವಾಗಿ ನಮ್ಮ ಸಮಯವನ್ನು ಕೊಟ್ಟೆವು. ನಾವಿಬ್ಬರೂ ಅವನಿಗೋಸ್ಕರ ತಾತ್ಕಾಲಿಕವಾಗಿ ರಜೆಯನ್ನು ತೆಗೆದುಕೊಂಡೆವು. ಅವನಿಗಿಷ್ಟವಾದ ಸ್ಥಳಗಳಿಗೆ ಕರೆದುಕೊಂಡು ಹೋದೆವು, ಡಿಸ್ನಿಲ್ಯಾಂಡ್​ಗೆ ಕೂಡ. ಆದರೆ ಅವನೀಗ ನಮ್ಮೊಂದಿಗಿಲ್ಲ’ ಎಂದರು.

ಇದನ್ನೂ ಓದಿ : ಹಿಮನೀರಿನಲ್ಲಿ ಮಿಂದೆದ್ದು ಕಾಫಿ ಕುಡಿಯುತ್ತಿರುವ ಯುವತಿಯ ವಿಡಿಯೋ ವೈರಲ್

ಅಂದರೆ ಅವರಿಬ್ಬರೂ ಒಂದು ತಿಂಗಳ ಹಿಂದೆ ಅವನನ್ನು ಕಳೆದುಕೊಂಡಿದ್ದರು. ಈ ವಿಷಯ ಕೇಳಿ ಡಾಕ್ಟರ್​ಗೆ ಕೂಡ ಬಹಳ ಸಂಕಟವಾಯಿತು. ‘ಆ ದಿನ ಅಷ್ಟು ಆತ್ಮವಿಶ್ವಾಸದಿಂದ ನಗುತ್ತ ಮಾತನಾಡಿದ ಹುಡುಗನ ಮುಖ ಕಣ್ಮುಂದೆ ಬಂದಿತು. ಅವನ ಆ ಮುಗ್ಧತೆ, ತಿಳಿವಳಿಕೆ ಆ ಮಾತುಗಳು ಕಾಡಿದವು. ಎಂಥ ಧೈರ್ಯವಂತ ಮಗುವದು! ಮತ್ತಷ್ಟು ನನ್ನನ್ನು ಸಂಕಟಕ್ಕೀಡು ಮಾಡಿದ್ದೆಂದರೆ ಅವನ ಅಪ್ಪ ಅಮ್ಮನ ಮಾತು; ‘ಆ ದಿನ ನಿಮ್ಮನ್ನು ಭೇಟಿಯಾಗಿದ್ದಕ್ಕೇ  ನಾವಿಬ್ಬರೂ 8 ತಿಂಗಳುಗಳ ಕಾಲ ಮಗನೊಂದಿಗೆ ಒಳ್ಳೆಯ ಸಮಯವನ್ನು ಕಳೆಯಲು ಸಾಧ್ಯವಾಯಿತು. ಇದಕ್ಕಾಗಿ ನಿಮಗೆ ಧನ್ಯವಾದ ಎಂದು ಹೇಳಿದ್ದು.’

ಇದನ್ನೂ ಓದಿ :ಡೆವಿಲ್ಸ್​ ಪೂಲ್​; ವಿಶ್ವದ ಅತೀ ಎತ್ತರದ ಜಲಪಾತದಂಚಿನಲ್ಲಿ ಮಲಗಿದ ಯುವತಿಯ ವಿಡಿಯೋ ವೈರಲ್

ಮಕ್ಕಳಿಗೆ ಅಥವಾ ದೊಡ್ಡವರಿಗೆ ಇಂಥ ಗಂಭೀರ ಕಾಯಿಲೆಗಳಾದಾಗ ಸಮಯ ಸಂದರ್ಭವನ್ನು ಅರಿತುಕೊಳ್ಳಲು ಪೋಷಕರು/ಸಂಬಂಧಿಕರು ಮತ್ತು ಮಕ್ಕಳೊಂದಿಗೆ ಪ್ರತ್ಯೇಕವಾಗಿಯೇ ಮಾತನಾಡಬೇಕು. ಆಗ ಚಿಕಿತ್ಸೆ ಕುರಿತಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂದಿದ್ಧಾರೆ ಡಾ. ಸುಧೀರ್ ಕುಮಾರ್.

ಈ ಪೋಸ್ಟ್​ ಅನ್ನು 1 ಮಿಲಿಯನ್​ ಜನರು ಓದಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಮಿಡಿದಿದ್ದಾರೆ. ಅನೇಕರು ಡಾಕ್ಟರ್ ಜೊತೆ ಸಂವಾದಿಸಿದ್ದಾರೆ. ಕ್ಯಾನ್ಸರ್​ ಸಂಬಂಧಿ ಪ್ರಶ್ನೆಗಳನ್ನು, ಅನುಭವಗಳನ್ನು ಹಂಚಿಕೊಂಡಿದ್ಧಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:56 pm, Fri, 6 January 23